ಮನೆಯಲ್ಲಿ ವಾತಾವರಣ ಕೊಂಚ ಸುಧಾರಿಸಿದಂತೆಲ್ಲ ಎಲ್ಲರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದರು. ಆದರೆ ಹರ್ಷನ ಅಕಾಲಿಕ ಮೃತ್ಯು ಬೃಂದಾವನ ಪರಿವಾರಕ್ಕೆ ತುಂಬಲಾರದ ನಷ್ಟವಾಗಿತ್ತು. ಯಾವಾಗಲೂ ನಗುತ್ತ ಎಲ್ಲರನ್ನೂ ನಗಿಸುತ್ತ ತರಲೆ ತಂಟೆ ಮಾಡುತ್ತ ಹರಿಣಿಯೊಡನೆ ಕಿತ್ತಾಡುತ್ತ ಮನೆಯ ಬೆಳಕಾಗಿದ್ದ ಹರ್ಷ. ಮನೆ ಮನಗಳಲ್ಲಿ ಹೆಜ್ಜೆ ಹೆಜ್ಜೆಗೂ ಅವನ ನೆನಪುಗಳದೇ ಝೇಂಕಾರ.. ಮೇಲಿಂದ ಕೆಳಗಿಳಿಯಲು ಯಾವತ್ತೂ ಮೆಟ್ಟಿಲು ತುಳಿದವನಲ್ಲ, ಕಬ್ಬಿಣದ ಸರಳುಗಳೇ ಅವನ ಜಾರುಬಂಡಿ! ಡೈನಿಂಗ್ ಟೇಬಲ್ ಊಟಕ್ಕಿಂತ ಹೆಚ್ಚಾಗಿ ಅವನ ತಬಲಾ ಸಾಧನವಾಗಿ ಹೆಚ್ಚು ಬಳಕೆಯಾಗುತ್ತಿತ್ತು. ಆಫೀಸಿಗೆ ಚೂರು ತಡವಾದರೂ ಅಮ್ಮನ ಸುರುಳಿ ಸುತ್ತಿದ ಚಪಾತಿ ಅವನ ಉಪಹಾರದ ಒಂದು ಭಾಗವಾಗಿತ್ತು. ಅವನು ಮನೆಯಲ್ಲಿದ್ದಷ್ಟು ಸಮಯ ನಿಲ್ಲದೆ ಗುನುಗುವ ಮ್ಯುಸಿಕ್ ಸಿಸ್ಟಮ್ ಒಡೆಯನಿಲ್ಲದೆ ಮೂಖವಾಗಿತ್ತು. ಘಳಿಗಿಗೊಮ್ಮೆ ಕಿತಾಪತಿ ಮಾಡುವ ಹರ್ಷನಿಲ್ಲದೆ ತಂದೆಗೆ ಬುದ್ದಿವಾದ ಹೇಳಲು ಅವಕಾಶವೇ ಇಲ್ಲದೆ ಮನೆಯೇ ಮೌನ ತಾಳಿತ್ತು. ಇನ್ನೂ ಅವನ ಅಸ್ತಿತ್ವವನ್ನು ಮರೆಯುವುದಂತೂ ದೂರದ ಮಾತಾಗಿತ್ತು. ಲೋಕ ನಿಮಿತ್ತ ಶ್ರಾದ್ಧ ಕಾರ್ಯ ಮಾಡಿ ಮುಗಿಸಿದರಾದರೂ ಮನೆಯ ಪ್ರತಿಯೊಬ್ಬರ ಮನದಲ್ಲಿ ಹರ್ಷ ಇನ್ನೂ ಉಸಿರಾಡುತ್ತಿದ್ದ.. ನೆನಪಾಗುತ್ತಿದ್ದ.. ನಗುತ್ತಿದ್ದ !!
ಎಲ್ಲಾ ಕ್ರಿಯಾ ಕರ್ಮಗಳ ತರುವಾಯ ಕೆಲವು ದಿನಗಳ ನಂತರ ಆಸ್ಪತ್ರೆಗೆ ಬಂದ ಪರಿಧಿಗೆ ಆ ದಿನ ಪ್ರತಿಯೊಂದು ಹೊಸದಾಗಿ ಕಂಡಿತು. ಮೊದಲ ದಿನ ಈ ಆಸ್ಪತ್ರೆಗೆ ಬಂದಾಗ ಹೆದರಿ ನಡುಗಿದ್ದಳು. ಅವತ್ತು ಹರ್ಷ ತನ್ನೊಂದಿಗೆ ಇದ್ದ ಕೈ ಹಿಡಿದು ಧೈರ್ಯ ಹೇಳಿದ್ದ "ನಿನ್ನ ನಗು ನೋಡಿದ್ರೆ ಸಾಕು ಬಿಡೇ..ಪೇಷಂಟ್ ಅರ್ಧ ವಾಸಿಯಾದಂಗೆ.. ಮುಂದಿನ ಟ್ರೀಟ್ಮೆಂಟ್ ಕೊಡೋದು ನಿನಗೇನು ಕಷ್ಟದ ಕೆಲಸವಲ್ಲ..! ನೀನು ಮನಸ್ಸು ಮಾಡಿದ್ರೆ ಒಣಗಿದ ಎಲೆಗೂ ಜೀವತುಂಬಿ ಬಿಡಬಹುದು ಗೊತ್ತಾ.. ಯಾಕಂದ್ರೆ ನೀನು ಏಂಜಲ್ ಕಣೇ.. ನಿನ್ನ ಕೈಯಲ್ಲಿ ಮ್ಯಾಜಿಕ್ ಇದೆ.." ನಕ್ಕುಬಿಟ್ಟಿದ್ದಳು ಅವಳು ಭಯವೆಲ್ಲ ಮರೆತು. ಇಂದು ಅವನಿಲ್ಲದ ನೀರಸ ಜೀವನ. ನಿಜವಾಗಿಯೂ ನನ್ನ ಹತ್ರ ಮ್ಯಾಜಿಕ್ ಇದ್ದಿದ್ದರೆ ನಿನ್ನ ಮತ್ತೆ ನನ್ನ ಜೀವನದಲ್ಲಿ ಕರೆದುಕೊಂಡು ಬರ್ತಿದ್ದೆ ಕಣೋ ಹರ್ಷ.. ಎಂದುಕೊಂಡಳು ನೊಂದು. ಹಿಂದೊಮ್ಮೆ ಎದುರಿನ ಅದೇ ಕಲ್ಲುಬೆಂಚಿನ ಮೇಲೆ ಕುಳಿತು ಅವಳು ಮಧ್ಯಾಹ್ನ ಬರುವವರೆಗೂ ಕಾಯುತ್ತಾ ಕುಳಿತಿದ್ದ ಹರ್ಷ ಇವತ್ತೂ ಅಲ್ಲಿಯೇ ಕುಳಿತು ನಗುನಗುತ್ತಾ ಆಲ್ ದ ಬೆಸ್ಟ್ ಹೇಳಿದಂತಾಯಿತು. ಇವಳು ನಗುತ್ತ ಅತ್ತಲೇ ನೋಡುವಾಗ
"ಡಾ.ಪರಿಧಿ ಅಂದರೆ ನೀವೇನಾ.." ಹಿಂದಿನಿಂದ ತೂರಿ ಬಂದಿತು ಹುಡುಗಿಯೊಬ್ಬಳ ಕಂಚಿನ ಕಂಠ. ಪರಿಧಿ ಹೌಹಾರಿದಂತೆ ತಿರುಗಿ ನೋಡಿದಾಗ ಡಾಕ್ಟರ್ ಕೋಟ್, ಸ್ಟೆಥಸ್ಕೋಪ್ ಕೈಯಲ್ಲಿ ಹಿಡಿದು ನಿಂತಿದ್ದರು ಇಬ್ಬರು ಯುವತಿಯರು. ಅದರಲ್ಲೊಬ್ಬಳು "ಹಾಯ್..ಐಮ್ ಶ್ರಾವ್ಯ. ಇವಳು ದಿವ್ಯ. ನಾವಿಬ್ಬರೂ ಈಗೇ ಕೆಲವು ದಿನಗಳಿಂದ ಇಲ್ಲಿ ಇಂಟರ್ನಶಿಪ್ ಗೆ ಬಂದಿದೀವಿ.ಪರಿಧಿ ಅಂದ್ರೆ ನೀವೇ ತಾನೇ?! (ಉತ್ತರಿಸಲು ಅವಕಾಶ ಕೊಡದೆ) ಕೆಲವು ಪೇಷಂಟ್ಸ್ ಮತ್ತೆ ಸ್ಟಾಫ್ ಬಾಯಲ್ಲಿ ನಿಮ್ಮ ಗುಣಗಾನ ಕೇಳಿ ಕೇಳಿ ನಾನೂ.. ನಿಮ್ಮ ಫ್ಯಾನ್ ಆಗೋಗಿದೀನಿ ಮಿಸ್.ಪರಿ..." ತುಂಬು ಆತ್ಮೀಯತೆಯಿಂದ ಮಾತಾಡಿದಳು.
"ಓಹ್.. ಹಾಗೋ..ನೈಸ್ ಟು ಮೀಟ್ ಯು ಶ್ರಾವ್ಯ.. ದಿವ್ಯ.." ಎಂದು ಕೈ ಕುಲುಕಿ ಮುಗುಳ್ನಕ್ಕಳು.
"ವ್ಹಾವ್..ರಿಯಲಿ ಪರಿ.. ನಿಮ್ಮ ನಗು ನೋಡಿದ್ರೆ ಸಾಕು ಪೇಷಂಟ್ ಕ್ಯೂರ್ ಆಗಿಬಿಡ್ತಾರೆ. ಚಿಕ್ಕ ಮಗು ತರಾ ಅನ್ಸುತ್ತೆ ನೀವು ನಕ್ಕರೆ" ಎಂದು ಖುಷಿಯಿಂದ ತಬ್ಬಿಕೊಂಡು ಮುತ್ತಿಟ್ಟಳು.
ಅವಳ ಕ್ರಿಯೆಗೆ ಸ್ವಲ್ಪ ತಬ್ಬಿಬ್ಬಾದರೂ ಸಾವರಿಸಿಕೊಂಡ ಪರಿಧಿಗೆ ಅಚಾನಕ್ಕಾಗಿ ಮಾನ್ವಿ ನೆನಪಾಗಿದ್ದಳು. ಅವಳು ಹೀಗೆಯೇ..ರಜೆ ಮುಗಿದು ಕಾಲೇಜು ಶುರುವಾದಾಗ, ಅಪರೂಪಕ್ಕೆ ತುಂಬಾ ದಿನಗಳ ನಂತರ ಭೇಟಿಯಾದಾಗಲೆಲ್ಲ ಹೀಗೆ ಖುಷಿಯಿಂದ ತಬ್ಬಿಕೊಂಡು ಮುದ್ದಾಡಿ ಬಿಡುತ್ತಿದ್ದಳು. ಪರಿಧಿಯ ಸಂಕೋಚ ಮುಜುಗರ ಯಾವುದನ್ನೂ ಲೆಕ್ಕಿಸದೆ..
ಪರಿಧಿ ಸುಮ್ಮನಾಗಿದ್ದನ್ನು ಕಂಡು ದಿವ್ಯಾ " ನಿಮ್ಮ ವುಡ್ ಬಿ..." ಎಂದು ಏನೋ ಹೇಳುವುದರಲ್ಲಿ ಶ್ರಾವ್ಯ ಅವಳ ಮಾತನ್ನು ತುಂಡರಿಸಿ "ಡಾ.ಪರಿ ನಮಗೇನಾದ್ರೂ ಸಮಸ್ಯೆ ಬಂದರೆ ನಿಮ್ಮ ಹತ್ರ ಕೇಳಬಹುದಾ? ನೀವು ಗೈಡ್ ಮಾಡ್ತಿರಲ್ವಾ.." ಕೇಳಿದಳು
"ಹ್ಮಾ..ಖಂಡಿತ. ಫೋರ್ಥ್ ಫ್ಲೋರ್ ನಲ್ಲೇ ನನ್ನ ಡ್ಯುಟಿ. ಯಾವಾಗ ಬೇಕಾದರೂ ಏನೇ ಸಲಹೆ ಬೇಕಾದರೂ ನಿಸ್ಸಂಕೋಚವಾಗಿ ಕೇಳಿ. ಅಂದಹಾಗೆ ಯಾವ ಡಿಪಾರ್ಟ್ಮೆಂಟ್? ಮೆಂಟರ್ ಯಾರು?" ಕೇಳಿದಳು
" ನ್ಯೂರಾಲಜಿ ! ಡಾ.ಪ್ರಸನ್ನ ಅಂತ ಒಬ್ಬರು ಮಿಲಿಯನೇರ್ ಮಲ್ಟಿ ಟ್ಯಾಲೆಂಟ್ ನ್ಯೂರೋಸರ್ಜನ್ ಇದ್ದಾರಲ್ಲ ಅವ್ರೇ.." ಎಂದು ನಕ್ಕಳು ಶ್ರಾವ್ಯ.
ಪರಿಧಿಗೆ ಮಾನ್ವಿಯ ಪಾಡು ನೆನಪಾಗಿ ಮುಗುಳ್ನಕ್ಕು "ಅವರು ತುಂಬಾ ಕಟ‌್ ನಿಟ್ಟು ಏನಾದರೂ ತಪ್ಪು ಮಾಡಿದ್ರೆ ನಿಮಗೆ ತಪ್ಪಿದ್ದಲ್ಲ ವಿಚಿತ್ರ ಪನಿಶ್ಮೆಂಟು" ಎಂದು ನಕ್ಕಳು.
"ಗೊತ್ತಾಯ್ತು ರೀ..ಎರಡೇ ದಿನದಲ್ಲಿ ತಲೆ ಕೆಟ್ಟು ಹೋಗಿದೆ ಅವರ ಜೊತೆ ಏಗಿ..! ಆಪರೇಷನ್ ಥಿಯೆಟರ್ ನಲ್ಲೂ ಚಾಕ್ಲೆಟ್ ತಿನ್ನೋ ಕೂಲ್ ಡಾಕ್ಟರ್.. ಒಮ್ಮೊಮ್ಮೆ ತುಂಬಾ ಬ್ರಿಲ್ಲಿಯಂಟ್ ಅನಿಸ್ತಾರೆ, ಒಮ್ಮೊಮ್ಮೆ ವಿಚಿತ್ರವಾಗಿ ಆಡ್ತಾರೆ, ಕೆಲವೊಮ್ಮೆ ಯಾವುದೋ ಭಾಷೆಯಲ್ಲಿ ಮಾತಾಡ್ತಾರೆ, ಹೊಗಳ್ತಿದ್ರಾ..ಬೈತಿದ್ರಾ..ಇನ್ನೂ ಅರ್ಥವಾಗಿಲ್ಲ ನನಗೆ..! ಸಿಕ್ಕಾಪಟ್ಟೆ ನಗಸ್ತಾರೆ, ಪೇಷಂಟ್ಸ್ ಗೆ ಸ್ವಲ್ಪ ತೊಂದರೆ ಆದ್ರೆ ಬೆಂಕಿಯಾಗಿ ಬಿಡ್ತಾರೆ. ಆದರೂ ಒಂಥರಾ ಇಷ್ಟವಾಗ್ತಾರೆ. ಅವರ ಸ್ಮೈಲ್ ನೋಡಿದ್ರೆ ನಮ್ಮ ಮುಖದಲ್ಲೂ ಮಂದಹಾಸ ಮೂಡುತ್ತೆ, ಅವರ ಲುಕ್.. ಆ್ಯಂಗ್ರಿ ಆ್ಯಟಿಟುಡ್..ಎಲ್ಲಾ ಚಂದ, ಆದರೂ ಯಾವಾಗ ಹೇಗಿರ್ತಾರೋ ಒಂದೂ ಗೊತ್ತಾಗಲ್ಲ ಅವರ ಬಗ್ಗೆ ಕ್ಲಾರಿಟಿನೇ ಸಿಗ್ತಿಲ್ಲ.." ಎಲ್ಲೋ ಕಳೆದುಹೋಗಿ ಹೇಳಿದಳು ದಿವ್ಯಾ.
"ಡಾ.ಪರಿ ನನಗೆ ಮ್ಯೂಸಿಕ್ ಅಂದ್ರೆ ಪ್ರಾಣ ಕಣ್ರೀ. ಮೊನ್ನೆ ಬೆಳಿಗ್ಗೆ ರಿಪೋರ್ಟ್ ಎಲ್ಲಾ ಮುಗಿಸಿ ಕಿವಿಯಲ್ಲಿ ಏರ್ಫೋನ್ ಹಾಕ್ಕೊಂಡು ಹಾಡು ಕೇಳ್ತಾ ಕೂತಿದ್ದಾಗ ಹಿಂದಿನಿಂದ ಬಂದ ಡಾ. ಪ್ರಸನ್ನ 'ಡ್ಯೂಟಿ ಅವರ್ಸ್ ನಲ್ಲಿ ಟೈಮ್ ಪಾಸ್ ಮಾಡು ಅಂತ ಹೇಳ್ಕೊಟ್ಟಿದ್ದಾರಾ ನಿಮಗೆ' ಅಂತ ನನ್ನ ಏರ್ಫೋನ್ ಕಿತ್ಕೊಂಡು ಹೋದ್ರು. ಸಾಯಂಕಾಲ ಏರ್ಫೋನ್ ವಾಪಸ್ ಮಾಡಿ ಕರ್ತವ್ಯ.. ಧರ್ಮ.. ಅಂತ ಮುಕ್ಕಾಲು ಗಂಟೆ ಪಿಟೀಲು ಕುಯ್ದ್ರು ಪುಣ್ಯಾತ್ಮ ಹೇಳ್ತಿನಿ... ನನಗೆ ಅಲ್ಲೆ ನಿಂತಲ್ಲೇ ಅದೇ ಏರ್ಫೋನ್ ನಿಂದ ನೇಣು ಹಾಕೊಂಡು ಬಿಡ್ಲಾ ಅನಿಸಿಬಿಡ್ತು.. " ತಲೆ ಚಚ್ಚಿಕೊಳ್ಳುತ್ತ ಹೇಳಿದಳು ಶ್ರಾವ್ಯ.
ಅವರಿಬ್ಬರ ಮಾತಿನ ದಾಟಿ ಪ್ರಸನ್ನನ ಮೇಲಿನ ಅಪರಿಮಿತ ಶ್ರದ್ಧೆ ಗುರುಭಕ್ತಿಯನ್ನು ಮೆಚ್ಚಿ ನಗು ತಡೆಯಲಾಗಲಿಲ್ಲ ಪರಿಧಿಗೆ. ಅಷ್ಟರಲ್ಲೇ ಪ್ರಸನ್ನನ ಬೈಕ್ ಗಡರ್ರ್..ನೇ ಸದ್ದು ಮಾಡುತ್ತಾ ಆಸ್ಪತ್ರೆಯ ಗೇಟ್ ದಾಟಿ ಕಾಂಪೌಂಡ್ ಒಳಗೆ ಬರುತ್ತಿರುವುದನ್ನು ಕಂಡು "ಹೇ..ಬಂದ್ರು ಕಣೇ ಅನಾಥಬಂಧು ಆಪ್ತರಕ್ಷಕ.. ಇನ್ನೂ ಇಲ್ಲೇ ನಿಂತಿದ್ರೆ ಅದಕ್ಕೂ ಲೆಕ್ಚರ್ ಹೊಡಿತಾರೆನೋ..!!"
"ಇವರು ಬೈಕಿಗೆ ಸರ್ವಿಸ್ಸೇ ಮಾಡಿಸಲ್ವೋ ಅಥವಾ ಅದೂ ಹುಟ್ಟುತ್ತಲೇ ಹೀಗೆ ಗಡರ್ರ್.. ಸೌಂಡ್ ಮಾಡ್ತಾ ಹುಟ್ಟಿದೆಯೋ..!!" ಗೊಣಗಿದಳು ದಿವ್ಯ.
"ಅಪ್ಪಿತಪ್ಪಿ ಕೇಳಿಬಿಟ್ಟಿಯಾ.. ಬೈಕ್ ಹುಟ್ಟೇನೂ ಅದರ ತಾತಾ ಮುತ್ತಾತನ ಜನ್ಮರಹಸ್ಯಾನೂ ಕೂರಿಸಿ ತಲೆಗೆ ಕೈ ಹಾಕಿ ತುಂಬ್ತಾರೆ ಆಮೇಲೆ..!! ಡಾ.ಪರಿ ಫ್ರೀ ಇದ್ದಾಗ ಸಿಗೋಣ. ಈಗ ಬಾಯ್.." ಎಂದಳು ಶ್ರಾವ್ಯಾ. ದಿವ್ಯ ಕೂಡ ಬಾಯ್ ಹೇಳಿ ಮೆಟ್ಟಿಲೇರಿ ಒಳಗೆ ಓಡಿದರು ಲಲನೆಯರು.
ಪರಿಧಿ ಪ್ರಸನ್ನನಿಗಾಗಿ ಕಾದು ನಿಂತಿದ್ದು ಅವನು ಬರುತ್ತಲೇ ಗುಡ್ ಮಾರ್ನಿಂಗ್ ಹೇಳಿ "ಯಾಕಿವತ್ತು ಮನೆ ಕಡೆಗೆ ಬರಲೇ ಇಲ್ಲ" ಕೇಳಿದಳು. ಹರ್ಷನ ಮರಣಾನಂತರ ಪ್ರಸನ್ನ ಅವರ ಮನೆಗೆ ಹೋಗಿ ಎಲ್ಲರನ್ನೂ ಸಂತೋಷವಾಗಿಡಲು ತನ್ನಿಂದ ಸಾಧ್ಯವಾದ ಮಟ್ಟಿಗೆ ಶತಾಯ ಗತಾಯ ಪ್ರಯತ್ನ ಮಾಡಿದ್ದ. ಅವನ ಇರುವಿಕೆ ಹರ್ಷನ ಕೊರತೆಯನ್ನು ಕೊಂಚಮಟ್ಟಿಗೆ ತಗ್ಗಿಸಿ ಅವರ ಮನಸ್ಸಲ್ಲಿ ಪ್ರಸನ್ನನಿಗೆ ಅಗಾಧ ಸ್ಥಾನ ಮಾಡಿಕೊಟ್ಟಿತು. ಅವರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗಿದ್ದ. ದಿನ ಬೆಳಿಗ್ಗೆ ಜಾಗಿಂಗ್ ನೆಪದಲ್ಲಿ ಒಮ್ಮೆಯಾದರೂ ಅವರ ಮನೆಗೆ ಹಾಜರಿ ಕೊಡುತ್ತಿದ್ದ ಪ್ರಸನ್ನ ಅಂದು ಬಂದಿರಲಿಲ್ಲ. ಸುಲೋಚನ ಹರಿಣಿ ಅಶ್ವತ್ಥರು ಪ್ರಸನ್ನ ಯಾಕೆ ಇವತ್ತು ಬರಲಿಲ್ಲ ಎಂದು ಚಡಪಡಿಸಿ ಹೋಗಿದ್ದರು.
"ಅದು ಬೇರೆ ಕೆಲಸ ಇತ್ತು ಆಶ್ರಮದ ಕಡೆಗೆ ಹೋಗಿದ್ದೆ. ಅದ್ಕೆ ಬರೋಕೆ ಆಗಲಿಲ್ಲ. ನಿಮ್ಮಲ್ಲಿ ಆಗಿರೋ ಬದಲಾವಣೆ ನೋಡಿ ಖುಷಿಯಾಯ್ತು. ಬಿ ಹ್ಯಾಪಿ ಪರಿ... ಹ್ಮ್ಮ.. ನಮ್ಮ ಶಿಷ್ಯೆಯರು ನನ್ನ ಕಲ್ಯಾಣಗುಣಗಳ ಬಗ್ಗೆ ಏನೋ ತುಂಬಾ ಹೇಳ್ತಿದ್ರು ಅನಿಸುತ್ತೆ. ಅದಕ್ಕೆ ಈ ನಗು..ರೈಟ್..!"
"ನಿಮ್ಮನ್ನು ಹಾಡಿ ಹೊಗಳೋಕೆ ಪದಗಳೇ ಸಾಲುತ್ತಿಲ್ಲವಂತೆ, ನನ್ನ ಹತ್ತಿರ ತಮ್ಮ ವ್ಯಥೆ ಹೇಳಿಕೊಂಡರು" ಎಂದು ನಕ್ಕಳು ಪರಿಧಿ.
"ಅವರ ವ್ಯಥೆ ಕೇಳುವ ಕರ್ಮ ನಿಮಗೆ ತಪ್ಪಿದ್ದಲ್ಲ ಬಿಡಿ ಹಾಗಾದರೆ.. ಯಾಕೆಂದರೆ ನನ್ನ ಸ್ವಭಾವ ಯಾವತ್ತೂ ಬದಲಾಗಲ್ಲ.." ಮಾತಾಡುತ್ತಲೇ ಲಿಫ್ಟ್ ನಾಲ್ಕನೇ ಫ್ಲೋರ್ ತಲುಪಿತ್ತು . ಬಾಯ್ ಡಾಕ್ಟರ್ ಎಂದು ನಗುತ್ತ ಕೈ ಬೀಸಿ ಹೋದಳು ಪರಿಧಿ. ಪ್ರಸನ್ನ ಲಿಫ್ಟ್ ಮುಚ್ಚಿ ಐದನೇ ಫ್ಲೋರ್ ನ ಗುಂಡಿ ಅದುಮಿದ.
******
ಆ ಸಂಜೆ ಹರಿಣಿಯ ಶಾಲೆ ಬಿಡುವ ಸಮಯಕ್ಕೆ ಪರಿಧಿ ಮನೆಗೆ ಹೊರಟಿದ್ದರಿಂದ ಅವಳನ್ನೂ ಶಾಲೆಯಿಂದ ಕರೆದುಕೊಂಡು ಹೋದರಾಯಿತು ಎಂದುಕೊಂಡಳು. ಹರಿಣಿ ಶಾಲೆಯಿಂದ ಹೊರಗೆ ಬರುವಷ್ಟರಲ್ಲಿ ಎದುರುಗೊಂಡ ಪರಿಧಿಯನ್ನು ನೋಡಿ ಧೀ..ನೀನು, ಈಗ ಇಲ್ಲಿ?? ಆಶ್ಚರ್ಯದಿಂದ ಕೇಳಿದಳು. 'ಸರ್ಪ್ರೈಜ್..' ಎಂದು ಅವಳನ್ನು ಕಾರಿನಲ್ಲಿ ಕೂರಿಸಿಕೊಂಡು ಶಾಲೆಯ ಬಗ್ಗೆ ಕೇಳುತ್ತಾ ಶಾಪಿಂಗ್ ಮಾಲ್ ಗೆ ಕರೆದುಕೊಂಡು ಬಂದಳು. ಅವಳಿಗೆ ಬೇಕೆನಿಸುವ ಇಷ್ಟವಾದ ಬಟ್ಟೆ ಬರೆಗಳನ್ನು ಖರೀದಿಸಿದಳು. ಫುಡ್ ಕೌಂಟರಿಗೆ ಬಂದು ಹರಿಣಿಗಾಗಿ ಚಾಕೊಲೇಟ್ ಫ್ಲೇವರ್ ಐಸ್ ಕ್ರೀಂ ಮತ್ತು ತನಗಾಗಿ ಬಟರ್ ಸ್ಕಾಚ್ ಆರ್ಡರ್ ಮಾಡಿದಳು. ಬಹಳ ದಿನಗಳ ನಂತರ ಇಬ್ಬರೂ ಅದು ಇದು ಹರಟೆ ಹೊಡೆಯುತ್ತ ಐಸ್ ಕ್ರೀಂ ಸವಿದರು. ಸಂತೋಷದ ಕ್ಷಣಗಳ ನಡುವೆಯೂ ಹರ್ಷನ ನೆನಪುಗಳು ಇಣುಕಿ ಮನದ ಕದ ತಟ್ಟುತ್ತಿದ್ದವು. ಆದರೂ ಇಬ್ಬರೂ ಒಬ್ಬರಿಗೊಬ್ಬರು ನೋವು ಕೊಡಬಾರದೆಂಬ ಉದ್ದೇಶದಿಂದ ಆ ನೆನಪುಗಳನ್ನು ಕೆದಕುವ ಮೆಲುಕು ಹಾಕುವ ಪ್ರಯತ್ನ ಮಾಡಲಿಲ್ಲ. ವಿಷಾದದ ಮಧ್ಯೆಯೂ ಹರಿಣಿಗೆ ಆ ಸಂಜೆ ತುಂಬಾ ಹಿತವೆನಿಸಿತು. ಕಾರು ಮನೆಗೆ ಬಂದು ತಲುಪುತ್ತಲೇ ಹರಿಣಿ ಜಿಂಕೆಯಂತೆ ಪುಟಿದು ಒಳಗೆ ಓಡಿದವಳೆ ಏನನ್ನೋ ನೋಡಿ ಆಶ್ಚರ್ಯದಿಂದಲೋ ಆಘಾತದಿಂದಲೋ ಹೊಸ್ತಿಲಲ್ಲೇ ನಿಂತು ಬಿಟ್ಟಳು. ಏನಾಯಿತು ಎಂದು ಪರಿಧಿ ಸಹ ಹಿಂದೆ ಬಂದು ನೋಡಲು.. ಅವಳಷ್ಟು ಎತ್ತರದ ಟೆಡ್ಡಿ ಬೇರ್ ಅವಳಿಗಾಗಿ ಕಾಯುತ್ತಾ ಕುಳಿತಿತ್ತು ಎದುರಲ್ಲಿ. 'ಹರ್ಷ ಆರ್ಡರ್ ಮಾಡಿ ಬಂದಿದ್ದನಂತೆ ಡೆಲಿವರಿ ಬಾಯ್ ಈಗ ಬಂದು ಕೊಟ್ಟು ಹೋದನಮ್ಮ' ಹೇಳಿ ತಮ್ಮ ಕನ್ನಡಕದ ಹಿಂದಿನ ಕಣ್ಣೀರ ಪೊರೆಯನ್ನು ಒರೆಸಿಕೊಂಡರು ಅಶ್ವತ್ಥರು. ಹರಿಣಿ ಅದರ ಸನಿಹ ಹೋಗಿ ಅದನ್ನಪ್ಪಿಕೊಂಡು ಮುದ್ದಾಡಿದಳು. 'ಅಣ್ಣಾ ಯಾವಾಗಾದರೂ ಬರಲಿ ನನ್ನ ಟೆಡ್ಡಿ ಸಿಕ್ಕರೆ ಸಾಕಪ್ಪ' ಎಂದಿದ್ದು ನೆನಪಾಗಿ 'ಅಣ್ಣಾ..ಸಾರಿ ಕಣೋ.. ನಾನು ಅವತ್ತು ಹಾಗೆ ಹೇಳಬಾರದಿತ್ತು..' ಎಂದು ಕೆನ್ನೆಗೆ ಹೊಡೆದುಕೊಂಡು ಅತ್ತಳು. ಪರಿಧಿ ಅವಳನ್ನು ಅಪ್ಪಿಕೊಂಡು ಸಮಾಧಾನ ಮಾಡಿ ಅವಳನ್ನು ರೂಮಿಗೆ ಕರೆದುಕೊಂಡು ಹೋದಳು. ಆದರೆ ಆ ಗೊಂಬೆಯನ್ನು ನೋಡಿ ಪರಿಧಿಗೆ ಹರ್ಷ ಹೇಳಿದ ಮಾತು ನೆನಪಾಯಿತು "ಅವಳಿಗೆ ಟೆಡ್ಡಿ, ನಿನಗೆ ಜೀವಂತ ಗೊಂಬೆ..!" ಟೆಡ್ಡಿ ಬಂತು ಹಾಗಾದರೆ ಇನ್ನೊಂದು ಜೀವಂತ ಗೊಂಬೆ..? ಏನಿರಬಹುದು ಅದು.. ಎಂಬ ಆಲೋಚನೆ ಬಂದಿತು. ಅದೇ ಯೋಚನೆಯಲ್ಲಿ ತನ್ನ ರೂಮಿಗೆ ಬಂದವಳಿಗೆ ಗಡಿಯಾರ ಸ್ಮೈಲ್ ಪ್ಲೀಸ್..ಸ್ಮೈಲ್ ಪ್ಲೀಸ್.. ಎಂದು ಆರು ಬಾರಿ ಕೂಗಿತು. ಅವಳ ಯೋಚನೆಗೆ ಅರ್ಥ ಸಿಕ್ಕಂತೆ ಓಹ್ ಇದೇ ತರಹ ಏನಾದರೂ ಮಾತಾಡೋ ಗೊಂಬೆ ಅಥವಾ ಗಿಫ್ಟ್ ಇರಬಹುದಾ..! ಎಂದುಕೊಂಡಳು. ಹರ್ಷನ ಲಗೇಜ್ ಎಲ್ಲಾ ತೆಗೆದು ನೋಡಿದೀನಿ ಆದರೆ ಏನೂ ಇರಲಿಲ್ಲವಲ್ಲಾ..!
ಈಗ ಆಫೀಸಿಗೆ ಲೇಟ್ ಆಗ್ತಿದೆ. ರಾತ್ರಿ ಹರ್ಷನ ಲಗೇಜ್ ಎಲ್ಲಾ ಇನ್ನೊಮ್ಮೆ ತೆಗೆದು ನೋಡೋಣ ಎಂದು, ಸ್ನಾನ ಮಾಡಿ ಪ್ರೆಷ್ ಆಗಿ ತಿಳಿ ನೀಲಿ ಬಣ್ಣದ ಚೂಡಿ ತೊಟ್ಟು ಸಿದ್ದವಾಗಿ ಆಫಿಸಿಗೆ ಹೊರಟಳು ಪರಿಧಿ. ಹರ್ಷ ಸಾವಿರ ಬಾರಿ ಕರೆದರೂ ನನಗೆ ವ್ಯವಹಾರ ಎಲ್ಲಾ ಅರ್ಥವಾಗಲ್ಲ ಕಣೋ! ನನಗೆ ಆ ಸಹವಾಸವೇ ಬೇಡ ಎಂದಿದ್ದವಳು ಅವನು ಅಪೂರ್ಣಗೊಳಿಸಿದ ಪ್ರಾಜೆಕ್ಟ್ ನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಧ್ಯೇಯವನ್ನು ಮುಂದಿಟ್ಟುಕೊಂಡು ಅವನ ಜವಾಬ್ದಾರಿಯಲ್ಲಿ ಸಂಪೂರ್ಣ ಅಲ್ಲದಿದ್ದರೂ ಸ್ವಲ್ಪ ಪಾಲು ತಾನು ಹೊರಲು ಸಂಕಲ್ಪ ಮಾಡಿದ್ದಳು. ಮಾವ "ಹೋಗಲಿ ಬಿಡಮ್ಮ, ನಾನು ನೋಡ್ಕೋತಿನಿ. ನಿನ್ನ ಡ್ಯೂಟಿ ಜೊತೆಗೆ ಆಫೀಸ್ ಕೆಲಸ ಮಾಡೋದು ನಿನಗೂ ಕಷ್ಟವಾಗುತ್ತೆ ಎಂದರೂ ಕೇಳದೆ 'ಇಲ್ಲ ಮಾವ ಇದು ನನ್ನ ಸಂತೋಷಕ್ಕಾಗಿ..ನನ್ನ ಹರ್ಷನ ಸಂತೋಷಕ್ಕಾಗಿ.. ಬೇಡ ಅನ್ಬೇಡಿ, ನನಗೆ ವ್ಯವಹಾರ ಜ್ಞಾನ ಅಷ್ಟೇನೂ ತಿಳಿಯದು, ನೀವೇ ಹೇಳಿಕೊಡಬೇಕು ಪ್ಲೀಸ್..' ವಿನಂತಿಸಿಕೊಂಡಿದ್ದಳು. ಅವರು ಅವಳ ನಿರ್ಧಾರವನ್ನು ಮೆಚ್ಚಿ ಮರುದಿನವೇ ಆಫೀಸಿಗೆ ಕರೆದುಕೊಂಡು ಹೋಗಿ ತಮ್ಮ ಕಂಪನಿ ಹಾಗೂ ಫ್ಯಾಕ್ಟರಿ ಉದ್ಯೋಗಿಗಳಿಗೆ ಅವಳನ್ನು ಪರಿಚಯಿಸಿ ತಮ್ಮ ವ್ಯವಹಾರದ ಬಗ್ಗೆ, ಭಾರ್ಗವ್ ಗ್ರುಪ್ ಆಫ್ ಕಂಪನಿಯ ಶಾಖೆಗಳು ಕಾರ್ಯವಿಧಾನ ಪ್ರತಿಯೊಂದನ್ನು ತಿಳಿಸತೊಡಗಿದ್ದರು. ಪರಿಧಿಯ ಸಹಾಯಕ್ಕಾಗಿ ಒಬ್ಬ ಅಸಿಸ್ಟೆಂಟನ್ನು ನೇಮಿಸಿದರು. ಬ್ಯುಸಿನೆಸ್ ಗೆ ಸಂಬಂಧಿಸಿದ ಪುಸ್ತಕಗಳನ್ನು ಓದತೊಡಗಿದಳು. ವ್ಯವಹಾರಕ್ಕೆ ಸಂಬಂಧಪಟ್ಟ ಟ್ಯಾಲಿ ಅಕೌಂಟ್ಸ್ ಕೋರ್ಸ್ ಗಳಿಗೆ ಸಹ ಸೇರಿಕೊಂಡಳು. ಅವಳ ದಿನಚರಿ ಬದಲಾಯಿತು. ಬೆಳಿಗ್ಗೆ ಏಳು ಗಂಟೆಯೊಳಗೆ ಯೋಗ ಧ್ಯಾನ ಸ್ನಾನ ಮುಗಿಸಿ ಏಳರಿಂದ ಒಂಬತ್ತು ಗಂಟೆ ಕೋಚಿಂಗ್ ಕ್ಲಾಸ್, ನಂತರ ಆಸ್ಪತ್ರೆ ಕೆಲಸ ಸಂಜೆ ಆಫೀಸು ಕೆಲಸ ಅದನ್ನೆಲ್ಲ ಮುಗಿಸಿ ರಾತ್ರಿ ಒಂಬತ್ತು ಹತ್ತು ಗಂಟೆಗೆ ಮಾವನ ಜೊತೆಗೆ ಮನೆಗೆ ಬರುವಾಗಲೂ ಕೆಲವು ಫೈಲ್ ಗಳನ್ನು ಮನೆಗೆ ಹೊತ್ತು ತಂದು ಅವುಗಳನ್ನು ಎಂಟ್ರಿ ಮಾಡುತ್ತ ಕುಳಿತು ಬಿಡುತ್ತಿದ್ದಳು. ಕೆಲಸದ ಬಗ್ಗೆ ಇರುವ ಆಸಕ್ತಿಗಿಂತ ಖಾಲಿ ಕುಳಿತ ಒಂದೊಂದು ಕ್ಷಣವೂ ಅವಳಿಗೆ ಯುಗವಾಗಿ ಭಾಸವಾಗುತ್ತಿದ್ದ ಕಾರಣಕ್ಕಾಗಿ ಈ ಕಾರ್ಯ ಪ್ರವೃತ್ತಿ.. ಕಾಡುವ ಹರ್ಷನ ನೆನಪುಗಳ ದಾಳಿಯಿಂದ ಕಂಬನಿಯನ್ನು ರಕ್ಷಿಸಲು ಅವಳದು ದಿನವಿಡೀ ನಿಲ್ಲದ ಅವಿರತ ಹೋರಾಟ.
ಅವಳೀಗ ತುಂಬಾ ಧೈರ್ಯಶಾಲಿ.. ಹಸನ್ಮುಖಿ.. ಉತ್ಸಾಹದಿಂದ ಜೀವನದ ಕ್ಷಣಗಳನ್ನು ಸಂಭ್ರಮಿಸುವ ಛಲಗಾತಿ..ಲೋಕದ ದೃಷ್ಟಿಯಿಂದ ಮಾತ್ರ !! ಇರುಳ ಸಂಧಿಯಲ್ಲಿ ಸರಿಯುವ ಸಮಯಕ್ಕೆ ಮಾತ್ರ ಗೊತ್ತು ಅವಳ ವೇದನೆ ಏನೆಂದು! ಪ್ರತಿ ರಾತ್ರಿ ಒಂಟಿತನ ಕಾಡುವಾಗ ಹರ್ಷನ ಕೋಣೆಗೆ ಹೋಗಿ ಅವನ ಬಟ್ಟೆ ಪುಸ್ತಕ ಅವನು ಗೆದ್ದ ಅವಾರ್ಡ್ಸ್ ಮೆಡಲ್ಸ್ ಸಂತೋಷದಿಂದ ಕೂಡಿಟ್ಟ ಮ್ಯುಸಿಕ್ ಅಲ್ಬಮ್ಸ್ ಪ್ರತಿಯೊಂದು ವಸ್ತುವಿನಲ್ಲೂ ಇರುವ ಅವನ ಸ್ಪರ್ಶವನ್ನು ಅವನ ನೆನಪುಗಳನ್ನು ಎದೆಗಪ್ಪಿಕೊಂಡು ಬಿಕ್ಕುತ್ತಾಳೆ. ಅವನ ಗೀಟಾರಿನ ತಂತಿಯನ್ನು ಅಪ್ಯಾಯತೆಯಿಂದ ಮೀಟುತ್ತಾ ಅವನಿಗಾಗಿ ಹಾಡು ಹೇಳುತ್ತಾಳೆ. ಅವನು ಹಾಡಿದ ಹಾಡುಗಳನ್ನು ಕೇಳುತ್ತಾ ರಾಗಗಳಲ್ಲಿ ಮತ್ತೊಮ್ಮೆ ಕಳೆದು ಹೋಗುತ್ತಾಳೆ. ಆಗಾಗ ಮೊಬೈಲಿನ ಸಂಭಾಷಣೆಗಳನ್ನು ಕೆದಕಿ ಓದುತ್ತಾಳೆ ನಗುತ್ತಾಳೆ ಅಳುತ್ತಾಳೆ.. 'ನಿನ್ನ ಹೃದಯಾ ಇಲ್ಲಿಯೇ ಬಿಟ್ಟು ಹೋಗು, ನಾನು ಜೋಪಾನ ಮಾಡ್ತಿನಿ..' ತಾನಾಡಿದ ಅಸಂಬದ್ಧ ಮಾತಿಗೆ ಪ್ರತ್ಯುತ್ತರವಾಗಿ ವಾಟ್ಸಪ್ಪಿನಲ್ಲಿ ಕೊನೆಯ ಬಾರಿ ಅವನು ಕಳಿಸಿದ ಹೃದಯವೊಂದು ಈಗಲೂ ಲಯಬದ್ಧವಾಗಿ ಮಿಡಿಯುತ್ತಿರುತ್ತದೆ ಆದರೆ ಸಂದೇಶ ಕಳಿಸಿದ ಜೀವವೊಂದು ಓದುವ ಜೀವದ ಕೈಗಳನ್ನು ತೊರೆದು ಬಹುದೂರ ಸಾಗಿಹೋಗಿದೆ..
'ನೀ ಮರಳಿ ಸಿಗುವುದು ತೀರದ ಕನಸು ಕಣೋ ಹುಡುಗ ಆದರೂ ಏನೋ ದೂರದ ನಿರೀಕ್ಷೆ.. ಎಲ್ಲೋ ಬದುಕಿಗೊಂದು ಹೊಸ ತಿರುವು ಸಿಕ್ಕು ನೀನು ಮತ್ತೆ ಸಿಗಬಹುದೇನೋ ಎಂದು.. ಆ ನಿರೀಕ್ಷೆ.. ನೆನಪುಗಳಲ್ಲಿಯೇ ನನ್ನ ನಾಳೆಗಳು ನಿನಗೆ ಮೀಸಲು.. ಮನಸ್ಸಲ್ಲಿ ಅಡಗಿ ಕುಳಿತಿರುವ ಸಿಹಿ ಗುಟ್ಟು ನೀನು.. ಕಾಡಿಸು ಪೀಡಿಸು ಸತಾಯಿಸು ಅಳಿಸು ನಗಿಸು ಆದರೆ ಯಾವತ್ತೂ ನನ್ನಿಂದ ದೂರಾಗಬೇಡವೋ.. ನೀನಿಲ್ಲದೆ ನಾನಿಲ್ಲ..ನನ್ನ ಅಸ್ತಿತ್ವವಿಲ್ಲ..' ಅವಳ ಹೃದಯ ಹೀಗೆ ಕೂಗುತ್ತಿರುವಾಗ.. ಅನತಿ ದೂರದಲ್ಲಿರುವ ಹೃದಯವೊಂದು ಚಡಪಡಿಸುತ್ತಿತ್ತು.. ಒದ್ದಾಡುತ್ತಿತ್ತು.. ಏನೂ ಅರ್ಥವಾಗದೆ..
ಆ ಸಂಜೆ ಆಫೀಸಿಗೆ ಬಂದ ಕೂಡಲೇ ಹರ್ಷನ ಸೆಕ್ರೆಟರಿ ಶೆಣೈನನ್ನು ತನ್ನ ಕ್ಯಾಬಿನ್ ಗೆ ಬರಹೇಳಿದಳು.
"ಗುಡ್ ಇವನಿಂಗ್ ಮ್ಯಾಮ್..ಹೇಳಿ ಏನಾದರೂ ಪ್ರಾಜೆಕ್ಟ್ ಡೀಟೇಲ್ಸ್..."
"ಅದಲ್ಲ ಮಿ.ಶೆಣೈ ನೀವು ಹರ್ಷನ ಜೊತೆಗೆ ಮುಂಬೈಗೆ ಮೀಟಿಂಗ್ ಹೋಗಿದ್ರಲ್ಲಾ.. ಮೀಟಿಂಗ್ ಮುಗಿದ ಮೇಲೂ ಯಾವಾಗಲೂ ಹರ್ಷನ ಜೊತೆಗೆ ಇರ್ತಿದ್ರಾ..?"
"ಇಲ್ಲ ಮ್ಯಾಮ್.. ಮೀಟಿಂಗ್ ಮುಗಿದ ಮೇಲೆ ಸರ್ ನನಗೆ ಬೇರೆ ಪರ್ಸನಲ್ ಕೆಲಸ ಇದೆ. ನೀವು ಹೊರಡಿ, ನಾಳೆ ಆಫೀಸಿನಲ್ಲಿ ಸಿಗೋಣ ಅಂತ ಹೇಳಿ ಕಳಿಸಿ ಬಿಡ್ತಿದ್ರು. ಯಾಕೆ ಮ್ಯಾಮ್.. ಏನಾದರೂ ಸಮಸ್ಯೆ.."
"ಮತ್ತೆ ಹರ್ಷ ಯಾವುದಾದರೂ ಶಾಪ್ ಗೆ ಹೋಗಿದ್ದು..ಏನಾದರೂ ಖುಷಿಯಿಂದ ಖರೀದಿಸಿದ್ದನ್ನ ನೀವು ನೋಡಿದೀರಾ.." ಅವನ ಪ್ರಶ್ನೆಗೆ ಪ್ರತಿ ಪ್ರಶ್ನೆ ಕೇಳಿದಳು
"....ಅದೂ...ಅದೂ.... ಇ..ಇಲ್ಲ ಮ್ಯಾಮ್. ನನಗೆ ಏನೂ ಗೊತ್ತಿಲ್ಲ" ಕ್ಲುಪ್ತವಾಗಿ ಉತ್ತರಿಸಿದರು ಆದರೆ ಅವರ ಮುಖಭಾವದಲ್ಲಿ ಉಂಟಾದ ಬದಲಾವಣೆ ಅವಳಲ್ಲಿ ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕಿತು. ಇವರು ತಡವರಿಸುವಂತಹ ವಿಷಯ ಅಂತದ್ದೇನಿತ್ತು!!
ಆ ರಾತ್ರಿ ಆಫೀಸಿನಿಂದ ಮನೆಗೆ ಬಂದವಳೇ ಹರ್ಷನ ಕೋಣೆಗೆ ಹೋಗಿ ಅವನ ಲಗೇಜನ್ನು ಒಂದೊಂದೂ ವಸ್ತುವನ್ನು.. ಬಟ್ಟೆಗಳನ್ನು.. ಕೋಣೆಯ ಮೂಲೆ ಮೂಲೆಯನ್ನು ಹುಡುಕಾಡಿದಳು.ಕೈಗೆ ಸಿಕ್ಕ ಹರ್ಷನ ರಿಪೋರ್ಟ್ ಫೈಲನ್ನು ತೆರೆದು ಮೊದಲ ಪುಟ ನೋಡುವಾಗ ಜೀವ ಹಿಂಡಿದಂತಾಗಿ ಕಸಿವಿಸಿಯಾಯಿತು. ಅದನ್ನು ಪೂರ್ಣಗೊಳಿಸದೇ ರ್ಯಾಕಿನಲ್ಲಿ ಎತ್ತಿಟ್ಟಳು. ಆ ರೂಮೀನಲ್ಲಿ ಅವಳು ಊಹಿಸಿದಂತಹುದು ನಿರೀಕ್ಷಿಸಿದಂತುಹುದು ಏನೂ ಸಿಗಲೇ ಇಲ್ಲ. ಹರ್ಷನಿಗೆ ತನ್ನ ಹಾಗೆ ಡೈರಿ ಬರೆಯುವ ಹವ್ಯಾಸ ಕೂಡ ಇರಲಿಲ್ಲವೆಂದು ಬೇಸರಿಸಿಕೊಂಡಳು. ಇದ್ದಿದ್ದರೆ ತನ್ನ ಕುತೂಹಲಕ್ಕೆ ಉತ್ತರ ಸಿಗುತ್ತಿತ್ತು. ಹುಡುಕಾಟಕ್ಕೆ ತೆರೆ ಬೀಳುತ್ತಿತ್ತು ಎಂದುಕೊಂಡಳು. ಅವಳು ಅವನಿಗೆ ಗಿಫ್ಟ್ ಎಂದು ಕೊಟ್ಟ ಡೈರಿಯ ಪುಟಗಳು ಇಂದಿಗೂ ತುಂಬಿರಲಿಲ್ಲ. ಅವನಿಗೆ ಮನಸ್ಸು ಬಂದಾಗ ಗೀಚಿದ ಕವಿತೆಗಳ ಹೊರತು ಅದರಲ್ಲಿ ಬೇರೆನೂ ಸುಳಿವು ಸಿಗಲಿಲ್ಲ. ಅವನು ಬರೆದ ಕೊನೆಯ ಕವಿತೆಯ ಸಾಲುಗಳನ್ನು ಬೆರಳುಗಳಿಂದ ಮುಗ್ಧವಾಗಿ ಸ್ಪರ್ಶಿಸುತ್ತ ಓದಿ ಕಣ್ಮನ ತುಂಬಿಕೊಂಡಳು..
ಅವಳೆಂದರೆ ಮುಗಿಯದ ಉತ್ಸಾಹದ ಚುಮುಚುಮು ಮುಂಜಾವಿನ ಮಂಜಿನ ಹನಿಯಂತೆ..
ಅವಳೆಂದರೆ ಹಸಿರೆಲೆಯ ಮೇಲೆ ಕೂತು ಫಳಫಳನೆ ಹೊಳೆಯುವ ಇಬ್ಬನಿಯಂತೆ..
ಅವಳೆಂದರೆ ನಿಲ್ಲದೆ ಕುಣಿಯುವ ಮನಕೆ ತಾಳ ಹಾಕುವ ವೈಣಿಯಂತೆ..
ಅವಳೆಂದರೆ ಕನವರಿಸಿ ಕರೆವ ಇರುಳ ಕನಸಿನ ಕೊನೆಯಿರದ ಕಲ್ಪನೆಯಂತೆ..
ಅವಳೆಂದರೆ ಉಸಿರು ಗೀಚುವ ಪ್ರತಿ ಕವನದ ಭಾವಲಹರಿಯ ಸಂಶೋಧಕಿಯಂತೆ..
ಅವಳೆಂದರೆ ಕಮರುವ ಕ್ಷಣಗಳಲಿ ಹೊಸ ಭರವಸೆಯ ಅಲೆಗಳನ್ನು ಪುಟಿದೇಳುವಂತೆ ಮಾಡುವ ವಾಗ್ಮಿಯಂತೆ..
ಅವಳೆಂದರೆ ನೀರಸ ಬದುಕಿಗೆ ತುಂಟ ಕದನದಿ ಖುಷಿಯ ಬಣ್ಣ ತುಂಬಿಸುವ ಮಳೆಬಿಲ್ಲಿನಂತೆ..
ಅವಳೆಂದರೆ ನಿರ್ಜೀವತೆಗೂ ಜೀವ ತುಂಬುವ ಸಂಜೀವಿನಿಯಂತೆ..
my dearest Angel..❤
ಮುಂದುವರೆಯುವುದು..
⚛⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ