ಹೊಸ ಹೊಸ ಕನಸು ಹೊತ್ತ ಮುಂಜಾವಿನ ಕಿರಣಗಳು ಯತಾರೀತಿ ಭೂಮಿ ಸ್ಪರ್ಶಿಸಿದವು. ಕವಲೊಡೆದ ಮನಸ್ಸಿನ ಹಾದಿಗಳು ಯಾವುದೋ ಒಂದು ತಿರುವಿನಲ್ಲಿ ಒಂದಾಗುವ ನಿರೀಕ್ಷೆಯಲ್ಲಿ ಇದ್ದವು.
ಬೆಳಗಿನ ಆರು-ಆರುವರೆ ಸಮಯ.. ರಾತ್ರಿಯಿಡೀ ಸರದಿ ಪ್ರಕಾರ ರಣಹದ್ದಿನಂತೆ ಕಣ್ಣು ಬಿಟ್ಟುಕೊಂಡು ಕಾವಲು ಕಾಯುತ್ತಿದ್ದ ಸೆಕ್ಯೂರಿಟಿಸ಼್ ಆಕಳಿಸುತ್ತ, ಕಣ್ಣು ಮುಚ್ಚಲಾರದಂತೆ ಹರಸಾಹಸ ಪಡುತ್ತಿದ್ದರು ನಿದಿರೆ ಮಂಪರಿನಲ್ಲಿದ್ದವರನ್ನು ಯಾಮಾರಿಸುವುದು ಕಷ್ಟದ ಕೆಲಸವೇನು ಆಗಿರಲಿಲ್ಲ.
ಕುರ್ಚಿಗೊರಗಿ ಕಣ್ಣು ಮುಚ್ಚಿ ವಿಶ್ರಮಿಸುತ್ತಿದ್ದ ಹರ್ಷ ಮೆಲ್ಲಗೆ ಕಣ್ಣುಜ್ಜಿಕೊಳ್ಳುತ್ತ ಎದ್ದು ಕುಳಿತು ಸುತ್ತಲಿನ ವಾತಾವರಣ ಗಮನಿಸಿದ. ಧುಡುಗ್ಗನೇ ಎದ್ದು ಆಸ್ಪತ್ರೆಯ ಕಾರಿಡಾರ್ ಕಡೆಗೆ ಹೆಜ್ಜೆ ಹಾಕಿದ. ಅಲರ್ಟಾದ ಇಬ್ಬರು ಗಾರ್ಡ್ಗಳು ಅವನನ್ನೇ ಹಿಂಬಾಲಿಸಿದರು. ಮುಂದೆ ಮುಂದೆ ಅವಸರದಲ್ಲಿ ಹೆಜ್ಜೆ ಹಾಕುತ್ತಿದ್ದ ಹರ್ಷ ಅಕಸ್ಮಾತ್ತಾಗಿ ಫೋನ್‌ಲ್ಲಿ ವ್ಯಸ್ತನಾಗಿದ್ದ ವ್ಯಕ್ತಿಯೊಬ್ಬನಿಗೆ ಢಿಕ್ಕಿ ಹೊಡೆದು ಬಿಟ್ಟ.
ಕ್ಷಮೆ ಕೇಳಿದ್ದರೆ ವಿಷಯ ಅಲ್ಲಿಗೆ ಮುಗಿದು ಹೋಗಿರುತ್ತಿತ್ತೇನೋ.... ಆದರೆ ಹರ್ಷ ಬೇಕೆಂದೇ ತಪ್ಪೆಲ್ಲ ಎದುರು ವ್ಯಕ್ತಿಯ ಮೇಲೆ ಹಾಕಿ ಜಗಳಕ್ಕೆ ನಾಂದಿ ಹಾಡಿದ್ದ. ಚಿಕ್ಕ ವಿಷಯ ಕಲಾಪವಾಗಿ ಬೆಳೆಯಿತು. ಉಳಿದ ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಡೇವಿಡ್ ಗಮನ ಕೂಡ ಈಕಡೆಗೆ ಕೇಂದ್ರಿಕೃತವಾಯಿತು. ಅವರೂ ಓಡಿ ಬಂದರು.
ಕೊನೆಗೆ ನಡೆಯುತ್ತಿದ್ದ ಗಲಾಟೆಯನ್ನು ಇತ್ಯರ್ಥ ಮಾಡಿದ್ದು ಡೇವಿಡ್‌ನ ಫುಲ್ ಲೊಡೆಡ್ ಗನ್! ಮರೆಯಲ್ಲಿ ಇಣುಕಿದ ಅದನ್ನು ನೋಡುತ್ತಿದ್ದಂತೆ ಎದುರಿನ ವ್ಯಕ್ತಿ ತಣ್ಣಗಾಗಿ ತನ್ನದಲ್ಲದ ತಪ್ಪಿಗೆ ತಾನೇ ಕ್ಷಮೆ ಕೇಳಿ ಜಾಗ ಖಾಲಿ ಮಾಡಿದ.
ಡೇವಿಡ್ ಹರ್ಷನ ಮುಂಗೋಪವನ್ನು ಕೆಣಕುತ್ತ ಅವನಿಗೆ ಮತ್ತೆ ಮತ್ತೆ ಎಚ್ಚರಿಕೆ ನೀಡಿದ. ಹರ್ಷ ನಿದ್ರೆಯಿಂದ ಮೈಮುರಿಯುತ್ತ "ಐ ನೀಡ್ ಟೀ, ಗೆಟ್ ಇಟ್ ಫಾಸ್ಟ್" ಆರ್ಡರ್ ಮಾಡಿ ಅವನ ಮಾತಿಗೆ ಕಿವಿಗೊಡದೆ ಕಾರಿಡಾರ್ ನತ್ತ ಹೊರಟ.
ಅಲ್ಲಿಯ ಕಲಹ ಮುಕ್ತಾಯಗೊಳಿಸಿ ಮರಳಿ ಬರುವಷ್ಟರಲ್ಲಿ ಇತ್ತ ಪ್ರಸನ್ನ ಮತ್ತು ಪರಿಧಿ ಕಾಣದಾಗಿದ್ದರು. ಡೇವಿಡ್ ನ ಕ್ರಿಮಿನಲ್ ಮೈಂಡ್ ಜಾಗೃತವಾಯಿತು. ತಕ್ಷಣ ಸೆಕ್ಯೂರಿಟಿಗೆ ಅವರನ್ನು ಹುಡುಕಿ ಹಿಂಬಾಲಿಸುವಂತೆ ಆಜ್ಞಾಪಿಸಿ ತಾನು ಹರ್ಷನ ಬಳಿಯೇ ಉಳಿದುಕೊಂಡ.
ಆಸ್ಪತ್ರೆಯ ತುಂಬ ಅಲೆಯುತ್ತಿದ್ದವರ ಕಣ್ಣಿಗೆ ಬಿದ್ದಿದ್ದ ಪ್ರಸನ್ನ. ಅವನ ಮುಖ ಗಾಬರಿಯಿಂದ ಕೂಡಿತ್ತು. ಕಿಸೆಯಲ್ಲಿ ಏನೋ ಬಚ್ಚಿಡುವ ಪ್ರಯತ್ನದೊಂದಿಗೆ ವಾಷ್‌ರೂಂ ಸೇರಿಕೊಂಡಿದ್ದ. ಮುಖ ಮುಖ ನೋಡಿಕೊಂಡ ಗಾರ್ಡ್ಸ್ ಗಳ ಅನುಮಾನ ಬಲವಾಗಿ ಚಿಟಿಕೆಯಲ್ಲಿ ಅವನನ್ನು ಹಿಡಿಯಲು ಓಡಿದ್ದರು.
ವಾಷ್‌ರೂಂ ಹೊಕ್ಕು ಒಳಗಿನ ಬಾಗಿಲು ಬಡಿದರೂ ಕೆಲವು ನಿಮಿಷ ಅವನಿಂದ ಪ್ರತ್ಯುತ್ತರವಿಲ್ಲ. ಅವರ ಎಚ್ಚರಿಕೆ ಕರೆಗಳು ಜಾರಿಯಿದ್ದವು. ಕಡೆಗೆ 'ಬಂದೆ..' ಎನ್ನುತ್ತಲೇ ಮತ್ತೂ ಹತ್ತು ನಿಮಿಷ ವ್ಯಯ ಮಾಡಿ ಆಚೆ ಬಂದಿದ್ದ ಪ್ರಸನ್ನ.
ಕೂಡಲೇ ಅವನನ್ನು ತಪಾಸಣೆ ಮಾಡಿದವರಿಗೆ ಅನುಮಾನ ಪಟ್ಟಂತೆ ಏನೂ ಸಿಗಲಿಲ್ಲ. "ತೂ ಕ್ಯೂಂ ಭಾಗ್ ರಹಾ ಥಾ ? ಕ್ಯೂಂ ಗಬ್ರಾ ರಹಾ ಥಾ? ಕ್ಯಾ ಚುಪಾ ರಹಾ ಥಾ ಹಮ್ಸೇ?" ಒರಟಾಗಿ ಕೇಳಿದನೊಬ್ಬ.
"ಹಲೋ ಬ್ರೋಸ಼್... ಅಗರ್ ಟಾಯ್ಲೆಟ್ ಕೆ ಲಿಯೆ ಬೊಹತ್ ಅರ್ಜೆಂಟ್ ಹೋ,, ತೋ ಕ್ಯಾ ತುಮ್ ಲೋಗ್ ಸ್ಲೋಮೋಷನ್ ಮೇ.. ಹಸ್ತೆ ಹಸ್ತೆ ಜಾತೇ ಹೋ?? ನಹೀ ನಾ! ಮೇರಾ ಹಾಲ್ ಭಿ ವಹೀ ಥಾ!!" ಹೊಟ್ಟೆ ಮೇಲೆ ಕೈಯಾಡಿಸುತ್ತ ಅಲವತ್ತುಕೊಂಡ. ಗಂಭೀರವಾಗಿದ್ದ ಮುಖಗಳಲ್ಲಿ ಬಂದ ನಗುವನ್ನು ನುಂಗಿ ಅವನನ್ನು ಹೊರಡಲು ಆದೇಶಿಸಿದರು.
"ಔರ್ ವೋ ಲಡ್ಕಿ ಕಂಹಾ ಗಯೀ?" ನೆನಪಾಗಿ ಆತಂಕದಿಂದ ಕೇಳಿದನೊಬ್ಬ.
"ಐ ಡೋಂಟ್ ನೋ!! ಮೇ ತೋ ಯಂಹೀ ಹ್ಮೂ!" ಹಾರಿಕೆಯ ಉತ್ತರ ನೀಡಿ ಕಳಚಿಕೊಂಡಿದ್ದ.
ಒಬ್ಬರ ಮುಖ ಒಬ್ಬರು ನೋಡಿಕೊಂಡವರ ಹುಬ್ಬು ಮತ್ತೆ ಗಂಟಾದವು.
*************
ಮಾನ್ವಿಗೆ ಎಚ್ಚರವಾದ ತಕ್ಷಣ ಅವಳನ್ನು ಮಾತನಾಡಿಸಿದ ರಘುನಂದನ್ ಹಿಂದಿನ ದಿನದ ಘಟನೆ ಕುರಿತು ಪ್ರಶ್ನಿಸಿದರು. ಅದಕ್ಕೆ ಪ್ರತಿಯಾಗಿ ಮಾನ್ವಿ ಅವರನ್ನು ಬಿಗಿಯಾಗಿ ಅಪ್ಪಿಕೊಂಡಳು. ಅವಳ ಕಂಬನಿಯ ಕಂಗಳು ಅವರ ಮನ ಕಲಕಿದವು. ಜೊತೆಗಿದ್ದ ಅವಳ ತಾಯಿ ಕೂಡ ಮಗಳನ್ನು ತಮ್ಮೆಡೆಗೆ ವಾಲಿಸಿ ಬಿಗಿದಪ್ಪಿದರು.
ಮಗಳು ಕೇಳಿದ್ದನ್ನೆಲ್ಲ ಕಾಲಡಿಯಲ್ಲಿ ತಂದು ಸುರಿದು ಸಂತೋಷ ಪಡಿಸಿದ್ದು ಮಾತ್ರ ಗೊತ್ತಿತ್ತೇ ಹೊರತು ಅವಳ ಕಣ್ಣೀರನ್ನು ಇದುವರೆಗೂ ಕಂಡವರಲ್ಲ. ಅದೆಂತಹ ಕಠಿಣ ಪರಿಸ್ಥಿತಿಯಲ್ಲೂ ಅವಳೂ ತನ್ನ ಅಳುವನ್ನು ತೋರಿಸಿಕೊಂಡವಳೂ ಅಲ್ಲ! ಆದರೆ ಈ ದಿನ ಅವಳ ಕ್ಷಮತೆ ಕೈ ಮೀರಿ ಹೋಗಿತ್ತು.
" ಯಾಕೋ ಪುಟ್ಟ... ಕೈ ತುಂಬಾ ನೋವಾಗ್ತಿದೆಯಾ?" ತಾಯಿ ಕೇಳಿದ ಪ್ರಶ್ನೆ. ಅವಳ ಅಳು ಮತ್ತೂ ಹೆಚ್ಚಾಯಿತು.
ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಅವಳ ಮನದಲ್ಲಿ ಕೊರೆಯುತ್ತಿದ್ದ ವೇದನೆ ಏನೆಂಬುದು ರಘುನಂದನ್ ರಿಗೆ ತಿಳಿಯದಿದ್ದರೂ ಯಾವುದೋ ರಹಸ್ಯವನ್ನು ತಮ್ಮಿಂದ ಬಚ್ಚಿಡುವ ಅವಳ ಪ್ರಯತ್ನದ ಅರಿವಾಗಿತ್ತು. ಅವರ ಮೊದಲ ಅನುಮಾನ ಆರಂಭಗೊಂಡಿದ್ದೇ ಪ್ರಸನ್ನನಿಂದ..
"ಹೇಯ್ ಪ್ರಿನ್ಸೆಸ್,, ನೀನು ಅಳೋದಾ?" ಗಲ್ಲ ಪಿಡಿದು ಸಂತೈಸಿದರು.
"ನಿನ್ನನ್ನ ಈ ಅಳುವ ಸ್ಥಿತಿಗೆ ತಂದವನು ಅದೇ ಪ್ರಸನ್ನ ತಾನೇ? ಒಂದು ಹೇಳಿಕೆ ಕೊಡು ಸಾಕು, ಅವನನ್ನು ಈ ಕೂಡಲೇ ಜೈಲಿಗೆ ಹಾಕಿ, ಮರೆಯೋಕಾಗದ ಶಿಕ್ಷೆ ಕೊಟ್ಟು ಜೀವನಪೂರ್ತಿ ಕಂಬಿ ಹಿಂದೆ ಕೊಳೆಯುವ ಹಾಗೆ ಮಾಡ್ತಿನಿ..." ದವಡೆಗಟ್ಟಿಸಿದರು.
ಒಡನೆಯೇ ನಿಚ್ಚಳಗೊಂಡ ಮಾನ್ವಿ "ನೋ ಡ್ಯಾಡ್ ಅವನೇನು ಮಾಡಿಲ್ಲ ಇದರಲ್ಲಿ ಅವನ ತಪ್ಪಿಲ್ಲ." ಒಂದೇ ಉಸಿರಲ್ಲಿ ಕೂಗಿದವಳು ತಕ್ಷಣ ಏನೋ ನೆನಪಾಗಿ
"ಪರಿ, ಪರಿ ಹೇಗಿದ್ದಾಳೆ ಡ್ಯಾಡ್? ಅವಳಿಗೇನು ಆಗಿಲ್ಲ ತಾನೇ?" ಕೇಳಿದಳು ಆತಂಕದಲ್ಲಿ..
"ನಿನ್ನ ಫ್ರೆಂಡ್ ಪರಿ...? ಶೀ ಇಸ್ ಫೈನ್! ರಾತ್ರಿಯಿಂದ ಇಲ್ಲೇ ಇದ್ದಾಳೆ" ಮಗಳನ್ನೇ ಪ್ರಶ್ನಾರ್ಥಕವಾಗಿ ನೋಡುತ್ತ ಹೇಳಿದ್ದರವರು.
"ಮಿಸ್. ಮಾನ್ವಿ, ನಿನ್ನೆ ನಿಮ್ಮ ಮತ್ತು ಸಂಕಲ್ಪ್ ಅವರ ಮೇಲೆ ದಾಳಿ ಹೇಗಾಯ್ತು ಅಂತ ಸ್ವಲ್ಪ ಹೇಳ್ತಿರಾ?" ಏನ್ಕ್ವೈರಿ ಮಾಡಿ, ಸ್ಟೇಟ್ಮೆಂಟ್ ತೆಗೆದುಕೊಳ್ಳಲು ಬಂದಿದ್ದ ಇನ್ಸ್ಪೆಕ್ಟರ್ ಆಂಗ್ಲದಲ್ಲಿ ಕೇಳಿದರು. ಕಾನ್ಸ್‌ಟೇಬಲ್ ರಿಪೋರ್ಟ್ ಬರೆದುಕೊಳ್ಳತೊಡಗಿದ. ಆಗಲೇ ಒಳಬಂದಿದ್ದ ಆಲಾಪ್ ಅಪ್ಯಾಯವಾಗಿ ಅವಳೆಡೆಗೆ ನೋಡಿದ್ದ.
" ಗನ್ ಶೂಟ್ ಆಗಿದ್ದು ಸಂಕಲ್ಪ್ ಮೇಲಲ್ಲ; ಪರಿ ಮೇಲೆ!! ನಾನು ಅವಳ ಜೊತೆಗೆ ಮಾತಾಡುತ್ತಿರುವಾಗ ಅಕಸ್ಮಾತ್ತಾಗಿ ನನಗೆ ತಾಗಿತ್ತು. ಶೂಟ್ ಮಾಡಿದ್ದು ಯಾರೋ ನಾನು ನೋಡ್ಲಿಲ್ಲ" ಕ್ಲುಪ್ತವಾಗಿ ವಿವರಣೆ ನೀಡಿದ್ದಳು. ಎದುರಿದ್ದ ಆಲಾಪ್ ಮತ್ತು ತಂದೆಗೆ ಎಲ್ಲವನ್ನೂ ಹೇಳುವ ಮನಸ್ಸಾಯಿತಾದರೂ ಆ ಎಸ್ ಐ ಕೂಡ ಅಥ್ರೇಯನ ಕಡೆಯವನೇ ಆಗಿದ್ದರೇ ಎಂಬ ಅನುಮಾನ ಅವಳನ್ನು ಮೂಕಳನ್ನಾಗಿಸಿತು.
ರಘುನಂದನ್ ಅವರ ಬುದ್ದಿ ಅದಾಗಲೇ ತಮ್ಮ ಸೆಕ್ಯೂರಿಟಿ ಹೇಳಿದ ಕಟ್ಟು ಕಥೆಗೂ ಮಾನ್ವಿ ಹೇಳಿದ ಮಾತಿಗೂ ತಾಳೆ ಹಾಕುವ ಕಾರ್ಯ ಶುರುಮಾಡಿತ್ತು. ಯಾರು ಹೇಳುತ್ತಿರುವುದು ನಿಜ? ಯಾವುದು ಸುಳ್ಳು? ಸಿಕ್ಕು ಬಿದ್ದ ಶೂಟರ್ ಯಾಕೆ ಪ್ರಸನ್ನನ ಹೆಸರು ಹೇಳಿದ್ದ? ಮೇಲ್ನೋಟಕ್ಕೆ ಯಾವ ಗೊಂದಲ ತೋರಿಸಿಕೊಳ್ಳದೇ ಮಗಳ ತಲೆ ನೇವರಿಸಿ
"ಟೇಕ್ ರೆಸ್ಟ್ ನೌ.. ಡಾಕ್ಟರ್ ಜೊತೆಗೆ ಮಾತಾಡಿ ಇವತ್ತೇ ಡಿಸ್ಚಾರ್ಜ್ ಮಾಡಿಸುವ ವ್ಯವಸ್ಥೆ ಮಾಡುತ್ತೇನೆ" ಎನ್ನುತ್ತಾ ಆಲಾಪ್ ನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋದರು.
"ಡ್ಯಾಡ್, ನಾನು ಸಂಕಲ್ಪ್ ಜೊತೆಗೆ ಸ್ವಲ್ಪ..." ಅನ್ನುವಾಗಲೇ.. "ಈಗಲೇ ಕಳಿಸ್ತೇನೆ" ಎಂದು ಮುಗುಳ್ನಕ್ಕರು. ಮಗಳಿಗೆ ಹರ್ಷನ ಮೇಲೆ ತೀರದ ಪ್ರೀತಿ ಎಂದೇ ಅವರ ನಂಬಿಕೆ. ಆದರೆ ಇಷ್ಟರಲ್ಲೇ ಅದು ಪ್ರೀತಿಯಲ್ಲ ಅನಿವಾರ್ಯದ ನಾಟಕ ಎಂಬ ಸತ್ಯ ಹೊರಬೀಳುವದರಲ್ಲಿತ್ತು. ಅದೂ ಪ್ರಸನ್ನನ ಮೂಲಕ!
ಅವಳನ್ನು ಮನೆಗೆ ಕರೆತರುವ ಜವಾಬ್ದಾರಿಯನ್ನು ಸಂಕಲ್ಪ್ ಮೇಲೆ ಹೊರೆಸಿ ರಘುನಂದನ್ ಆಲಾಪ್‌ನನ್ನು ಕರೆದುಕೊಂಡು ಮನೆಗೆ ತೆರಳಿದರು.
"ಆಲಾಪ್, ನೀನು ಬಾಲ್ಯದಿಂದಲೂ ಮಾನು ಬೆಸ್ಟ್ ಫ್ರೆಂಡ್, ಅವಳ ಬಗ್ಗೆ ನನಗಿಂತ ನಿನಗೆ ಹೆಚ್ಚು ಗೊತ್ತಿರಬಹುದು! ಏನೋ ಮುನಿಸಿನಿಂದ ಇಷ್ಟು ದಿನ ಮಾತಾಡಿರಲಿಲ್ಲ ನಿಜ, ಈಗ ಮತ್ತೆ ಫ್ರೆಂಡ್ಸ್ ಆಗಿದ್ದಿರಲ್ವ? ಅವಳು ನಿನ್ನೊಂದಿಗೆ ಏನಾದ್ರೂ ಸೀಕ್ರೆಟ್ ಶೇರ್ ಮಾಡಿಕೊಂಡಳಾ?"
ಮನೆಗೆ ಹೋಗುವ ಮಾರ್ಗಮಧ್ಯದಲ್ಲಿ ಕಾರು ನಿಲ್ಲಿಸಿ ಆಲಾಪ್ ನೊಂದಿಗೆ ಏಕಾಂತದಲ್ಲಿ ಪ್ರಶ್ನಿಸಿದ್ದರು ರಘುನಂದನ್. ದೂರದಲ್ಲಿ ನಿಂತಿದ್ದ ಪಿಎ ಕಣ್ಣು ಕಿವಿ ಗಮನ ಅವರ ಮೇಲೆ ಇತ್ತಾದರೂ ಏನು ಕೇಳಿಸಲಿಲ್ಲ.
"ನೋ ಅಂಕಲ್, ಅವಳು ಒಂತರಾ ಇರೋದು ನನ್ನ ಗಮನಕ್ಕೂ ಬಂದಿತು. ಆದರೆ ಯಾಕೆ ಅನ್ನೋದು ನನಗೂ ತಿಳಿತಿಲ್ಲ."
"ಏಕ್ಸ್ಯಾಕ್ಟ್ಲೀ... ಅವಳು ಮನಸ್ಸಲ್ಲೇ ಕೊರಗ್ತಾ ಇದ್ದಾಳೆ ಆಲಾಪ್. ಅದೇನೆಂದು ನೀನೇ ಮಾತಾಡಿ ತಿಳಿದುಕೊಂಡು ನನಗೆ ಹೇಳಬೇಕು. ಆದಷ್ಟು ಬೇಗ..." ರಘುನಂದನ್ ಗಂಭೀರವಾಗಿ ನುಡಿದರು.
"ಶ್ಯೂರ್ ಅಂಕಲ್" ತಲೆದೂಗಿದ ಆಲಾಪ್ ಗತದಲ್ಲಿ ಆಕೆ ತನ್ನನ್ನು ಪ್ರೀತಿಸಿದ ವಿಷಯ, ಪರಿಯ ಮೇಲಿನ ಮುನಿಸು, ದ್ವೇಷವನ್ನು ಮರೆಮಾಚಲು ಯತ್ನಿಸಿದ್ದ.
"ಅಂಕಲ್, ಅದೂ.." ಎಂದು ರಾಗವೆಳೆದ ಆಲಾಪ್
"ಸಂಕಲ್ಪ್ ಹೆಸರಲ್ಲಿ ಈಗ ಇರೋ ವ್ಯಕ್ತಿ ಹರ್ಷ ಅನ್ನೋದು ನಿಮಗ್ಗೊತ್ತಾ?" ಸಂಶಯ ಎದುರಿಟ್ಟ
"ಹ್ಮ್,, ಯಾ ಐ ನೋ.. " ಭಾರವಾದ ಉಸಿರು ಬಿಟ್ಟು.
"ನಿಜವಾದ ಸಂಕಲ್ಪ್ ಒಂದು ವರ್ಷದ ಹಿಂದೆಯೇ ಸತ್ತು ಹೋಗಿದ್ದಾನೆ ಅನ್ನೋದು ಗೊತ್ತು! ನಾನು ಮಾಡ್ತಿರೋದೆಲ್ಲ ತಪ್ಪು ಅನ್ನೋದು ಗೊತ್ತು! ಆದರೆ ಮಾನ್ವಿ ಹರ್ಷನನ್ನ ಪ್ರೀತಿಸ್ತಿದ್ದಾಳೆ. ಅವನಿಲ್ಲದೆ ಅವಳು ಬದುಕೋದಿಲ್ಲ. ನನ್ನ ಮಗಳಿಲ್ಲದೇ ನಮಗೆ ಬದುಕಿಲ್ಲ... ಇದೇ ಒಂದೇ ಕಾರಣಕ್ಕೆ ಇಷ್ಟೆಲ್ಲಾ ಮಾಡಿದ್ದು. ನೀನು ಮಾನ್ವಿ ಸಂತೋಷಕ್ಕೆ ಅಡ್ಡಿಯಾಗೋದಿಲ್ಲ ಅಲ್ವಾ.." ಭುಜದ ಮೇಲೆ ಕೈ ಹಾಕಿದರು.
ಅವರ ಕೈಯನ್ನು ತನ್ನ ಕೈಗೆ ತೆಗೆದುಕೊಂಡ ಆಲಾಪ್ "ನನಗೂ ಮಾನು ಸಂತೋಷವೇ ಮುಖ್ಯ ಅಂಕಲ್.." ಎಂದವನು ಅವಳ ಮನಸ್ಸಲ್ಲಿ ಇರೋದಾದ್ರು ಏನು ಎಂಬ ತರ್ಕಕ್ಕೆ ಸಿಲುಕಿದ.
*************
ಆಕಡೆಯಿಂದ ಒಂದೇ ರಿಂಗಿಗೆ ಕಾಲ್ ರಿಸೀವ್ ಮಾಡಿದ್ದ ಹರಿಣಿ "ಹಲೋ..." ಎಂದಿದ್ದಳು ಏದುಸಿರಲ್ಲಿ. ಅವಳ ದನಿಯಲ್ಲಿನ ಗಾಬರಿಯೇ ಹೇಳುತ್ತಿತ್ತು ಅವಳು ಎಷ್ಟು ಆತಂಕದಲ್ಲಿ ಇರುವಳೆಂದು.
"ಹರಿ, ಹೇಗಿದ್ದಿಯೇ? ಯಾವ ಊರು ಹಾಳಾಗುತ್ತೋ ಇವತ್ತು... ನೀನು ಇಷ್ಟು ಬೇಗ ಎದ್ದಿದ್ದಕ್ಕೆ!" ಆಸ್ಪತ್ರೆಯ ನರ್ಸ್ ಒಬ್ಬಳ ಫೋನ್ ತೆಗೆದುಕೊಂಡು ಲೇಡೀಸ್ ವಾಷ್‌ರೂಂನೊಳಗೆ ಕದ್ದು ಮಾತನಾಡುತ್ತಿದ್ದಳು ಪರಿಧಿ. ಎದೆಯಲ್ಲಿ ಭಯ ಭುಗಿಲೆದ್ದಿತು. ಆದರೂ ತುಂಬಾ ಸಹಜವಾಗಿ ಮಾತನಾಡುವ ನಟನೆ.
"ಧೀ...." ಸಂತಸದಿಂದ ಕೇಕೆ ಹಾಕುತ್ತಾ ಹರಿಣಿ... "ಮಲಗಿದ್ದರೆ ತಾನೇ ಬೇಗ ಏಳುವ ಪ್ರಮೇಯ! ಇಡೀ ರಾತ್ರಿ ಜಾಗರಣೆ ಗೊತ್ತಾ! ಎಲ್ಲಿದೀರಾ ಎಲ್ಲರೂ.. ನಿನ್ನೆಯಿಂದ ಕಾಲ್ ಟ್ರೈ ಮಾಡ್ತಾನೆ ಇದ್ದೀವಿ. ರಿಸೀವ್ ಮಾಡೋಕೆ ಏನ್ ಕಷ್ಟ ನಿಮಗೆ? ಆ ಡಾ.ಪಚ್ಚಿಯಂತೂ ನನ್ನ ಕೈಗೆ ಸಿಗಬೇಕಲ್ಲ ಅಪ್ಪಚ್ಚಿ ಮಾಡಿಬಿಡ್ತಿನಿ. ಇಲ್ಲಿದ್ದಾಗ ಸ್ವೀಟಿ ಸ್ವೀಟಿ ಅಂತ ಮಸ್ಕಾ ಹೊಡಿತಿದ್ದ. ಈಗ ನನ್ನ ಜೊತೆ ಮಾತಾಡೋಕು ಆಗದಷ್ಟು ಬಿಜಿನಾ ಅವ್ನು... " ಗದರುತ್ತಿದ್ದ ಹರಿಣಿ ಮಾತಿನಿಂದ ತಿಳಿದಿತ್ತು ಅವರು ನಿನ್ನೆಯಿಂದ ಕರೆ ಮಾಡುತ್ತಲೇ ಇದ್ದರು. ಎಲ್ಲ ಗಲಿಬಿಲಿಗಳ ಮಧ್ಯೆ ತಾನು ಪ್ರಸನ್ನ ಫೋನ್ ಕಡೆಗೆ ಗಮನವೇ ಹರಿಸಿರಲಿಲ್ಲವೆಂಬುದು.
"ಅದೂ ನನ್ನ ಮೊಬೈಲ್ ಕಳೆದುಹೋಗಿದೆ. ಡಾ.ಪ್ರಸನ್ನ ಅವರು ಕೆಲಸದಲ್ಲಿ ಬಿಜಿ ಇರ್ಬಹುದು. ಹೀಗಾಗಿ.."
"ಧೀ... ಅಪ್ಪ ಅಮ್ಮ ಕೂಡ ನಿನ್ನೆನೇ ಮುಂಬೈಗೆ ಬಂದಿದಾರಂತೆ, ನಿನ್ನ ಜೊತೆಗೆ ಇದ್ದಾರಾ? ನಾನು ಏಕ್ಸಾಂ ಮುಗಿಸಿ ಬರೋಕು ಮೊದಲೇ ಹೊರಟು ಹೋಗಿದ್ದಾರೆ. ನೋಡು, ನನಗೆ ಒಂದು ಮಾತು ಹೇಳಿಲ್ಲ. ಅಲ್ಲಿಗೆ ಹೋದಮೇಲೂ ಒಂದು ಕಾಲ್ ಮಾಡಿ ನನ್ನ ಜೊತೆಗೆ ಮಾತಾಡಿಲ್ಲ. ಫೋನ್ ಕೂಡ ಸ್ವಿಚ್ಡ್ ಆಫಾಗಿದೆ. ನನ್ನ ಮೇಲೆ ಚೂರು ಪ್ರೀತಿಯಿಲ್ಲ ಅವರಿಗೆ.." ಆತಂಕ ಅಳುವಾಗಿ ಮಾರ್ಪಟ್ಟಿತು.
"ಛೇ,, ಇಲ್ವೇ.., ಅತ್ತೆ ಮಾವ ನಿನ್ನೆನೇ ನಿನಗೆ ಕಾಲ್ ಮಾಡುವವರಿದ್ರು ಆದರೆ ತುಂಬಾ ಆಯಾಸ ಆಗಿದ್ದರಿಂದ ನಾನೇ ಅವರಿಗೆ ಮಲಗಲು ಹೇಳಿದೆ. ಇನ್ನೂ ಮಲಗಿದ್ದಾರೆ. ಎದ್ದತಕ್ಷಣ ನಾನೇ ಕಾಲ್ ಮಾಡಿ ಮಾತಾಡಿಸ್ತಿನಿ ಒಕೆ.. " ಅನಾಯಾಸವಾಗಿ ಸುಳ್ಳು ಹೇಳಿ ರಮಿಸಿದ್ದಳು. ಕಣ್ಣು ಶೂನ್ಯ ದೃಷ್ಟಿಯಲ್ಲಿ ಕಳೆದಿದ್ದವು. 'ಮಾತಾಡಿಸಬಲ್ಲೇನಾ? ಮತ್ತೆ ಅವರನ್ನು ತಾನಾದರೂ ನೋಡಬಲ್ಲೇನಾ?' ಕಣ್ಣಿಂದ ಹನಿಯುದುರಿದವು.
"ನೋಡಮ್ಮ, ಎಷ್ಟು ಸಮಾಧಾನ ಹೇಳಿದ್ರೂ ಈ ಮುದುಕನ ಮಾತಿಗೆ ಬೆಲೆನೇ ಕೊಡಲ್ಲ ಅಂತಾಳೆ. ನಿನ್ನೆಯಿಂದ ಒಂದೇ ಗೋಳು,, ಈ ಹಾಳು ಮುಂಬೈಗೆ ಹೋದವರೆಲ್ಲ ಕಳೆದೇ ಹೋಗ್ತಾರೆ! ಮೊದಲೇ ಗೊತ್ತಿದ್ದರೆ ಹೋಗೋಕೆ ಬಿಡ್ತಿರ್ಲಿಲ್ವಂತೆ ಅವರ ಅಪ್ಪ ಅಮ್ಮನ್ನ.. ರಾತ್ರಿಯಿಡೀ ಏನೂ ತಿನ್ನದೇ, ತಾನು ಮಲಗದೇ, ನನಗೂ ಮಲಗೋಕೆ ಬಿಡದೆ ಫೋನ್ ಮುಂದೆ ಧರಣಿ ಕೂತ್ಬಿಟ್ಟಿದ್ದಾಳೆ. ಇನ್ನಿವ್ಳು ಪರೀಕ್ಷೆಯಲ್ಲಿ ಏನು ಗೀಚ್ತಾಳೋ ದೇವರೇ ಬಲ್ಲ!!" ತಾತನ ದೂರು ಕಿವಿಗೆ ಬಿತ್ತು. ಮೃದುವಾಗಿ ನಕ್ಕು ಮತ್ತದೇ ಸುಳ್ಳು ಆಶ್ವಾಸನೆ ಕೊಟ್ಟಳು. ಅವರ ಆರೋಗ್ಯ ವಿಚಾರಿಸಿ, ಹುಷಾರಾಗಿ ಇರಲು ಕೆಲವು ಎಚ್ಚರಿಕೆಗಳನ್ನು ನೀಡಿ ಕರೆ ಕಡಿತಗೊಳಿಸಿದಳು. ಇನ್ನೂ ಹೆಚ್ಚಿನ ಸಮಯ ದುಃಖ ತಡೆಹಿಡಿದು ಸುಳ್ಳು ಮುಖವಾಡ ಧರಿಸಲಾಗಲಿಲ್ಲ ಅವಳಿಂದ. ಸಮಯದ ಅಭಾವ ಕೂಡ ಒಂದು ಕಾರಣವಾಗಿತ್ತು.
ಭಯದ ಮಧ್ಯೆ ನಿಟ್ಟುಸಿರು ಬಿಡುತ್ತ, ನಡುಗುವ ಕೈಗಳಿಂದಲೇ ಪ್ರಸನ್ನ ಹೇಳಿದ ಮತ್ತೆರಡು ನಂಬರ್‌ಗಳನ್ನು ಮನನ ಮಾಡಿಕೊಂಡು ಕಾಲ್ ಮಾಡಿ ಸಂಕ್ಷಿಪ್ತವಾಗಿ ಮಾತು ಮುಗಿಸಿ ಕಾಲ್ ಹಿಸ್ಟರಿ ಡಿಲೀಟ್ ಮಾಡಿದ್ದಳು.
ತುಂಬಾ ಸಮಯವಾದರೂ ಹೊರಗೆ ಬರದಿದ್ದವಳನ್ನು ಹುಡುಕುತ್ತಾ ವಾಷ್‌ರೂಂ ಒಳಗೆ ಗೊಣಗುತ್ತ ಬಂದ ನರ್ಸ್ ತನ್ನ ಮೊಬೈಲ್ ಪಡೆದುಕೊಂಡು ಹೊರಗೆ ನಡೆದಳು. ಭಾರವೊಂದು ತಲೆಯಿಂದ ಇಳಿದಂತೆ ಮುಖಕ್ಕೆ ನೀರೆರಚಿಕೊಂಡ ಪರಿ ಹಗುರಾದಳು.
**************
ಪರಿ ಕಾಣದಿದ್ದಾಗ ಡೇವಿಡ್ ಕೋಪ ನೆತ್ತಿಗೇರಿ ರೌದ್ರಾವತಾರ ತಾಳಿದ್ದನಾತ. ಅವನ ಚಡಪಡಿಕೆ ನೋಡಿ ಪ್ರಸನ್ನನ ಮೊಗದಲ್ಲಿ ವಿಕಟ ನಗುವಿತ್ತು. ಹರ್ಷ ಅವಳಿಗಾಗಿ ಎದುರು ನೋಡುತ್ತ ಶತಪಥ ತಿರುಗುತ್ತಿದ್ದ.
ಮೆಲ್ಲಗೆ ಹೆಜ್ಜೆ ಹಾಕುತ್ತಾ ಬರುತ್ತಿದ್ದ ಪರಿಯನ್ನು ಕಂಡ ಡೇವಿಡ್ ಅವಳೆಡೆ ಧಾವಿಸಿ ಅವಾಚ್ಯ ಪದದೊಂದಿಗೆ 'ಎಲ್ಲಿ ಹೋಗಿದ್ದೇ' ಎಂದು ಗದರಿದ್ದ. ಅವನ ಕರ್ಕಶ ಧ್ವನಿಗೆ ಅವಳ ಮೈ ಕಂಪಿಸಿ 'ವಾ,,ಷ್ರೂಂ,,ಗೆ' ಮಾತು ತೊದಲಿದವು. ಅವಳ ಬೆದರಿದ ಕಂಗಳು ಅವನಿಗೆ ಆಮೋದ ನೀಡಿದವು.
ಅವಳ ಮೇಲೆ ಕೈಯೆತ್ತಿ ಹೊಡೆಯ ಹೋದವನನ್ನು ತಡೆದಿದ್ದು ಹರ್ಷನ ಬಿರುಸಿನ ಹಿಡಿತ.
"ಬಿಹೇವ್ ಯುವರ್ ಸೆಲ್ಫ್!! ಅವಳು ಹೇಳ್ತಿದ್ದಾಳೆ ತಾನೇ.. ವಾಷ್‌ರೂಂ ಹೋಗಿದ್ಳು ಅಂತ. ಮತ್ಯಾಕೆ ಈ ದಾದಾಗಿರಿ?" ಕೈ ಬಿಡಿಸಿ ಕೆಳಗಿಳಿಸಿದ. ಓರೆಗಣ್ಣಲ್ಲಿ ಧುಮುಗುಡುತ್ತ ಪರಿಯತ್ತ ನೋಡಿದ ಡೇವಿಡ್.
"ಮಾನ್ವಿಗೆ ಪ್ರಜ್ಞೆ ಬಂದಿದೆಯಂತೆ ಬಾ ಮೀಟ್ ಮಾಡೋಣ" ಯಾವ ಪ್ರತಿಕ್ರಿಯೆಗೂ ಕಾಯದೆ ಅವಳ ಕೈ ಹಿಡಿದು ಒಳಗೆ ಕರೆದುಕೊಂಡು ಹೋದ.
ಒಳಗೆ ಬಂದ ಪರಿ ಹರ್ಷನನ್ನ ಒಟ್ಟಿಗೆ ನೋಡುತ್ತಿದ್ದಂತೆ ಒಂದು ಕ್ಷಣ ಸಂತಸದ ಛಾಯೆಯಲ್ಲಿ ಮಾನ್ವಿಯ ಕಣ್ಣಾಲಿ ತುಂಬಿ ಬಂದವು. ಕೆಲಕ್ಷಣ ಮಾತುಗಳೇ ಹೊರಡದೆ ಮೌನ ಆವರಿಸಿತ್ತು.
"ಪರಿ, ನೀನು ಹೇಳಿದ್ದು ನಿಜ ಕಣೇ... ಹರ್ಷ ಯಾವತ್ತೂ ನಿನ್ನವನೇ!!" ವಿಷಾದದ ಮೆಚ್ಚುಗೆ ಇತ್ತು.
"ಆದರೆ.. ನಾನು ಹರ್ಷನನ್ನೇ ಮದುವೆ ಆಗಬೇಕಿರೋದು ಅನಿವಾರ್ಯ!"
"ಹರ್ಷ, ಐಮ್...." ಎನ್ನುತ್ತಿದ್ದವಳ ಬಾಯಿಗೆ ಕೈ ಅಡ್ಡವಿಟ್ಟ ಹರ್ಷ
"ಐಮ್ ಸಾರಿ ಮಾನು.... ನೀನು ಯಾವ ಪರಿಸ್ಥಿತಿಯಲ್ಲಿ ಹೀಗೆಲ್ಲ ಮಾಡಿರಬಹುದು ಎನ್ನುವ ಸಣ್ಣ ಕಲ್ಪನೆ ಕೂಡ ನನಗಿರಲಿಲ್ಲ. ನಿನ್ನೆ ನಾನು ಆ ಕಾನ್ಸರ್ಟ್ ಮಾಡದೇ ಇದ್ದರೆ ಈ ಅವಾಂತರ ಆಗುತ್ತಿರಲಿಲ್ಲ. ನಿನ್ನ ಈ ಸ್ಥಿತಿಗೆ ನಾನೇ ಕಾರಣ! ನನ್ನ ಕ್ಷಮಿಸ್ತಿಯಲ್ವ..."
"......." ಏನು ನಡೆಯುತ್ತಿದೆ ಎಂಬುದೇ ಅರ್ಥವಾಗದೇ ನೋಡಿದಳು.
"ಮಾನು... ಅದ್ಹೇಗೆ ಇಷ್ಟು ದಿನ ನೀನೊಬ್ಬಳೇ ಆ ರಾಕ್ಷಸನ ಜೊತೆ ಜಿದ್ದಿಗೆ ಬಿದ್ದು ನೋವು ಅನುಭವಿಸಿದೆ... ಇನ್ನು ಆ ಅಥ್ರೇಯನ ಬಗ್ಗೆ ಯಾವುದೇ ಭಯ ಬೇಡ್ವೆ. ವಿ ಆರ್ ವಿತ್ ಯು.. ರಘು ಅಂಕಲ್ ಗೆ ಯಾವ ತೊಂದರೆನೂ ಆಗಲ್ಲ " ಅವಳ ಮುಂಗೈ ಬಿಗಿಹಿಡಿದ ಪರಿ ಸಾಂತ್ವನಿಸಿದಳು.
ಗಾಬರಿಯ ಕಣ್ಣಲ್ಲಿ ಸುತ್ತಲಿನ ಗೋಡೆ ಆಚೆ ಈಚೆ ನಿರುಕಿಸಿದಳು ಮಾನ್ವಿ.
"ಡೋಂಟ್ ವರಿ... ಸೆಕ್ಯೂರಿಟಿ ಆಚೆ ನಿಂತಿದ್ದಾರೆ. ಇದೊಂದು ಜನರಲ್ ಹಾಸ್ಪಿಟಲ್ ಇಲ್ಲಿ ಸಿಸಿ ಕ್ಯಾಮರಾ ಕೂಡ ಇಲ್ಲ" ಅವಳ ಆತಂಕ ಅರ್ಥ ಮಾಡಿಕೊಂಡು ನುಡಿದ.
"ಪರವಾಗಿಲ್ಲ ಹರ್ಷ, ಪರಿಯ ಮನಸ್ಸನ್ನು ಓದುವ ಹಾಗೆ, ನನ್ನ ಜೊತೆಗೆ ಇದ್ದು ಇದ್ದು ನನ್ನ ಮನಸ್ಸನ್ನು ಕೂಡ ಅರ್ಥ ಮಾಡ್ಕೋಳ್ತಿದೀಯಾ!!" ಆ ಮಾತು ವ್ಯಂಗ್ಯ ವಿಷಾದದಿಂದ ಕೂಡಿತ್ತು.
ಮೆಲುವಾಗಿ ನಕ್ಕು "ಒಂದೇ ರಾತ್ರಿಯಲ್ಲಿ ನಮಗೆಲ್ಲ ರೌರವ ನರಕ ತೋರಿಸಿದ ಆ ಅಥ್ರೇಯನ ಜೊತೆಗೇ ಇಷ್ಟು ದಿನ ಇದ್ದು, ಅವನಿಗೆ ವಿರುದ್ಧವಾಗಿ ಪ್ಲ್ಯಾನ್ ಮಾಡಿ, ನನ್ನ ಪ್ರಾಣ ಉಳಿಸಿ ನೆನಪು ಮರಳಿಸಿ ಅವನಿಗೆ ಸವಾಲಾಗಿರೋ ನೀನು... ಅದೆಷ್ಟು ಜಾಗೃತೆ ವಹಿಸಿರಬಹುದು ಎಂದು ಊಹಿಸಿದೆ ಅಷ್ಟೇ!!" ಅವನ ಮಾತಲ್ಲಿನ ಮೆಚ್ಚುಗೆ ಅಭಿಮಾನ ಗುರುತಿಸಿದಳಾಕೆ
"ಇದೆಲ್ಲಾ ನಿಮಗೆ??" ಸಂಶಯದಿಂದ ನೋಟ ಕಿರಿದಾಯಿತು.
" ಥ್ಯಾಂಕ್ಯೂ ಮಾನು, ನೀನು ಇರದೆ ಹೋಗಿದ್ದರೆ ನನ್ನ ಹರ್ಷ ನನಗೆ ಮತ್ತೆಂದೂ ಸಿಗುತ್ತಲೇ ಇರಲಿಲ್ಲ! ನಿನ್ನಿಂದಾಗಿಯೇ ಹರ್ಷನಿಗೆ ಈ ಮರುಜನ್ಮ!! ಎಷ್ಟು ಕಷ್ಟ ಪಟ್ಟು ನೀನು ಅವನನ್ನು ಬದುಕಿಸಿಕೊಂಡಿದ್ದಿಯಾ ಅನ್ನೋ ಸತ್ಯ ನಮಗೆಲ್ಲ ನಿನ್ನೆ ಅದ್ವೈತ್ ಮುಖಾಂತರ ಗೊತ್ತಾಯ್ತು ಕಣೇ.. "
"ನಿಮಗೆ? ಅದ್ವೈತ್? ಹೇಗೆ ??" ಬೆದರಿ ಅನುಮಾನದಿಂದ ಚಡಪಡಿಸಿದಳಾಕೆ
ಅಷ್ಟರಲ್ಲಿ ದುಡುಗ್ಗೆಂದು ಬಾಗಿಲು ತಳ್ಳಿಕೊಂಡು ಒಳಗೆ ಬಂದಿದ್ದ ಡೇವಿಡ್.. ಆಸ್ಪತ್ರೆಯ ಫೈಲೊಂದನ್ನು ಹರ್ಷನ ಮುಂದೆ ಹಿಡಿದು ಸಹಿ ಮಾಡಲು ಹೇಳಿದ. ಅವನ ಹಿಂದೆಯೇ ಒಳಗೆ ಪ್ರವೇಶಿಸಿದ್ದ ಪ್ರಸನ್ನ. ಕೈಗೆ ಪೆನ್ ತೆಗೆದುಕೊಂಡ ಹರ್ಷ ಅವು ಯಾವ ಪೇಪರ್ಸ್ ಎಂದು ಓದುವಾಗ
"ಡಿಸ್ಚಾರ್ಜ್ ಪೇಪರ್ಸ್! ಜಲ್ದಿ ಸೇ ಸೈನ್ ಕರೋ ಔರ್ ನಿಕ್ಲೊ ಯಂಹಾ ಸೇ!" ಆಸ್ಪತ್ರೆಯ ಗೌಜು ವಾತಾವರಣ ಸಹಿಸಲಾರದೆ ಅವಸರಿಸಿದ್ದ ಡೇವಿಡ್. ಆದಾಗ್ಯೂ ಹರ್ಷ ಪ್ರತಿಯೊಂದು ಡಾಕ್ಯುಮೆಂಟ್ ಓದಿಯೇ ಸಹಿ ಮಾಡಿ ಅವನಿಗೆ ಕೊಟ್ಟ.
ಡೇವಿಡ್ ಹರ್ಷನ ಮೇಲೆ ಅಧಿಕಾರಯುತ ಆದೇಶ ನೀಡಿದ್ದು, ಆದರೂ ಹರ್ಷ ಶಾಂತವಾಗಿ ಇದ್ದದ್ದು ಮಾನ್ವಿಗೆ ಗೋಜಲಾಗಿ ಕಂಡಿತು. ಅದ್ವೈತ ಹೇಗೆ ಇವರನ್ನು ಭೇಟಿಯಾದ? ರಾತ್ರಿ ಏನು ನಡೆದಿತ್ತು? ಅವನ ವಿಷಯ ಅಥ್ರೇಯನಿಗೆ ಗೊತ್ತಾಯ್ತಾ? ಅವಳ ಚಿಂತನೆಗಳ ಯಾನ ಸಾಗಿತ್ತು.
ಡೇವಿಡ್ ಆಚೆ ಹೋಗುತ್ತಲೇ ಹರ್ಷ ಪರಿಯನ್ನು ಮನೆಯಲ್ಲಿದ್ದ ತಾತ ಹಾಗೂ ಹರಿಣಿ ಬಗ್ಗೆ ವಿಚಾರಿಸತೊಡಗಿದ.
"ಹರಿಣಿ ತುಂಬಾ ಪ್ಯಾನಿಕ್ ಆಗಿದಾಳೆ. ನಿನ್ನೆಯಿಂದ ಅಪ್ಪ ಅಮ್ಮನ ಜೊತೆಗೆ ಮಾತಾಡಿಲ್ಲವಂತೆ! ಈಗ ಮಲ್ಗಿದ್ದಾರೆ ಎದ್ದ ತಕ್ಷಣ ಮಾತಾಡಿಸ್ತಿನಿ ಅಂತ ಸಮಾಧಾನ ಹೇಳಿದೆ. ಅವರ ಜೊತೆ ಒಂದುಸಲ ಮಾತಾಡ್ಸೋಕೆ...."
"ಆ ವಿಷಯ ನಾನು ನೋಡಿಕೊಳ್ತಿನಿ. ನೀನು ಮಾನ್ವಿ ಜೊತೆಗೆ ಇರು. ಎಲ್ಲೂ ಹೋಗಬೇಡ. ಯಾರ ಮುಂದೆಯೂ ಈ ವಿಷಯ ಪ್ರಸ್ತಾಪ ಮಾಡಬೇಡ ಒಕೆ" ಮೆಲ್ಕೆಳಗೆ ಗೋಣಾಡಿಸಿದಳು ಪರಿ. ಎದುರಿದ್ದು ಅಪರಿಚಿತಳಾದ ತನ್ನವಳ ಸಾಮೀಪ್ಯದ ಅನುಭೂತಿಗೆ ಒಂದೊಮ್ಮೆ ಕೆನ್ನೆ ಸವರಿ ಅವಳ ಹಣೆಗೆ ಮುತ್ತಿಟ್ಟ ಹರ್ಷ. ಸಾವಿರ ಕನಸುಗಳ ಭಗ್ನ ಸಾವಿನ ಮಧ್ಯೆ ಹೊಸತೊಂದು ಕನಸು ಚಿಗುರಿದ ಭರವಸೆಯ ಚುಂಬನವದು. ಪರಿಯ ತಪಸ್ಸಿಗೆ ಆರಾಧ್ಯನ ವರವದು. ಆಕೆ ಪ್ರಫುಲ್ಲಿತೆ.
ಅವರ ಮಾತಿನಿಂದ ಮಾನ್ವಿಗೆ ಅಥ್ರೇಯನ ಹುಚ್ಚಾಟ ಎಲ್ಲೋ ಮಿತಿಮೀರಿದೆ ಎಂಬುದು ಗ್ರಹಣವಾಗಿತ್ತು. ಆದರೆ ಬಲಿಪಶುವಾದವರೆಷ್ಟು? ಯಾರು? ಎಂಬುದರ ಅರಿವಿರಲಿಲ್ಲ.
ಹೀಗಿರುವಾಗ ಪ್ರಸನ್ನ ಮಾನ್ವಿಯ ಕುಶಲೋಪರಿ ಸಾಂಪ್ರತ ನಡೆಸಿದ್ದ. ಕೇಳಿದ್ದಕ್ಕೆಲ್ಲ ಮೂಗಿನ ತುದಿಯಲ್ಲೇ ಧಿಕ್ಕರಿಸಿದಳಾಕೆ.
ಇಂಥ ಸಂಧರ್ಭದಲ್ಲೂ ಎಷ್ಟು ಪೊಗರಿವಳಿಗೆ..! ಸ್ವಗತದಲ್ಲಿ ಏನೋ ಹೇಳಲು ಹಪಹಪಿಸಿ ಕೈಕೈ ಹಿಸುಕಿಕೊಂಡ. ಏನೆಂದು ತಿಳಿಯಲು ಒಂದೇ ಸಮನೆ ದೃಷ್ಟಿ ನೆಟ್ಟಿದ್ದಳಾಕೆ. ಅವಳ ಕೈಗೆ ಗುಂಡು ತಾಗಿದ ಗಾಯವನ್ನು ನೋಡುತ್ತ ತಾನು ಅವಳಿಗೆ ಕೊಟ್ಟ ಕಾಟಕ್ಕೆ ಪಶ್ಚಾತ್ತಾಪ ಪಡುತ್ತಲಿದ್ದ ಆತ. ತಪ್ಪು ತನ್ನದೆಂದು ಅರಿವಾಗುತ್ತಲೇ ಚಿಕ್ಕ ಮಕ್ಕಳಿಗೂ ಸಹ ಅಭಿಮಾನ ಪಡದೇ ಕ್ಷಮೆ ಕೇಳುವ ಪ್ರಸನ್ನನಿಗೆ ಅದೇಕೋ ಮಾನ್ವಿ ಎದುರಿಗೆ ತಲೆ ತಗ್ಗಿಸಲು ಸ್ವಾಭಿಮಾನ ಒಪ್ಪುತ್ತಿಲ್ಲ.
ಒಮ್ಮೆ ಕ್ಷಮೆ ಕೇಳಿದರೇ ಮುಗಿಯಿತು ಅವಳು ಅವನ ನೆತ್ತಿಯೇರಿ ಬೀಗಿ ಮೆರೆಯುವಳೆಂಬುದು ಅವನ ಬಲವಾದ ನಂಬಿಕೆ. ವಾಸ್ತವವೂ ಇರಬಹುದು, ಅದು ಬೇರೆ ವಿಷಯ. ಈಗ ಅವನಿಂದ ಕ್ಷಮೆ ಕೇಳದೆಯೂ ಇರಲಾಗಲಿಲ್ಲ.
" ಅದೂ.... ನಾನು... ನಿನಗೆ....." ಮಾತು ಹೊರಡಲಿಲ್ಲ. ಸಾರಿ ಕೇಳೋದು ಇಷ್ಟೊಂದು ಕಷ್ಟಾನಾ? ತುಂಬಾ ಹೊತ್ತು ಆಲೋಚಿಸಿದವ
"ಲೋ ಸೆಂತೊ ಮುಚೋ.. ಏಸ಼್ತ್‌ಬಾ ಇಕ್ವಿವೋಕಾದೊ.... ತೇ ಲಾಸ್ತಿಮೋ.." ಯಾವುದೋ ತಿಳಿಯದ ಭಾಷೆಯಲ್ಲಿ ಗಂಭೀರವಾಣಿಯಲ್ಲಿ ಒದರಿ ಆಚೆ ಹೋಗಿಬಿಟ್ಟ.
"ಹ್ಮೇsss' ಮುಖ ಸಿಂಡರಿಸಿದವಳಿಗೆ ತಲೆ ಬುಡ ಒಂದೂ ಅರ್ಥವಾಗಲಿಲ್ಲ.. ಹರ್ಷ ಪರಿ ಕಣ್ಣಲ್ಲೇ ಏನೆಂದು ಪ್ರಶ್ನಿಸಿಕೊಂಡು ಮುಗುಳ್ನಕ್ಕರು
ಆಸ್ಪತ್ರೆಯಿಂದ ಡಿಸ್ಚಾರ್ಜಾಗಿ ಹೊರಡುವ ಸಮಯ ಹಿಂದೆ ಮುಂದೆ ಬೇತಾಳನಿಗೂ ಒಂದು ಕೈ ಮೇಲಿದ್ದ ಸೆಕ್ಯೂರಿಟೀಸ಼್ ಕಂಡು ಪ್ರಸನ್ನನ ತಲೆ ಧಿಮ್ಮೆಂದಿತು
" ಇದೇನು ಆಸ್ಪತ್ರೆನಾ? ಜಿಮ್ ಆ?? ಎಲ್ಲಿ ನೋಡಿದ್ರೂ ಪೇಷಂಟ್ಸು ಡಾಕ್ಟರ್ಸ್ ಗಳಿಗಿಂತ ದಢೂತಿ ಸೆಕ್ಯೂರಿಟಿ ಗಾರ್ಡ್ಸ್ ಗಳೇ ಹೆಚ್ಚಾಗಿ ಕಾಣ್ತಿದ್ದಾರೆ!!?"
ಹರ್ಷನಿಗೂ ಸನ್ನಿವೇಶ ಅಯೋಮಯವಾಗಿತ್ತು. ಮೊಬೈಲ್ ನಲ್ಲಿ ರವಾನೆಯಾಗುತ್ತಿದ್ದ ಆ ದಿನದ ಮೀಟಿಂಗ್ ಅಪ್ಡೇಟ್‌ನ್ನು ನೋಡುತ್ತ ಮುಂದೆ ಮಾಡಬೇಕಾದ ಮುಖ್ಯ ಯೋಜನೆಯನ್ನು ಯೋಚಿಸುತ್ತಿದ್ದ ಹರ್ಷ. ತಂದೆ ತಾಯಿಯನ್ನು ಕಾಣುವ ತುಡಿತ ವಿಪರೀತವಾಗಿತ್ತು. ಜೊತೆಗೆ ಅವರ ರಕ್ಷಣೆಯ ಹೊಣೆಯು ಆತನ ಮೇಲಿತ್ತು.
ಮುಂದುವರೆಯುವುದು...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ