ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-6


ಚುರುಗುಟ್ಟುವ ಹೊಟ್ಟೆಯನ್ನು ಸವರಿಕೊಳ್ಳುತ್ತ ಕೈಯಲ್ಲಿದ್ದ ವಾಲ್ ಕ್ಲಾಕ್ ನ್ನು ಗೋಡೆಗೆ ನೇತು ಹಾಕುತ್ತ "ಈಗ ಹೊಟ್ಟೆಗೆ ಏನಾದರೂ ಬೀಳದೆ ಹೋದ್ರೆ ಒಳಗಿರೋ ಇಂಟಸ್ಟೈನ್ ಆಚೆ ಬಂದು ಕಪಾಳಮೋಕ್ಷ ಮಾಡಿದ್ರು ಮಾಡಬಹುದು.. ಆದರೆ ಏನು ತಿನ್ನೋದು.. ಕಿಚನ್ ಇನ್ನೂ ಸೆಟ್ ಮಾಡಿಲ್ಲ.. ಹೊರಗೆ ಹೋಗಿ ತಿಂದು ಬರಲಾ.. ಹೋಟೆಲ್ ತೆಗೆದಿರುತ್ತಾ.. ಓಹ್ ದೇವರೇ.. ನೀನೇ ಏನಾದರೂ ತಿನ್ನೋಕೆ ಕಳಿಸಿ ಬಿಡೋ ಪ್ಲೀಸ್.."

ಸಂಜೆ ಆಸ್ಪತ್ರೆಯಿಂದ ಬಂದ ತಕ್ಷಣ ಮುಖ ತೊಳೆದು ಒಂದು ಕಪ್ ಬಿಸಿ ಕಾಫಿ ಮಾಡಿಕೊಂಡು ಸಿಪ್ ಬೈ ಸಿಪ್ ಹೀರುತ್ತಾ, ಮ್ಯುಸಿಕ್ ಸಿಸ್ಟಮ್ ಆನ್ ಮಾಡಿ ಸುಶ್ರಾವ್ಯ ಸಂಗೀತ ಕೇಳುತ್ತಾ ರಟ್ಟಿನ ಬಾಕ್ಸ್ ಗಳಲ್ಲಿ ಹೊತ್ತು ತಂದಿದ್ದ ತನ್ನ ಮೂಟೆ ರಾಶಿ ಸಾಮಾನುಗಳನ್ನು ತೆಗೆದು ನೋಡಿ ಒಪ್ಪಾಗಿ ಹೊಂದಿಸಿ ಜೋಡಿಸಿ, ಬಟ್ಟೆ ಪುಸ್ತಕಗಳು, ಮನೆಯ ಸಾಮಾನುಗಳು ಎಲ್ಲವನ್ನೂ ಅದರದೇ ಆದ ಜಾಗದಲ್ಲಿ ಪ್ರತಿಷ್ಠಾಪನೆ ಮಾಡುವಷ್ಟರಲ್ಲಿ ಸಾಕು ಸಾಕಾಗಿ ಹೋಗಿತ್ತು ಪ್ರಸನ್ನನಿಗೆ. ಅಷ್ಟೊತ್ತು ಅದೇ ಕೆಲಸದಲ್ಲಿ ಮುಳುಗಿದ್ದವನಿಗೆ ಲಕ್ಷವಿರದ ಹೊಟ್ಟೆ ಹಸಿವು ಕೆಲಸ ಮುಗಿಯುತ್ತಿದ್ದ ಹಾಗೆ ತಾರಕಕ್ಕೇರಿತು. ಅದಕ್ಕೆ ದೇವರಿಗೆ ಒಂದು ಬಹುದೊಡ್ಡ ಮನವಿಯನ್ನು ಸಲ್ಲಿಸಿದ. ದೇವರೂ ಅವನ ಕೋರಿಕೆಯನ್ನು ಅಂಗೀಕರಿಸಿದಂತೆ ಬಾಗಿಲ ಗಂಟೆ ಟ್ರ್ ಟ್ರ್ ಎಂದು ಬಡಿದುಕೊಂಡಿತು. ಈಗ ಯಾರಪ್ಪ ಬಂದದ್ದು ಎಂದುಕೊಂಡೇ ಬಾಗಿಲು ತೆರೆದ ಪ್ರಸನ್ನ ಎದುರಿಗಿದ್ದ ಹುಡುಗಿಯನ್ನು ಒಮ್ಮೆ ನೋಡಿ ಅವಳ ಕೈಯಲ್ಲಿರುವ ಹಾಟ್ ಬಾಕ್ಸನ್ನು ಗಮನಿಸಿದ. ತುಂಟ ಕಣ್ಣಿನ ಕಾಲೇಜು ಚೆಲುವೆ ನಸುನಗುತ್ತ..

"ಹಾಯ್ ಮಿ.ಪ್ರಸನ್ನ.. ನಾನು ಶ್ವೇತ ಅಂತ. ನಿಮ್ಮ ಪಕ್ಕದ ಫ್ಲಾಟ್ ನಲ್ಲಿರ್ತಿನಿ. ನಿಮ್ಮನ್ನು ಮೀಟ್ ಮಾಡಿ ಮಾತಾಡೋಣಂತ ಬಂದೆ.." ಎಂದು ತನ್ನನ್ನು ಪರಿಚಯಿಸಿಕೊಂಡಳು.

ಅವಳ ಮಾತಿಗಿಂತ ಅವಳ ಕೈಯಲ್ಲಿದ್ದ ಹಾಟ್ ಬಾಕ್ಸ್ ನ ಮೇಲೆ ಅವನ ಗಮನ ಕೇಂದ್ರಿಕೃತವಾಗಿದ್ದನ್ನು ನೋಡಿ ಅವಳು "ಇದು ನಿಮಗೆ.. ಅಮ್ಮ ಕಳಿಸಿದ್ದು. ಆಲೂ ಪರೋಟ ವಿತ್ ಗ್ರೀನ್ ಚಟ್ನಿ.. ಫ್ಲಾಟ್ಗೆ ಹೊಸದಾಗಿ ಬಂದಿದ್ದಿರಾ ನಿಮ್ಮ ಯೋಗಕ್ಷೇಮ ವಿಚಾರಿಸೋದು ಅಕ್ಕಪಕ್ಕದವರಾಗಿ ನಮ್ಮ ಕರ್ತವ್ಯ ಅದಕ್ಕೆ.." ಎಂದು ಬಾಕ್ಸ್ ಅವನ ಕೈಗಿಟ್ಟಳು.

"ಓಹ್ ಥ್ಯಾಂಕ್ಸ್, ನಿಮ್ಮ ಕಾಳಜಿಗೆ.. ಬನ್ನಿ ಒಳಗೆ" ಹಸಿವಿನ ನಿಲ್ದಾಣ ನೋಡಿ ಖುಷಿಯಿಂದ ಆಮಂತ್ರಿಸಿದ.

ಒಳಗೆ ಬಂದು ಕುಳಿತುಕೊಳ್ಳುತ್ತಾ " ವ್ಹಾವ್ ಒಂದೇ ದಿನದಲ್ಲಿ ಮನೆ ಎಷ್ಟು ನೀಟಾಗಿ ಜೋಡಿಸಿದ್ದಿರಾ! ರಿಯಲಿ ಗ್ರೇಟ್ ನೀವು.. ವರ್ಲ್ಡ್ ಟಾಪ್ ಡಾಕ್ಟರ್ಸ್ ಗಳಲ್ಲಿ ಒಬ್ಬರಾಗಿ ಇಷ್ಟು ಸಾಮಾನ್ಯರಂತೆ ಬದುಕೋದು ನೋಡಿ ತುಂಬಾ ಸಂತೋಷವಾಯ್ತು.. ಐ ರಿಯಲಿ ಲೈಕ್ ಯು ಪ್ರಸನ್ನ..... "

ಅವಳು ಮಾತಾಡುತ್ತಲೇ ಇದ್ದಳು. ಅವನ ವೃತ್ತಿ ಅವನ ವ್ಯಕ್ತಿತ್ವ ಅವನು ಬಂದಿದ್ದಕ್ಕೆ ತನಗಾದ ಸಂತೋಷ ಎಲ್ಲವನ್ನೂ ವಿವರಿಸಿ ಹೇಳುತ್ತಲೇ ಇದ್ದಳು. ಆದರೆ ಅವನ ಗಮನ ಬೇರೆಲ್ಲೋ ಇತ್ತು. ಕೈಯಲ್ಲಿದ್ದ ತುತ್ತು ಬಾಯಿಗೆ ಬರದಂತಾಗಿತ್ತು ಪ್ರಸನ್ನನ ಸ್ಥಿತಿ ನಗುತ್ತಲೇ ಥ್ಯಾಂಕ್ಸ್ ಹೇಳಿ ಮಾತು ಮುಗಿಸಿದ. ಆ ಹುಡುಗಿ ತಾನೇ ಮುಂದುವರಿದು..

"ನಿಮ್ಮ ಮದುವೆ ಯಾಕಾಗಿಲ್ಲ ಇನ್ನೂ? ಯಾರೂ ಇಷ್ಟ ಆಗಿಲ್ವೋ ಅಥವಾ ಯಾರನ್ನಾದರೂ ಹುಡುಕ್ತಿದಿರೋ.."

ಅವಳ ಉದ್ದೇಶವನ್ನು ಮೊದಲ ನೋಟದಲ್ಲಿ ಅರಿತಿದ್ದ ಪ್ರಸನ್ನ ಇನ್ನೂ ಆಗದೆಂಬಂತೆ  "ನನಗೆ ತುಂಬಾ ಜನ ಹುಡುಗಿಯರು ಇಷ್ಟವಾದ್ರೂ ಕಣ್ರೀ ಆದರೆ ನನ್ನ ಪ್ರಾಬ್ಲಮ್ ಕೇಳಿದ ಕೂಡಲೇ ಎಲ್ಲರೂ ರಿಜೆಕ್ಟ್ ಮಾಡಿಬಿಡ್ತಾರೆ" ಮುಖ ಸಪ್ಪೆ ಮಾಡಿ ಹೇಳಿದ

"ಪ್ರಾಬ್ಲಮ್ಮಾ.. ಏನದು" ಕುತೂಹಲ ತಡೆಯಲಾರದೆ ಕೇಳಿದಳು

"ಅಂತ ಮಹಾ ಪ್ರಾಬ್ಲಮ್ ಏನಿಲ್ಲ, ಕೆಲವರಿಗೆ ಚಹಾ ಕಾಫಿ ಸಿಗರೆಟ್ ಎಡಿಕ್ಷನ್ ಇರುತ್ತಲ್ವ ಹಾಗೆ ನನಗೆ ಆಪರೇಷನ್ ಎಡಿಕ್ಷನ್. ದಿವಸಕ್ಕೆ ಒಂದಾದರೂ ಆಪರೇಷನ್ ಮಾಡದೆ ಹೋದ್ರೆ ನನಗೆ ಕೈ ನಡುಗೋಕೆ ಶುರು ಮಾಡುತ್ತೆ.. ಆಗ ನಾನು ನನಗೆ ಅರಿವಿಲ್ಲದೆ ಎದುರಿಗೆ ಸಿಕ್ಕವರ ಹೊಟ್ಟೆನೋ ತಲೆನೋ ಕುಯ್ದು ಮತ್ತೆ ಸ್ಟಿಚ್ ಮಾಡಿ ಬಿಡ್ತಿನಿ ಅಷ್ಟೇ.. ಇದರಿಂದ ಯಾರಿಗೂ ಏನು ತೊಂದರೆ ಏನಾಗಿಲ್ಲ...." ತುಂಬಾ ಸಲೀಸಾಗಿ  ಕೈ ನಡುಗಿಸುತ್ತಲೇ ಹೇಳಿದ..

ಅವನ ನಡುಗುತ್ತಿದ್ದ ಕೈಯನ್ನೇ ದಿಟ್ಟಿಸುತ್ತ "ಓಹ್ ಅಷ್ಟೇನಾ...ಹಿಹಿಹಿ ಒಕೆ.. ಇವತ್ತು ಯಾವ ಆಪರೇಷನ್ ಮಾಡಿಲ್ವ..ಡಾ..ಕ್ಟರ್" ಕೇಳುತ್ತ ಎದ್ದು ನಿಂತಿದ್ದಳು ಹುಡುಗಿ..

ಅವನು ಯೋಚಿಸುತ್ತ "ಏನೋ ನೆನಪಿಲ್ಲ.‌.. ನೀವು ಕೂತ್ಕೋಳ್ರೀ..ಯಾಕೆ ಏಳ್ತಿದ್ದಿರಾ..." ಎಂದು ನಡುಗುತ್ತಿದ್ದ ಕೈಯಿಂದ ಅವಳನ್ನು ಹಿಡಿದು ನಿಲ್ಲಿಸಲು ಹೋದ..
ಅಷ್ಟೇ ಆ ಹುಡುಗಿ ಅಮ್ಮಾ... ಎಂದು ಕಿಟಾರನೆ ಕಿರುಚಿ ಅಲ್ಲಿಂದ ಓಡಿ ಹೋದಳು.

"ಹ್ಮ್ಮ.. ಥ್ಯಾಂಕ್ಸ್ ಫೊರ್ ಪರೋಟ ಗಾಡ್.. ಥ್ಯಾಂಕ್ಯು ಮಾತೃಶ್ರೀ ಪಿತಾಶ್ರೀ.. ಇಷ್ಟೊಂದು ಚಾರ್ಮಿಂಗ್ ಎಂಡ್ ಸ್ಮಾರ್ಟ್ ಆಗಿ ಹುಟ್ಟಿಸಿದ್ದಕ್ಕೆ ಎನ್ನುತ್ತ ಪರೋಟ ಬಾಯಿಗಿಟ್ಟ. "ವ್ಹಾವ್ ಎಷ್ಟು ರುಚಿಯಾಗಿ ಮಾಡಿದ್ದಾರೆ.. ಛೇ, ಆದರೆ ನಾಳೆಯಿಂದ ಏನೂ ಗಿಟ್ಟಲ್ಲವೇನೋ.. ನಾಳೆನೇ ಆ ಹುಡುಗಿ ಅಮ್ಮನ ಜೊತೆ ಫ್ರೆಂಡ್ ಶಿಪ್ ಮಾಡಬೇಕು! ನನ್ನ ಚಾರ್ಮಿಗೆ ಮಾತಿಗೆ ಬೀಳದೆ ಇರೋರು ಯಾರಿದ್ದಾರೆ ಎನ್ನುತ್ತಲೇ ಆ ಕೊಲೆಸ್ಟ್ರಾಲ್.. ಇದ್ದಾಳಲ್ಲ ಎಂದಿತ್ತು ಅವನ ಮನಸ್ಸು

ಮಧ್ಯಾಹ್ನ ಮಾನ್ವಿ ಹೆಸರು ಕೇಳಿದ ಕೂಡಲೇ ಪರಿಧಿ ಮುಖ ಯಾಕೆ ಬಾಡಿತು. ಏನಾಗಿರಬಹುದು ಮಾನ್ವಿಗೆ?  ಯಾವಾಗಲೂ ಮೂಗಿನ ತುದಿಯಲ್ಲೇ ಕೋಪ, ಹಠ ಜಾಸ್ತಿ, ಆದರೂ ಕೆಟ್ಟವಳೇನಲ್ಲ‌.. ಎಷ್ಟೇ ಕೋಪವಿದ್ದರೂ ಅದು ನನ್ನ ಮೇಲೆ ಮಾತ್ರ, ಉಳಿದ ಎಲ್ಲರ ಜೊತೆಗೂ ಚೆನ್ನಾಗಿಯೇ ಇದ್ದಳು. ಆಸ್ಪತ್ರೆಯ ಚಿಕ್ಕ ಜವಾನನಿಂದ ಹಿಡಿದು ಪೇಷಂಟ್ ಸಂಬಂಧಿಗಳವರೆಗೂ ಎಲ್ಲರಿಗೂ ಮರ್ಯಾದೆ ಕೊಟ್ಟು ಮಾತಾಡುತ್ತಿದ್ದಳು. ಹೇಳಿದ ಕೆಲಸ ಎಷ್ಟೇ ಕಷ್ಟ ಅನ್ನಿಸಿದ್ದರೂ ಪೂರ್ಣ ಮಾಡದೇ ಇರುತ್ತಿರಲಿಲ್ಲ. ಎಲ್ಲರೊಂದಿಗೆ ನಗುನಗುತ್ತಲೇ ಇದ್ದಳು ತನ್ನ ಹೊರತು. ಆದರೆ ಆದದ್ದಾದರೂ ಏನು? ಆ ದಿನದ ಘಟನೆಯಿಂದ ಏನಾದರೂ ಅಪಾಯ ಮಾಡಿಕೊಂಡಿರಬಹುದಾ!! ಎಂದು ಯೋಚನೆಯಲ್ಲಿ ಮುಳುಗಿದ.

ಯಾವಾಗಲೂ ಏನಾದರೂ ತಂಟೆ ತಕರಾರು ಮಾಡಿ ಪ್ರಸನ್ನನಿಂದ ಶಿಕ್ಷೆಗೆ ಗುರಿಯಾಗುತ್ತಿದ್ದ ಮಾನ್ವಿ ಅತ್ಯಂತ ತುರ್ತು ಸಂಧರ್ಭದಲ್ಲಿ ವ್ಯಕ್ತಿಯೋರ್ವರಿಗೆ ರಕ್ತದಾನ ಮಾಡಿದ್ದಲ್ಲದೆ ಅವರಿಗೆ ಹಣಕಾಸಿನ ನೆರವು ನೀಡಿ ಪ್ರಸನ್ನನಿಂದ ಮೊದಲ ಬಾರಿಗೆ ಮೆಚ್ಚುಗೆ ಗಳಿಸಿದ್ದಳು. ಪ್ರಪ್ರಥಮ ಬಾರಿಗೆ ಪ್ರಸನ್ನನಿಗೆ ಮಾನ್ವಿಯ ಒಳ್ಳೆಯ ಗುಣಗಳ ಮುಖಾಮುಖಿ ಪರಿಚಯವಾಗಿತ್ತು. ಅವನು ಅವಳನ್ನು ಮೊದಲ ಬಾರಿಗೆ ಮೆಚ್ಚಿ ಹೊಗಳಿದ್ದ. ಅದಾಗಲೇ ಅವಳು ಅವನೊಂದಿಗಿನ ವಿರಸವನ್ನು ನಿರ್ಲಕ್ಷ್ಯಿಸಿ ಆಸಕ್ತಿಯಿಂದ ಕೆಲಸ ಮಾಡಲು ಆರಂಭಿಸಿದ್ದರಿಂದ ಪ್ರಸನ್ನನಿಗೆ ಶಿಕ್ಷೆ ನೀಡುವ ಅನಿವಾರ್ಯತೆ ಕೂಡ ಕಡಿಮೆಯಾಗಿತ್ತು. ಒಂದು ವಾರದ ಮಟ್ಟಿಗೆ ಪ್ರಸನ್ನ ಆರ್ಗನ್ ಡೋನೆಷನ್ ಕ್ಯಾಂಪ್ ನ ಮೇಲ್ವಿಚಾರಕನಾಗಿ ಸುತ್ತಮುತ್ತಲಿನ ಹಳ್ಳಿ ಗುಡ್ಡಗಾಡು ಪ್ರದೇಶಗಳಿಗೆ ಹೋಗಬೇಕಾಗಿ ಬಂದಿತ್ತು. ಆತ ಹೋಗುವ ಮೊದಲು ತನ್ನ ಟೀಮಿನವರನ್ನು ಒಂದೆಡೆ ಮೀಟಿಂಗ್ ಸೇರಿಸಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಪೇಷಂಟ್ ಗಳ ಬಗ್ಗೆ ಪರಿಪೂರ್ಣ ಮಾಹಿತಿ ತಿಳಿಸಿ ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ, ಏನಾದರೂ ತುರ್ತು ಪರಿಸ್ಥಿತಿ ಇದ್ದಲ್ಲಿ ತಕ್ಷಣ ತನಗೆ ಫೋನ್ ಮಾಡಿ ತನ್ನ ಸಲಹೆ ಪಡೆಯಲು ಹೇಳಿದ್ದ. ಹೋಗುವಾಗ ಪ್ರಸನ್ನ ಎಲ್ಲರಿಗಿಂತ ಹೆಚ್ಚಾಗಿ ಮಾನ್ವಿಗೆ 'ಹುಷಾರು.. ನಿನ್ನ ಆತುರ ನಿರ್ಧಾರದಿಂದ ಯಾರಿಗೂ ತೊಂದರೆಯಾಗದ ಹಾಗೆ, ತಾಳ್ಮೆಯಿಂದ ಕೆಲಸ ಮಾಡು, ಏನೇ ಎಮರ್ಜೆನ್ಸಿ ಇದ್ದರೂ ತಕ್ಷಣ ನನಗೆ ಕಾಲ್ ಮಾಡು..' ಎಂದು ಪದೇಪದೇ ಎಚ್ಚರಿಕೆ ನೀಡಿದ್ದ. ಅವನು ಕೊಟ್ಟ ಅಗತ್ಯಕ್ಕಿಂತ ಅತೀಯಾದ ಮುನ್ನೆಚ್ಚರಿಕೆಯೇ ಅವಳಿಗೆ ಕಿರಿಕಿರಿ ಎನಿಸಿತ್ತು. ಇದೇ ಅವಕಾಶ ಉಪಯೋಗಿಸಿ ಅವನನ್ನು ಚಿಕ್ಕ ಪುಟ್ಟ ನೆಪ ಮಾಡಿ ಹಲವಾರು ಬಾರಿ ಫೋನ್ ಮಾಡಿ ಹಳ್ಳಿಯಿಂದ ಆಸ್ಪತ್ರೆಗೆ ಆಸ್ಪತ್ರೆಯಿಂದ ಹಳ್ಳಿಗೆ ಅಲೆದಾಡಿಸಿದ್ದಳು. ಅವಳ ಮಕ್ಕಳಾಟಕ್ಕೆ ಅಲೆದಲೆದು ಸುಸ್ತಾಗಿ ಸಾಕಾಗಿ ಬೇಸತ್ತು ಬಿಟ್ಟಿದ್ದ ಪ್ರಸನ್ನ. ಅವಳದು ದಡ್ಡತನವೋ ಮುಗ್ದತೆಯೋ ಅರ್ಥವಾಗದೆ ಸುಮ್ಮನೆ  ಬಂದು ಹೋಗಿ ಮಾಡಿದ. ಅವನ ಪರಿಪಾಟಲು ನೋಡಿ ಮಾನ್ವಿ ಇಷ್ಟು ಕಾಡಿಸಿದ್ದು ಸಾಕೆಂದು ತೃಪ್ತಳಾಗಿ ನಕ್ಕು, ಹುಡುಗಾಟವನ್ನು ಅಲ್ಲಿಗೆ ನಿಲ್ಲಿಸಿ ಎಲ್ಲರಂತೆ ಜವಾಬ್ದಾರಿಯಿಂದ ಕೆಲಸ  ನಿಭಾಯಿಸಿದ್ದಳು. ಆದರೆ ಒಂದು ಸಾಯಂಕಾಲ ಮಗುವೊಂದು ಅತೀವ ತಲೆನೋವಿನಿಂದ ಹೊರಳಾಡಿ ಗಂಭೀರ ಪರಿಸ್ಥಿತಿಯಲ್ಲಿ ಬಳಲುತ್ತ ಒದ್ದಾಡಿತು. ಸ್ಕ್ಯಾನ್ ರಿಪೋರ್ಟ್ ತರಿಸಿ ನೋಡಿದ ಮಾನ್ವಿಗೆ ಅದು ಬ್ರೈನ್ ಟ್ಯೂಮರಿನ ಕೊನೆಯ ಹಂತ ತಲುಪಿದೆಯೆಂದು ಆಪರೇಷನ್ ಗೆ ಇನ್ನೂ ತಡ ಮಾಡಿದರೆ ಟ್ಯೂಮರ್ ಒಡೆದು ಮಗುವಿನ ಜೀವಕ್ಕೆ ಅಪಾಯವೆಂದು ಈ ವಿಷಯವನ್ನು ಪ್ರಸನ್ನನಿಗೆ ಫೋನ್ ಮಾಡಿ ತಿಳಿಸಲು ಪ್ರಯತ್ನಿಸಿದಳು. ಎಷ್ಟೇ ಬಾರಿ ಕಾಲ್ ಮಾಡಿದರೂ ಅವನ ಫೋನ್ ಬಿಜಿ ಎಂದು ಸೂಚಿಸಿತ್ತು. ಇನ್ನೂ ಕಾಯುವಷ್ಟು ಹೆಚ್ಚು ಸಮಯವಿರಲಿಲ್ಲ. ಮಗುವಿನ ಜೀವಕ್ಕಿಂತ ಯಾವುದು ಮುಖ್ಯವಲ್ಲ ಎಂದು ತಿಳಿದು ಮಾನ್ವಿ ಆ ಆಪರೇಷನನ್ನು ತಾನೇ ಮಾಡಲು ಮುಂದಾಗಿದ್ದಳು. ಏನಾದರೂ ಆಗಲಿ ಈ ಮಗುವಿನ ಪ್ರಾಣ ಉಳಿಸಬೇಕು ಎಂಬುದೆ ಅವಳ ಮೂಲ ಉದ್ದೇಶವಾಗಿತ್ತು. ಅದರಂತೆ ಸಿಸ್ಟರ್ಸ್ ಗೆ ಹೇಳಿ ಒಟಿ ರೆಡಿ ಮಾಡಿಸಿದಳು. ಮಗುವನ್ನು ಒಟಿಗೆ ಶಿಫ್ಟ್ ಮಾಡುವಾಗ ಅವಳ ಎದೆ ಢವಢವ ಹೊಡೆದುಕೊಳ್ಳುತ್ತಿತ್ತು. ಐ ಕ್ಯಾನ್ ಡು ಇಟ್ ಎಂದು ತನಗೆ ತಾನೇ ಧೈರ್ಯ ತಂದುಕೊಂಡು ಆಪರೇಷನ್ ಗೆ ಅಣಿಯಾದಳು. ಈ ವಿಷಯವನ್ನು ಬೇರೆಯವರಿಂದ ತಿಳಿದ ಡಾ.ಪ್ರಸನ್ನ ಮಾನ್ವಿಯ ಅಜಾಗರೂಕತೆಗೆ ಹೆದರಿ ಗಾಬರಿಯಿಂದ ಇದ್ದ ಜಾಗದಿಂದ ಎದ್ದು ಬಿದ್ದು ಓಡಿ ಬಂದಿದ್ದ. ಆದರೆ ಆತ ಬರುವಷ್ಟರಲ್ಲಿ ಶಸ್ತ್ರಚಿಕಿತ್ಸೆ ನಡೆದು ಮುಗಿದು ಹೋಗಿತ್ತು. ಮಾನ್ವಿಯ ತ್ವರಿತ ನಿರ್ಧಾರದಿಂದ ಆ ಮಗುವಿನ ಪ್ರಾಣ ಜಗತ್ತಿನಲ್ಲಿ ಜೀವಂತವಾಗೇನೋ ಉಳಿದಿತ್ತು ಆದರೆ ಆ ಮಗು ಜಗತ್ತನ್ನು ನೋಡಬೇಕಾದ ತನ್ನ ಅಮೂಲ್ಯವಾದ ದೃಷ್ಟಿಯನ್ನೇ ಕಳೆದುಕೊಂಡಿತ್ತು..

ಆಪರೇಷನ್ ಥಿಯೇಟರ್ ನಿಂದ ಹೊರಬಂದ ಮಾನ್ವಿ ಮೇಲೆ ಕೆಂಡಾಮಂಡಲ ನೋಟ ಬೀರಿದ್ದ ಪ್ರಸನ್ನ "ಸೀನಿಯರ್ ಸಲಹೆಯಿಲ್ಲದೆ ಹೇಗೆ ನಿರ್ಧಾರ ತಗೊಂಡೆ" ಎಂದು ಕಿರುಚಾಡಿದ್ದ. ಪ್ರಸನ್ನಗೆ ಕೋಪ ಬರುವುದು ಅಪರೂಪ ಅದು ಬಂದಾಗ ಅದರ ಪರಿಣಾಮ ರಣಭೀಕರವಾಗಿರುತ್ತೆ ಎಂಬುದನ್ನು ಆಸ್ಪತ್ರೆಯ ಸ್ಟಾಫ್ ನಿಂದ ಕೇಳಿದ್ದ ಮಾನ್ವಿ ಆ ಕ್ಷಣ ಅವನ ಉಗ್ರರೂಪವನ್ನು ಕಣ್ಣಾರೆ ನೋಡಿ ಸಣ್ಣಗೆ ನಡುಗಿದ್ದಳು. ಆದರೂ ಧೈರ್ಯಮಾಡಿ

"ಟ್ಯೂಮರ್ ಲಾಸ್ಟ್ ಸ್ಟೇಜಲ್ಲಿತ್ತು.. ಸೋ ನಾನು ಈ ಡಿಸಿಜನ್ ತೆಗೆದುಕೊಳ್ಳದೆ ಬೇರೆ ದಾರಿ ಇರಲಿಲ್ಲ. ಅಷ್ಟಕ್ಕೂ ನಾನು ಆ ಮಗು ಪ್ರಾಣ ಉಳಿಸಿದ್ದೀನಿ, ಅದಕ್ಕೆ ಖುಷಿ ಪಡಿ" ಎಂದಿದ್ದಳು.

"ಎಕ್ಸ್ಪರ್ಟ್ಸ್ ಅಡ್ವೈಜ್ ತಗೊಂಡು 'ನೋಜ್ ಎಂಡ್ರೊಸ್ಕೋಪಿ' ಮಾಡಿದಿದ್ರೆ ಮಗುವಿನ ದೃಷ್ಟಿ ಕೂಡ ಹೋಗ್ತಿರ್ಲಿಲ್ಲ, ಜೀವಕ್ಕೂ ಅಪಾಯ ಇರ್ತಿರ್ಲಿಲ್ಲ.. ನಿನ್ನ ಬೇಜವಾಬ್ದಾರಿತನದಿಂದ ಆ ಮಗು ಜಗತ್ತೇ ನೋಡದ ಹಾಗೆ ಮಾಡಿದೆಲ್ಲೆ" ಎಂದು ಅವಳನ್ನು ಹೊಡೆಯಲು ಕೈ ಮೇಲೆತ್ತಿದವನು ಹೊಡೆಯಲಾರದೆ ಮುಷ್ಟಿ ಮಾಡಿ ಕೈ ಗೋಡೆಗೆ ಗುದ್ದಿದ್ದ.

"ಕೂಲ್..ಡಾ.ಪ್ರಸನ್ನ.. ನಾನು ಮಾಡಿದ ತಪ್ಪನ್ನು ನಾನೇ ಸರಿಪಡಿಸ್ತಿನಿ, ಯು ಡೋಂಟ್ ವರಿ ಒಕೆ" ಸ್ವಲ್ಪ ಕೂಡ ಪಶ್ಚಾತ್ತಾಪ ಇಲ್ಲದೆ ಹೇಳಿದ್ದಳು.

"ಅಕಸ್ಮಾತ್ ಆ ಮಗುವಿನ ಜೀವ ಹೋಗಿದ್ರೆ ಆಗಲೂ ಇದೇ ಮಾತು ಹೇಳ್ತಿದ್ದೆಯಾ..!! ಆಗಿರೋ ಅಚಾತುರ್ಯ ಸರಿ ಮಾಡೋದಕ್ಕಿಂತ ಯಾವ ಹಾನಿಯೂ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.. ಜನ ಸುಖಾಸುಮ್ಮನೆ ವೈದ್ಯರಿಗೆ ದೇವರ ಸ್ಥಾನ ಕೊಟ್ಟಿಲ್ಲ. ನೀನು ಆ ಸ್ಥಾನಕ್ಕೆ ಏರುವ ಮೊದಲು ಕನಿಷ್ಠ ಮನುಷ್ಯತ್ವನಾದರೂ ಬೆಳೆಸಿಕೊ.. ಯು ಆರ್ ಸೋ ಇರ್ರೆಸ್ಪಾನ್ಸಿಬಲ್.. ನನ್ನ ಕಣ್ಮುಂದೆ ನಿಲ್ಲಬೇಡ.. ಯು ಆರ್ ರೆಸ್ಟಿಗೇಟೆಡ್... ಗೆಟ್ ಲಾಸ್ಟ್.." ಕಿರುಚಿ ಕೈಯಲ್ಲಿದ್ದ ರಿಪೋರ್ಟ್ ಫೈಲ್ ಅವಳ ಮುಖಕ್ಕೆ ಎಸೆದಿದ್ದ.

ಇಡೀ ಆಸ್ಪತ್ರೆಯ ಸ್ಟಾಫ್,  ಪೇಷಂಟ್ಸ್  ಮುಂದೆ ಮಾನ್ವಿ ಅವಮಾನದಿಂದ ತಲೆ ತಗ್ಗಿಸಿ ಅಳುತ್ತ ನಡೆದು ಹೋಗಿದ್ದಳು. ಅದೇ ಸಂಜೆ ಮಾನ್ವಿಯ ತಂದೆ ಪ್ರಸನ್ನನಿಗೆ ಫೋನ್ ಮಾಡಿ ತಮ್ಮ ಮಗಳನ್ನು ರೆಸ್ಟೆಗೇಶನ್ ಮಾಡಿದ್ದಕ್ಕೆ ಅವನನ್ನು ತರಾಟೆಗೆ ತೆಗೆದುಕೊಂಡು ತಮ್ಮ ಶ್ರೀಮಂತಿಕೆಯ ಪ್ರಭಾವದ ಮಿತಿಯನ್ನು ತಿಳಿಸಿ ರೆಸ್ಟೆಗೇಶನ್ ನನ್ನು ಕ್ಯಾನ್ಸಲ್ ಮಾಡುವಂತೆ ದರ್ಪದಿಂದ ಹೇಳಿ ಹೆದರಿಸಿದ್ದರು. ಯಾರಿಗೂ ಕೇರ್ ಮಾಡದ ಪ್ರಸನ್ನ ಅವರ ಮಾತನ್ನು ತಳ್ಳಿಹಾಕಿ ಐ ಡೊಂಟ್ ಕೇರ್..ಗೋ ಅಹೆಡ್ ಎಂದಿದ್ದ. ಅದಾದನಂತರ ಮಾನ್ವಿ ಎಲ್ಲಿದ್ದಾಳೋ ಹೇಗಿದ್ದಾಳೋ ಯಾವ ವಿಚಾರವು ಪ್ರಸನ್ನಗೆ ತಿಳಿದಿರಲಿಲ್ಲ. ತಿಳಿದುಕೊಳ್ಳುವ ಪ್ರಯತ್ನವನ್ನು ಅವನು ಮಾಡಿರಲಿಲ್ಲ. ಕಣ್ಣು ಕಳೆದುಕೊಂಡ ಮಗುವಿನ ಆಕ್ರಂದನ ಮಾತ್ರ ತನ್ನಿಂದ ಸಹಿಸಲಾಗಿರಲಿಲ್ಲ. ಅವಳನ್ನು ತಾನೇ ಖುದ್ದಾಗಿ ನೋಡಿಕೊಂಡು ತನ್ನ ಸ್ವಂತ ಖರ್ಚಿನಲ್ಲಿ ಅವಳ ಮರುಚಿಕಿತ್ಸೆಗೆ ಮುಂದಾಗಿದ್ದ. ಆದರೆ ಈ ದಿನ ಮಧ್ಯಾಹ್ನ ಪರಿಧಿಯ ಮುಖಭಾವ ನೋಡಿ ಅವಳಿಗೆನೋ ತೊಂದರೆಯಾಗಿರಬಹುದು ಎಂದು ಗ್ರಹಿಸಿದ್ದ. ಕೋಪದಲ್ಲಿ ಆ ದಿನ ತಾನು ತೆಗೆದುಕೊಂಡ ನಿರ್ಧಾರದಿಂದ ಮಾನ್ವಿ ಏನಾದರೂ ಜೀವಾಪಾಯ ಮಾಡಿಕೊಂಡಿರಬಹುದಾ ಎಂದು ಅವನಿಗೆ ಪಾಪ ಪ್ರಜ್ಞೆ ಕಾಡಲು ಶುರುವಾಗಿತ್ತು. ಒಂದು ವೇಳೆ ಹಾಗಾಗಿದ್ದರೆ ತನ್ನನ್ನು ತಾನು ಆತ ಎಂದೂ ಕ್ಷಮಿಸಲಾರ. ತನ್ನಿಂದ ಯಾರಿಗೂ ತೊಂದರೆ ಆದರೂ ಅದು ಅವನ ವೈದ್ಯ ವೃತ್ತಿಗೆ ಮಾಡುವ ದೊಡ್ಡ ದ್ರೋಹ ಎಂದೇ ಅವನ ಭಾವನೆ! ಈ ಯೋಚನೆ ಬಂದಿದ್ದೆ ಪರಿಧಿ ನಂಬರನ್ನು ಹುಡುಕಿ ಡೈಲ್ ಮಾಡಿದ. ಛೇ..ಇಷ್ಟು ಸರಿ ರಾತ್ರಿ ಫೋನ್ ಮಾಡಿ ಕೇಳಿದರೆ ಏನಂದುಕೊಂಡಾರು ಅಂತನ್ನಿಸಿ ಮೊಬೈಲ್ ಆಫ್‌ ಮಾಡಿ ನಾಳೆ ಬೆಳಿಗ್ಗೆನೇ ಪರಿಧಿ ಬಳಿ ಈ ವಿಷಯ ಇತ್ಯರ್ಥ ಮಾಡಿಕೊಂಡು ಹಗುರಾಗಬೇಕು ಎಂದುಕೊಂಡ. 'ಒಂದು ವೇಳೆ ಮಾನ್ವಿಗೆ ಏನಾದರೂ ಆಗಿದ್ರೆ ಅವರಪ್ಪ ನನ್ನ ಸುಮ್ಮನೆ ಬಿಡ್ತಿದ್ರಾ.. ಅವಳು ಸಾಯೋ ಕ್ಯಾಟಗರಿ ಏನಲ್ಲ.. ಯಾರನ್ನಾದರೂ ಸಾಯಿಸೋ ಕ್ಯಾಟಗರಿ..ಕೊಲೆಸ್ಟ್ರಾಲ್!!' ಎಂದು ಸಮಾಧಾನ ಮಾಡಿಕೊಂಡ. ಆದರೂ ಆ ರಾತ್ರಿ ಪೂರ್ತಿ ಅದೇ ಯೋಚನೆಯಲ್ಲಿ ಅವನು ನಿದ್ರೆ ಮಾಡದೆ ಬೆಳಗಾಗುವದನ್ನೇ ಕಾಯುತ್ತಿದ್ದ.
        
                          ***

ಬೆಸ್ಟ್ ಫ್ರೆಂಡ್ ಅಂತ ಎಷ್ಟು ನಂಬಿದ್ನಲ್ಲೇ ನಿನ್ನ.. ನನ್ನ ಪ್ರೀತಿನೇ ನನ್ನಿಂದ ದೂರ ಮಾಡಿಬಿಟ್ಟೆ.. ದ್ರೋಹಿ ನೀನು..  ನೋಡ್ತಿರು ಮುಂದೊಮ್ಮೆ ನಿನ್ನ ಹರ್ಷನ ಪ್ರೀತೀನೂ ನಿನಗೆ ಸಿಗದೆ ಒದ್ದಾಡ್ತಿಯಲ್ಲ.. ಆಗ ಗೊತ್ತಾಗುತ್ತೆ ನಿನಗೆ ನನ್ನ ನೋವು ಏನಂತ... ಐ ಹೇಟ್ ಯು ಪರಿ... ಐ ಹೇಟ್ ಯು.." ಕಿರುಚಿದ್ದಳು ಮಾನ್ವಿ

ಕನಸಿನಿಂದ ಬೆಚ್ಚಿ ಎಚ್ಚರಗೊಂಡು ಧಕ್ಕನೆ ಎದ್ದು ಕುಳಿತಳು ಪರಿಧಿ. ಸಮಯ ನೋಡಿದಳು ಬೆಳಗಿನ ಜಾವ ನಾಲ್ಕು ಗಂಟೆ ಹದಿನೈದು ನಿಮಿಷ. ತನ್ನನ್ನು ತಾನೇ ಸಾವರಿಸಿಕೊಂಡು ಬೆವೆತ ಮುಖ ಒರೆಸಿಕೊಂಡು ನೀರು ಕುಡಿದಳು. ಹಿಂದೊಮ್ಮೆ ಮಾನ್ವಿ ಆಡಿದ ಮಾತುಗಳು ಈಗಲೂ ಆಗಾಗ್ಗೆ ನೆನಪಾಗಿ ಕನಸಾಗಿ ಕಾಡುತ್ತವೆ ಅವಳಿಗೆ. ಒಮ್ಮೆ ಹರ್ಷನ ಮುಂದೆ ಮಾನ್ವಿಯಾಡಿದ ಮಾತುಗಳನ್ನು ಹೇಳಿದಾಗ 'ಅವಳು ಹೇಳಿದ ತಕ್ಷಣ ನಾವಿಬ್ರೂ ದೂರಾಗಿಬಿಡ್ತಿವಾ..ಅವಳೇನೂ ದೇವರಾ.. ತಪಸ್ವಿಯಾ?? ಅವಳೇನೋ ಗೊತ್ತಿಲ್ಲ , ನೀನಂತೂ ಹುಚ್ಚಿ ಕಣೇ' ಎಂದು ನಕ್ಕಿದ್ದ.

"ಒಬ್ಬರ ಆಶಿರ್ವಾದಕ್ಕೆ ಎಷ್ಟು ಬೆಲೆ ಇರುತ್ತೋ ಶಾಪಕ್ಕೂ ಅಷ್ಟೇ ಬೆಲೆ ಇರುತ್ತೆ ಅಲ್ವೆನೋ.." ಕೇಳಿದ್ದಳು ತಾನು

"ನಿನ್ನ ಪಾಪ ಪುಣ್ಯ ಶಾಪ ತಾಪ ಅವೆಲ್ಲ ನನಗೆ ಗೊತ್ತಿಲ್ವೆ.. ನಾನಂತೂ ಬದುಕಿದ್ರೂ ನಿನ್ನ ಜೊತೆಗೆ.. ಸತ್ತರೂ ನಿನ್ನ ಜೊತೆಗೆ.. ನಿನಗೆ ನನ್ನ ಕಾಟ ತಪ್ಪಿದ್ದಲ್ಲ..

" ತುಮ್ ಐಸೆ ಮುಜ್ಮೆ ಶಾಮಿಲ್ ಹೋ
ತುಮ್ ಜಾನ್ ಮೇರೆ ತುಮ್ ಹೀ ದಿಲ್ ಹೋ
ಶಾಯದ್ ಮೆ ಭೂಲ್ ಜಾಂವು ಖುದ್ ಕೊ ಭೀ
ಪರಿ ತುಮ್ಕೋ ನಾ ಭೂಲ್ ಪಾವುಂಗಾ ಕಭೀ..." ಎಂದು ಡೈಲಾಗ್ ಹೇಳಿ ಕಣ್ಣು ಹೊಡೆದಿದ್ದ.

ಹರ್ಷನ ಸಿಹೀ ನೆನಪು ಕಹಿ ಕನಸನ್ನು ಮರೆಸಿಹಾಕಿತ್ತು. ರಾತ್ರಿಯಿಡೀ ಮಾತಾಡಿದರೂ ಮಾತು ಮುಗಿಯದೆ ವಿಡಿಯೋ ಚಾಟ್ ಕೂಡ ಅನವರತವಾಗಿ ನಡೆದಿತ್ತು. ಹಾಗೇ ಮಾತಾಡುತ್ತಲೇ ಹರ್ಷನ ಹಾಡು ಶುರುವಾಗಿತ್ತು ಅದು ಯಾವಾಗ ಕಣ್ಣು ಮುಚ್ಚಿದ್ದವೋ ಗೊತ್ತು ಆಗಿರಲಿಲ್ಲ. ಎಷ್ಟು ಚಂದ ಹಾಡ್ತಾನೆ ಹರ್ಷ. ತಾಯಿ ಮಗುವಿಗೆ ಜೋಗುಳ ಹಾಡಿದಂತೆ ಇತ್ತು. ನಿನ್ನ ಹಾಡು ಕೇಳೊಕೆ ಮತ್ತೆ ಮತ್ತೆ ನಿದ್ರೆ ತೊರಿಬೇಕು ಅನ್ನಿಸುತ್ತೆ ಕಣೋ.. ಎಂದು ಮನದಲ್ಲೇ ಪ್ರಿಯಸಖನನ್ನು ಅಭಿವಂದಿಸಿದಳು. ಅವನ ಕಲ್ಪನೆಯಲ್ಲಿ ಕಳೆದು ಎದ್ದು ಸ್ನಾನ ಮಾಡಿ ಯತಾರೀತಿ ತಯಾರಾಗಿ ಆಸ್ಪತ್ರೆಗೆ ಹೋಗುವಾಗ ಎದುರು ಬಂದ ಹರಿಣಿ 'ಧೀ..ಅಣ್ಣ ಯಾವಾಗ ಬರ್ತಿದ್ದಾನೇ' ಎಂದು ಕೇಳಿದಳು.

"ಇನ್ನೂ ಮೂರು ದಿನ ಹರ್ಷ ಬಂದು ಬಿಡ್ತಾನೆ.." ಭುಜ ಕುಣಿಸುತ್ತ ಖುಷಿಯಿಂದ ಹೇಳಿದಳು.

"ಅವನು ಯಾವಾಗಾದರೂ ಬರಲಿ ನನ್ನ ಟೆಡ್ಡಿ ನನಗೆ ಬೇಗ ಸಿಕ್ಕರೆ ಸಾಕಪ್ಪ.." ಗಲ್ಲಕ್ಕೆ ಕೈ ಹಚ್ಚಿ ಕನಸು ಕಾಣುತ್ತ ಹೇಳಿದಳು.

"ಥೂ..ಬಿಡ್ತು ಅನ್ನು.. ನಿನ್ನ ಟೆಡ್ಡಿ ಬೇಕಾದರೆ ಇಲ್ಲೇ ಇವತ್ತೇ ಕೊಡಿಸ್ತಿನಿ.. ಹರ್ಷ ಬೇಗ ಬರಬೇಕು.. ಕೆನ್ನೆಗೆ ಹೊಡೆದುಕೊಂಡು ತಪ್ಪಾಯ್ತು ತಪ್ಪಾಯ್ತು ಅನ್ನು.."

"ಧೀ..ನೀನು ನಿಜವಾಗಿಯೂ ಡಾಕ್ಟರ್ ಆss ನನಗೆನೋ ಅನುಮಾನ..ಹ್ಮ್ಮ್ಮ " ಎಂದು ಕಾಟಾಚಾರಕ್ಕೆ ಪರಿಧಿ ಹೇಳಿದಂತೆ ಮಾಡಿದಳು ಹರಿಣಿ.

ಹರಿಣಿಯನ್ನು ಶಾಲೆಗೆ ಡ್ರಾಪ್ ಮಾಡಿ ಆಸ್ಪತ್ರೆಗೆ ಬಂದ ಪರಿಧಿ ಸ್ಕೂಟಿ ಪಾರ್ಕ್ ಮಾಡುವಾಗ ವಾರ್ಡ್ ಬಾಯ್ ಯಾರದೋ ಮೇಲೆ ದಬ್ಬಾಳಿಕೆಯಿಂದ ಅರಚಾಡುವುದು ಕೇಳಿಸಿತ್ತು. ಏನೆಂದು ಹೋಗಿ ನೋಡಿದಾಗ ವಾರ್ಡ್ ಬಾಯ್ ಒಬ್ಬ ನಡುವಯ್ಯಸಿನ ವ್ಯಕ್ತಿಯನ್ನು ಕೈ ಮಾಡಿ ಆಸ್ಪತ್ರೆಯಿಂದ ಹೊರಗೆ ತಳ್ಳುತ್ತಿದ್ದ. ಆ ವ್ಯಕ್ತಿ ತುಂಬಾ ಶೋಚನೀಯ ಪರಿಸ್ಥಿತಿಯಲ್ಲಿ ಅಸಹಾಯಕರಾಗಿ ಅಳುತ್ತ ವಿನಮ್ರರಾಗಿ ಬೇಡಿಕೊಳ್ಳುತ್ತಿದ್ದರು. ಆದರೆ ವಾರ್ಡ್ ಬಾಯ್ 'ಡಾಕ್ಟರ್ ಹೇಳಿಲ್ವಾ ಹಣ ತಗೊಂಡು ಬಾ ಹೋಗು' ಎಂದು ಭುಜ ಬೆನ್ನು ಒತ್ತುತ್ತಾ ಆಚೆ ಹಾಕಲು ಹರಸಾಹಸ ಪಡುತ್ತಿದ್ದ.

ಪರಿಧಿಗೆ ಇದನ್ನು ನೋಡಿ ಪಿಚ್ಚೆನಿಸಿತು.  ವಾರ್ಡ್ ಬಾಯ್ ನ್ನು ತಡೆದು ನಿಲ್ಲಿಸಿ "ಹೀಗಾ ಪೇಷಂಟ್ ಕಡೆಯವರನ್ನ ಟ್ರೀಟ್ ಮಾಡೋದು.. ನಾಚಿಕೆ ಆಗಲ್ವ.. ಅವರ ವಯಸ್ಸಿಗಾದರೂ ಮರ್ಯಾದೆ ಕೊಡಬೇಕು ಅಂತ ಗೊತ್ತಾಗಲ್ವ" ಎಂದು ಅವನನ್ನು ಮೆತ್ತಗಾಗಿಸಿ ಅವರ ಬಳಿ ಹೋಗಿ 'ಏನಾಯ್ತು ಅಂಕಲ್ ಎನಿ ಪ್ರಾಬ್ಲಂ?' ಎಂದು ಕೇಳಿದಾಗ

ಅವರು "ನನ್ನ ಮಗಳಿಗೆ ಇದೇ ಆಸ್ಪತ್ರೇಲಿ ಹಾರ್ಟ್ ಸರ್ಜರಿ ಆಗಿದೆಯಮ್ಮ. ಈಗಾಗಲೇ ಆಪರೇಷನ್ನಿಗೆ ಮೊದಲು ಎರಡು ಲಕ್ಷ ಕಟ್ಟಬೇಕು ಎಂದಾಗ ಅವಳ ಮದುವೆಗೆ ಅಂತ ಕೂಡಿಟ್ಟ ಹಣನೆಲ್ಲ ತಂದು ಕೊಟ್ಟೆ. ಈಗ ಇನ್ನೂ ಎರಡು ಲಕ್ಷ ಕಟ್ಟಬೇಕು. ಅದನ್ನು ಕಟ್ಟೋವರೆಗೂ ನನ್ನ ಮಗಳನ್ನು ನೋಡೋಕೂ ಬಿಡಲ್ಲ ಅಂತಿದಾರೆ..ಹಣ ಹೊಂದಸ್ತಾ ಇದ್ದೀನಿ, ಸ್ವಲ್ಪ ಟೈಮ್ ಬೇಕು.. ಏಗ್ದಂ ಕಟ್ಟು ಅಂದ್ರೆ ಎಲ್ಲಿಂದ ಕಟ್ಲಮ್ಮ.. ನಾನು ರಿಟೈರ್ಡ್ ಮಾಸ್ಟರ್.. ಇಷ್ಟರಲ್ಲೇ ಪೆನ್ಶನ್ ಬರೋದಿದೆ, ಬಂದ ಕೂಡಲೇ ಕಟ್ಟಿ ಬಿಡ್ತಿನಿ. ಸದ್ಯಕ್ಕೆ ನನ್ನ ಮಗಳನ್ನು ನೋಡೊಕೆ ಅವಕಾಶ ಮಾಡಿಕೊಡಮ್ಮ ' ಎಂದು ಕಾಲಿಗೆ ಬೀಳಲು ಬಂದರು.

ಪರಿಧಿ ಅವರನ್ನು ತಡೆದು ಕೈ ಹಿಡಿದು ಭುಜ ತಟ್ಟಿ " ಅಂಕಲ್ ಸಮಾಧಾನ ಮಾಡ್ಕೊಳ್ಳಿ..ಬನ್ನಿ ಒಳಗೆ ಎಂದು ಕರೆದಳು. ಇವರನ್ನೇ ಗಮನಿಸುತ್ತಿದ್ದ ವಾರ್ಡ್ ಬಾಯ್ ಡಾಕ್ಟರ್... ಎಂದು ಏನೋ ಹೇಳಲು ಬಂದಾಗ 'ನಾನು ನೋಡ್ಕೊತಿನಿ.. ನೀವು ನಿಮ್ಮ ಕೆಲಸ ಮಾಡಿ' ಎಂದು ಹೇಳಿ ಅವರನ್ನು ಒಳಗೆ ಅವರ ಮಗಳ ವಾರ್ಡಿಗೆ ಕರೆದೊಯ್ದಳು. ತಂದೆಯನ್ನು ಕಂಡ ಮಗಳು 'ಯಾಕಪ್ಪಾಜಿ ತಡ ಮಾಡಿದ್ರಿ' ಎಂದಾಗ 'ಏನಿಲ್ಲಮ್ಮ ನಿನಗೆ ಹಣ್ಣು ತರೋಣ ಅಂತ ಹೋದೆ ಅಂಗಡಿ ತುಂಬಾ ರಶ್ ಇತ್ತು ಅದಕ್ಕೆ ತಡವಾಯ್ತು' ಎಂದು ಕಣ್ಣೀರು ಮುಚ್ಚಿಟ್ಟರು ತಂದೆ.

ತಂದೆಯ ಪ್ರೀತಿ ಎಷ್ಟು ಕಣ್ಮರೆಯಾಗಿರುತ್ತಲ್ಲ..ತಮಗಾಗುವ ನೋವು ಅವಮಾನ ಎಲ್ಲಾ ಮುಚ್ಚಿಟ್ಟು ಮಕ್ಕಳಿಗೆ ಬರೀ ಸಂತೋಷ ಕೊಡುತ್ತಾರೆ. ಅವರ ಗದರುವಿಕೆ ಸಿಟ್ಟಿನಲ್ಲೂ ಪ್ರೀತಿ ತುಂಬಿರುತ್ತೆ‌. ಮಾವ ಕೂಡ ಹರ್ಷನ್ನ ಪ್ರೀತಿಯಿಂದ ಮಾತಾಡಿದ್ದಕ್ಕಿಂತ ಯಾವಾಗಲೂ ಗದರಿದ್ದೆ ಹೆಚ್ಚು. ಆದರೆ ಮನಸ್ಸಲ್ಲಿ ಹೇಳಿಕೊಳ್ಳಲಾಗದಷ್ಟು ಪ್ರೀತಿ ಎಂದುಕೊಳ್ಳುತ್ತ ಸಂತೋಷದಿಂದಿದ್ದ ತಂದೆ ಮಗಳನ್ನು  ಅವರ ಪಾಡಿಗೆ ಬಿಟ್ಟು ಹೊರಬಂದ ಪರಿಧಿ ಬಾಗಿಲ ಕೊನೆಯಲ್ಲಿ ನಿಂತಿದ್ದ ಡಾ.ಪ್ರಸನ್ನನನ್ನು ನೋಡಿ "ಗುಡ್ ಮಾರ್ನಿಂಗ್ ಡಾಕ್ಟರ್" ಎಂದಳು ನಗುಮೊಗದಿಂದ.

"ನಿಮ್ಮ ಜೊತೆ ಎರಡೇ ಎರಡು ನಿಮಿಷ ಮಾತಾಡಬೇಕು. ಪ್ಲೀಸ್ ಬನ್ನಿ..."

"ನೋ ಡಾಕ್ಟರ್.. ತುಂಬಾ ಕೆಲಸ ಇದೆ, ಇನ್ನೂ ರೌಂಡ್ಸ್ ಹೋಗಬೇಕು.. ಬಾಯ್" ಎಂದು ಪ್ರತ್ಯುತ್ತರಕ್ಕೂ ಕಾಯದೆ ಅವನು ಕೂಗಿದರೂ ಕೇಳದಂತೆ ನಡೆದು ಹೋದಳು. ಅಲ್ಲಿಂದ ನೇರವಾಗಿ ಕೌಂಟರ್ ಬಳಿ ಹೋಗಿ ಆ ವ್ಯಕ್ತಿಯ ವಿವರ ತಿಳಿದುಕೊಂಡು ತನ್ನ ಕ್ರೆಡಿಟ್ ಕಾರ್ಡ್ ಮೂಲಕ ಅವರ ಸಂಪೂರ್ಣ ಮೊತ್ತವನ್ನು ತಾನೇ ಭರಿಸಿ ತನ್ನ ಕೆಲಸದಲ್ಲಿ ತೊಡಗಿದಳು.. ಇದನ್ನು ತಿಳಿದ ಆ ವ್ಯಕ್ತಿ ಮಧ್ಯಾಹ್ನ ಅವಳನ್ನು ಹುಡುಕಿಕೊಂಡು ಬಂದು 'ತುಂಬಾ ಉಪಕಾರವಾಯ್ತು ತಾಯಿ.. ನನಗೆ ಹಣ ಬಂದ ತಕ್ಷಣ ತೀರಿಸ್ತಿನಮ್ಮ..' ಎಂದು ಕೈ ಮುಗಿದರು. 'ಪರ್ವಾಗಿಲ್ಲ ಅಂಕಲ್.. ಅದೇ ದುಡ್ಡಲ್ಲಿ ನಿಮ್ಮ ಮಗಳಿಗೆ ಒಳ್ಳೆಯ ಭವಿಷ್ಯ ಕೊಡಿ ಆಯ್ತಾ..' ಎಂದು ನಗುತ್ತ ಅವರ ಕೈ ಬಿಡಿಸಿ ಕಣ್ಣೊರೆಸಿದಳು. 'ಇಷ್ಟು ದೊಡ್ಡ ಅಮೌಂಟ್.. ಬೇಡಮ್ಮ ನಾನು ಅನುಕೂಲ ಆದಾಗೆಲ್ಲ ವಾಪಸ್ ಮಾಡ್ತಿನಿ.. ನೀನು ತಗೊಳ್ಳೆಬೇಕು' ಹಠಮಾಡಿ ಹೇಳಿದರು. "ದೇವರು ನಮಗೆ ಸದ್ಯಕ್ಕೆ ಯಾವ ಕೊರತೆನೂ ಮಾಡಿಲ್ಲ ಅಂಕಲ್.. ಮನುಷ್ಯರಾಗಿ ಮನುಷ್ಯರಿಗೆ ಆಸರೆ ಆಗದಿದ್ದರೆ ಹೇಗೆ ಹೇಳಿ! ನೀವು ಆ ಬಗ್ಗೆ ಯೋಚನೆ ಬಿಟ್ಟು ಬಿಡಿ.. ನಿಮ್ಮ ಮಗಳಿಗೆ ಒಳ್ಳೆಯ ಗಂಡು ಹುಡುಕಿ ಮದುವೆ ಮಾಡಿ. ಮದುವೆಗೆ ಕರೆಯೋದು ಮಾತ್ರ ಮರಿಬೇಡಿ.." ಎಂದಳು ನಗುತ್ತ.

"ಈಗಿನ ಕಾಲದಲ್ಲಿ ನಿನ್ನಂತವರು ಅಪರೂಪ ತಾಯಿ..ದೇವರು ನಿನ್ನ ನೂರ್ಕಾಲ ಸುಖವಾಗಿಟ್ಟಿರ್ಲಮ್ಮ..' ಎನ್ನಲು ಅವಳು ಅವರನ್ನು ತಡೆದು " ಅಂಕಲ್ ನಾನು ಏನಾದರೂ ಪರವಾಗಿಲ್ಲ ನನ್ನ ಹರ್ಷನ್ನ ದೇವರು ಚೆನ್ನಾಗಿಟ್ಟಿರ್ಲಿ ಅಂತ ಆಶೀರ್ವದಿಸಿ ಪ್ಲೀಸ್' ಎಂದು ಮುದ್ದು ಮುಖ ಮಾಡಿ ಕೇಳಿಕೊಂಡಳು. ಅವರು ಅವಳ ಮುಗ್ಧ ಪ್ರೀತಿಗೆ ಮೈಮರೆತು " ನೀನು.. ನಿನ್ನ ಹರ್ಷ.. ನಿನ್ನ ಕುಟುಂಬ ಎಲ್ಲರೂ ನೂರ್ಕಾಲ ಸುಖವಾಗಿ ಸಂತೋಷವಾಗಿ ಬಾಳಿ ತಾಯಿ.. ದೇವರ ಆಶಿರ್ವಾದ ಸದಾ ನಿಮ್ಮೇಲಿರಲಿ" ಎಂದು ಮನದುಂಬಿ ಹಾರೈಸಿ ಅವಳ ತಲೆ ಸವರಿದರು. ಪರಿಧಿಯ ಉಲ್ಲಾಸ ಆ ಕ್ಷಣ ಮತ್ತಷ್ಟು ಇಮ್ಮಡಿಯಾಯಿತು.

ಇದನ್ನೇ ನೋಡುತ್ತಾ ನಿಂತಿದ್ದ ಪ್ರಸನ್ನ ಆ ವ್ಯಕ್ತಿ ಹೋಗುತ್ತಿದ್ದ ಹಾಗೆ "ನಮಗೂ ಒಂಚೂರು ಪುಣ್ಯ ಸಿಗಬಹುದಾ?" ಹಿಂದಿನಿಂದ ಬಂದು ಛೇಡಿಸಿದ.

"ವೈ ನಾಟ್.. ಡಾ.ಪ್ರಸನ್ನ! ಆದರೆ ನಿಮಗೆ ಸಿಗೋ ಪುಣ್ಯನೇ ಸ್ಟಾಕ್ ಮಾಡೋಕಾಗದಷ್ಟಿದೆ. ಇನ್ನೂ ಇದೆಲ್ಲಿ ಇಡ್ತಿರಾ ಬಿಡಿ" ನಕ್ಕು ನುಡಿದಳು.

"ಪುಣ್ಯದ ಜೊತೆಗೆ ಗೊತ್ತಿಲ್ಲದೆ ಏನಾದರೂ ಪಾಪನೂ ಮಾಡಿದೀನಿ ಅನ್ನಿಸ್ತಿದೆ. ಅದಕ್ಕೆ ಉತ್ತರ ನೀವು ಕೊಡಬೇಕು ಪರಿಧಿ.."

"ನೀವು ಪಾಪಾ ಮಾಡಿದೀರಾ, ಏನು ಹಾಗಂದ್ರೆ.. ನಾನೇನು ಉತ್ತರ ಕೊಡಬೇಕು"

"ಮಾನ್ವಿ ಹೇಗಿದ್ದಾಳೆ... ಇಸ್ ಶಿ ಆಲ್ ರೈಟ್ "

ಸ್ವಲ್ಪ ಹೊತ್ತು ಆಲೋಚಿಸಿ "ಏನೋ ಗೊತ್ತಿಲ್ಲ ಡಾಕ್ಟರ್..."

"ಬದುಕಿದ್ದಾಳೋ ಸತ್ತಿದ್ದಾಳೋ ಅಂತಲೂ ಗೊತ್ತಿಲ್ವಾ.." ಸ್ವಲ್ಪ ಖಾರವಾಗೇ ಕೇಳಿದ.

ಅವನೆಡೆಗೆ ಸಿಟ್ಟಿನಿಂದ ನೋಡಿ "ಕೆನಡಾದಲ್ಲಿ ವರ್ಕ್ ಮಾಡ್ತಿದ್ದಾಳಂತೆ ಹಿಂದೆ ಆಲಾಪ್ ಹೇಳಿದ್ದ. ಅದೂ ಅವರ ತಂದೆಯ ಮುಖಾಂತರ ಅವನಿಗೆ ಗೊತ್ತಾಗಿದ್ದು. ಇದುವರೆಗೂ ನಮ್ಮ ಯಾವ ಫ್ರೆಂಡ್ಸ್ ಜೊತೆಗೂ ಕಾಂಟ್ಯಾಕ್ಟ್ ನಲ್ಲಿ ಇಲ್ಲ ಅವಳು.. ಅಷ್ಟೇ ನನಗೆ ಗೊತ್ತಿರೋದು"

"ಉಫ್... ಎಂದು ನಿಟ್ಟುಸಿರು ಬಿಟ್ಟು,  ಏನಾಯ್ತು ನಿಮ್ಮ ಮಧ್ಯೆ ಅಂತಹ ಕಲಹ"  ಕೇಳಿದ ಪ್ರಸನ್ನ.

"ಅದು..ಹೀಗೆ ಸ್ವಲ್ಪ ಭಿನ್ನಾಭಿಪ್ರಾಯ.." ಎಂದು ಹೇಳಿ ತನ್ನ ಪಾಡಿಗೆ ತಾನು ಹೊರಟು ಹೋದಳು. ಪ್ರಸನ್ನನಿಗೆ ಕಾಡುತ್ತಿದ್ದ ಅಪರಾಧಿ ಪ್ರಜ್ಞೆ ಈಗ ನಿರಾಳವಾಯಿತು. ಬೇರೆಯವರ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕುವುದು ಅವನ ಜಾಯಮಾನದಲ್ಲೇ ಇರಲಿಲ್ಲ. ಹೀಗಾಗಿ ಅವನು ಆ ವಿಷಯವನ್ನು ಅಲ್ಲಿಗೆ ಮರೆತು ನಿಶ್ಚಿಂತವಾಗಿ ಕಾರ್ಯೋನ್ಮುಖನಾದ.

                   *****

ಹಗಲು ಇರುಳಿನ ಜೂಟಾಟದೊಂದಿಗೆ ದಿನಗಳು ಮುಂದೆ ಉರುಳುತ್ತಿದ್ದವು. ಪರಿಧಿ ಹರ್ಷನಿಗಾಗಿ ಕಾಯುತ್ತ ಮಾಡಿದ ತಪಸ್ಸು ಮುಗಿಯುತ್ತ ಬಂದಿತ್ತು...

"ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ.
ಅದರಚುಂಬನದಿಂದೆ ಸವಿಯದನು ಬಾ.
ಚಂಚಲತೆ ಏಕೆ, ಓ ಚಂಚರೀಕವೇ, ನಿನಗೆ?
ವಂಚನೆಯನಿದಿತಿನಿಲ್ಲ ; ಬಾ ಬೇಗ ಬಾ!

ಇರುಳೆಲ್ಲ ತಪಗೈದು ಎದೆಯ ಹೊಂಬಟ್ಟಲಲ್ಲಿ,
ಅರುಣನುದಯಕೆ ನೀನು ಬರುವೆಯೆಂದು,
ಪ್ರಣಯ ರಸವನು ಎರೆದು, ಕಾದಿಹೆನು ತುಟಿ ತೆರೆದು,
ಪಾನಗೈ ಓ ನನ್ನ ಭ್ರಮರ ಬಂಧು!
"

ಆ ಬೆಳಗಿನ ಜಾವ ಹರ್ಷನಿಗೆ ಹೀಗೊಂದು ಕುವೆಂಪು ರಚಿತ ಕವನ ಕಳಿಸಿದ್ದಳು ಪರಿಧಿ..

ಇದಕ್ಕೆ ಪ್ರತಿಯಾಗಿ ಹರ್ಷ ಫೋನ್ ಮಾಡಿ ಮುತ್ತುಗಳ ಮಳೆಗರೆದು "ಏನೇ ನೀನು ಹೀಗೆಲ್ಲ ಕೂಗಿದರೆ ಬರದೇ ಇರ್ತಿನಾ.. ಇವತ್ತೇ ಹಾರಿಕೊಂಡು ಮಧ್ಯಾಹ್ನದ ಫ್ಲೈಟ್ ಗೆ ಬರ್ತಾ ಇದ್ದೀನಿ.. ವಿತ್ ಸರ್ಪ್ರೈಜ್.. ಲವ್ ಯು ಲಾಟ್ಸ್ ಮಾಯ್ ಡಿಯರ್ ಏಂಜಲ್.." ಒಂದೇ ಉಸಿರಿನಲ್ಲಿ ಉಸುರಿದ

ಅವನ ಜೊತೆಗೆ ಮಾತಾಡಿದ ನಂತರ ಮನಸ್ಸಿಗೆ ಹಾಯೆನ್ನಿಸಿತ್ತು ಪರಿಧಿಗೆ.  ಇವತ್ತು ಆಸ್ಪತ್ರೆಗೆ ಬೇಗ ಹೋಗಿ ಮಧ್ಯಾಹ್ನ ಲೀವ್ ಹಾಕಿ ಬಂದರಾಯಿತೆಂದು ಎದ್ದು ತಯಾರಾದಳು.ಹರ್ಷ ಬರುವ ಮುನ್ನವೇ ತಾನು ಮನೆಗೆ ಬಂದು ಅವನನ್ನು ಸ್ವಾಗತಿಸಬೇಕು ಎಂದುಕೊಂಡಳು. ಅದೇ ರೀತಿ ಆಸ್ಪತ್ರೆಯಲ್ಲಿ ಕೂಡ ತುಂಬಾ ಉತ್ಸಾಹ ಲವಲವಿಕೆಯಿಂದ ಓಡಾಡುತ್ತಿದ್ದ ಪರಿಧಿಯನ್ನು ನೋಡಿ "ನವಿಲು ಕುಣಿಯಬೇಕೆಂದರೆ ಒಂದು ಮಳೆ ಬರಬೇಕು ಇಲ್ಲ ಗಂಡು ನವಿಲು ಸಿಕ್ಕಿರಬೇಕು..ಮಳೆಯಂತು ಬಂದಿಲ್ಲ ಬಹುಶಃ ಗಂಡು ನವಿಲು ಇವತ್ತು ಬಂದಿರಬಹುದೆನೋ" ಎಂದು ಕೆಣಕಿದ ಪ್ರಸನ್ನ.

ಅವಳು ನಕ್ಕು "ಹೌದು ಡಾ.ಪ್ರಸನ್ನ ಇವತ್ತು ಹರ್ಷ ವಾಪಸ್ ಬರ್ತಿದ್ದಾನೆ.. ಐಮ್ ಸೋ ಹ್ಯಾಪಿ.." ಎಂದಳು ಕೆನ್ನೆ ಕೆಂಪಾಗಿಸಿ "ಇಫ್ ಯು ಡೋಂಟ್ ಮೈಂಡ್ ನನ್ನ ಪೇಷಂಟ್ಸ್ ಇಂಚಾರ್ಜ ತಗೋತಿರಾ ಮಧ್ಯಾಹ್ನ ಪ್ಲೀಸ್.." ವಿನಂತಿಸಿದಳು

"ಯಾ.. ಶ್ಯೂರ್.. ಆದರೆ ನಾಳೆ ನಮಗೆ ಏನಾದರೂ ಸ್ವೀಟ್ ಮಾಡಿ ತರೋದಾದರೆ ಮಾತ್ರ" ಎಂದ ನಕ್ಕು

"ಡೀಲ್ ಒಕೆ ಡಾಕ್ಟರ್..ನಾಳೆ ಮಧ್ಯಾಹ್ನದ ಭೋಜನ ನನ್ನ ಕಡೆಯಿಂದ" ಎಂದು ಹನ್ನೆರಡು ಗಂಟೆಗೆ ಅಲ್ಲಿಂದ ಓಡಿ ಮನೆಗೆ ಬಂದಿದ್ದಳು. ಹರ್ಷ ಕೊಡಿಸಿದ ಕೆಂಪು ಬಣ್ಣದ ರೇಷ್ಮೆ ಅಂಚಿನ ಸೀರೆ ಉಟ್ಟು ಹಂಸಕ್ಕೆ ಕುಂಕುಮಾರ್ಚನೆ ಮಾಡಿದಂತೆ ಕಾಣುತ್ತಿದ್ದಳು. ಹರ್ಷನ ಬರುವಿಕೆಗಾಗಿ  ತಯಾರಾಗಿ ಕಾದು ಕೂತಿದ್ದ ಪರಿಧಿಯನ್ನು ನೋಡಿ ಸುಲೋಚನ 'ನನ್ನ ಮಗ ಫರ್ಸ್ಟ್ ಟೈಮ್ ನಿನ್ನ ನೋಡೋಕೆ ಬರ್ತಿರೋ ಹಾಗೆ ಆಡ್ತಿದಿಯಲ್ಲೆ ಹುಡುಗಿ..' ಎಂದು ತಮಾಷೆ ಮಾಡಿ ನಕ್ಕಿದ್ದರು. 'ಅತ್ತೆ ಇದೊಂತರಾ ಹೊಸ ಫೀಲಿಂಗು..' ಎಂದು ಕಣ್ಣು ಮಿಟುಕಿಸಿದ್ದಳು. ಸೆಕೆಂಡಿಗೊಮ್ಮೆ ಗಡಿಯಾರ ನೋಡುತ್ತಾ 'ಛೇ..ಬೇಗ ಒಂದು ಗಂಟೆ ಆಗೋ..' ಎಂದು ಗಡಿಯಾರಕ್ಕೂ ಕೈ ಮುಗಿದಿದ್ದಳು. ಅವಳ ಕೋರಿಕೆಯಂತೆ ಒಂದು ಗಂಟೆ ಆಗಿಯೇ ಹೋಗಿತ್ತು. ಅದಾಗಲೇ ಹತ್ತಿಪ್ಪತ್ತು ಬಾರಿ ಫೋನ್ ಗೆ ಪ್ರಯತ್ನಿಸಿ ಸ್ವಿಚಾಫ್ ಉತ್ತರ ಕೇಳಿ ಬೇಜಾರಾದಳು. ಗಂಟೆ ಒಂದೂವರೆ ಸೂಚಿಸಿದರೂ ಹರ್ಷನ ಸುಳಿವಿರಲಿಲ್ಲ. 'ಬಹುಶಃ ಫ್ಲೈಟ್ ಲೇಟ್ ಆಗಿರಬಹುದು ಇಲ್ಲ ಇಲ್ಲೇ ಟ್ರಾಫಿಕ್ ನಲ್ಲಿ ಸಿಕ್ಕು ಹಾಕಿಕೊಂಡಿರಬಹುದು ಬರ್ತಾನಮ್ಮ ತಾಳ್ಮೆಯಿಂದಿರು' ಸುಲೋಚನ ಸಮಾಧಾನ ಮಾಡಿದರು. ಪರಿಧಿಗೆ ಸಹನೆ ಮೀರಿತ್ತು "ನಾನೇ ಏರ್ಪೋರ್ಟ್ ಗೆ ಹೋಗಿ ನೋಡಿಕೊಂಡು ಬರ್ತಿನಿ ಅತ್ತೆ" ಎಂದು ಕಾರು ತೆಗೆದುಕೊಂಡು ಹೊರಟಳು. ಹದಿನೈದು ನಿಮಿಷದಲ್ಲಿ ಏರ್ಪೋರ್ಟ್ ನಲ್ಲಿದ್ದಳು. ಅಲ್ಲಿ ವಿಚಾರಿಸಿದಾಗ ಮುಂಬೈನಿಂದ ಬರಬೇಕಾದ ಫ್ಲೈಟ್ ಆಗಲೇ ತಲುಪಿಯಾಗಿತ್ತು. ಅಲ್ಲಿನ ಅಧಿಕಾರಿಗಳ ಜೊತೆ ಮಾತಾಡಿ ಹರ್ಷನ ಬಗ್ಗೆ ವಿಚಾರಿಸಿದಾಗ ಅವರು ಪ್ಯಾಸೆಂಜರ್ ಲಿಸ್ಟ್ ನ್ನು ಅವಳ ಮುಂದಿಟ್ಟರು . ಹರ್ಷನ ಹೆಸರು ಹುಡುಕಿದಳು ಹರ್ಷನ ಹೆಸರಿನಲ್ಲಿ ಟಿಕೆಟ್ ಏನೋ ನಿಗದಿಯಾಗಿತ್ತು ಆದರೆ ಬಂದಿಳಿದ ಪ್ರಯಾಣಿಕರ ಪಟ್ಟಿಯಲ್ಲಿ ಅವನ ಹೆಸರಿರಲಿಲ್ಲ. ಮತ್ತೆ ಅವನ ಫೋನ್ ಗೆ ಪ್ರಯತ್ನಿಸಿದಳು. ಅದೇ ಉತ್ತರ ಸ್ವಿಚಾಫ್!!

ಅವಳ ಅಂಗೈ ಬೆವತಿತ್ತು ಕೈಕಾಲು ಕಂಪಿಸುತ್ತಿದ್ದವು. ತಕ್ಷಣ ಅವನ ಸೆಕ್ರೆಟರಿ ನೆನಪಾಗಿ ಅವನಿಗೆ ಫೋನ್ ಮಾಡಿದ್ದಳು. 'ನಾನು ನಿನ್ನೆನೇ ಬಂದೆ ಮ್ಯಾಮ್..ಕೆಲಸ ಎಲ್ಲಾ ನಿನ್ನೆ ಮುಗಿತು.. ಸರ್, ನೀನು ಹೋಗಿರು, ನಾನು ಸ್ವಲ್ಪ ಪರ್ಸನಲ್ ಕೆಲಸ ಮುಗಿಸಿ ನಾಳೆ ಬರ್ತಿನಿ ಅಂದ್ರು.. ಯಾಕೆ ಮ್ಯಾಮ್ ಏನಾಯ್ತು' ಕೇಳಿದ ಸೆಕ್ರೆಟರಿ. 'ಹರ್ಷ ಇವತ್ತು ಒಂದು ಗಂಟೆ ಫ್ಲೈಟ್ ಗೆ ಬರಬೇಕಿತ್ತು, ಟಿಕೆಟ್ ಬುಕ್ ಆಗಿದೆ ಆದ್ರೆ ಬಂದಿಲ್ಲ.. ಯಾಕೆ ಅಂತ ವಿಚಾರಿಸಿ ಹೇಳಿ ಪ್ಲೀಸ್' ಎಂದು ಗೋಗರೆದಳು. 'ಸರಿ ಮ್ಯಾಮ್ ನಾನು ವಿಚಾರಿಸ್ತಿನಿ ನೀವು ಗಾಬರಿಯಾಗಬೇಡಿ ಏನಾಗಿರಲ್ಲ.. ನೀವು ಮನೆಗೆ ಹೋಗಿರಿ' ಎಂದು ಸಮಾಧಾನ ಮಾಡಿದ.

ಅದೇ ಯೋಚನೆಯಲ್ಲಿ ಮನೆಗೆ ಬಂದ ಪರಿಧಿ ಸೆಕ್ರೆಟರಿ ಏನಾದರೂ ವಿಷಯ ತಿಳಿಸಬಹುದು ಹರ್ಷನ ಫೋನ್ ಬರಬಹುದು ಎಂದು ಶತಪಥ ಎಣಿಸುತ್ತ ತಿರುಗಾಡಿದಳು. ಅದೇ ವಿಚಾರದಲ್ಲಿ ಇದ್ದವಳು ವಿನಾಯಕ್ ಅವರ ಕಾರು ಸದ್ದು ಕೇಳಿ ಎಚ್ಚೆತ್ತಳು. ವಿನಾಯಕ್ ಕಾರು ನಿಲ್ಲಿಸಿ ಒಳಗೆ ಬಂದವರೇ ಕೂಗಾಡಿದರು ಕಂಪನಿ ಕೆಲಸ ಎಲ್ಲಾ ನಿನ್ನೆ ಮುಗಿದಿದೆ ಬರೋಕೆ ಏನಿವನಿಗೆ ಹುಡುಗುಬುದ್ದಿ ಬಿಡೋದೆ ಇಲ್ಲ ಈಗ ನೋಡು.. ಏನ್ಮಾಡ್ಕೊಂಡಿದ್ದಾನೆ..!! ಸಿಟ್ಟಿನಿಂದ ಹೇಳುತ್ತಿದ್ದರಾದರೂ ಧ್ವನಿ ದುಃಖದಿಂದ ಕಂಪಿಸುತ್ತಿತ್ತು. ಸುಲೋಚನ ಅವರು ಗಂಡನ ಮುಖವನ್ನೇ ದಿಟ್ಟಿಸುತ್ತಾ ' ಏನಾಯ್ತು ರೀ ಹರ್ಷನಿಗೆ' ಕೇಳಿದ್ದಳು

ಸೋಫಾದ ಮೇಲೆ ನಿಧಾನವಾಗಿ ಕುಳಿತು ತಲೆ ಮೇಲೆ ಕೈ ಹೊತ್ತ ಅಶ್ವಥರು 'ಇಂತಹ ಸಮಯದಲ್ಲೂ ಏನು ಕೋಪಾನೋ ನಿನಗೆ..ಬೇಗ ನಡೆ ನನ್ನ ಮೊಮ್ಮಗನಿಗೆ ಏನಾಗಿದೆಯೋ ಏನೋ' ಗದರಿದ್ದರು

"ಮಾವಾ.. ಹರ್ಷ ಯಾಕೆ ಬರಲಿಲ್ಲ. ಏನಾಯ್ತು.. ಕ್ಷೇಮವಾಗಿದ್ದಾನೆ ತಾನೇ.." ಗಾಬರಿಯಿಂದ ಕೇಳಿದಳು ಪರಿಧಿ.

"ನಮಗೆ ನೆಮ್ಮದಿಯಿಂದ ಇರೋಕೆ ಎಲ್ಲಿ ಬಿಡ್ತಾನಮ್ಮ ಇವನು, ಏನಾದರೂ ಯಡವಟ್ಟು ಮಾಡ್ಕೊಳ್ತಾನೆ ಇರ್ತಾನೆ.." ಕಣ್ಣಿಂದ ಹನಿಗಳು ಜಾರಿ ಮರೆಯಾದವು

ಹಿಂದೆ ಬಂದ ಸೆಕ್ರೆಟರಿ ಹೇಳಿದ "ಹರ್ಷ ಸರ್ ಬರುತ್ತಿದ್ದ ಟ್ಯಾಕ್ಸಿಗೆ ಏರ್ಪೋರ್ಟ್ ಗೆ ಬರುವ ದಾರಿಯಲ್ಲಿ ಆಕ್ಸಿಡೆಂಟ್ ಆಗಿದೆಯಂತೆ ಮ್ಯಾಮ್.. ಡ್ರೈವರ್ ಸ್ಪಾಟಲ್ಲೇ ಡೆತ್ ಆಗಿದ್ದಾನಂತೆ..ಮತ್ತೆ ಹರ್ಷ ಸರ್ ನಾ ಆಸ್ಪತ್ರೆಗೆ ಸೇರಿಸಿದ್ದಾರಂತೆ..ಹೋಗಿ ನೋಡಬೇಕು ಏನಾಗಿದೆಯೋ.. ಏನೋ..??"

ನಿಂತಲ್ಲೇ ಎದೆ ಕಂಪಿಸಿ ಸಿಡಿಲು ಬಡಿದಂತಾಯಿತು ಪರಿಧಿಗೆ "ಹರ್ಷನ ಕಂಡಿಷನ್ ಹೇಗಿದೆ ಮಾವ.. ನಾನು ಬರ್ತಿನಿ ನಿಮ್ಮ ಜೊತೆಗೆ" ದುಃಖ ನುಂಗುತ್ತಲೇ ಮಾತಾಡಿದಳು.

"ಏನಾಗಿರಲ್ಲ ನೀನು ಹೆದರಬೇಡಮ್ಮ.. ನಾವು ಹೋಗಿ ನೋಡ್ತಿವಿ ನೀನು ಹರಿಣಿ ಮತ್ತೆ ಮಾವನ್ನ ನೋಡಿಕೊ" ಎಂದು ಹೇಳಿ  ಸುಲೋಚನ ಪರಿಧಿಯ ಕೈ ಅದುಮಿದಳು.

ಪರಿಧಿ ಒಲ್ಲದ ಮನಸ್ಸಿನಿಂದ ಮನೆಯಲ್ಲಿ ಉಳಿದರೂ ಮನಸ್ಸು ಮಾತ್ರ ಹರ್ಷನ ಬಳಿಯೇ ಹೋಗಿತ್ತು.. ಪ್ರತಿಕ್ಷಣ ಅವನ ಕ್ಷೇಮಕ್ಕಾಗಿ ಅವಳ ಕೋರಿಕೆಗಳು ದೇವರಿಗೆ ರವಾನೆ ಆಗುತ್ತಲೇ ಇದ್ದವು. ಘಳಿಗೆಗೊಮ್ಮೆ ಮಾವನಿಗೆ ಫೋನ್ ಮಾಡಿ ಏನಾಯಿತೆಂದು ವಿಚಾರಿಸುತ್ತಲೇ ಇದ್ದಳು. ಅವರು ಸಮಾಧಾನ ಮಾಡುತ್ತಲೇ ಇದ್ದರು. ಅವರು ಮುಂಬೈ ತಲುಪುತ್ತಲೇ ಅವರಿಂದ ಬಂದ ಸುದ್ದಿ ಪರಿಧಿಯ ನೆಮ್ಮದಿಯ ಜೀವನವನ್ನು ಬುಡಮೇಲು ಮಾಡಿಬಿಟ್ಟಿತು.

ಮುಂದುವರೆಯುವುದು..

             ⚛⚛⚛⚛⚛


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...