"ಹಾಯ್ ಮಿಸೆಸ್ ಆನ್ಯಾ..ಎಲ್ಲಿ ನಿಮ್ಮ ಫ್ರೆಂಡ್ ಡಾ. ಪರಿ..ಇವತ್ತು ಟ್ರೀಟ್ ಕೊಡಸ್ಬೇಕು ಅಂದಿದ್ದಕ್ಕೆ ಎಲ್ಲೂ ಪತ್ತೆನೇ ಇಲ್ಲ ಮೇಡಮ್ಮು.. ಹರ್ಷನ ಜೊತೆಗೆ ಇನ್ನೂ ಡ್ಯೂಯೆಟ್ ಹಾಡ್ತಿದಾರಾ ಹೆಂಗೇ.." ಕ್ಯಾಂಟೀನ್ ನಲ್ಲಿ ಟೇಬಲ್ ಮುಂದಿದ್ದ ಕುರ್ಚಿಯನ್ನು ಸರಿಸಿ ಕುಳಿತುಕೊಳ್ಳುತ್ತಾ ಕೇಳಿದ ಪ್ರಸನ್ನ.
"ಯಾವ ಲೋಕದಲ್ಲಿ ಇರ್ತಿರೀ ನೀವು, ಇನ್ನೂ ವಿಷಯ ಗೊತ್ತಿಲ್ವ.. ಪಾಪ ಪರಿ ವುಡ್ ಬಿ ಹರ್ಷ ಇದ್ರಲ್ಲ.. ನಿನ್ನೆ ಆಕ್ಸಿಡೆಂಟ್ ನಲ್ಲಿ ತೀರಿ ಹೋದರಂತೆ.." ಎಂದು ಹೇಳಿದಳು ಎದುರು ಕುಳಿತಿದ್ದ ಡಾ.ಆನ್ಯಾ.
"ವ್ಯಾಟ್..!!ಓಹ್ ನೋ.. ನಿನ್ನೆ ತಾನೇ ಹರ್ಷ ಮುಂಬೈನಿಂದ ಬರ್ತಿದ್ದಾನೆ ಅಂತ ಹೇಳಿ ಹೋಗಿದ್ರು..ಎಷ್ಟು ಖುಷಿಯಿಂದ ಓಡಾಡ್ತಾ ಇದ್ರು..ಇದ್ದಕ್ಕಿದ್ದಂತೆ, ಛೇ.. ಎಂಥ ಅನ್ಯಾಯ.." ಎಂದು ಬೇಜಾರಿನಲ್ಲಿ ಆರ್ಡರ್ ಮಾಡಿದ ಊಟ ಕ್ಯಾನ್ಸಲ್ ಮಾಡಿ ತನ್ನ ಡ್ಯೂಟಿಯನ್ನು ಕೆಲಸಮಯ ತನ್ನ ಕೋಲಿಗ್ ಗೆ ವಹಿಸಿ ಪರಿಧಿ ಮನೆ ಕಡೆಗೆ ಬೈಕ್ ಓಡಿಸಿದ್ದ ಪ್ರಸನ್ನ.
ಬೃಂದಾವನದ ಎದುರು ಬೈಕ್ ನಿಲ್ಲಿಸಿದ ಪ್ರಸನ್ನ ಸುತ್ತಲೂ ಆವರಿಸಿದ ಅಕ್ಷರಶಃ ಸ್ಮಶಾನ ಮೌನವನ್ನು ಗಮನಿಸಿ ದೀರ್ಘ ನಿಟ್ಟುಸಿರು ಬಿಟ್ಟು ಒಳಗಡಿ ಇರಿಸಿದ. ಗೇಟಿನಿಂದ ಒಳಗೆ ಬಂದ ಪ್ರಸನ್ನನಿಗೆ ಮೊದಲು ಕಂಡವನೇ ಗೋಪಿ. "ಹಾಯ್ ನಾನು ಡಾ.ಪ್ರಸನ್ನ. ಪರಿ ಅವರ ಸಹೋದ್ಯೋಗಿ" ಪರಿಚಯಿಸುತ್ತ ಕೈ ಮುಂದೆ ಮಾಡಿದ.
"ನಾನು ಗೋಪಿ, ಮನೆಕೆಲಸದವನು" ಎಂದು ತುಸು ಅನುಮಾನ ಸಂಕೋಚದೊಂದಿಗೆ ಕೈ ಕುಲುಕಿದ ಗೋಪಿ.
"ಓಹ್.. ನಾವಿಬ್ಬರೂ ಒಂದೇ ಹಾಗಾದರೆ..ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿನಿ ನೀನು ಮನೇಲಿ ಕೆಲಸ ಮಾಡ್ತಿಯಾ ಅಷ್ಟೇ ವ್ಯತ್ಯಾಸ.." ಎಂದು ನಕ್ಕು ಆತ್ಮೀಯತೆಯಿಂದ ಮಾತನಾಡಿ ಪರಿಧಿಯ ಬಗ್ಗೆ ಕೇಳಿದ.
"ಅಕ್ಕಾವ್ರು ಮೇಲ್ಗಡೆ ರೂಂನಲ್ಲಿದ್ದಾರೆ. ಹರ್ಷಣ್ಣನ್ನ ತುಂಬಾನೇ ಹಚ್ಕೊಂಡಿದ್ರು ಅವರ ವಿಷಯ ಕೇಳಿ ನಿನ್ನೆಯಿಂದ ಯಾರ ಜೊತೆಗೂ ಮಾತಾಡ್ತಿಲ್ಲ ಹನಿ ನೀರು ಕುಡಿದಿಲ್ಲ ಗರಬಡಿದವರ ಹಾಗೆ ಕೂತು ಬಿಟ್ಟಿದ್ದಾರೆ. ಡಾಕ್ಟ್ರೆ ನೀವಾದ್ರೂ ಅವ್ರನ್ನ ಸ್ವಲ್ಪ ಸಮಾಧಾನ ಮಾಡಿ" ಎಂದು ಕನಿಕರದಿಂದ ಹೇಳಿದ್ದ ಗೋಪಿ. ಅವನ ಭುಜ ತಡವಿ ಬೆರಳಲ್ಲಿ ಬೈಕ್ ಕೀ ತಿರುಗಿಸುತ್ತ ವಿಜಲ್ ಹಾಕುತ್ತ ಮುಂದೆ ಸಾಗಿದ್ದ ಪ್ರಸನ್ನ. ಕೆಲಸದವನೆಂಬ ಭೇದವಿಲ್ಲದೆ ಆತ್ಮೀಯವಾಗಿ ಮಾತಾಡಿಸಿದ, ಸೂತಕದ ಮನೆಯಲ್ಲಿ ಸೂಕ್ಷ್ಮತೆ ಇಲ್ಲದೆ ನಗುತ್ತ ಹೋದ ಪ್ರಸನ್ನನ ಬಗ್ಗೆ ವಿಚಿತ್ರವಾದ ಮಿಶ್ರ ಭಾವನೆಗಳು ವ್ಯಕ್ತವಾದವು ಗೋಪಿಯ ಮುಖದಲ್ಲಿ..
ಡಾ.ಪ್ರಸನ್ನ ಯಾವುದೇ ಗಂಭೀರ ವಿಷಯವಾಗಿರಲಿ ಅದರ ಬಗ್ಗೆ ಹೆಚ್ಚು ಸಮಯ ತಲೆ ಕೆಡಿಸಿಕೊಳ್ಳುವದಿಲ್ಲ. ಆದದ್ದು ಆಗಿ ಹೋಗಿದೆ ಆ ಸಮಯ ನಮ್ಮ ಕೈಯಲಿಲ್ಲ.ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಸಾಧ್ಯವಿದ್ದರೆ ಸಮಸ್ಯೆಯನ್ನು ಪರಿಹರಿಸಲು ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಅವನ ಗಮನ ಏಕಾಗ್ರತೆ. ಅವನ ಈ ಸ್ವಭಾವವೇ ಕೆಲವರಿಗೆ ನೈಪಥ್ಯ.
ಹೊರಗಿನ ಲೌಂಜ್ ನಲ್ಲಿ ಏನೋ ಚರ್ಚಿಸುತ್ತ ಕುಳಿತಿದ್ದ ವಿನಾಯಕ್ ಮತ್ತು ಅಶ್ವಥ್ಥರು ಡಾ.ಪ್ರಸನ್ನ ಬರುವುದನ್ನು ಕಂಡು ಮಾತು ನಿಲ್ಲಿಸಿ ಅವನತ್ತ ನೋಡುತ್ತಿದ್ದರು. ಮಾತಾಡಿಸಲು ಬಂದಿದ್ದ ಇನ್ನೂ ಕೆಲವು ಜನರು ಇವನ ಮುಂದೆಯೇ ಎದ್ದು ಹೊರಟಿದ್ದರು. ವಿನಾಯಕರ ಬಳಿ ಬಂದ ಪ್ರಸನ್ನ ತನ್ನ ಪರಿಚಯವನ್ನು ಹೇಳಿಕೊಂಡ. ವಿನಾಯಕರು ತಮ್ಮ ಎದುರಿನ ಕುರ್ಚಿ ಕಡೆಗೆ ಕೈ ಮಾಡುತ್ತ ಕುಳಿತುಕೊಳ್ಳಿ ಎಂದರು. ಪ್ರಸನ್ನ ಮೆತ್ತೆಯ ಮೇಲೆ ಕುಳಿತುಕೊಳ್ಳುತ್ತಾ "ಅಂಕಲ್..ಕ್ರಿಮಿಷನ್ ಎಲ್ಲಾ.." ಎಂದು ರಾಗ ಎಳೆದಾಗ "ಎಲ್ಲಾ ನಿನ್ನೆ ಮುಗಿತಪ್ಪ..ಮಕ್ಕಳು ತಂದೆ ತಾಯಿಗೆ ತರ್ಪಣ ಕೊಡಬೇಕಾದ್ದು ಧರ್ಮ. ನನ್ನ ಮಗ ಆ ಕೆಲಸವನ್ನೂ ನನ್ನ ಕೈಯಲ್ಲೇ ಮಾಡಿಸಿಬಿಟ್ಟ ನೋಡು.." ಎಂದರು ತಾಪದಲ್ಲಿ. ಅಶ್ವತ್ಥರು ಮಗನ ವ್ಯಥೆ ನೋಡಲಾಗದೆ ಎದ್ದು ಒಳನಡೆದರು.
"ಸಾವು ಯಾರ ಕೈಯಲ್ಲಿದೆ ಅಂಕಲ್.. ಜಾತಸ್ಯ ಮರಣಂ ಧ್ರುವಂ ಹುಟ್ಟಿದ್ದು ಸಾಯಲೇಬೇಕು, ಇಲ್ಲಿ ಯಾರು ಶಾಶ್ವತರಲ್ಲ, ಯಾವುದೂ ಶಾಶ್ವತವಲ್ಲ ಅಂದಮೇಲೆ ದುಃಖ ಪಡೋದು ಯಾಕೆ, ಸಾವು ದೇಹಕ್ಕೆ ಮಾತ್ರ ನಿರಾಕಾರ ಆತ್ಮ ಅನವರತವಾಗಿ ನಮ್ಮ ನಡುವೆ ಇದ್ದೇ ಇರುತ್ತೆ.. ಕಳೆದು ಹೋಗಿದ್ದರ ಬಗ್ಗೆನೇ ಚಿಂತಿಸುತ್ತ ಕುಳಿತರೆ ನಮ್ಮ ಮುಂದಿರುವ ಭವಿಷ್ಯ ಕೂಡ ಕತ್ತಲಾಗಿ ಕಾಣಿಸುತ್ತೆ. ಕಾಲದ ಜೊತೆಗೆ ನಾವು ಓಡ್ತಾ ಇರಬೇಕು, ಉತ್ಸಾಹದಿಂದ ಮುನ್ನುಗ್ಗುತ್ತಾ ಇರಬೇಕು ಅದೇ ಜೀವನ.." ತನ್ನ ಗತವನ್ನು ತಲೆಯಲ್ಲಿಟ್ಟುಕೊಂಡು ಸರಾಗವಾಗಿ ಹೇಳಿ ತುಂಬಾ ಮಾತಾಡಿಬಿಟ್ಟೆ ಅನ್ನಿಸಿ ಸುಮ್ಮನಾದವನಿಗೆ ಎದುರಿನ ಟೀಪಾಯಿ ಮೇಲೆ 'ಎಂ.ಆರ್ ಹಾಸ್ಪಿಟಲ್' ಹೆಸರಿನ ಫೈಲ್ ಕಾಣಿಸಿತು. ಈ ಹೆಸರು ಯಾರದೋ ಬಾಯಲ್ಲಿ ಕೇಳಿದ ಹಾಗಿದೆಯಲ್ಲ ಎಂದು ತೆಗೆದುಕೊಳ್ಳಲು ಕೈ ಮುಂದೆ ಚಾಚಿದ. ಅಷ್ಟರಲ್ಲಿ
"ಅವು.. ಹರ್ಷನ ಮೆಡಿಕಲ್ ಆ್ಯಂಡ್ ಪೋಸ್ಟ್ ಮಾರ್ಟಮ್ ರಿಪೋರ್ಟ್ಸ್! ಬೇಗ ಏರ್ಪೋರ್ಟ್ ಬರೋಕೆ ಅಂತ ಒನ್ ವೇ ರಸ್ತೆಯಲ್ಲಿ ಬಂದಿದ್ದಾನೆ ಅನ್ಸುತ್ತೆ.. ಎದುರಿಗೆ ಬಂದ ಟ್ರಕ್ ಬ್ರೇಕ್ ತಪ್ಪಿ ಇವರ ಟ್ಯಾಕ್ಸಿಗೆ ಢಿಕ್ಕಿ ಹೊಡೆದಿದೆ. ಟ್ಯಾಕ್ಸಿ ಡ್ರೈವರ್ ಅಲ್ಲೇ ಕೊನೆಯುಸಿರೆಳೆದನಂತೆ. ಹರ್ಷನ್ನ ಯಾರೋ ಆಸ್ಪತ್ರೆಗೆ ಸೇರಿಸಿದ್ದಾರೆ ಆದರೆ ಬ್ರೇನ್ ಇಂಜ್ಯೂರ್ ಆಗಿ.." ಮುಂದೆ ಹೇಳಲಾಗದೆ ಕಣ್ಣು ಉಜ್ಜಿಕೊಂಡು "ನನ್ನ ಮಗನಿಗೆ ಯಾವಾಗಲೂ ಆತುರ ಜಾಸ್ತಿ.. ಎಷ್ಟು ಸಲ ಹೇಳಿದ್ದಿನಿ, ಡ್ರೈವಿಂಗ್ ಮೇಲೆ ಹಿಡಿತ ಇರಲಿ ಅಂತ..ಕೇಳ್ತಾನೆ ಇರಲಿಲ್ಲ.." ಮಗನದಲ್ಲದ ತಪ್ಪಿಗೂ ಅವನನ್ನ ದೂರುತ್ತಿದ್ದ ವಿನಾಯಕರನ್ನು ನೋಡಿ "ಪ್ರೀತಿಯನ್ನೂ ಸಿಟ್ಟಿನಲ್ಲಿ ವ್ಯಕ್ತಪಡಿಸೋದು ತಂದೆ ಮಾತ್ರವಂತೆ..ಇಂತಹ ತಂದೆ ತನಗೂ ಇದ್ದಿದ್ದರೆ ತಾನು ಮಾಡುವ ಆತುರಾತುರ ಕೈಂಕರ್ಯಕ್ಕೆ ಅದೆಷ್ಟು ಸಲ ಗದರಿ ಬುದ್ದಿ ಹೇಳುತ್ತಿದ್ದರೋ..ತನಗೆ ಹೇಳುವವರು ಕೇಳುವವರೂ.. ಕೊನೆಗೆ ಸತ್ತರೂ ಅಳುವವರೂ ಯಾರೂ ಇಲ್ಲ" ಅಂದುಕೊಂಡ ಪ್ರಸನ್ನನಿಗೆ ನನಗೂ ಇಂತಹ ತಂದೆ ಇರಬೇಕಿತ್ತು ಎನಿಸಿ ಮನಸ್ಸು ಚುರ್ ಎಂದಿತು.
"ಸಮಾಧಾನ ಮಾಡ್ಕೊಳ್ಳಿ ಅಂಕಲ್..ಈಗ ಎಲ್ಲರಿಗೂ ನೀವೇ ಧೈರ್ಯ ಹೇಳಬೇಕಾದವರು, ನೀವು ಕುಗ್ಗಬಾರದು.. ಅವರ ಭುಜ ತಟ್ಟಿದ.
" ನೀನು ಹೋಗುಪಾ ಪರಿನಾ ಮಾತಾಡಿಸು. ತುಂಬಾ ನೊಂದಿದಾಳೆ.. ಆ ಮಗು ಏನು ಪಾಪ ಮಾಡಿತ್ತೋ ಏನೋ ವಿಧಿ ಪದೇಪದೇ ಅವಳಿಗೆ ಅನ್ಯಾಯ ಮಾಡ್ತಾನೆ ಇದೆ.. ಗೋಪಿ ಇವರನ್ನ ಪರಿ ರೂಮಿಗೆ ಕರ್ಕೊಂಡು ಹೋಗೋ.." ಆದೇಶವಿತ್ತರು. ಪ್ರಸನ್ನ ಕೈಯಲ್ಲಿ ಹಿಡಿದು ಮಾತಿನ ಭರದಲ್ಲಿ ನೋಡದೆ ಹಾಗೇ ಇಟ್ಟ ರಿಪೋರ್ಟ್ ಫೈಲು ಅವನು ಎದ್ದು ಹೋಗುವುದನ್ನೇ ನೋಡುತ್ತಿತ್ತು ಅನಾಥವಾಗಿ..
ಪ್ರಸನ್ನ ವಿಶಾಲವಾದ ಒಳಗಿನ ಹಾಲ್ ಗೆ ಬರುತ್ತಿದ್ದಂತೆ ಹಾಲ್ ನ ಎಡಬದಿಗೆ ತುಂಬಾ ರಿಚ್ ಅನ್ನಿಸಿಕೊಳ್ಳೊ ಮಹಿಳೆಯರ ಗುಂಪು ಕಂಡಿತು. ಪ್ರಸನ್ನ ಬಂದ ತಕ್ಷಣ ಇಡೀ ಸ್ತ್ರೀ ಸಮೂಹ ಅವನನ್ನೊಮ್ಮೆ ದಿಟ್ಟಿಸಿ ನೋಡಿ ಮತ್ತೆ ತಮ್ಮ ಮಾತಿನ ದಾಳಿಯಲ್ಲಿ ಮುಂದುವರೆದಿತ್ತು. ಅವರ ಮಧ್ಯದಲ್ಲಿ ಸಮಾಧಾನದ ಮಾತು ಕೇಳುತ್ತ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಿದ್ದವರೇ ಹರ್ಷನ ತಾಯಿ ಎಂದು ಊಹಿಸಿದ. ಮಗನ ಅಗಲಿಕೆಗೆ ತತ್ತರಿಸಿದ ತಾಯಿ ಜೀವ ಒಂದೇ ರಾತ್ರಿಯಲ್ಲಿ ಕೃಶಿಸಿಹೋಗಿದ್ದರು. "ಅಮ್ಮಾ, ಏನಾದರೂ ತಿಂದಿದಾರಾ..?" ಎಂದು ಪ್ರಸನ್ನ ಕೇಳಿದ್ದಕ್ಕೆ ತಲೆಯಲ್ಲಾಡಿಸಿ ಇಲ್ಲವೆಂದ ಗೋಪಿ. "ಹೋಗಿ ಬೇಗ ಅಡಿಗೆ ಮಾಡು..ಅವರಿಗೆ ಊಟ ಮಾಡಿಸೇ ಹೋಗೋದು ನಾನು" ನಿರ್ಧರಿಸಿದ್ದ. ಹರ್ಷನ ತಾಯಿಯವರೊಂದಿಗೆ ಮಾತಾಡಲು ಹವಣಿಸಿ ಅಲ್ಲಿಯೇ ಒಂದೆರಡು ನಿಮಿಷ ನಿಂತವನಿಗೆ ಹೈ ಸೊಸೈಟಿ ಜನಗಳ ಕ್ಷುಲ್ಲಕ ಕುಹಕ ಮಾತುಗಳನ್ನು ಕೇಳಲಾಗದೆ ಹೆಜ್ಜೆ ಮುಂದೆ ಕಿತ್ತಿಟ್ಟಿದ್ದ. "ಪರಿ ಕಾಲ್ಗುಣವೇ ಸರಿಯಿಲ್ಲವಂತೆ ಸುಲೋಚನ.. ನೀನು ಅವಳನ್ನು ಸೊಸೆ ಅಂತ ಮನೆಗೆ ತಂದಿಟ್ಟುಕೊಂಡದ್ದೆ ತಪ್ಪು ನೋಡು.." ಬೇಡ ಬೇಡವೆಂದರೂ ಅವರ ಮಾತುಗಳು ಕಿವಿಗೆ ಬೀಳುತ್ತಲೇ ಇದ್ದವು. ಅವನು ಮುಂದೆ ನಡೆದು ಮೆಟ್ಟಿಲೇರುತ್ತ 'ಚಿಕ್ಕ ಇರುವೆಗೂ ಕರುಣೆ ತೋರಿಸೋ ಹುಡುಗಿ ಪರಿಧಿ..ಅವಳ ಬಗ್ಗೆ ಎಂತೆಂಥ ಮಾತುಗಳು..ಥೂ ಹಾಳು ಪ್ರಪಂಚ ಸಾಂತ್ವನದ ಮುಖವಾಡ ಹಾಕಿಕೊಂಡು ಬಂದ ಹಾಳು ಮುಳ್ಳುಗಳಿವು.. ಗಾಯದ ಮೇಲೆ ಮತ್ತಷ್ಟು ಗಾಯ ಮಾಡಿ ಹೋಗುತ್ತವೆ' ಎಂದು ಧಿಕ್ಕರಿಸುತ್ತ ಮೆಟ್ಟಿಲೇರಿದ. ಗೋಪಿ ಹೇಳಿದ್ದು ಎಡಗಡೆ ಎಂದು ಆದರೆ ಬಲಗಡೆ ರೋಮಿನಲ್ಲಿ ಜೋರಾಗಿ ಅಳುವ ದನಿ ಕೇಳಿ ಅತ್ತ ಹೋದ ಪ್ರಸನ್ನ...
ಕೋಣೆಯಲ್ಲಿ ಯಾರೂ ಕಾಣದಿದ್ದರೂ ಅಲ್ಲಿ ಅಲಂಕರಿಸಿದ್ದ ರಾಶಿ ಟೆಡ್ಡಿ ಬೇರ್, ಅಲಂಕಾರಿಕ ವಸ್ತುಗಳನ್ನು ನೋಡಿ ಗೊತ್ತಾಗಿತ್ತು ಇದು ಟೀನೇಜ್ ಹುಡುಗಿಯ ರೂಂ ಎಂದು. ಧ್ವನಿಯನ್ನು ಅರಸಿ ಮಂಚದ ಪಕ್ಕಕ್ಕೆ ಹೋಗಿ ನೋಡಿದ ಪ್ರಸನ್ನನಿಗೆ ಮಂಚದ ಒಂದು ಮೂಲೆಯ ಕೆಳಗೆ ಮಂಚದ ಕಾಲು ಹಿಡಿದುಕೊಂಡು ಅಳುತ್ತಿದ್ದ ಹರಿಣಿ ಕಾಣಿಸಿದ್ದಳು. ಪ್ರಸನ್ನ ಅವಳ ಬಳಿ ಹೋಗಿ ಮೃದುವಾಗಿ ತಲೆ ತಡವಿದ. ತಲೆ ಎತ್ತಿ ಮೇಲೆ ನೋಡಿದ ಹರಿಣಿ ಅಣ್ಣಾ.. ಎಂದು ಕೂಗಿ ಅಲ್ಲವೆಂದು ತಿಳಿದು ಮತ್ತೆ ಕಣ್ಣೀರಾದಳು. ಪ್ರಸನ್ನ ಅವಳ ಮುಂದೆ ಮೊಣಕಾಲುರಿ ಕುಳಿತು "ನನಗೆ ನಿನ್ನ ಅಣ್ಣ ಆಗೋ ಆಸೆನೂ ಇಲ್ಲ ಬಿಡು. ಆದರೆ ಇಷ್ಟು ಮುದ್ದಾಗಿರೋ ಕ್ಯೂಟ್ ಹುಡುಗಿಗೆ ಬಾಯ್ ಫ್ರೆಂಡ್ ಆಗಬಲ್ಲೇ.." ಎಂದು ಎರಡು ಕೆನ್ನೆ ಮುದ್ದಾಗಿ ಹಿಂಡಿದ. ಅವಳ ಅಳು ನಿಲ್ಲಲಿಲ್ಲ. 'ಅಳಬಾರದು ಕಣೋ.. ಅತ್ತರೆ ನೀನು ಚೂರು ಚೆನ್ನಾಗಿ ಕಾಣೋದಿಲ್ಲ ಗೊತ್ತಾ..'
"ಅ..ಣ್ಣಾ ಕೂ..ಡ ಹೀಗೆ ಹೇಳ್ತಿದ್ದ.." ದುಃಖಿಸುತ್ತ ಹೇಳಿದಳು.
"ಅದಕ್ಕೆ ಮತ್ತೆ ಹರ್ಷನಿಗೆ ಬೇಜಾರಾಗುತ್ತಲ್ವ ನೀನು ಅತ್ತರೆ.. ಕಣ್ಣೊರೆಸಿಕೊ ಎಲ್ಲಿ ನಕ್ಕರೆ ಹೇಗೆ ಕಾಣ್ತಿಯಾ ನೋಡೋಣ" ಎಂದ. ಅವಳು ನಗಲಿಲ್ಲ. "ನೀ ಹೀಗೆಲ್ಲ ಅಳ್ತಾ ಇದ್ರೆ ಮೇಲೆ ಸ್ವರ್ಗದಲ್ಲಿ ದೇವರ ಜೊತೆ ಮೀಟಿಂಗ್ ನಲ್ಲಿರೋ ಹರ್ಷನಿಗೆ ಡಿಸ್ಟರ್ಬ್ ಆಗುತ್ತೆ. ನೋಡು... ಯೋಚನೆ ಮಾಡು" ಎಂದಾಗ ಅವನ ಮುಖವನ್ನು ದಿಟ್ಟಿಸಿ ನೋಡಿ
"ದೇವರ ಜೊತೆ ಮೀಟಿಂಗ್ ಆ.. "ಕೇಳಿದಳು ಕುತೂಹಲದಿಂದ
"ಹ್ಮೂ.. ಮತ್ತೆ, ಹೊಸದಾಗಿ ಯಾವ ಜನ್ಮ ಬೇಕು ಅಂತ ಕೇಳ್ತಾನೆ ದೇವ್ರು.. ಹರ್ಷ ಎಲ್ಲಿ ಯಾರತ್ರ ಹೋಗಬೇಕು ಅಂತಾನೋ ಅಲ್ಲಿಗೆ ಪ್ಲೇಸಿಂಗ್ ಮಾಡಿ ಬಿಡ್ತಾರೆ ಈಗ ನನ್ನದು ಟ್ರಾನ್ಸ್‌ಫರ್ ಆಗಿ ನಾನು ಇಲ್ಲಿಗೆ ಬಂದಿದೀನಲ್ಲ ಹಾಗೆಯೇ.. ಸೋ ಸಿಂಪಲ್!!"
" ಸ್ವರ್ಗದಲ್ಲಿ ಹೀಗೆಲ್ಲ ಇರುತ್ತಾ? ನಿಮಗೆ ಹೇಗೆ ಗೊತ್ತು?"
" ಹ್ಮ್ನ.. ನಮ್ಮ ಅಪ್ಪಮ್ಮ ಕನಸಲ್ಲಿ ಬಂದು ಹೇಳಿದರು. ನಾನು ಚಿಕ್ಕವನಿದ್ದಾಗಲೇ ಅವರು ಸ್ವರ್ಗಕ್ಕೆ ಹೋಗಿಬಿಟ್ಟರಾ, ನಾನು ನಿನ್ನ ಹಾಗೆ ಅಳ್ತಾ ಕೂತು ಮಲಗಿಬಿಟ್ಟೆ! ಆಗ ಅವರು ಕನಸಲ್ಲಿ ಬಂದು ಹೇಳಿದ್ರು, ಅಳಬೇಡ ಮಗು.. ದೇವರ ಜೊತೆಗೆ ಮೀಟಿಂಗ್ ಬಂದಿದೀವಿ ಅರ್ಜೆಂಟಾಗಿ ಬೇರೆ ಯಾರಿಗೋ ನಮ್ಮ ಅವಶ್ಯಕತೆ ಇದೆ ಅದಕ್ಕೆ ದೇವರು ನಮ್ಮನ್ನು ಮೀಟಿಂಗ್ ಕರ್ದೀದಾನೆ. ನೀನು ತುಂಬಾ ಧೈರ್ಯವಂತ ಅಲ್ವಾ ನೀನು ನಿನ್ನ ಜೀವನ ಚೆನ್ನಾಗಿ ನಿಭಾಯಿಸ್ತಿಯ. ತುಂಬಾ ಓದಿ ದೊಡ್ಡ ಡಾಕ್ಟರ್ ಆಗಬೇಕು ಅಂತ ಹೇಳಿ ಮುದ್ದು ಮಾಡಿ ಹೋದ್ರು. ಅವಾಗಿಂದ ನಾನು ಅಳೋದೆ ಇಲ್ಲ ಗೊತ್ತಾ!! ಇನ್ಮುಂದೆ ನೀನು ಅಳಕೂಡದು! " ಕಣ್ಣೊರೆಸಿದ.
"ಸ್ವರ್ಗದಲ್ಲಿ ಎಲ್ಲರೂ ಹೇಗಿರ್ತಾರೆ "
"ತಿನ್ಕೊಂಡು ಉಂಡ್ಕೊಂಡು ರಂಭೆ ಊರ್ವಶಿ ಜೊತೆ ಬಿಂದಾಸ್ಸಾಗಿರ್ತಾರೆ.. ನೀನೇ ಸುಮ್ಮನೆ ಅಳುಮುಂಜಿ ತರಾ ಅಳ್ತಾ ಕೂತಿದ್ದಿಯಾ! ಬೇಗ ಎದ್ದು ಸ್ನಾನ ಮಾಡಿ ಫ್ರೆಶ್ ಆಗಿ ಬಾ ಇನ್ನೂ ಮಾತಾಡೋಣ" ಎಂದು ಹೇಳಿ ಅವಳನ್ನು ಎಬ್ಬಿಸಿ ಬಾತರೂಂಗೆ ಕಳಿಸಿ ಪರಿಧಿ ಕೋಣೆ ಕಡೆಗೆ ಬಂದ.
ಕೋಣೆಯಲ್ಲಿ ನಿಶ್ಯಬ್ದ ಆವರಿಸಿತ್ತು ದೊಡ್ಡ ಮಂಚದ ತುಂಬಾ ಹರ್ಷನ ಫೋಟೋ ನಗುತ್ತಿದ್ದವು ಈ ನಗು ಮೊಗ ಇನ್ನೆಂದು ಕಾಣಲಾಗದಲ್ಲ ಎಂದು ಮನಸ್ಸಿಗೆ ಪಿಚ್ಚೆನಿಸಿತು. ಪರಿಧಿ ಎಲ್ಲಿಯೂ ಕಾಣಲಿಲ್ಲ. ಪರಿ ಪರಿ ಎಂದು ಕೂಗುತ್ತಾ ಬಾಲ್ಕನಿಯಲ್ಲಿ ಇಣುಕಿದ. ಅಲ್ಲೂ ಇಲ್ಲ. ಆದರೆ ರಾತ್ರಿ ಅವಳು ಎಸೆದಿದ್ದ ಚಾಕು ಕಾಲಿಗೆ ತಡವಿ ಸಿಕ್ಕಿತು. ಅದರ ಅಂಚಿಗೆ ಪರಿಯ ಕೈಯಿಂದ ಚಿಮ್ಮಿದ್ದ ಹನಿ ರಕ್ತ ಮೆತ್ತಿಕೊಂಡಿತ್ತು. ಅವನು ಗಾಬರಿಯಿಂದ ಹೊರಗೆ ಬಂದು ಸುತ್ತ ಹುಡುಕಾಡಿ, ಯೋಚಿಸುತ್ತಲೇ ಕೆಳಗಂತೂ ಇಲ್ಲ ಬಹುಶಃ ಮೇಲೆ.. ಓಹ್ ಗಾಡ್.. ಎಂದು ಓಡುತ್ತಲೇ ಟೇರೆಸ್ ಏರಿದ್ದ. ರಣರಣ ಬಿಸಿಲಿನಲ್ಲಿ ದಿಗಂತವನ್ನು ಶೂನ್ಯ ನೋಟದಲ್ಲಿ ಅಳೆಯುತ್ತ ಕೈಕಟ್ಟಿಕೊಂಡು ನಿಂತಿದ್ದ ಪರಿಧಿಯನ್ನು ಕಂಡು ಹೋದ ಜೀವ ಬಂದಂತಾಯಿತು ಪ್ರಸನ್ನನಿಗೆ. ಅವಳ ಸನಿಹದಲ್ಲಿ ಹೋಗಿ ಕೆಳಗಿನ ಆಳ ನೋಡುತ್ತಾ 'ಏನಾದರೂ ಹೆಲ್ಪ್ ಬೇಕಾ.. ನೀವೇ ಬಿಳ್ತಿರಾ.. ನಾನು ತಳ್ಳಲಾ.." ವ್ಯಂಗ್ಯವಾಗಿ ಕೇಳಿ "ನಾನು ಇದುವರೆಗೂ ಯಾರೂ ಸುಸೈಡ್ ಮಾಡ್ಕೊಳ್ಳೊದನ್ನ ಲೈವ್ ನೋಡಿಲ್ಲ..ಪ್ಲೀಸ್ ಪರಿ, ಬೇಗ...ಸಾಯ್ರಿ.." ಎನ್ನುತ್ತ ಅವಳ ಮುಖವನ್ನು ಗಮನಿಸಿದ. ರಾತ್ರಿ ಇಡೀ ಮಳೆಯಲ್ಲಿ ಮಿಂದು ಬೆಳಗಿನ ಇಬ್ಬನಿಯ ತಬ್ಬಿ ಹೊಳೆಯುವ ಮಂದಾರದಂತ ಶುಭ್ರವಾದ ಮೊಗದಲ್ಲಿ ಯಾವ ಭಾವನೆಗಳಿರಲಿಲ್ಲ. ಅವನೇ ಮಾತು ಮುಂದುವರೆಸಿದ..
"ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿಯವರು ಹೇಳ್ತಾರೆ..
ಋತುಚಕ್ರ ತಿರುಗುವುದು ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸಹುಲ್ಲು ಬೆಳೆಯುವುದು
ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವುದು ಜೀವ
ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ.
ಅಂದರೆ.. ಋತುಗಳು ಬದಲಾಗುತ್ತ ಸಾಗಿದಂತೆ ಕಾಲನ ನಿಯಮದಂತೆ ಜೀವಿ ಜೀವನ ಹತವಾಗುತ್ತ ಹೋಗುತ್ತದೆ. ಹಾಗೆ ಮೃತರಾದವರು ಮಣ್ಣಾದ ಮೇಲೆ ಆ ಭೂಮಿಯಮೇಲೆ ಮತ್ತೆ ಹೊಸ ಹುಲ್ಲು ಹುಟ್ಟುತ್ತದೆ..ಈ ಧರೆ ಮತ್ತೆ ಮತ್ತೆ ಗರ್ಭ ಧರಿಸಿ ಹೊಸ ಪ್ರಕೃತಿಗೆ ಜನ್ಮ ಕೊಡುತ್ತಾಳೆ, ಮತ್ತೆ ಮತ್ತೆ ಹೊಸ ಜೀವ ಹುಟ್ಟುತ್ತವೆ. ನಿರಂತರವಾಗಿ ನಡೆಯುವ ಕೃಷಿಯೇ ಈ ಪ್ರಕೃತಿ.. ಎಂಥ ಪ್ರಕೃತಿಯೇ ಪ್ರತಿದಿನ ಹೊಸ ರೂಪ ಹೊಸ ಅವತಾರದಲ್ಲಿ ಹೊಸ ಚೈತನ್ಯದೊಂದಿಗೆ ಹುಟ್ಟುವಾಗ ಸಾಮಾನ್ಯ ಮನುಷ್ಯ ಹೇಗೆ ಚಿರವಾಗಿ ಇರಬಲ್ಲ ಹೇಳಿ..
ಹುಟ್ಟು ಸಾವಿನ ಪಗಡೆ ಆಟದಲ್ಲಿ ಮನುಷ್ಯನ ಆಯಸ್ಸು ದಾಳ ಇದ್ದ ಹಾಗೆ ಯಾರಿಗೆ ಎಷ್ಟು ಸಿಗುತ್ತೋ ಅಷ್ಟರಲ್ಲೇ ತೃಪ್ತಿ ಪಡಬೇಕು. ನೀವು ನಿಜವಾಗಿಯೂ ಪ್ರೀತಿಸ್ತಿರೋ ವ್ಯಕ್ತಿ ನಿಮ್ಮ ಕಣ್ಣಿಂದ ದೂರ ಆಗಿರಬಹುದು ಆದರೆ, ಮನಸ್ಸಿನಿಂದಲ್ಲ. ಅಂದಮೇಲೆ ಅಳು ಶೋಕಾಚರಣೆ ಎಲ್ಲಾ ಪ್ರಪಂಚವನ್ನು ಮೆಚ್ಚಿಸೋದಿಕ್ಕಾ.. ನೆನಪುಗಳು ಸಂತೋಷ ಕೊಡೋ ತರಾ ಇರಬೇಕೇ ಹೊರತು ನೆನಪುಗಳೇ ನೋವಿಗೆ ಕಾರಣವಾಗಬಾರದು. ಪ್ರೀತಿ ಹರಿಯೋ ನೀರಿನ ಹಾಗೆ ಸುರಿಯೋ ಮಳೆ ಹಾಗೆ ಸದಾ ಚಿಲುಮೆಯಿಂದ ಇರಬೇಕು.. ನೀವು ಪ್ರೀತಿಸುವವರಿಗೆ ಇಷ್ಟವಾಗುವ ರೀತಿ ನಗ್ ನಗ್ತಾ ಬದುಕಿದ್ರೆ ಅದೇ ಅವರ ಪ್ರೀತಿಗೆ ನೀವು ಕೊಡೋ ಉಡುಗೊರೆ.. ಬದುಕಿದ್ರೆ ಚಿಟ್ಟೆ ಹಾಗೆ ಬದುಕಬೇಕು ಅದರಂತೆ ದಿನಗಳನ್ನಲ್ಲ ಕ್ಷಣಗಳನ್ನು ಗಳಿಸಬೇಕು..ಜೀವಿಸಬೇಕು ಪ್ರೀತಿಸಬೇಕು..ಸುತ್ತಲಿನ ಕತ್ತಲು ಪ್ರಪಂಚಕ್ಕೆ ಬಣ್ಣ ತುಂಬುವಂತೆ.."
ಉಫ್.. ಇವೆಲ್ಲ ಮಾತು ನನ್ನದಲ್ಲ.. ನಮ್ಮ ಹಾಸ್ಪಿಟಲ್ ನಲ್ಲಿ ಡಾ.ಪರಿಧಿ ಅಂತ ಒಬ್ಬರು ಇದ್ರು ಯಾವಾಗಲೂ ನಗ್ತಾ ಎಲ್ರನ್ನೂ ನಗಿಸ್ತಾ ಇರ್ತಿದ್ರು.. ಅವರು ಯಾರಿಗೋ ಹೇಳ್ತಿದ್ದ ಮಾತುಗಳು.. ನಾನೊಮ್ಮೆ ಕದ್ದು ಕೇಳಿ ಕಾಪಿ ಹೊಡೆದಿದ್ದೆ. ಅವಳು ಶುಷ್ಕವಾದ ನಗು ಬೀರಿದಳು. ಅವನು ತನ್ನ ಕೈಯಲ್ಲಿ ಹಿಡಿದ ಚಾಕು ತೋರಿಸಿ "ಇದೇನಿದು..ನಿಮ್ಮ ರೂಮಲ್ಲಿ ಸಿಕ್ತು"
"ಕೆಟ್ಟ ಘಳಿಗೆ ಏನೋ ಅಂದುಕೊಂಡೆ.. ಆದರೆ ಆಮೇಲೆ ಅನಿಸ್ತು ಹರ್ಷ ಎಲ್ಲೂ ಹೋಗಿಲ್ಲ ಇಲ್ಲೇ ಇದ್ದಾನೆ.. ನನ್ನೊಂದಿಗೆ.. ನನ್ನುಸಿರಲ್ಲಿ.. ನನ್ನ ಧಮನಿಯಲ್ಲಿ.. ನನ್ನ ನಗುವಲ್ಲಿ.. ನನ್ನ ನೆನಪುಗಳಲ್ಲಿ.. ಹೇಳುಹೇಳುತ್ತಲೇ ಧ್ವನಿ ಕಂಪಿಸಿ ಕಣ್ಣಿನಿಂದ ಧುಮುಕಿದ ಎರಡು ದೊಡ್ಡ ಹನಿಗಳನ್ನು ಮುಂಗೈಯಿಂದ ಒರೆಸಿಕೊಂಡಳು. "ಹರ್ಷ ನನಗೆ ಕೊಟ್ಟಿರೋ ಅಮೂಲ್ಯವಾದ ಉಡುಗೊರೆ ಏನು ಗೊತ್ತಾ ಡಾಕ್ಟರ್.... 'ಈ ಬದುಕು!! ' ಇದನ್ನು ಇಷ್ಟು ಸುಲಭವಾಗಿ ತಿರಸ್ಕರಿಸ್ಬಾರದು ಅಂತ ನಿರ್ಧಾರ ಮಾಡಿದ್ದಿನಿ. ಇನ್ನ್ಯಾವತ್ತೂ ಸೋಲಲ್ಲ, ಕುಗ್ಗಲ್ಲ..ಯು ಡೊಂಟ್ ವರಿ.. " ನಕ್ಕಳು. ಅದರಲ್ಲಿ ಜೀವಂತಿಕೆ ಇರಲಿಲ್ಲ. ಸುಖ ಮನುಷ್ಯನ್ನ ಸೋಮಾರಿಯಾಗಿ ಮಾಡಿದರೆ ದುಃಖ ಮನುಷ್ಯನನ್ನು ಗಟ್ಟಿಗೊಳಿಸಿ ಮೇಧಾವಿಯನ್ನಾಗಿಸಿ ಬಿಡುತ್ತಂತೆ..ಪರಿಧಿಯನ್ನೇ ಗಮನಿಸುತ್ತಿದ್ದ ಪ್ರಸನ್ನನಿಗೆ ಈ ಮಾತು ನಿಜವೆನ್ನಿಸಿತು.
"ಪರಿ ಅಕ್ಕ..." ಅಷ್ಟರಲ್ಲಿ ಓಡಿ ಮೇಲೆ ಬಂದ ಅವಿನಾಶ್ "ಮೊಬೈಲ್ ಲಾಕ್ ತೆಗೆದು ಕೊಡು..ಪ್ಲೀಸ್.." ಎಂದ.
ಅವನ ಕೈಯಿಂದ ಮೊಬೈಲ್ ತೆಗೆದುಕೊಳ್ಳುತ್ತಾ ನಮ್ಮ ಚಿಕ್ಕಮ್ಮನ ಮಗ ಅವಿನಾಶ್ ಎಂದು ಪರಿಚಯಿಸಿದಳು. ಹಾಯ್ ಚಾಂಪ್ ಎಂದು ಹೈಫೈವ್ ಮಾಡಿದ ಪ್ರಸನ್ನ ಇನ್ನೇನೋ ಕೇಳುವಾಗ..
"ಅವಿ.. ಪುಟ್ಟಾ ಎಲ್ಲಿದೀಯೋ..," ಕೂಗುತ್ತಾ ಬಂದ ಲಲಿತ "ಹೇಯ್ ಕತ್ತೆ ಇಲ್ಲೇನೋ ಮಾಡ್ತಿದಿಯಾ ನಡಿ ಕೆಳಗೆ.." ಎಂದು ಮಗನ ಕೈ ಹಿಡಿದು ಎಳೆಯುತ್ತ.. ಪ್ರಸನ್ನನ ಕಡೆಗೊಮ್ಮೆ ನೋಡಿ "ಇವನ್ಯಾರು..ಓಹ್ ನಿನ್ನ ಮುಂದಿನ ಬಲಿಯೋ.." ಕೊಂಕು ನುಡಿದು ಮೂಗು ಮುರಿದಳು.
"ಸರಿಯಾಗಿ ನೆನಪಿಸಿದ್ರಿ ಚಿಕ್ಕಮ್ಮ.. ಬಲಿ ತಗೋಳೊಕೆ ಎನರ್ಜಿನೇ ಇಲ್ಲ. ನಿನ್ನೆಯಿಂದ ಏನೂ ತಿಂದಿಲ್ಲ ನೋಡಿ, ಅದ್ಕೆ.. ಮೊದಲು ಹೊಟ್ಟೆ ತುಂಬ ಊಟ ಮಾಡ್ತಿನಿ. ಆಮೇಲೆ ಎಲ್ರನ್ನೂ ಬಲಿ ತಗೋತಿನಿ.. ನಿಮ್ಮನ್ನು ಸೇರಿಸಿ.." ಕೊನೆಯ ಪದಗಳನ್ನು ರೋಷದಿಂದ ಹೇಳಿ ಪ್ರಸನ್ನನಿಗೆ ಬನ್ನಿ ಎಂದು ತಾನು ಕೆಳಗಿಳಿದು ಹೋದಳು.
"ಅಯ್ಯಯ್ಯಾ.. ಇವಳಿಗೇನು ಹುಚ್ಚು ಹಿಡೀತಾ ಹೆಂಗೆ..." ದರದರನೆ ಮೆಟ್ಟಿಲಿಳಿದ ಪರಿಧಿಯನ್ನು ನೋಡುತ್ತ ಗಲ್ಲಕ್ಕೆ ಕೈ ಹಿಡಿದು ಯೋಚಿಸಿದಳು ಲಲಿತಾ. ಅವಳನ್ನು ಎಚ್ಚರಿಸುವಂತೆ
"ನೈಸ್ ಟು ಮೀಟ್ ಯು ಚಿಕ್ಕಮ್ಮ.. ಇಲ್ಲಿವರೆಗೂ ಜಗತ್ತಿನಲ್ಲಿ ನಾನೇ ತುಂಬಾ ಕೆಟ್ಟವನು, ಕರಾಬ್ ನನ್ಮಗ, ಕೆಲಸಕ್ಕೆ ಬಾರದವನು ಅನ್ಕೊಂಡಿದ್ದೆ. ನಿಮ್ಮ ಮುಂದೆ ನಾನು ಏನೂ ಅಲ್ಲ ಅನ್ನಿಸ್ತಿದೆ! ಯು ಆರ್ ದಿ ಬೆಸ್ಟ್.. ಯು ಆರ್ ರಿಯಲಿ ಗ್ರೇಟ್.." ಎಂದು ಕೈಕುಲುಕಿ ಹೊರಟ ಪ್ರಸನ್ನ
"ನಾ ಏನ್ ಮಾಡಿದೆ ಅಂತದ್ದು..ಏನೋಪಾ.., ನಾನೇ ಬೆಸ್ಟಂತೆ.. ನಾನೇ ಗ್ರೇಟಂತೆ.." ಎಂದು ಖುಷಿಯಿಂದ ಜಂಭಪಟ್ಟಳು ಲಲಿತಾ.
ಕೆಳಗೆ ಬಂದ ಪರಿಧಿ ಜನರ ಗುಂಪಿನಿಂದ ಅತ್ತೆಯನ್ನು ಕರೆತಂದು ಸ್ನಾನಕ್ಕೆ ಕಳಿಸಿ ತಾನು ಸ್ನಾನ ಮಾಡಿ ಊಟಕ್ಕೆ ಸಿದ್ದತೆ ಮಾಡಿಕೊಂಡಳು. ಮಾವ ತಾತ ಹರಿಣಿ ಅತ್ತೆ ಚಿಕ್ಕಮ್ಮ ಪ್ರಸನ್ನ ಎಲ್ಲರನ್ನೂ ಡೈನಿಂಗ್ ಮುಂದೆ ಸೇರಿಸಿ ಗೋಪಿ ಸಹಾಯದೊಂದಿಗೆ ಎಲ್ಲರಿಗೂ ತಾನೇ ಊಟಕ್ಕೆ ಬಡಿಸಿ ಹರಿಣಿಗೆ ಊಟ ಮಾಡಿಸಿದಳು. ಅಳುತ್ತಿದ್ದ ಸುಲೋಚನರನ್ನು ಸಮಾಧಾನ ಮಾಡುತ್ತ ಬಲವಂತದಿಂದ ಕೈತುತ್ತು ಮಾಡಿ ಉಣಿಸಿದ ಪ್ರಸನ್ನ ತನ್ನ ಹಾಸ್ಯಪ್ರಜ್ಞೆಯಿಂದ ವಾತಾವರಣವನ್ನು ತಿಳಿಗೊಳಿಸಿದ.
"ಹೊರಗಿನ ಟೀಪಾಯಿ ಮೇಲಿದ್ದ ಈ ಫೈಲ್ ಎಲ್ಲಿಡಬೇಕು ಯಜ್ಮಾನ್ರೆ.." ಕೇಳಿದ ಗೋಪಿ.
"ಹರ್ಷನ ರೂಮಿನಲ್ಲಿ ಇಟ್ಬಿಡು ಹೋಗು.." ವಿನಾಯಕ್ ಉತ್ತರಿಸಿದರು. ಫೈಲ್ ಮೌನವಾಗಿ ಹರ್ಷನ ಕೋಣೆ ಸೇರಿತು.
ಮುಂದುವರೆಯುವುದು..
⚛⚛⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ