ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-7


ಮೌನದೊಡನೆ ಮನಸ್ಸು ಮಾತನಾಡುತ್ತಿತ್ತು, ಒಂಟಿತನ ಹೇಗಲೇರಿ ಕುಳಿತಿತ್ತು, ಇನ್ನೂ ಈ ಮೌನ ಈ ಏಕಾಂಗಿತನ ತನಗಿನ್ನು ಶಾಶ್ವತ ಎಂದು ಬದುಕು ಉದಾಸೀನವಾಗಿತ್ತು!! ಕಿಟಕಿಯಲ್ಲಿ  ಇಣುಕಿ ನೋಡುತ್ತಿದ್ದ ಬೆಳಕು ಮೆಲ್ಲಗೆ ಪಡುವಣದ ಕಡೆಗೆ ಜಾರಿ ಹೋದರೂ ಅವಳ ಕಣ್ಣಲ್ಲಿ ಯಾವ ಭಾವನೆಗಳಿಲ್ಲ. ಸರಿಯುವ ಸಮಯವು ನಾ ಇನ್ನು ಮತ್ತೆಂದೂ ಸಿಗಲಾರೆನೆಂದು ಅಣುಗಿಸುತ್ತ ಹೊರಟಂತಿತ್ತು. ಆಕೆಯ ಶೂನ್ಯ ಆ ದಿಗಂತಕ್ಕೂ ಅರ್ಥವಾದಂತೆ ಮುಗಿಲು ಕಾರ್ಮೋಡಗಳಿಂದ ಆವರಿಸಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಧೋ.. ಎಂದು ಮಳೆ ಬಿಡುವಿಲ್ಲದೆ ಸುರಿಯಿತು. ಪ್ರಕೃತಿಗೂ ಆಕೆಯ ಆಂತರ್ಯದ ನೋವು ಅರಿವಾದಂತೆ, ಅವಳ ನೋವಿಗೆ ಸ್ಪಂದಿಸುತ್ತ ಆರ್ತನಾದಗೈಯುತ್ತಿತ್ತು. ಆದರೆ ಆಕೆ ಮಾತ್ರ ಅಚಲ ನಿಶ್ಚಲ ನಿರ್ಲಿಪ್ತತೆಯಿಂದ ಗರಬಡಿದಂತೆ ನೆಲಕ್ಕೆ ಮೊಣಕಾಲೂರಿ ಕೂತು ಬಿಟ್ಟಿದ್ದಳು. ವಾಸ್ತವದ ಕಟು ಸತ್ಯವನ್ನು ಸಹಿಸಲಾರದ ಹೃದಯ ತನ್ನನ್ನು ತಾನೇ ಕತ್ತಲಲ್ಲಿ ಬಂಧಿಸಿ ತನಗೆ ಬೇಡದ ಆ ವಾಸ್ತವದಿಂದ ದೂರವಾಗಲು ಹವಣಿಸುತ್ತಿತ್ತು. ಹೃದಯದ ಲಯಬದ್ದ ಮಿಡಿತವೊಂದನ್ನು ಬಿಟ್ಟು ಅವಳು ಬದುಕಿದ್ದಾಳೆ ಎನ್ನುವ ಯಾವ ಜೀವಂತಿಕೆಯ ಲಕ್ಷಣಗಳು ಅವಳಲ್ಲಿ ಕಾಣುತ್ತಿರಲಿಲ್ಲ. ರೆಪ್ಪೆಗಳಂಚಲ್ಲಿ ಭೋರ್ಗರೆಯಲು ಕಾದು ಕುಳಿತ ಕಣ್ಣೀರ ಕಡಲು ದುಃಖದ ತೀರದ ಅನುಮತಿಯ ನಿರೀಕ್ಷೆಯಲ್ಲಿತ್ತು. ಕಳೆದುಕೊಂಡದ್ದು ಹೃದಯವನ್ನು.. ನೋವು ಪಡುತ್ತಿರುವುದು ಹೃದಯವೇ.. ಅದೇ ಹೃದಯ ಬಡಿದುಕೊಳ್ಳುತ್ತಿತ್ತು ಆದರೆ ದೇಹ ಮಾತ್ರ ಆತ್ಮವಿಲ್ಲದ ನಿರ್ಜೀವ ವಸ್ತುವಿನಂತೆ ಕಲ್ಲಾಗಿ ಕೂತಿತ್ತು. ಮರಳಿ ಬಾರದ ಇನಿಯನ ನಿರೀಕ್ಷೆಯಲ್ಲಿ..

ಮುಂಬೈಗೆ ಧಾವಿಸಿದ ಸುಲೋಚನ ವಿನಾಯಕ್ ಕೆಲವೇ ಗಂಟೆಗಳಲ್ಲಿ ಪರಿಧಿಗೆ ಫೋನ್ ಮಾಡಿದ್ದರು.  "ಪರಿ‌‌...." ಎಂದು ದುಃಖಿಸುತ್ತ "ಹರ್ಷ... ಹರ್ಷ.. ನಮ್ಮನ್ನೆಲ್ಲ ಬಿಟ್ಟು ಹೋ,,ಗ್ಬಿಟ್ಟ ಕಣೇ.." ಗಂಟಲಲ್ಲೇ ಸುಲೋಚನ ಅವರ ಮಾತುಗಳು ಕಟ್ಟಿದ್ದವು. ತಾನು ಕೇಳುತ್ತಿರುವುದು ನಿಜವೋ ಭ್ರಮೆಯೋ ಎಂಬ ಅವಸ್ಥೆಯಲ್ಲಿ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ನಿಂತ ಜಾಗದಲ್ಲೇ ಕುಸಿದು  ಕುಳಿತಿದ್ದಳು ಪರಿಧಿ.. ತಾತ ಬಂದು ಕಂಬನಿಗೈದು ತಲೆ ಸವರಿ ಧೈರ್ಯ ಹೇಳಿದರೂ ಹರಿಣಿ ಬಂದು ಅವಳನ್ನ ತಬ್ಬಿ ಗೋಳೋ ಎಂದು ಅತ್ತರೂ ಅವಳಿಂದ ಯಾವ ಪ್ರತಿಕ್ರಿಯೆ ಇಲ್ಲ. ಅವಳ ಮನಸ್ಸು ಕಲ್ಲಾಗಿ ಜಡವಾಗಿ ಹೋಗಿತ್ತು.. ಮೈಮೇಲೆ ಪರಿವೆಯೇ ಇಲ್ಲದಂತೆ..ವಾಸ್ತವಿಕತೆಗೆ ಸಂಬಂಧಿವೇ ಇಲ್ಲದಂತೆ..


ಪರಿಧಿಯ ತಾಯಿ ಗೌರಿ ಎಂಟು ತಿಂಗಳ ಗರ್ಭಿಣಿ ಇದ್ದಾಗಲೇ ಅವಳ ಸೀಮಂತಕ್ಕೆಂದು ಹಾರ ತರಲು ಹೋದ ಗಂಡ ತಾನೇ ದುರ್ವಿಧಿಗೆ ಆಹಾರವಾಗಿ ಮತ್ತೆ ಮನೆಗೆ ಬಂದಿದ್ದು ಮಾತ್ರ ಶವವಾಗಿ. ಆಕಸ್ಮಿಕವಾಗಿ ನಡೆದ ರಸ್ತೆ ಅಪಘಾತದಲ್ಲಿ ಹತವಾದ ಗಂಡನ ಅಗಲಿಕೆಗೆ ಗೌರಿ ತತ್ತರಿಸಿ ಹೋಗಿದ್ದರೆ ಅವಳ ಕಿರಿಯ ಓರಗಿತ್ತಿ ಲಲಿತೆಯ ಬಾಯಿಗೆ ಈ ವಿಷಯ ಮಗುವಿನ ಅಪಶಕುನದ ಕಹಳೆಯಂತೆ ಮೊಳಗಿ ಜಗಜ್ಜಾಹೀರಾತಾಯಿತು. 'ಮಗು ಗರ್ಭದಲ್ಲಿ ಇರುವಾಗಲೇ ತಂದೆಯನ್ನೇ ಬಿಟ್ಟಿಲ್ಲ. ಇನ್ನೂ ಮುಂದೆ ಬಾಳಿ ಬದುಕುವವರ ಕಥೆ ಹೇಗೋ ಏನೋ?' ಎಂದು ಪುಕಾರು ಹಬ್ಬಿಸಿಬಿಟ್ಟಳು. ಮನೆಯ ಹಿರಿಯ ಸೊಸೆಯಾದ ಗಿರಿಜಾ ಲಲಿತೆಯ ಈ ವಕ್ರಬುದ್ದಿಯಿಂದ ಮನನೊಂದ ಗೌರಿಗೆ ಸಾಂತ್ವನ ಹೇಳಿ ಹೆರಿಗೆಗೆಂದು ಅವಳನ್ನು ತವರಿಗೆ ಕಳಿಸಿಕೊಟ್ಟಳು. ಆ ಮಗುವಿನ ದುರಾದೃಷ್ಟಕ್ಕೆ ಅದು ಭೂಮಿಯಲ್ಲಿ ಕಣ್ಣು ಬಿಡುವ ಮುನ್ನವೇ ಗೌರಿ ಶಾಶ್ವತವಾಗಿ ಕಣ್ಣು ಮುಚ್ಚಿದ್ದಳು‌. ಸೂತಕದ ಮಡಿಲಲ್ಲಿ ಹುಟ್ಟಿದ ಮಗುವಿನ ಮೊದಲ ಅಳು ಸುತ್ತ ನೆರೆದವರ ಪಾಲಿಗೆ ಸಂತೋಷಕ್ಕಿಂತ ಹೆಚ್ಚಾಗಿ ಶೋಕಗೀತೆಯಾಗಿ ಮಾರ್ದನಿಸಿತ್ತು.  ತಾಯಿ ಅಪ್ಪುಗೆಗಾಗಿ ಎದೆಹಾಲಿಗಾಗಿ ಮಗು ರಚ್ಚೆ ಹಿಡಿದು ಅಳುತ್ತಿದ್ದರೆ ಸುತ್ತುಗಟ್ಟಿದ್ದ ನರ್ಸ್ ಗಳು 'ಛೇ..ಪಾಪ' ಎಂದು ಅದರ ಆರ್ತನಾದಕ್ಕೆ ಮರುಗಿದರು. 

ಮಕ್ಕಳಿಲ್ಲದೆ ಬಂಜೆ ಎಂಬ ಅಪಖ್ಯಾತಿ ಪಡೆದ ಗಿರಿಜಾ ಅವತ್ತು ಮಗುವನ್ನು ತನ್ನ ಮಡಿಲಲ್ಲಿ ಎತ್ತಿ ಮುದ್ದಾಡಿ ತನ್ನ ನೇರವೇರದ ತಾಯ್ತನದ ವಾತ್ಸಲ್ಯವನ್ನೆಲ್ಲ ಮಗುವಿಗೆ ಧಾರೆಯೆರೆದು ಒಳಲೆಯಿಂದ  ಹಾಲುಣಿಸಿದಳು. ಮಗುವಿನ ಆರ್ತನಾದ ಕ್ರಮೇಣ ಕಡಿಮೆಯಾಗಿತ್ತು. ಗಿರಿಜೆಯ ಮಾತೃತ್ವದ ಸ್ಪರ್ಶಕ್ಕೆ ಮಗು ಮಂತ್ರಮುಗ್ಧವಾಗಿ ಹಾಲು ಚಪ್ಪರಿಸಿತು. ಗಿರಿಜಾ ವರಸೆಯಲ್ಲಿ ಮಗುವಿಗೆ  ದೊಡ್ಡಮ್ಮ ಆದರೆ ಸ್ವಂತ ತಾಯಿಗಿಂತ ಹೆಚ್ಚಾಗಿ ಮಗುವಿಗೆ ಪ್ರೀತಿ ಮಮಕಾರ ಸುರಿಸಿದಳು. ತಮ್ಮ ಮಗಳು ಗೌರಿ ಮಗುವಿಗೆ ಜನ್ಮ ನೀಡಿ ಇಹಲೋಕ ತ್ಯಜಿಸಿದ ವಿಷಯ ತಿಳಿದು ದುಃಖತಪ್ತರಾದ ಅಶ್ವಥ್ ಭಾರ್ಗವ ತಮ್ಮ ಮೊಮ್ಮಗಳನ್ನು ತಮ್ಮೊಂದಿಗೆ ಕರೆದೊಯ್ಯಬೇಕೆಂದಿದ್ದರು. ಆದರೆ ಗಿರಿಜಾ ಮಗುವಿನ ಜವಾಬ್ದಾರಿ ತಾನೇ ನೋಡಿಕೊಳ್ಳುವೆ ಎಂದು ಅಶ್ವಥ್ ಅವರ ಹತ್ತಿರ ವಿನಮ್ರತೆಯಿಂದ ಪರಿಪರಿಯಾಗಿ ಬೇಡಿಕೊಂಡಳು. ಮಗುವನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಬೇಕೆಂದಿದ್ದ ಸುಲೋಚನ ಸಹ ಅವರ ಮಾತೃವಾತ್ಸಲ್ಯಕ್ಕೆ ಕರಗಿ ಆ ಮಗುವನ್ನು ಅವರ ಮಡಿಲಿಗೆ ಹಾಕಿ 'ಆಗಾಗ ಬಂದು ನೋಡಿಕೊಂಡು ಹೋಗುವೆ, ಮಗು ಜೋಪಾನ' ಎಂದು ಮಗುವನ್ನು ಮುದ್ದಾಡಿ ಅಲ್ಲಿಂದ ಬೀಳ್ಕೊಟ್ಟಿದ್ದರು. 


ಅಲ್ಲಿಗೆ ಖಾಲಿ ಮಡಿಲಿಗೆ ಮಗುವಿನ ಹಂಬಲ ತೀರಿತ್ತು. ತಾಯಿ ಸ್ಪರ್ಶಕ್ಕೆ ಹಾತೊರೆದ ಮಗುವಿಗೆ ತಾಯಿ ಪ್ರೀತಿ ಸಿಕ್ಕಿತ್ತು. ಪರಿಧಿಯ ದೊಡ್ಡಪ್ಪ ದೊಡ್ಡಮ್ಮ ಆಗಬೇಕಾದ ಗಿರಿಜಾ ಮತ್ತು ಜಗದೀಶ್ ಅಂದಿನಿಂದ ಪರಿಧಿಯ ತಂದೆ ತಾಯಿಯಾದರು. ಅಲ್ಲಿಯವರೆಗೂ ತಮ್ಮ ಹೃದಯಾಂತರಾಳದಲ್ಲಿ ಬಚ್ಚಿಟ್ಟ ಪ್ರೀತಿ ಮಮಕಾರ ವಾತ್ಯಲ್ಯವನ್ನು ತೆನೆ ತೆನೆಯಾಗಿ ಪರಿಧಿಗೆ ಧಾರೆಯೆರೆದರು. ಸ್ವಂತ ಮಗಳಿಗಿಂತ ಹೆಚ್ಚಾಗಿ ಮುದ್ದಾಗಿ ನೋಡಿಕೊಂಡರು. ಪರಿಧಿಗೆ ಯಾವತ್ತೂ ತಾವು ಸ್ವಂತ ತಂದೆ ತಾಯಿ ಅಲ್ಲವೆಂಬ ಅನುಮಾನ ಬರದಂತೆ, ಅಪ್ಪ ಅಮ್ಮನ ಲವಲೇಶವೂ ಕೊರತೆ ಕಾಡದಂತೆ ಅತೀ ಪ್ರೀತಿಯಿಂದ ಬೆಳೆಸಿದರು. ಆದರೆ ಪರಿಧಿ ಆರು ವರ್ಷದವಳಿದ್ದಾಗ ಗಿರಿಜಾ ಹಠಾತ್ ಹೃದಯಾಘಾತದಿಂದ ಮರಣ ಶಯ್ಯೆಗೆ ಏರಿದಾಗ ಅವಳಿಂದ ಸಿಕ್ಕ ಅಲ್ಪಮಾತ್ರದ ತಾಯಿ ಪ್ರೀತಿಯನ್ನೂ ಪರಿಧಿಯಿಂದ ಕಿತ್ತುಕೊಂಡಿತು ವಿಧಿ. ಆಗ ತಾನೇ ಬಾಯಿತುಂಬ ಅಮ್ಮ ಎಂದು ಕರೆಯುತ್ತಿದ್ದ ಮಗುವಿಗೆ ಮತ್ತೆಂದೂ ಆ ಪ್ರೀತಿ ಸಿಗದಷ್ಟು ಅತ್ತರೂ ಮರಳಿ ಬಾರದಷ್ಟು ದೂರಸಾಗಿದ್ದಳು ಗಿರಿಜಾ. 


ಗಿರಿಜಾ ತೀರಿದ ಮೇಲೆ ಮನೆಯ ಜವಾಬ್ದಾರಿ ಸಂಪೂರ್ಣವಾಗಿ ಕಿರಿಯ ಸೊಸೆಯಾಗಿದ್ದ ಲಲಿತಳಿಗೆ ಸಿಕ್ಕಿತು. ಮನೆಯ ಒಡತಿ ಪಟ್ಟಕ್ಕೆ ಹಾತೊರೆಯುತ್ತಿದ್ದ ಲಲಿತಾ ತಾನೇ ಯಜಮಾನಿಯಾಗಿ ಮನೆಯ ಆಗುಹೋಗುಗಳನ್ನು ನೋಡಿಕೊಳ್ಳ ತೊಡಗಿದಳು. ಅಶ್ವಥರು ಆಗಲೂ ಹಾಳು ವಿಧಿಯನ್ನು ಹಳಿದು ತಮ್ಮ ಮೊಮ್ಮಗಳನ್ನು ತಮ್ಮೊಂದಿಗೆ ಕರೆದೊಯ್ಯಲು ಬಂದರು.ಆಗ ಜಗದೀಶ್ 'ಇಲ್ಲ ರಾಯರೇ.. ನಾನು ಪರಿನಾ ಚೆನ್ನಾಗಿ ನೋಡಿಕೊಳ್ತಿನಿ, ಈಗ ಇವಳೊಬ್ಬಳೇ ನನ್ನ ಜೀವಕ್ಕೆ ಆಸರೆ..' ಎಂದು ಒತ್ತಾಯ ಮಾಡಿ ಪರಿಯನ್ನು ತನ್ನ ಜೊತೆಗಿರಿಸಿಕೊಂಡ. ಜಗದೀಶ್ ಏನೋ ಪರಿಧಿಯನ್ನು ಚೆನ್ನಾಗಿ ನೋಡಿಕೊಂಡ, ಒಳ್ಳೆಯ ಶಾಲೆಗೆ ಸೇರಿಸಿದ, ಬಟ್ಟೆ ಬರೆ ಕೊಡಿಸಿದ, ಅವಳ ಬೇಕು ಬೇಡಗಳನ್ನು ಗಮನಿಸಿದ ಕೈತುತ್ತು ಮಾಡಿ ತಿನ್ನಿಸಿದ, ಕಥೆ ಹೇಳಿ ಮಲಗಿಸುತ್ತಿದ್ದ, ತಾಯಿಯೂ ಆಗಿ ತಂದೆಯೂ ಆಗಿ ಪ್ರೀತಿಯಿಂದ ಬೆಳೆಸುತ್ತಿದ್ದ ಆದರೆ ಹುಟ್ಟು ಕುಹಕ ಗುಣಿಯಾದ ಅವಳ ಚಿಕ್ಕಮ್ಮ ಲಲಿತಾ ಅವಳನ್ನು ಮಾನಸಿಕವಾಗಿ ಕಾಡಿದಳು. ಪರಿಧಿಗೆ ಅವಳ ದುರ್ವಿಧಿಯ ಪರಿಚಯವಾಗುವಂತೆ ಅವಳನ್ನು ಶಪಿಸಿ ನೋಯಿಸುತ್ತಿದ್ದಳು. ಅಲ್ಲಿಯವರೆಗೂ ಗಿರಿಜಾ ಜಗದೀಶ್ ರನ್ನೇ ತನ್ನ ತಂದೆ ತಾಯಿ ಎಂದುಕೊಂಡ ಪರಿಧಿಗೆ ತನ್ನ ಜನ್ಮ ರಹಸ್ಯ ಆಗ ತಿಳಿದಿತ್ತು. 


"ಹುಟ್ಟುತ್ತಲೇ ತಂದೆ ತಾಯಿನಾ ನುಂಗಿ ನೀರು ಕುಡಿದೆ‌. ಈಗ ನಮ್ಮ ಗಿರಿಜಕ್ಕನ್ನೂ ಬಲಿ ತಗೊಂಡೆ ಪೀಡೆ.. ನಿನ್ನನ್ನು ಅತಿಯಾಗಿ ಪ್ರೀತಿಸುವವರ ಪಾಡು ಹೀಗೆ ಅಂತ ಕಾಣುತ್ತೆ.."  ಎಂದೆಲ್ಲಾ ಕುಟುಕುತ್ತಿದ್ದಳು. ಈ ವಿಷಯದ ಎಳೆ ತಿಳಿದ ಜಗದೀಶ್ ಮಗು ಮುಂದೆ ಹಾಗೆಲ್ಲ ಮಾತಾಡಿದರೆ ಚೆನ್ನಾಗಿರಲ್ಲ ಲಲಿತಾ, ಅವಳು ನನ್ನ ಮಗಳು ನೀನು ಅವಳ ತಂಟೆಗೆ ಹೋಗದಿದ್ದರೆ ಒಳಿತು ಎಂದು ದಬಾಯಿಸಿದ. ಲಲಿತಾ ಭಾವನ ಮುಂದೆ ಹೆದರಿದಂತೆ ನಟಿಸಿ ಸರಿ ಭಾವ ಇನ್ನೊಮ್ಮೆ ಹೀಗಾಗಲ್ಲ ಎಂದಳಾದರೂ ಅದರ ನೇರ ಪರಿಣಾಮ ಸಹ ಪರಿಧಿಯ ಮೇಲಾಗಿತ್ತು. ಅವಳ ಗಲ್ಲ ಚಿವುಟಿ 'ಏನೇ ಭಾವನ ಮುಂದೆ ನನ್ನ ಚಾಡಿ ಹೇಳ್ತಿಯಾ??'  ಎಂದು ಕಣ್ಣು ಕೆಕ್ಕರಿಸಿದಳು. ಲಲಿತಳ ಬಿರುನೋಟಕ್ಕೆ ಹೆದರಿ ನಡುಗಿತ್ತು ಪರಿಧಿಯ ಎಳೆಯ ಮನಸ್ಸು. ಆಗಿನಿಂದ ಮನೆಯಲ್ಲಿ ಏನೇ ಸಂಗತಿ ಘಟಿಸಿದರೂ ಲಲಿತಾ ಎಷ್ಟೇ ಕಟು ಮಾತಾಡಿದರೂ ತಂದೆಗೂ ಹೇಳದೆ ಕೋಣೆಯ ಬಾಗಿಲಲ್ಲಿ ಕಣ್ಣೀರಿನಲ್ಲೇ ತೇಲಿ ಹೋಗುತ್ತಿತ್ತು ಪರಿಧಿಯ ನೋವು. ಪರಿಧಿಯ ಹೆದರಿಕೆಗೆ ಮತ್ತಷ್ಟು ಸೊಪ್ಪು ಹಾಕಿ ದಿನೇದಿನೇ ಅವಳ ತಲೆಯಲ್ಲಿ ಅವಳೊಬ್ಬ ನತದೃಷ್ಟೆ, ದರಿದ್ರ ಅಪಶಕುನ ಎಂಬುದನ್ನು  ಮನದಟ್ಟು ಮಾಡುತ್ತ ಹೋದಳು ಲಲಿತಾ. ಅವಳು ಕಾಲಿಟ್ಟಲ್ಲೆಲ್ಲ ಬರೀ ಸೂತಕ ಅವಳು ಮುಟ್ಟಿದ್ದೆಲ್ಲ ಸರ್ವನಾಶ ಎಂಬತೆ ಹೇಳಿ ಹೀಯಾಳಿಸಿ ಆ ಎಳೆ ಮನಸ್ಸನ್ನು ಹಾಳು ಮಾಡುತ್ತಲೇ ಇದ್ದಳು,  ಅವಳು ಕಾಲಿಟ್ಟ ಜಾಗ ಅವಳನ್ನು ಪ್ರೀತಿಸುವ ಜನ ಯಾರಿಗೂ ಅವಳಿಂದ ಒಳ್ಳೆಯದಾಗಲ್ಲ ಎಂಬುದು ಅವಳ ಮನಸ್ಸಲ್ಲಿ ಎಷ್ಟರಮಟ್ಟಿಗೆ ಬೇರೂರುತ್ತಾ ಹೋಯಿತೆಂದರೆ  ಶಾಲೆಯಲ್ಲಿ ಯಾರಾದರೂ ಎಡವಿ ಬಿದ್ದರೂ ಅದು ತನ್ನಿಂದಲೇ ಎಂಬಂತೆ ಅವಳಲ್ಲಿ ಇನ್ಫಿರಿಯಾರಿಟಿ ಕಾಂಪ್ಲೆಕ್ಸ್ ಬೆಳೆದು ಹೆಮ್ಮರವಾಗಿತ್ತು. ಯಾರ ಜೊತೆಗೂ ಬೇರೆಯಲು ಇಷ್ಟವಾಗದೆ  ಶಾಲೆಗೆ ಹೋಗುವುದನ್ನು ಸಹ ಬಿಟ್ಟು ಬಿಟ್ಟಳು. ಆಟ ಪಾಟಗಳಲ್ಲಿ ಆಸಕ್ತಿ ಇರಲಿಲ್ಲ. ಒಂದು ರೀತಿಯ ಮಾನಸಿಕ ಅಸ್ವಸ್ಥತೆಯ ಹಂತ ತಲುಪಿಬಿಟ್ಟಿದ್ದಳು‌. ಯಾರಾದರೂ ಚಿಕ್ಕದಾಗಿ ಪರಿ ಎಂದು ಕೂಗಿದರೂ ಬೆವರಿ ಬೆಚ್ಚಿ ಬೀಳುತ್ತಿದ್ದಳು. ಈ ವಿಷಯ ತಿಳಿದ ಅಶ್ವಥ್ಥರು ಒಮ್ಮೆ ಹೇಳದೆ ಕೇಳದೆ ಮನೆಗೆ ಬಂದಾಗ ಲಲಿತಾ ಆ ಪುಟ್ಟ ಪರಿಧಿಯಿಂದ ಮನೆಗೆಲಸ ಮಾಡಿಸುವುದನ್ನು ಕಂಡು ಕೋಪೋದ್ರಿಕ್ತರಾಗಿ ಲಲಿತಳ ನಿಷ್ಕರುಣ ಮಾತೃತ್ವವನ್ನು  ಝಾಢಿಸಿದರು. ಜಗದೀಶನಿಗೂ ಒಂದು ಮಾತು ಹೇಳದೆ ಪರಿಧಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ತಾಯಾರಾಗಿ ನಿಂತರು. ಲಲಿತಾ ಪರಿಧಿಯ ಪಾಲಿನ ಎರಡು ಭಾಗ ಆಸ್ತಿ ಕೈ ತಪ್ಪಿ ಹೋಗುವುದಲ್ಲ ಎಂದು ಕೈ ಕೈ ಹಿಸುಕಿಕೊಂಡು ಅದನ್ನು ತಡೆಯಲು ಅವರನ್ನು ಕ್ಷಮೆ ಕೇಳಿ ಅಂಗಲಾಚಿ ನಾನಾ ರೀತಿ ಬೇಡಿಕೊಂಡಳು. 


ಅವಳ ದುರಾಲೋಚನೆ ದುರುದ್ದೇಶವನ್ನು ಅರಿತಿದ್ದ ಅಶ್ವಥರು ಪರಿಧಿಯ ಕೈ ಹಿಡಿದು ದರದರನೆ ತಮ್ಮ ಕಾರಿನಲ್ಲಿ ಕೂರಿಸಿ ಮನೆಗೆ ಕರೆದುಕೊಂಡು ಬಂದೇ ಬಿಟ್ಟರು. ಸುಲೋಚನ ವಿನಾಯಕ್ ಪರಿಧಿಯನ್ನು ತಮ್ಮ ಮಗಳಂತೆ ನೋಡಿಕೊಂಡರೂ, ಸಮಾಧಾನ ಹೇಳಿ ಮತ್ತೆ ಶಾಲೆಗೆ ಸೇರಿಸಿದರೂ ಪರಿಧಿಯಲ್ಲಿನ ಅಪರಾಧಿ ಭಾವ ಕುಂದಲಿಲ್ಲ. ಯಾರ ಜೊತೆಗೂ ಬೆರೆಯುತ್ತಿರಲಿಲ್ಲ ಹೆಚ್ಚಾಗಿ ಮಾತಿಲ್ಲ ಕಥೆಯಿಲ್ಲ ತನ್ನ ಪಾಡಿಗೆ ತಾನು ಒಂಟಿಯಾಗಿ ಇರುತ್ತಿದ್ದಳು. ಎತ್ತಲೋ ನೋಟ, ಏನೋ ಯೋಚನೆ.. ಆಗ ಪರಿಧಿಯನ್ನು ಅಂತಹ ಮಾನಸಿಕ ಪರಿಸ್ಥಿತಿಯಿಂದ ಹೊರತಂದವನೇ ಹರ್ಷ..

ಆಗ ಗೌರಿ ಹೆರಿಗೆಗೆಂದು ತವರಿಗೆ ಬಂದಾಗ ಅವಳ ಹೊಟ್ಟೆ ಮುಟ್ಟಿ 'ಅತ್ತ್ಯಾ.. ಇದರೊಳಗೆ ಏನಿದೆ..?' ಎಂದು ತೊದಲು ಮಾತಲ್ಲಿ ಕಣ್ಣು ಕಿರಿದುಮಾಡಿ ಕೇಳಿದ್ದ ನಾಲ್ಕು ವರ್ಷದ ಪುಟ್ಟ ಹರ್ಷ.

"ಇದರೊಳಗೆ ಏಂಜಲ್ ಇದ್ದಾಳೆ.. ಇನ್ನೂ ಸ್ವಲ್ಪ ದಿನದಲ್ಲಿ ಏಂಜಲ್ ಆಚೆ ಬರ್ತಾಳೆ.. ನೀನು ಅವಳ ಜೊತೆ ಆಟ ಆಡ್ತಿಯಲ್ವ.."  ಎಂದು ಗೌರಿ ಮುದ್ದಾಗಿ ಹೇಳಿದರೆ 'ಏಂಜಲ್..ಆ..' ಎಂದು ಪಿಳಿಪಿಳಿ ಕಣ್ಣು ಬಿಟ್ಟು ಅವಳ ಹೊಟ್ಟೆ ನೇವರಿಸಿದ್ದ ಹರ್ಷ. ಆ ಎಳೆಯ ವಯಸ್ಸಿನಲ್ಲಿಯೇ ಮುಗ್ಧ ಮನಸ್ಸಿನಲ್ಲಿ ಯಾರೂ ಅರಿಯದ ಬಾಂಧವ್ಯವೊಂದು ಬೆಸೆದುಕೊಂಡಿತು.  ' ಬಾ ಇಲ್ಲಿ ಕೇಳು' ಎಂದು ಗೌರಿ ತಮ್ಮ ಹೊಟ್ಟೆಗೆ ಹರ್ಷನ ಕಿವಿಯಾನಿಸಿದ್ದರು. ಎಳೆಯ ವಯಸ್ಸಿನ ಹರ್ಷನ ಮನಸ್ಸಿಗೆ ಏನೇನಿಸಿತ್ತೋ ಏನೋ 'ಹ್ಮಾ.. ಅತ್ಯಾ.. ಏಂಜಲ್ ಗೆ ನೀರು ಬೇಕಂತೆ..' ಎಂದು ತರಲು ಓಡಿದ್ದ ಪುಟ್ಟ ಹರ್ಷ. ಆಗ ಎಲ್ಲರಿಗೂ ಅದೊಂದು ತಮಾಷೆಯ ಮಕ್ಕಳಾಟದ ವಿಷಯವಾಗಿ ಕಂಡಿತ್ತಾದರೂ ಆ ಎಳೆಯ ಮನಸ್ಸುಗಳ ಪಿಸುಮಾತು ಯಾರಿಗೂ ಅರ್ಥವಾಗಿರಲಿಲ್ಲ ಮುಂದೆ ಕೂಡ ಅವಳ ಹೃದಯದ ಪ್ರತಿ ಮಿಡಿತವನ್ನು ಅವನ ಮನಸ್ಸು ಆಲಿಸಿ ಅವಳ ಭಾವನೆಗಳಿಗೆ ಪ್ರತಿಸ್ಪಂದಿಸುವುದೆಂದೂ ಆಗ ಯಾರಿಗೂ ತಿಳಿದಿರಲೂ ಇಲ್ಲ. ಗೌರಿಯ ಹೆರಿಗೆವರೆಗೂ ಹರ್ಷ ಅತ್ತ್ಯಾ..ಅತ್ತ್ಯಾ.. ಎಂದು ಅವಳ ಹಿಂದಿಂದಲೇ ಸುತ್ತುತ್ತಿದ್ದ. ಅವರ ಹೊಟ್ಟೆ ಸವರಿ 'ಏಂಜಲ್.. ಏಂಜಲ್' ಎಂದು ಕೂಗಿ ಕೂಗಿ ಕರೆಯುತ್ತಿದ್ದ. ಗೌರಿಯ ಪ್ರತಿ ಚಿಕ್ಕ ಪುಟ್ಟ ಹೊರಳುವಿಕೆಯನ್ನು ಗಮನಿಸಿ 'ಏಂಜಲ್ ಈಗ ಏನ್ಮಾಡ್ತಿದಾಳೆ, ಹೇಗಿದಾಳೆ' ಎಂದೆಲ್ಲಾ ಕಣ್ಣರಳಿಸಿ ಕೇಳುತ್ತಿದ್ದ. ಗೌರಿ ಹೀಗೆ ಹಾಗೆ ಎಂದು ಕಥೆ ಹೇಳಿದರೆ ಕಣ್ಣು ಬಾಯಿ ಬಿಟ್ಟು ಗಮನವಿಟ್ಟು ಕೇಳಿ ನಗುತ್ತಿದ್ದ. ಗೌರಿಗೆ ಬೇಕಾಗುವ ಚಿಕ್ಕ ಪುಟ್ಟ ವಸ್ತು ತಂದು ಕೊಡಲು ಸದಾ ಅವಳ ಕಾವಲುಗಾರನಾಗೆ ಇದ್ದ ಮಗನನ್ನು ನೋಡಿ ಸುಲೋಚನ "ಏನೋ..ನನಗಂದ್ರೆ ಯಾವ ಹೆಲ್ಪು ಮಾಡಲ್ಲ  ಅತ್ತೆ ಸೇವೆ ಮಾತ್ರ ಜೋರು ನಡಿತಿದೆ ಏನು ಸಮಾಚಾರ.." ಎಂದು ಕೆನ್ನೆ ಹಿಂಡಿ ನಕ್ಕಿದ್ದರು. ರಾತ್ರಿ ಮಲಗುವಾಗ ಗೌರಿ ಜೊತೆಗೆ ಮಲಗುತ್ತಿದ್ದ ಹರ್ಷ ಇನ್ನೂ ಗರ್ಭದಲ್ಲೇ ಇದ್ದ ಪುಟ್ಟ ಏಂಜಲ್ ಗಾಗಿ ತನ್ನ ಪುಟಾಣಿ ಧ್ವನಿಯಲ್ಲಿ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್.. ಎಂದು ಹಾಡು ಹೇಳಿ ಹೊಟ್ಟೆಗೆ ಕೈ ತಟ್ಟಿ ಮಲಗಿಸುತ್ತಿದ್ದ.

ಗೌರಿಯ ಹೆರಿಗೆಯ ದಿನ ಕೂಡ ಯಾರೆಷ್ಟೇ ಬೇಡವೆಂದರೂ ಕೇಳದೆ ಅವಳ ಜೊತೆ ಆಸ್ಪತ್ರೆಗೆ ಬಂದಿದ್ದ ಹರ್ಷ. ಗೌರಿ ಒಟಿಗೆ ಹೋಗುವ ಮುನ್ನ 'ಅತ್ತಿಗೆ.. ಇವರಪ್ಪ ಅಂತೂ ನನ್ನ ಬಿಟ್ಟು ಹೋದ್ರು,  ಒಂದುವೇಳೆ ಹೆರಿಗೆಯಲ್ಲಿ ನನಗೂ ಏನಾದ್ರೂ ಆದ್ರೆ ನನ್ನ ಮಗುನಾ ಜೋಪಾನ ಮಾಡ್ತಿರಲ್ವ' ಎಂದು ಕಂಬನಿ ಮಿಡಿದಳು. 'ಥೂ..ಬಿಡ್ತು ಅನ್ನೇ ನಿನಗೇನೂ ಆಗಲ್ಲ. ಎಲ್ಲಾ ಒಳ್ಳೆಯದಾಗುತ್ತೆ, ನೀ ಚಿಂತೆಬಿಡು ' ಎಂದು ಕಣ್ಣೋರೆಸಿ ಸಮಾಧಾನಿಸಿದ್ದರು ಸುಲೋಚನ. ಅವರಿಬ್ಬರ ಮಾತುಗಳು ಪೂರ್ಣ ಅರ್ಥವಾಗದಿದ್ದರೂ 'ಏಂಜಲ್ ನಾ ನಾನು ಚೆನ್ನಾಗಿ ನೋಡ್ಕೊತಿನಿ' ಎಂದು ಕೈ ಎತ್ತಿದ್ದ ಹರ್ಷ. ಅವನ ತಲೆ ತಡವಿ 'ಯಾವಾಗಲೂ ಅವಳ ಜೊತೆಗೆ ಇರಬೇಕು ಅವಳನ್ನ ಚೆನ್ನಾಗಿ ನೋಡ್ಕೊಬೇಕು ಆಯ್ತಾ' ಎಂದು ಮುದ್ದಿಸಿದ್ದರು. ಆ ದಿನ ಮಗುವಿನ ಮೊದಲ ಅಳು ಕೇಳಿ 'ಏಂಜಲ್ ಅಳ್ತಿದ್ದಾಳೆ' ಎಂದು ತಾನು ಅಳಲು ಶುರು ಮಾಡಿದ್ದ ಹರ್ಷನನ್ನು ಅವನ ತಂದೆ ವಿನಾಯಕ ಕೆಲಸಮಯ ಹೊರಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದ್ದರು. ಮಗು ಗಿರಿಜೆಯ ಕೈಯಲ್ಲಿ ಸಮಾಧಾನವಾದ ಮೇಲೆ ಹರ್ಷನನ್ನು ಒಳಗೆ ಕರೆತಂದು ಮುದ್ದು ಪರಿಧಿಯನ್ನು ತೋರಿಸಿದಾಗ ಬೆದರು ಕಣ್ಣಿನಿಂದ 'ವ್ಹಾವ್.. ಏಂಜಲ್..' ಎಂದು ಖುಷಿಯಿಂದ ಚಪ್ಪಾಳೆ ಹೊಡೆಯುತ್ತ ಅವಳ ಹಾಲ್ಗೆನ್ನೆಯನ್ನೊಮ್ಮೆ ಸವರಿದ್ದ. ಹೊಳೆಯುವ ಕಣ್ಣುಗಳಿಂದ ಅವನತ್ತ ನೋಡಿ ಬಚ್ಚುಬಾಯಿಂದ ಮುಗುಳ್ನಿಕ್ಕಿತ್ತು ಮಗು. ಹರ್ಷ ಮಗುವಿನ ಪುಟ್ಟ ಕೈಗಳನ್ನು ಹಿಡಿದು ಏಂಜಲ್ ಎನ್ನಲು ಆ ಮಗು ತನ್ನ ಪುಟ್ಟ ಕೈಗಳಿಂದ ಅವನ ಹೆಬ್ಬೆರಳನ್ನು ಗಟ್ಟಿಯಾಗಿ ಹಿಡಿದಿತ್ತು ನೀನು ನನ್ನವನು ಎಂಬಂತೆ.. ಆ ದಿನವೇ ಪುಟ್ಟ ಪರಿಧಿಯ ಹಣೆಗೊಂದು ಹರ್ಷನ ಪ್ರಥಮ ಮುತ್ತು ಆಭೂಷಣವಾಗಿತ್ತು. ಮಗುವನ್ನು ಗಿರಿಜಾ ನೋಡಿಕೊಳ್ಳುವೆ ಎಂದಾಗ ಪುಟ್ಟ ಏಂಜಲ್ ತಮ್ಮ ಮನೆಗೆ ಬರುತ್ತಾಳೆ ಎಂಬ ಹರ್ಷನ ಊಹೆ ಸುಳ್ಳಾಗಿದ್ದಕ್ಕೆ ರಚ್ಚೆ ಹಿಡಿದು ಹಠ ಮಾಡಿದ ಹರ್ಷನನ್ನು ಸುಲೋಚನ ತುಂಬಾ ಕಷ್ಟ ಪಟ್ಟು ರಮಿಸಿ ತಮ್ಮ ಮನೆಗೆ ಕರೆದೊಯ್ದರು‌ ಅಂದು. ಆಗೊಮ್ಮೆ ಈಗೊಮ್ಮೆ ಪರಿಧಿ ಬಳಿ ಹೋಗಿ ಭೇಟಿಯಾಗುತ್ತಿದ್ದ ಹರ್ಷನಿಗೆ ಅದೊಂದು ದಿನದ ಸಂಭ್ರಮ ಮಾತ್ರ. ಮತ್ತೆ ಅವಳನ್ನು ತಾತ ಈಗ ತಮ್ಮ ಮನೆಗೇ ಕರೆದುಕೊಂಡು ಬಂದ ಮೇಲಂತೂ ಹರ್ಷನ ಸಂಭ್ರಮ ಸಡಗರಕ್ಕೆ ಪಾರವೇ ಇರಲಿಲ್ಲ. ಆದರೆ ಮಾತೇ ಆಡದ ನಗಲು ಬಾರದ ಸಪ್ಪೆಯಾಗಿ ಕೂರುವ ಪರಿಧಿಯನ್ನು ನೋಡಿ ಅವನಿಗೆ ಬೇಜಾರಾಯಿತು. ತನ್ನ ತರಲೆ ತುಂಟತನಗಳಿಂದ ಅವಳನ್ನು ತನ್ನೆಡೆಗೆ ಸೆಳೆಯುವುದು ಅವನಿಗೆ ಕಷ್ಟದ ಕೆಲಸವಾಗಿರಲಿಲ್ಲ.

ಅವಳ ಒಂಟಿತನದ ಕಾಯಿಲೆಯನ್ನು ಅವಳಿಗೆ ಅರಿವಿಲ್ಲದಂತೆ ಮಾತಿಗೆಳೆದು ಸೋಲಿಸಿದ. ಅವಳು ಮಾತನಾಡದೆ ಸುಮ್ಮನೆ ಕುಳಿತರೆ ಜುಟ್ಟು ಎಳೆದು, ಕೆನ್ನೆ ಹಿಂಡಿ, ಮೂಗು ಜಗ್ಗಿ, ಅಣುಗಿಸಿ ನೀರು ಚಿಮ್ಮಿ, ದಿಂಬು ಎಸೆದು, ಅವಳ ಹೇರಬ್ಯಾಂಡ್ ಕಸಿದುಕೊಂಡು ಅವಳಿಗೆ ಕೋಪ ಬರುವಂತೆ ಏನೋ ಕಿತಾಪತಿ ಮಾಡಿ ಅವಳು ದೂರ ಓಡುವಂತೆ ಇಲ್ಲ ಅವನನ್ನೇ ಅಟ್ಟಿಸಿಕೊಂಡು ಬರುವಂತೆ ಮಾಡುತ್ತಿದ್ದ. ಅವಳು ಎತ್ತಲೋ ನೋಡುತ್ತಾ ಮೈಮರೆತು ಕೂತಾಗ ಮೈಮೇಲೆ ಪ್ಲಾಸ್ಟಿಕ್ ಹಲ್ಲಿಯೋ ಜಿರಲೆಯೋ ಹಾಕಿ ಅವಳು ಬೆದರಿ ಇಡೀ ಮನೆಯೆಲ್ಲಾ ಕುಣಿದಾಡುವಂತೆ ಮಾಡಿ ನಗುತ್ತಿದ್ದ. ಅದು ಪ್ಲಾಸ್ಟಿಕ್ ಹಲ್ಲಿ ಎಂದು ತಿಳಿದು ಆಕೆಯ ನಗುವು ಅವನ ನಗುವಿನೊಂದಿಗೆ ಜೊತೆಯಾಗುತ್ತಿತ್ತು. ಅವಳು ಊಟ ಬೇಡವೆಂದು ಮಲಗಿದರೆ ಅನಾಮತ್ತಾಗಿ ಎರಡು ಕೈಗಳಲ್ಲಿ ಅವಳನ್ನು ಎತ್ತಿಕೊಂಡು ಬಂದು ಡೈನಿಂಗ್ ಟೇಬಲ್ ಮೇಲೆ ಕೂರಿಸಿ 'ಹ್ಮ್ಮ.. ಬಾಯಿ ತೆಗಿ ತಿನ್ನು' ಎಂದು ಗದರಿ ತುತ್ತು ಮಾಡಿ ಉಣಿಸುತ್ತಿದ್ದ. ಅವಳ ಬ್ಯಾಗ್ ಪುಸ್ತಕಗಳನ್ನು ಬಚ್ಚಿಟ್ಟು ಅವಳು ಹುಡುಕಿ ಸುಸ್ತಾಗಿ ಕೊನೆಗೆ ಅವನನ್ನು ಅರಸಿಕೊಂಡು ಬಂದಾಗ ಅವನ ಜೊತೆಗೆ ಆಟವಾಡಲು ಒಪ್ಪಿಸುತ್ತಿದ್ದ. ಅವನ ಪುಟ್ಟ ಕ್ರಿಕೆಟ್ ಟೀಮಲ್ಲಿ ಅವನು ಕ್ಯಾಪ್ಟನ್ನಾದರೆ ಅವಳು ಅವನ ಅಸಿಸ್ಟೆಂಟ್. ಅವನು ಬ್ಯಾಟ್ ಹಿಡಿದು ಹೊರಟರೆ ಅವಳು ಮುಖ ಗಂಟಿಕ್ಕಿ ಬಾಲ್ ಹಿಡಿದು ಅವನನ್ನೇ ಹಿಂಬಾಲಿಸುತ್ತಿದ್ದಳು. ಅವಳಿಗೆ ಬಟ್ಟೆಯಿಂದ ಹಿಡಿದು ಚಪ್ಪಲಿಯವರೆಗೂ ಅವನ ಆಯ್ಕೆಯೇ ಅಂತಿಮವಾಗಿತ್ತು.  ಹರ್ಷನ ತುಂಟಾಟಗಳ ಜೊತೆ ಪರಿಧಿಯ ಜೀವನದ ಗತಿ ಪಥ ಎರಡೂ ಬದಲಾಗಿತ್ತು. ಅವನೊಂದಿಗೆ ಮನಬಿಚ್ಚಿ ಮಾತಾಡಲು ಆರಂಭಿಸಿದ್ದಳು. ಸಂತೋಷದಿಂದ ಕಾದಾಡುತ್ತಿದ್ದಳು.  ಬೇರೆ ಯಾರೊಂದಿಗೂ ಇಲ್ಲದ ಸಲಿಗೆಯ ಭಾವ ಅವನೊಂದಿಗೆ ಸಿಗುತ್ತಿತ್ತು. ಅವಳ ಮನದಿಂಗಿತವನ್ನು ಮೊದಲೇ ಅರಿತು ಅವಳು ಬಯಸಿದ್ದೆಲ್ಲ ತಂದು ಅವಳ ಅಂಗೈಯಲ್ಲಿ ಇಡುತ್ತಿದ್ದ ಹರ್ಷ. ತಾನು ಅವಳನ್ನು ಎಷ್ಟೇ ಗೋಳಾಡಿಸಿದರೂ ಪರವಾಗಿಲ್ಲ ಆದರೆ ಬೇರೆ ಯಾರಿಗೂ ಅವಳನ್ನು ಛೇಡಿಸಲು ಬಿಡುತ್ತಿರಲಿಲ್ಲ. ತಾಯಿ ಮತ್ತು ತಾತ ಸಹ ಅವಳ ಜೊತೆ ಏರು ದನಿಯಲ್ಲಿ ಮಾತಾಡಿದರೂ ಅವರ ಮೇಲೆ ಕೋಪಿಸಿಕೊಂಡು ಅವರೊಡನೆ ಜಗಳ ಮಾಡುತ್ತಿದ್ದ. ಪ್ರತಿಕ್ಷಣ  ಹೆಜ್ಜೆ ಹೆಜ್ಜೆಗೂ ಅವಳ ನೆರಳಾಗಿ ಹಿಂಬಾಲಿಸಿದ್ದ. ಅವಳ ಅಕಾರಣ ಭಯವನ್ನು ತನ್ನ ನಗುವಿನಂದಲೇ ದೂರ ಓಡಿಸಿದ್ದ. ಕಾಡಿಸುತ್ತಿದ್ದ ನಗಿಸುತ್ತಿದ್ದ ಅದಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ.. ಅವನೊಂದಿಗೆ ಕಳೆಯುವ ಒಂದೊಂದು ನಿಮಿಷ ಪರಿಧಿ ಜೀವನದ ಹೊಸ ಅರ್ಥಗಳನ್ನು ಕಂಡುಕೊಂಡಿದ್ದಳು. ಶಕುನ ಅಪಶಕುನ ಎಂಬುದು ಅಸಲು ಮನಸ್ಸಿನ ಭಾವನೆ ಮಾತ್ರ ವಾಸ್ತವದಲ್ಲಿ ಅದಕ್ಕೆ ಯಾವ ಅರ್ಥವೂ ಇಲ್ಲವೆಂದು ನಂಬಲು ಆರಂಭಿಸಿದಳು. ಇದಕ್ಕೆ ಪುಷ್ಟಿ ಕೊಡುವಂತೆ ಸುಲೋಚನ ಆಗ ಹರಿಣಿಗೆ ಜನ್ಮ ನೀಡಿದ್ದರು. ಆ ಮಗುವನ್ನು ಪರಿಧಿ ಮಡಿಲಲ್ಲಿ ಹಾಕಿ ನೋಡು ಎಷ್ಟು ಮುದ್ದಾಗಿದೆ ನಿನ್ನ ಹಾಗೆ.. ನೀನು ಕಾಲಿಟ್ಟ ಕೂಡಲೇ ಮುದ್ದು ಲಕ್ಷ್ಮಿ ಬಂದಳು ಮನೆಗೆ ಎಂದು ಕೆನ್ನೆ ಹಿಂಡಿದ್ದರು. ಪರಿಧಿಯ ಮನಸ್ಥಿತಿ ಮೊದಲಿಗಿಂತ ಸುಧಾರಿಸಿತು. ಮಗುವಿನೊಂದಿಗೆ ಆಟವಾಡುತ್ತ ತನ್ನ ಗತವನ್ನು ಮರೆತು ಎಲ್ಲರೊಡನೆ ಬೆರೆಯಲು ಕಲಿತಳು‌. ನಗುನಗುತ್ತ ಎಲ್ಲರ ಸ್ನೇಹ ಪ್ರೀತಿ ಸಂಪಾದಿಸಿದಳು.

ಪಿಯುಸಿ ಓದುವಾಗ ತನಗೆ ಬಂದ ಪ್ರೇಮ ಪತ್ರವನ್ನು ಹರ್ಷನ ಮುಂದೆ ತಂದು ತೋರಿಸಿದಾಗ 'ಅಬ್ಬೋ..ಇದು ಬೇರೆ ಶುರುವಾಯ್ತಾ.. ನೀನು ನೋಡು, ಹುಡುಗ ಇಷ್ಟ ಆದ್ರೆ ನಾನೇ ಮುಂದೆ ನಿಂತು ಮದುವೆ ಮಾಡ್ತಿನಿ' ಎಂದು ಕಣ್ಣು ಹೊಡೆದು ಛೇಡಿಸಿ ನಕ್ಕಿದ್ದ. ಅವಳು ಅವನ ಕಣ್ಮುಂದೆಯೇ ಅದನ್ನು ಹರಿದು ಹಾಕಿ ಬುಸುಗುಟ್ಟಿದ್ದಳು. ಮರುದಿನ ಅದೇ ಪತ್ರ ಬರೆದ ಹುಡುಗ ಅವಳನ್ನು ಕೈ ಹಿಡಿದು ಎಳೆದು ಅವಾಚ್ಯ ಪದಗಳನ್ನಾಡಿದ ಎಂದು ತಿಳಿದು ಆ ಹುಡುಗನ ಮುಖ ಮೂತಿ ನೋಡದೆ ಬಾಯಿಂದ ರಕ್ತ ಸುರಿವಂತೆ ತಳಿಸಿ ಜೈಲಿನ ವಾತಾವರಣ ನೋಡಿ ತಂದೆಯಿಂದ ಸಹಸ್ರಾರ್ಚನೆ ಮಾಡಿಸಿಕೊಂಡಿದ್ದ ಹರ್ಷ. ತನ್ನ ಡಿಗ್ರಿಯ ಕೊನೆಯ ವರ್ಷದ ಫೇರ್ವೆಲ್ ಫಂಕ್ಷನ್ನಿಗೆ ಪರಿಧಿಯನ್ನು ತನ್ನ ಬೈಕ್ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದ. ಕಾಲೇಜಿನಲ್ಲಿ  ಎಲ್ಲರೆದುರು ಅವಳ ಕೈ ಹಿಡಿಕೊಂಡೇ ಓಡಾಡಿದ್ದ ಶಿ ಈಸ್ ಮಾಯ್ ಏಂಜಲ್ ಎಂದೇ ಪರಿಚಯಿಸಿದ್ದ. ಅವನನ್ನು ಮೆಚ್ಚಿದ ಹುಡುಗಿಯರ ಗುಂಪೊಂದು ಪರಿಧಿಯ ಕಂಡು ಹೊಟ್ಟೆ ಉರಿದುಕೊಂಡಿತ್ತು ಅಂದು.  ಗಿಟಾರ್ ಹಿಡಿದು ಸ್ಟೇಜ್ ಏರಿದ ಹರ್ಷ ಈ ಹಾಡು..ನನ್ನವಳಿಗಾಗಿ.. ಎಂದು ಅವಳತ್ತ ನೋಡುತ್ತಲೇ ಹಾಡಲು ಮೊದಲಾಗಿದ್ದ..
   ಜಬ್ ಕೋಯಿ ಬಾತ್ ಬಿಗಡ್ ಜಾಯೆ
   ಜಬ್ ಕೋಯಿ ಮುಷ್ಕಿಲ್ ಪಡ್ ಜಾಯೆ
   ತುಮ್ ದೇನಾ..ಸಾಥ್ ಮೇರಾ..
    ಓ ಹಮ್ ನವಾಬ್..

ಮನೆಗೆ ಬಂದ ನಂತರ ಪರಿಧಿ ಆ ಹಾಡಿನ ಮುಂದಿನ ಸಾಲುಗಳನ್ನು ಅವನಿಗೆ ಮಾತ್ರ ಕೇಳುವಂತೆ ಗುನುಗುನಿಸಿದ್ದಳು..
   ನಾ ಕೋಯಿ ಹೈ..ನಾ ಕೋಯಿ ಥಾ..
   ಜಿಂದಗಿ ಮೇ..ತುಮ್ಹಾರೆ ಸಿವಾ..
   ತುಮ್ ದೇನಾ ಸಾಥ್ ಮೇರಾ....

ಎಲ್ಲವೂ ಸುಗಮವಾಗಿ ಇರುತ್ತಿತ್ತು ಲಲಿತಾ ಆಗಾಗ ಬಂದು ಮನ ಕದಡುವವರೆಗೂ.. ಮನದ ಯಾವುದೋ ಒಂದು ಮೂಲೆಯಲ್ಲಿ ಲಲಿತಾ ಹೇಳಿದ ಮಾತುಗಳು ಆಕೆಗೆ ಚುಚ್ಚುತ್ತಲೇ ಇದ್ದವು. ಅವುಗಳಿಗೆ ವ್ಯತಿರಿಕ್ತವಾಗಿ ಪರಿಧಿ ತಾನು ಡಾಕ್ಟರ್ ಆಗುವ ಕನಸನ್ನು ಹರ್ಷನ ಮುಂದೆ ಹಂಚಿಕೊಂಡಾಗ ಅವಳ ಕನಸಿಗೆ ರೆಕ್ಕೆಯಾಗಿ ಹುಮ್ಮಸ್ಸು ತುಂಬಿ ಅವಳಿಗೆ ಹಾರಲು ಕಲಿಸಿದವನು ಹರ್ಷ. ಆಗಲೂ ಲಲಿತಾ "ಡಾಕ್ಟರ್ ಆಗಿ ಇನ್ನೂ ಎಷ್ಟು ಜೀವ ತಗೋಬೇಕು ಅಂತಿದಿಯೇ..ಅದ್ಯಾರ ಗ್ರಹಚಾರ ಕಾದಿದೆಯೋ ಏನೋ. ನಾನಂತೂ ನಿನ್ನ ಹತ್ರ ಬರಲ್ಲಪ್ಪ" ಎಂದು ಕೊಂಕು ನುಡಿದಾಗ "ಚಿ..ಕ್ಕತ್ತೆ.. ಅವಳ ಹತ್ರ ನೀವು ಬರೋಕೆ ಸಾಧ್ಯಾನೇ ಇಲ್ಲ ಬಿಡಿ, ಯಾಕಂದ್ರೆ ಅವಳು ಮನುಷ್ಯರ ಡಾಕ್ಟರ್ ಆಗ್ಬೇಕು ಅಂತಿದ್ದಾಳೆ, ದನದ ಡಾಕ್ಟರ್ ಅಲ್ಲ.." ಎಂದು ಮಾತಿನ ಚಾಟಿಯಲ್ಲೇ ಅವಳನ್ನು ಜಳಿಸಿದ್ದ. ಮೊದಲ ಆಪರೇಷನ್ ನಲ್ಲಿ  ಹೆದರಿ ದಿಕ್ಕುತಪ್ಪಿ ಡಾಕ್ಟರ್ ಕೆಲಸ ಬೇಡವೆಂದಾಗಲೂ ಗದರಿ ಕೈ ಹಿಡಿದು ಮುಂದಕ್ಕೆ ಎಳೆದುಕೊಂಡು ಹೋಗಿ ಅವಳಲ್ಲಿ ಆತ್ಮ ಸ್ಥೈರ್ಯ ತುಂಬಿದವನು ಹರ್ಷ.

ತನ್ನಿಂದ ಯಾರಿಗೂ ಯಾವ ಕೇಡು ಆಗಬಾರದೆಂಬುದೇ ಅವಳ ಆಶಯ. ಅದರಲ್ಲೂ ಈ ಮನೆಗೆ ತನ್ನವರಿಗೆ ತನ್ನ ಹರ್ಷನಿಗೆ.. ಯಾರೋ ಅರಿಯದವರ ನೋವಿಗೂ ಸ್ಪಂದಿಸುವ ಪರಿಧಿಗೆ ತನ್ನವರ ನೋವು ಹೇಗೆ ಸಹ್ಯವಾದಿತು. ಅದೇ ಭಯದಿಂದಲೇ ಹರ್ಷನ ಜೊತೆಗೆ ನಿಶ್ಚಿತಾರ್ಥದ ವಿಷಯ ಬಂದಾಗ ಅವಳು ಹಿಂಜರಿದಿದ್ದಳು. ಆದರೆ ಹರ್ಷ, 'ನಿನಗೆ ಬೇಡ ಅಂದ್ರೆ ನನಗೂ ಬೇಡ ಬಿಡು, ಜೀವನಪೂರ್ತಿ ಇಬ್ಬರೂ ಹೀಗೆ ಇದ್ದುಬಿಡೋಣ..ಇದೊಂದು ಇತಿಹಾಸ ಆಗಿಹೋಗಲಿ' ಎಂದು ಅವಳನ್ನು ಬಲವಂತ ಮಾಡದೆ ನಕ್ಕು ಸುಮ್ಮನಾಗಿದ್ದ. ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ಹರ್ಷನ ಪ್ರೀತಿಗೆ ಅವಳಿಂದ ಕರಗಿ ಸೋಲದೆ ಇರಲಾಗಲಿಲ್ಲ. ತಾನೂ ಪ್ರೀತಿಸಿದಳು.. ತನಗಿಂತಲೂ ಹೆಚ್ಚಾಗಿ ಪ್ರೀತಿಸಿದಳು.. ಅವನನ್ನು ಪಡೆಯಬೇಕೆಂಬ ಹಟವಿಲ್ಲದೆ ಪ್ರೀತಿಸಿದಳು.. ಅದಕ್ಕಿಂತ ಹೆಚ್ಚಾಗಿ ಆರಾಧಿಸಿದಳು.. ಅವನ ಕ್ಷೇಮಾಭಿವೃದ್ಧಿಗಾಗಿ ಪ್ರತಿದಿನವೂ ತಪಗೈದಿದ್ದಳು. ಜಗತ್ತಿನಲ್ಲಿ ಎಲ್ಲಕ್ಕಿಂತ ಶ್ರೇಷ್ಠವಾದ ಪ್ರೀತಿ ತಾಯಿಯದಂತೆ. ಆದರೆ ತಿಳುವಳಿಕೆ ಇಲ್ಲದ ವಯ್ಯಸಿನಲ್ಲಿ ಕಳೆದುಕೊಂಡ ತಾಯಂದಿರ ಪ್ರೀತಿಗಿಂತ ಮಿಗಿಲಾಗಿತ್ತು ಅವಳಿಗೆ ಎಲ್ಲವನ್ನೂ ಕೊಟ್ಟ ಹರ್ಷನ ಪ್ರೀತಿ.. ಹರ್ಷ ಬರೀ ಅವಳ ಪಾಲಿನ ಪ್ರೀತಿಯಲ್ಲ, ಬರೀ ಜೀವವಲ್ಲ, ಬರೀ ದೈವವಲ್ಲ ಅವಳ ಇಡೀ ಸರ್ವಸ್ವವಾಗಿದ್ದ!!  ಈಗ ಆ ಸರ್ವಸ್ವಕ್ಕೆ ಸಂಚಕಾರ ಬಂದಿತ್ತು. ಮನುಷ್ಯರನ್ನು ಕಳೆದುಕೊಂಡರೆ ದುಃಖಿಸಿ ದೇವರ ಮೊರೆ ಹೋಗಬಹುದೇನೋ ಆದರೆ ದೇವರನ್ನೇ ಕಳೆದುಕೊಂಡ ಮೇಲೆ ಬದುಕಬೇಕಾ.. ಹೀಗೊಂದು ಯೋಚನೆ ತಲೆಗೆ ಬಂದಿದ್ದೆ ತಡ ಏನೋ ದೃಢ ನಿರ್ಧಾರಕ್ಕೆ ಬಂದವಳಂತೆ ಕೂತ ಜಾಗದಿಂದ ಮೆಲ್ಲಗೆ ಕದಲಿದಳು ಪರಿಧಿ. ಕಂಪಿಸುವ ಹೆಜ್ಜೆಗಳನ್ನು ತಡವುತ್ತ ನೇರವಾಗಿ ತನ್ನ ರೂಮಿನ ಡ್ರಾಯರ್ ಬಳಿ ಬಂದು ನಿಂತಿದ್ದಳು.  ಡ್ರಾಯರ್ ತೆಗೆದು ಯಾವುದೋ ವಸ್ತುಗಾಗಿ ಕೈಯಾಡಿಸಿದಳು. ಅದರಲ್ಲಿ ನೈಲ್ಕಟರ್ ಜೊತೆಗಿದ್ದ ಚಿಕ್ಕ ಚಾಕುವನ್ನು ತೆಗೆದು ಕ್ಷಣ ಗಮನಿಸಿ ತನ್ನ ಬಲಗೈಯಲ್ಲಿ ಹಿಡಿದು  ಎಡಗೈಯನ್ನು ಮುಂದೆ ಚಾಚಿದ್ದಳು. ಹರಿತವಾದ ಚಾಕುವಿನ ತುದಿ ಎಡಗೈಯ ನಾಡಿ ಮೇಲೆ ಇಟ್ಟು ಇನ್ನೂ ಬದುಕಬೇಕಾ ಎಂದುಕೊಂಡು ಬಲಗೈ ಜರುಗಿಸಿದಳು. ಹನಿ ರಕ್ತ ವಸರಿತ್ತು.. ಅಂಗೈ ಬೆವೆತಿತ್ತು.. ಹೃದಯದ ಬಡಿತ ಜೋರಾಯಿತು.. "ಇದು ನಿನ್ನ ಹೃದಯವಲ್ಲ, ನನ್ನ ಹೃದಯ. ಇದರ ಪ್ರತಿ ಮಿಡಿತ ನನ್ನದು. ಪ್ರತಿ ಶ್ವಾಸ ನನ್ನದು. ಇದು ಮಿಡಿಯುವವರೆಗೂ ನನ್ನುಸಿರು ನಿನ್ನ ತೊರೆದು ಹೋಗದು..!" ಹರ್ಷನ ಮಾತುಗಳು ಮಾರ್ಧನಿಸಿದ್ದವು. ಕೈಯಲ್ಲಿ ಹಿಡಿದ ಚಾಕುವನ್ನು ಕ್ಷಣದಲ್ಲೇ ಬೀಸಿ ಎಸೆದು ನೆಲಕ್ಕಪ್ಪಳಿಸಿ ಬಿಕ್ಕಿ ಬಿಕ್ಕಿ ಅತ್ತಳು. ಆಗ ಒಡೆದಿತ್ತು ಅವಳ ಮಡುಗಟ್ಟಿದ ದುಃಖದ ಕಡಲು.. ಭೋರ್ಗರೆಯಿತು ಕರಗಿ ಕಂಬನಿಯಾಗಿ ಜರಿಜರಿಯಾಗಿ ದುಮ್ಮಿಕ್ಕಿತ್ತು..ಕಂಗಳಿಂದ.. ಕೆನ್ನೆಯಿಂದ..ಗದ್ದದಿಂದ.. ಕತ್ತಿನಿಂದ..ಹರಿಹರಿದು ಮಡಿಲು ಒದ್ದೆಯಾಯಿತು. "ಯಾಕೋ ಹೀಗೆ ಮಾಡಿದೆ, ಯಾವತ್ತೂ ಬಿಟ್ಟು ಹೋಗಲ್ಲ ಅಂತ ಮಾತು ಕೊಟ್ಟಿದ್ದೆ.. ಈಗ ಮಾತು ಮರೆತು ದೂರ ಹೋದ್ರೆ ನಾ ಹೇಗೋ ಬದುಕಲಿ..." ಅವಳ ಪ್ರಶ್ನೆಗೆ ಉತ್ತರವಾಗಿ "ಸ್ಮೈಲ್ ಪ್ಲೀಸ್.. ಸ್ಮೈಲ್ ಪ್ಲೀಸ್.." ಎಂದು ಹೊಡೆದುಕೊಂಡಿತ್ತು ಹರ್ಷ ಮುಂಬೈಗೆ ಹೋಗುವ ಮುನ್ನ ಅವಳ ರೂಮಿನಲ್ಲಿ ತೂಗು ಹಾಕಿದ ಗೊಂಬೆ ಗಡಿಯಾರ!

"ಇದು ಗಂಟೆಗೊಮ್ಮೆ ಹೀಗೆ ಕೂಗ್ತಿದ್ರೆ ನಾ ಹೇಗೋ ಮಲಗೋದು ಹರ್ಷ.." ಗಲ್ಲಕ್ಕೆ ಕೈಯಾನಿಸಿ ಕೇಳಿದಳು ಅಂದು‌.

"ಮಲಗಬೇಡ್ವೆ.. ನಾ ಬರೋವರೆಗೂ ನನ್ನ ಕನಸು ಕಾಣ್ತಾ ಕಾಯ್ತಾ ಇರು.. ಆದ್ರೆ ನನ್ನ ನೆನಪಲ್ಲಿ ಕುಂಯಾ ಕುಂಯಾ..ಅಂತ ಅಳ್ತಾ ಮಾತ್ರ ಕೂರಬೇಡ, ನೀನು ಅತ್ತರೆ ನಗಿಸೋಕೆ ನಾನು ಮುಂಬೈನಿಂದ ಓಡಿ ಬರೋಕಾಗಲ್ಲ‌. ಅದ್ಕೆ ನಾನು ಬರೋವರೆಗೂ ಈ ಗೊಂಬೆ ಸ್ಮೈಲ್ ಪ್ಲೀಸ್ ಹೇಳ್ತಾನೇ ಇರುತ್ತೆ.. ನೀನು ನಗ್ತಾ ನಗ್ತಾ ಇರ್ತಿಯಾ ಅಷ್ಟೇ.." ಎಂದು ಗಡಿಯಾರ ನೋಡುತ್ತ ನಿಂತವಳ ಕೆನ್ನೆಗೆ ಗಟ್ಟಿಯಾಗಿ ಮುತ್ತಿಟ್ಟಿದ್ದ. ಅವಳು ಮುನಿಸಿನಿಂದ ದುರುಗುಟ್ಟಿ ಅವನತ್ತ ನೋಡಲು "ಬೇಡ್ವಾ.. ಬಿಡು, ವಾಪಸ್ ಕೊಟ್ಬಿಡು ಹಾಗಾದ್ರೆ.." ಎಂದು ಕೆನ್ನೆ ಮುಂದೆ ಮಾಡಿದ್ದ.ಇವಳ ಮುನಿಸು ಹೂ ನಗುವಾಗಿ ನಾಚಿ ಅವನ ಕೆನ್ನೆ ಗಿಲ್ಲಿ ಓಡಿ ಹೋಗಿದ್ದಳು.

ಗಂಟೆಗೊಮ್ಮೆ ಎಷ್ಟು ಗಂಟೆಯಾಗಿರುತ್ತದೆಯೋ ಅಷ್ಟು ಬಾರಿ 'ಸ್ಮೈಲ್ ಪ್ಲೀಸ್' ಎನ್ನುವ ಗೊಂಬೆ ಆಗ ಸುಮಾರು ಹನ್ನೆರಡು ಬಾರಿ ಸ್ಮೈಲ್ ಪ್ಲೀಸ್ ಹೇಳಿತ್ತು. ಅವನ ನೆನಪುಗಳಿಗೂ ಅವಳ ನೋವು ಕಣ್ಣೀರು ಸಹ್ಯವಾಗದಂತೆ.

ತನ್ನ ಎದೆಗೊಮ್ಮೆ ಕೈಯಿಟ್ಟು ಕೇಳಿಕೊಂಡಳು "ಏನಿಲ್ಲದ ನನ್ನ ಬಾಳಲ್ಲಿ ಏನೆಲ್ಲಾ ಕೊಟ್ಟು ಬಿಟ್ಟೆ ಗೆಳೆಯ.., ತಾಯಿಯಂತೆ ವಾತ್ಸಲ್ಯ ನೀಡಿದೆ.. ತಂದೆಯ ಕಾಳಜಿ ತೋರಿದೆ.., ಗುರಿಯೆಡೆಗೆ ಸಾಗದೆ ಹೆಜ್ಜೆ ನಡುಗಿದಾಗ ಆತ್ಮೀಯನಾಗಿ ಹುರಿದುಂಬಿಸಿದೆ.. ಕಾಡಿಸಿದೆ ಸತಾಯಿಸಿದೆ.. ಮುನಿಸಿಕೊಂಡಾಗೆಲ್ಲ ರಮಿಸಿದೆ ನಗಿಸಿದೆ..ಮನಸ್ಸು ದೋಚಿದೆ.. ನಿಸ್ಸಾರ ಬದುಕನ್ನು ನಿನ್ನ ತುಂಬು ಪ್ರೀತಿಯ ಪಾಕದಿಂದ ಗೆಲುವಾಗಿಸಿದೆ.. ಈ ನನ್ನ ಪಾಲಿನ ಬದುಕನ್ನು ಬದುಕಿನಲ್ಲಿ ಉಳಿಸಿಕೊಳ್ಳಲಾಗದೆ ಹೋದೆನೆಂಬ ನೋವೊಂದು ಕ್ಷಣವೂ ನಿಲ್ಲದೆ ನೋಯಿಸುತ್ತಿದೆ ಕಣೋ.. ಬದುಕು ಮುಗಿಸಿಕೊಂಡು ನಿನ್ನೊಂದಿಗೆ ನಡೆದು ಬಿಡಲೇ ಎನ್ನಿಸುತ್ತಿದೆ.. ಆದರೆ ನೀನಾಡಿದ ಆ ಮಾತುಗಳೇ ನನ್ನ ಇನ್ನೂ ಬದುಕಿಸಿವೆ "ಈ ಹೃದಯ ನನ್ನದಲ್ಲ ನಿನ್ನದು.. ಇದರ ಪ್ರತಿ ಮಿಡಿತ ನಿನ್ನದು..ಪ್ರತಿ ಶ್ವಾಸ ನಿನ್ನದು.."  ನನ್ನ ನಾನು ಕೊಲ್ಲಬಲ್ಲೆನೇನೋ!! ನಿನ್ನ ಹೇಗೋ ಕೊಲ್ಲಲಿ.. ಹರ್ಷ..ಈ ಹೃದಯದ ಮಿಡಿತ ಇನ್ನೂ ನಿರತವಾಗಿದೆ, ನೀನು ನನ್ನ ಬಿಟ್ಟು ಹೋಗೋ ಹಾಗಿಲ್ಲ.." ದುಃಖಿಸಿ ಬಿಕ್ಕುವ  ಒತ್ತರಿಸಿ ಬಂದ ಅಳುವಿನ ಮಧ್ಯದಲ್ಲೂ ಢವಗುಟ್ಟುವ ಹೃದಯದ ಬಡಿತ ಪಿಸುಮಾತಲ್ಲಿ ಹೇಳುತ್ತಲೇ ಇತ್ತು.. ಅಳಬೇಡವೆ ಮುದ್ದು.. ನಾನಿನ್ನೂ ಬದುಕಿದ್ದೀನಿ.. ಬಾ ನನ್ನ ಹುಡುಕು....

ಮುಂದುವರೆಯುವುದು..

                  ⚛⚛⚛⚛⚛⚛



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...