ಎಂತಹ ಬರಸಿಡಿಲ ಕಷ್ಟದ ನಡುವೆಯೂ ಆಕೆಯದು ಅಚಲ ನಂಬಿಕೆ. ಬತ್ತದ ಭಕ್ತಿಯ ಪರಾಕಾಷ್ಠೆ.
ದೇವರ ಸಾನಿಧ್ಯಕ್ಕೆ ಹಾತೊರೆಯುತ್ತಿತ್ತು ಅವಳ ಮನಸ್ಸು. ಕುಳಿತರೂ ನಿಂತರೂ ಮಲಗಿದರೂ ನಡೆದಾಡಿದರೂ ಮಾತಿಗೂ ಮೊದಲು ದೇವರ ಹೆಸರೊಂದು ಅವಳ ಬಾಯಲ್ಲಿ ಸದಾಕಾಲವೂ ಉಲಿದಾಡುತ್ತಿತ್ತು. ಆಕೆ ಅಷ್ಟೇನೂ ಸ್ಥಿತಿವಂತಳಲ್ಲ. ಹುಟ್ಟಿದಾಗಿನಿಂದ ಕಂಡದ್ದು ಕಡುಬಡತನ. ಹಾಸುವುದಕ್ಕಿದ್ದರೆ ಹೊದೆಯಲಿಕ್ಕಿಲ್ಲ, ಹೊದ್ದರೆ ಹಾಸಲಿಕ್ಕಿಲ್ಲ.
ಅಪ್ಪ ಅಮ್ಮ ಅವರಿವರ ಹೊಲದಲ್ಲಿ ಬಿತ್ತನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಊಟಕ್ಕೆ ಒಂದು ತುತ್ತು ಕಡಿಮೆಯಾದರೂ ಸರಿ ದೇವರ ಮುಂದಿನ ದೀಪವನ್ನು ನಂದಲು ಬಿಡುತ್ತಿರಲಿಲ್ಲ ಅವಳ ಅಮ್ಮ. ಪಿಳಿಪಿಳಿ ಕಣ್ಣಲ್ಲಿ ಅಮ್ಮ ದೀಪ ಹಚ್ಚುವುದನ್ನು ನೋಡುತ್ತಾ 'ಅವ್ವಾ.. ನೀ ದೇವರ ಮುಂದ ದೀಪ ಯಾಕ್ ಹಚ್ತಿ ದಿನಾ' ಎಂದು ಕೇಳಿದಳು
'ದೇವರು ಎಲ್ಲಿಲ್ಲ ಹೇಳು? ಎಲ್ಲಾ ಕಡೆಗೂ ಅದಾನ. ಆದರೂ ದೇವರು ಅದಾನ ಅನ್ನಾಕ ಜೀವಂತ ಸಾಕ್ಷಿ ಈ ದೀಪ. ಇದು ಹೆಂಗ ಕತ್ತಲಾ ಅಳಿಸಿ ಬೆಳಕ ಚೆಲ್ಲತ್ತಲಾ ಹಂಗೇ ದೇವರು ನಮ್ಮ ಜೀವನದಾಗಿನ ಕಷ್ಟ ಎಲ್ಲಾ ಕಳಿದು ಹೊಸ ಬದುಕು ಕೊಡ್ತಾನ. ನೆನಪಿಟ್ಕೋ ದೇವರ ಮ್ಯಾಲಿನ ನಂಬಿಕಿ ಯಾವತ್ತೂ ಕಳ್ಕೋಬ್ಯಾಡ"
ಅಮ್ಮ ಹೇಳಿದ ಮಾತು ಆ ಪುಟ್ಟ ಗಂಗಮ್ಮಳ ಮನದಲ್ಲಿ ಗಾಢವಾಗಿ ಪ್ರಭಾವ ಬೀರಿತು. ಅದೇ ಸಂಜೆಯ ವೇಳೆ ಗಂಗಮ್ಮಳ ತಾಯಿ ಹೊಲದ ಕೆಲಸ ಮುಗಿಸಿ ಮನೆಗೆ ಬಂದು ಸುಸ್ತಾಗಿ ಜಗಲಿಯ ಮೇಲೆ ಕುಳಿತಿದ್ದಳು. ಗಂಗಮ್ಮ ನೀರು ತಂದು ಕೊಟ್ಟಳು. ನೀರು ಕುಡಿದು ಅಲ್ಲೇ ಪಕ್ಕಕ್ಕೆ ವಾಲಿ ಮಲಗಿದ ಅವಳ ತಾಯಿ ಚಿರನಿದ್ರೆಗೆ ಜಾರಿದಳು. ಗಾಬರಿಯಿಂದ ಗಂಗಮ್ಮ ಅಮ್ಮನನ್ನು ಅಲುಗಾಡಿಸಿ ಅತ್ತು ಕರೆದರೂ ಕಾಲನ ಅನುಮತಿ ರದ್ದಾಯಿತು. ಅದೇ ರಾತ್ರಿ ಅಂತ್ಯಸಂಸ್ಕಾರವೂ ಮುಗಿದು ಹೋಯಿತು. ಗಂಗಮ್ಮ ಮನೆಯೊಳಗೆ ಕಾಲಿಟ್ಟಾಗ ಅಮ್ಮ ಹಚ್ಚಿಟ್ಟ ದೀಪ ಇನ್ನೂ ನಮ್ರವಾಗಿ ಬೆಳಗುತ್ತಿತ್ತು. ಮಿನುಗುತ್ತಿತ್ತು. ಮುಗುಳ್ನಗುತ್ತಲಿತ್ತು. ತಾಯಿ ದೇವರನ್ನು ಕಾಣುತ್ತಿದ್ದ ಅದೇ ದೀಪದಲ್ಲಿ ಗಂಗಮ್ಮ ತನ್ನ ತಾಯಿಯನ್ನು ಕಾಣತೊಡಗಿದಳು. ಅಮ್ಮ ಹೇಳಿದ ಮಾತುಗಳು ಕಿವಿಯಲ್ಲಿ ಮಾರ್ದನಿಸುತ್ತಲೇ ಇದ್ದವು. ಹೀಗೆ ಬೆಳೆದಿತ್ತು ಗಂಗಮ್ಮಳ ದೇವರ ಜೊತೆಯಲ್ಲಿ ಗಾಢವಾದ ಸ್ನೇಹ.
ಅಮ್ಮನ ನಂತರದ ಬದುಕು ಇನ್ನೂ ಘೋರ ಭಯಂಕರವಾಗಿತ್ತು. ಕಟುಕ ಅಪ್ಪನಿಗೆ ಮಗಳೆನ್ನುವ ಮಮಕಾರಕ್ಕಿಂತ ತಲೆಯ ಮೇಲಿನ ಭಾರ ಎನ್ನಿಸಿಬಿಟ್ಟಿದ್ದಳು. ಸಣ್ಣಪುಟ್ಟ ಮಾತಿಗೂ ದನಕ್ಕೆ ಬಡಿಯುವಂತೆ ಬಡಿಯುತ್ತಿದ್ದ. ರೋಧನೆ ಹೆಚ್ಚಾದರೆ ಮತ್ತೊಂದು ಹೊಡೆತ ಉಚಿತ. ಹಲ್ಲುಕಚ್ಚಿ ಸಹಿಸಿಕೊಂಡಳು ಗಂಗಮ್ಮ. ಮತ್ತದೇ ದೇವರ ಮುಂದಿನ ದೀಪದೊಂದಿಗೆ ತನ್ನ ಅಳಲು ಹೇಳಿಕೊಂಡು ಹಗುರಾಗುತ್ತಿದ್ದಳು.
ಒಂದೇ ಕಾರಣಕ್ಕಾಗಿಯೇ ಕಣ್ಣೀರು ವ್ಯಯಿಸುವುದು ವ್ಯರ್ಥವೆಂದೋ ಏನೋ ಹನ್ನೆರಡು ವರ್ಷಕ್ಕೆ ಮೂವತ್ತರ ಗಂಡನ್ನು ಹುಡುಕಿ ವಧುದಕ್ಷಿಣೆ ಪಡೆದು ಗಂಗಮ್ಮಳ ಮದುವೆ ಮಾಡಿ ಕೊಟ್ಟು ತನ್ನ ಕೈ ತೊಳೆದುಕೊಂಡ ಅವರಪ್ಪ. ಕಟ್ಟಿಕೊಂಡ ಗಂಡನೂ ಒರಟು ಹೃದಯದವನಾದರೆ ಆಕೆಯ ನಸೀಬನ್ನು ಎಂತಹ ಕಲ್ಲುಮನಸ್ಸಿನಿಂದ ಬರೆದಿರಬೇಕು ಆ ಬ್ರಹ್ಮ!
ಹರೆಯದ ಕನಸುಗಳು ರೆಕ್ಕೆ ಸುಟ್ಟುಕೊಂಡು ವಿಲವಿಲನೇ ಒದ್ದಾಡಿದವು. ಚಂದದಿ ಅರಳಿ ಸುವಾಸನೆ ಬೀರಬೇಕಾದ ಮನಸ್ಸಿನ ಭಾವನೆಗಳು ಕ್ಷುದ್ರನ ಕೈಗೆ ಸಿಕ್ಕು ಹೊಸಕಿ ಹೋದವು. ನಿರಂತರವಾಗಿ ಮಾಗಿ ಸೃಷ್ಟಿಯ ಒಡಲಿಗೆ ತಂಪರೆಯಬೇಕಾದ ಹೆಣ್ತತನದ ಸೊಗಸು ಕೊಳೆತು ಹೋಯಿತು ಹೊಲಸು ಕಾಮದ ತೃಷೆಯ ನೀಗಿಸುವ ಸಲುವಾಗಿ. ಆಗಲೂ ಕುಗ್ಗಲಿಲ್ಲ ಆಕೆ. ಸಾಯಲಿಲ್ಲ ಅವಳ ನಂಬಿಕೆ. ಮತ್ತೇ ದೇವರ ಮುಂದೆ ನಿಂತು ಬೆಳಗುವ ದೀಪದ ಜೊತೆಗೆ ಮಾತನಾಡುತ್ತಾ ತನ್ನ ಅಳಲು ಹೇಳಿಕೊಳ್ಳುತ್ತಾಳೆ.
ಒರಟು ಹೃದಯದ ಗಂಡ. ಇಪ್ಪತ್ನಾಲ್ಕು ಗಂಟೆಗಳ ಬಿಡುವಿಲ್ಲದ ಚಾಕರಿ, ಒಪ್ಪತ್ತಿನ ಊಟ. ಮಳೆ ಸುರಿದಾಗಲೆಲ್ಲ ಜರಡಿಯಂತಾಗುವ ಮುರುಕು ಮಾಳಿಗೆ.ಸಣ್ಣಪುಟ್ಟ ತಪ್ಪಿಗೆ ತೊಡೆಯ ಸಂಧಿ ಹಸಿರಾಗುವಂತೆ ಬೀಳುವ ಬಾಸುಂಡೆ ಏಟು. ಗಂಡನ ಬೈಗುಳ. ಅನುಮಾನದ ಹುಳ ಹೊತ್ತು ಕಿಡಿಕಾರುವ ನೋಟ. ವರ್ಷಗಳು ಉರುಳಿದರೂ ಮಕ್ಕಳಿಲ್ಲವೆಂಬ ಕುಹಕ. ಬಂಜೆತನದ ಅಪವಾದ.. ಗಂಗಮ್ಮಳ ಬದುಕು ನರಕಮಯವಾಗಿತ್ತು.
ಸೌಭಾಗ್ಯ ಎಂಬಂತೆ ಹುಟ್ಟಿದ್ದ ಒಬ್ಬನೇ ಒಬ್ಬನೇ ಒಬ್ಬ ಮಗ. ಅವಳದೇ ಬಣ್ಣ ಕಣ್ಣು ಮೂಗು ಹೋಲಿಕೆ ಹೊತ್ತು ಭೂಮಿಗೆ ಬಂದಿದ್ದ. ಆದರೆ ಗುಣ? ಸಮಯಕ್ಕೆ ಮಾತ್ರ ಗೊತ್ತಿರಬಹುದು. ಅಂದೇ ಮೊದಲ ಬಾರಿಗೆ ಗಂಗಮ್ಮ ಸಂತೋಷವನ್ನು ಹಂಚಿಕೊಳ್ಳುತ್ತ ದೇವರ ಮುಂದಿನ ದೀಪ ಬೆಳಗಿದ್ದು. ದೇವರಿಗೂ ಖುಷಿಯಾಗಿ ಮೈಮರೆತು ಒಂದು ಆಶೀರ್ವಾದ ಮಾಡಿಯೇ ಬಿಟ್ಟನೇನೋ..
ಗಂಗಮ್ಮಳ ಮಗ ಅಕ್ಷರಶಃ ಅಮ್ಮನ ಮಗನಾಗಿದ್ದ. ಅಮ್ಮನ ಕಣ್ಣಲ್ಲಿ ಸಣ್ಣ ಹನಿ ಮೂಡಿ ಕೆನ್ನೆ ತಾಕುವ ಮೊದಲು ಅವನ ಪುಟ್ಟ ಅಂಗೈ ಆ ಹನಿಯನ್ನು ಮಾಯಮಾಡಿ ಬಿಡುತ್ತಿದ್ದವು. ಗಂಗಮ್ಮ ತನ್ನ ಬದುಕಿನ ಕಹಿಯನ್ನು ಕಂದನ ಲಾಲನೆ ಪಾಲನೆಯಲ್ಲಿ ಮರೆತೇ ಹೋದಳು.
ಮಗ ಬೆಳೆದಂತೆಲ್ಲಾ ಅಪ್ಪನ ದಬ್ಬಾಳಿಕೆಯನ್ನು ದಿಟ್ಟತನದಿಂದ ವಿರೋಧಿಸಿ ಗಂಗಮ್ಮಳ ಪರವಾಗಿ ಮಾತನಾಡತೊಡಗಿದ್ದ. ಮಗನ ಮೇಲಿನ ಅಕ್ಕರೆಗೋ ತನ್ನ ಸಣ್ಣತನದ ಮೇಲಿನ ನಾಚಿಕೆಗೋ ಅವಳ ಗಂಡನ ಆಟಾಟೋಪ ಕ್ರಮೇಣ ಕಡಿಮೆಯಾಗಿತ್ತು. ಗಂಗಮ್ಮಳ ಜೀವನದಲ್ಲಿ ಸಂತಸಕ್ಕೆ ಕೊರತೆಯೇ ಇರಲಿಲ್ಲ. ಮಗ ಹೂವಿನಂತೆ ಪೊರೆಯುತ್ತಿದ್ದ. ಸೆರಗು ಹಿಡಿದು ಅವಳ ಹಿಂದಿಂದೆ ಸುತ್ತುತ್ತಾ ಅಚ್ಚರಿಯ ನೋಟದಿಂದ ಅಭೇಧ ಪ್ರಪಂಚದ ಒಗಟುಗಳನ್ನು ಪ್ರಶ್ನಿಸುತ್ತಿದ್ದ. ಗಂಗಮ್ಮ ಅನಕ್ಷರಸ್ಥಳಾದರೂ ಬದುಕಿನ ಶಾಲೆಯಲ್ಲಿ ಆಕೆ ಪಾರಂಗತಳು. ತನ್ನದೇ ಶೈಲಿಯಲ್ಲಿ ಅವನಿಗೆ ಕುತೂಹಲಕಾರಿ ಸಂಗತಿಗಳನ್ನು ಬಿಡಿಸಿ ಹೇಳುತ್ತಿದ್ದಳು.
ತನಗಾಗಿ ಮೀಸಲಿದ್ದ ಭಗ್ನ ಕನಸುಗಳನ್ನೆಲ್ಲ ಮಗನ ಕಣ್ಣಲ್ಲಿ ಕಾಣತೊಡಗಿದ ಗಂಗಮ್ಮ ಅವನನ್ನು ಚೆನ್ನಾಗಿ ಓದಿಸಿ ಬರೆಸಿ ಒಳ್ಳೆಯ ಶಿಕ್ಷಣ ಕೊಡಿಸಿ ಉತ್ತಮ ನಾಗರೀಕನನ್ನಾಗಿ ಮಾಡುವಲ್ಲಿ ನಿರತಳಾದಳು. ಅವಳ ತದೃಪಿ ಗುಣದವ ಸೌಮ್ಯ ಸ್ವಭಾವ, ಸನ್ನಡತೆಯ ಸುಪುತ್ರ ತಾಯಿಯ ಮಾತಿಗೆ ಚಕಾರ ಎತ್ತುತ್ತಿರಲಿಲ್ಲ. ಗಂಗಮ್ಮಳಿಗೂ ಅವನಿಗೂ ಒಂದೇ ವಿಷಯದಲ್ಲಿ ವ್ಯತ್ಯಾಸವಿತ್ತು. ಅವಳಂತೆ ಅವನು ದೇವರಿಗೆ ಕೈ ಮುಗಿಯುತ್ತಿರಲಿಲ್ಲ. ಬದಲಾಗಿ ಅಮ್ಮನ ಕಾಲಿಗೆ ಬಿದ್ದು ನಮಸ್ಕರಿಸಿ ಹೊರಹೋಗುತ್ತಿದ್ದ.
ಮನೆಯಲ್ಲಿದ್ದಷ್ಟು ಹೊತ್ತು ತಾಯಿಯ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುತ್ತ ತನ್ನ ಅಳಿಲು ಸೇವೆ ಸಲ್ಲಿಸುತ್ತ, ಆಗಾಗ ತರಲೆ ಮಾತಾಡುತ್ತ ಅವ್ವನ ನಗುವಿಗೆ ಭಾಜನನಾಗುತ್ತಿದ್ದ.
ಕಷ್ಟದ ಕಾಲಕ್ಕೆ ಆಮೆಯಂತೆ ಸರಿಯುವ ಸಮಯ, ಸುಖದ ನೆರಳಲ್ಲಿ ದಣಿವಿಲ್ಲದಂತೆ ಓಡುತ್ತದೆ. ಗಂಗಮ್ಮಳ ಮಗ ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ. ಯಾವುದೋ ಬೇರೆ ಊರಿನಲ್ಲಿ ಮಾಸ್ತರ್ ಕೆಲಸ. ರಜೆಗಳಲ್ಲಿ ಊರಿಗೆ ಬಂದು ಹೋಗಿ ಮಾಡುತ್ತಿದ್ದ. ತನ್ನ ಮೊದಲ ಸಂಬಳದಲ್ಲಿ ತಾಯಿಗೆ ಬಂಗಾರದ ಬಳೆ ಮಾಡಿಸಿ ತೊಡೆಸಿದರೆ ಗಂಗಮ್ಮಳ ಕಣ್ಣು ನೀರಾಗಿದ್ದವು ಖುಷಿಯಿಂದ. ಎದೆಹಾಲಿಗೆ ಪ್ರತಿಯಾಗಿ ಹಿಡಿಯಷ್ಟು ಪ್ರೀತಿ ಹೊರತು ಬೇರೇನು ಬೇಡುತ್ತದೆ ತಾಯಿಹೃದಯ! ಅದಕ್ಕಿಂತಲೂ ಹೆಚ್ಚಾಗಿ ಏನಾದರೂ ಸಿಕ್ಕರೂ ಅದು ಅವಳ ಮಾತೃತ್ವಕ್ಕೆ ಬೋನಸ್ ಇದ್ದಂತೆ. ಆದರೂ ಅವಳ ಪ್ರೀತಿ ಮುಂದೆ ಉಳಿದೆಲ್ಲವೂ ಶೂನ್ಯ ನಗಣ್ಯ.
ಅದೊಮ್ಮೆ ರಜೆಗೆಂದು ಮನೆಗೆ ಬಂದಿದ್ದ ಮಗನಿಗೆ ಅವನಿಷ್ಟದ ಗೆಣಸಿನ ಹೋಳಿಗೆ ಮಾಡಿ ಅದಕ್ಕೆ ತುಪ್ಪ ಸವರಿ ತಿನ್ನಿಸುತ್ತಿದ್ದಳಾಕೆ. ಮಗ ಕೇಳಿದ್ದ 'ನೀ ದೇವರನ್ನ ಎಷ್ಟ ನಂಬ್ತಿಯಲಾ ಯಾವತ್ತರ ತೀರ್ಥಯಾತ್ರಾ ಮಾಡ್ಬೇಕು ಅಂತ ಅನ್ಕೊಂಡಿಲ್ಲೇನ ಬೇ'
"ಅಲ್ಲಿ ಹೋದರಷ್ಟ ದೇವರ ಸಿಗ್ತಾನೇನು? ಅವಾ ನಮ್ಮ ಮನಸನ್ಯಾಗ ಇದ್ದೇ ಇರ್ತಾನ."
"ದಿನಾ ದೇವರ ಮುಂದಿನ ಹುಂಡಿಗೆ ರೊಕ್ಕ ಯಾಕ್ ಹಾಕ್ತಿ ಅಂತ ನಾ ಕೇಳಿದಾಗ ಕ್ಷೇತ್ರಕ್ಕ ಹೋಗಾಕ ಅಂತ ಹೇಳ್ತಿದ್ದೀ..?"
"ಅದು ಮುಂದ ಯಾವಾಗಾದ್ರೂ ಹೋಗಾಕ.. ನೀ ಹೋಳಿಗಿ ತಿನ್ನ ಸುಮ್ಮ" ಅವನು ಮುಂದೆ ಮಾತಾಡಲಿಲ್ಲ. ಊಟ ಕೂಡ ಪೂರ್ತಿ ಮಾಡದೇ ಎದ್ದು ದರದರ ಹೊರನಡೆದಿದ್ದ. ಎಂದೂ ಹೀಗೆ ಮಾಡದ ಮಗನ ವರ್ತನೆ ಅವಳನ್ನು ಗಾಬರಿಗೀಡು ಮಾಡಿತ್ತು.
ಮರಳಿ ಬಂದವನೇ ಸಂತಸದಿಂದ 'ಕಾಶಿ ಪುಣ್ಯಕ್ಷೇತ್ರ ದರ್ಶನಕ್ಕ ವ್ಯವಸ್ಥೆ ಮಾಡಿಸೀನಿ. ಓಣ್ಯಾಗ ಎಲ್ಲಾರ ಜೊತಿ ನೀನು ಹೋಗಿ ಬಾರಬೇ' ಎಂದು ಟಿಕೆಟ್ ಮತ್ತಿತರ ದಾಖಲೆ ಅವಳ ಕೈಗಿಟ್ಟಿರೆ ಸುಕ್ಕುಗಟ್ಟಿದ ಗಲ್ಲದ ಮೇಲೆ ಹರ್ಷದ ನೆರಿಗೆಗಳು. ಕನಸು ಕಾಣುವುದೇ ಅಪರಾಧವೆಂದುಕೊಂಡವಳ ಕಣ್ಣಲ್ಲಿ ನನಸಿನ ಹನಿಸಿಂಚನಗಳು. ಮಾತಿಗೆ ಆಸ್ಪದವೆಲ್ಲಿದೆ ಕಂಠ ತುಂಬಿದ ಸಂತೋಷದ ಮುಂದೆ. ಅಕ್ಕರೆಯಿಂದ ಮಗನ ಗಲ್ಲ ತೀಡಿ ನೆಟಿಕೆ ತೆಗೆದು ಆಲಂಗಿಸಿ ಸಾರ್ಥಕಭಾವ ಸೂಚಿಸಿದ್ದಳು.
ಹಿರಿಹಿರಿ ಹಿಗ್ಗಿ ಹರೆಯದ ಹುಡುಗಿಯಂತೆ ಓಡಾಡುತ್ತ ಹೊರಡುವ ಸಿದ್ದತೆಯಲ್ಲಿ ತೊಡಗಿದ ಗಂಗಮ್ಮ ಮಗನ ಹಿರಿಮೆಯನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ದೇವರ ದರ್ಶನಕ್ಕೆಂದೇ ಕೂಡಿಟ್ಟ ಚಿಲ್ಲರೆ ಕಾಸುಗಳನ್ನು ಜೋಪಾನವಾಗಿ ಚೀಲಕ್ಕೆ ತುಂಬಿಕೊಂಡಳು. ಕಾಶಿ ವಿಶ್ವನಾಥನ ಹುಂಡಿಗೆ ಹಾಕಲು.
ಹೋಗುವ ದಿನದವರೆಗೂ ಎಲ್ಲರ ಬಾಯಲ್ಲಿಯೂ ಕಾಶಿ ಅಯೋಧ್ಯೆ ಕ್ಷೇತ್ರಗಳ ವೈಭೋಗದ ಚರ್ಚೆಯೇ.. ಅಲ್ಲಿಯ ವರ್ಣನೆ ಕೇಳುವಾಗೆಲ್ಲ ದೇವರ ಸಾಕ್ಷಾತ್ ದರ್ಶನವಾದಂತೆ ಪುಳಕಿತಳಾಗುತ್ತಿದ್ದಳು ಗಂಗಮ್ಮ. ಹೊರಡುವ ದಿನ ಯಾವಾಗ ಬರುವುದೋ ಎಂದು ಕಾಯುತ್ತಾ ಶಬರಿಯ ಹಾಗೆ ತಪಸ್ಸೇ ಆಚರಿಸಿ ಬಿಟ್ಟಳು.
ಅಂದು ಹೊರಡುವ ದಿನ. " ಇವತ್ತ್ ಸಂಜೀಕ ಗಾಡಿ ಬರ್ತದ. ಲಗೂನ ರೆಡಿಯಾಗಬೇ. ಇಲ್ಲಿಂದ ಹೋದ ನಂತರ ಮುಂದ ಟ್ರೇನಿಗೆ ಹೋಗುದ ಇರತ್ತ. ಅಲ್ಲಿ ಹುಷಾರ ಮತ್ತ. ಮಂದಿಗದ್ದಲ ಭಾಳ ಇರ್ತದ. ಸತತ ಗೊತ್ತಿರೋರ ಜೊತಿಗೆ ಇರು. ಥಂಡಿ ಭಾಳ್ ಇರ್ತದ ಬೆಚ್ಚಗ ಶಾಲು ಹೊದ್ದುಕೊಂಡಿರು. ಟೈಮಿಗೆ ಸರಿಯಾಗಿ ಊಟ ಮಾಡು. ಉಪವಾಸ ವನವಾಸ ಮಾಡಬ್ಯಾಡಲ್ಲಿ. ಜ್ವರ ಕೆಮ್ಮು ನೆಗಡಿ ಬಂದ್ರ ಇಲ್ಲಿ ನೋಡು ಈ ಗುಳಿಗಿ ತಗೋ. ನಡೆದಾಡಿ ಕಾಲು ದಣಿದ್ರ ಈ ಮುಲಾಮ ಹಚ್ಕೊ ರಾತ್ರಿ. ಖರ್ಚಿಗೆ ಹೆಚ್ಚು ಕಡಿಮಿ ಇರ್ಲಿ ರೊಕ್ಕ ಇಟ್ಕೊಂಡಿರು.. " ಹೀಗೆ ಬೆಳಗಿನಿಂದ ಮಗನ ಉಪದೇಶ ಜಾರಿಯಲ್ಲಿತ್ತು. ಎಲ್ಲದಕ್ಕೂ ಹ್ಮೂ ಎಂಬ ಒಂದೇ ಉತ್ತರ ಆಕೆಯದು. ಹೆತ್ತ ತಾಯಿಗಿಂತ ಒಂದು ಕೈ ಮೇಲೂ ಮಗನ ಕಾಳಜಿ ಕಕ್ಕುಲಾತಿ. ಆಕೆ ಮೂಕವಿಸ್ಮಿತೆ. ಎಲ್ಲ ಎಚ್ಚರಿಕೆ ಮುಗಿಸಿ ಮಧ್ಯಾಹ್ನ ತೋಟದ ಕಡೆಗೆ ಹೋದನವನು. ದೇವರ ಮುಂದಿನ ದೀಪವೇಕೋ ನಂದಿಹೋಗಿತ್ತು. ಮನಸ್ಸು ವಿಹ್ವಲಗೊಂಡು ಕೂಡಲೇ ದೀಪ ಬೆಳಗಿ ಕೈ ಮುಗಿದಳು ಗಂಗಮ್ಮ.
ಸಂಜೆ ನಾಲ್ಕಾಗಿತ್ತು. ಕಾಶಿಗೆ ಹೊರಡುವವರೆಲ್ಲರು ಒಂದೆಡೆ ಸೇರಿದರು. ಕರೆದುಕೊಂಡು ಹೋಗುವ ಗಾಡಿಯೂ ಬಂದಿರಲಿಲ್ಲ. ಕಳಿಸಿ ಕೊಡಲು ಮಗನೂ ಬಂದಿರಲಿಲ್ಲ. ಗಂಗಮ್ಮ ಕಾಯುತ್ತಲೇ ಇದ್ದಳು.
ಆಗಲೇ ಒಂದು ವಾಹನ ಬಂದು ಇವರ ಎದುರು ನಿಂತಿತು. ಮಗ ಇನ್ನೂ ಬರಲಿಲ್ಲವಲ್ಲ ಎಂದು ಅವಳ ಗೂಡು ಕಣ್ಣು ಹುಡುಕುತ್ತಿದ್ದರೆ ವಾಹನದಿಂದ ಮಗನ ಶವ ಕಣ್ಣಮುಂದೆ ಬಂದಿತು. 'ಹೃದಯಾಘಾತದಿಂದ ಸಾವು ಸಂಭವಿಸಿತ್ತಂತೆ' ಗುಂಪಿನಲ್ಲೊಬ್ಬ ಹೇಳಿದ.
ಗಂಗಮ್ಮಳ ಕಣ್ಣು ನಿರ್ಲಿಪ್ತವಾಗಿ ನೋಡುತ್ತಾ
"ಅಯ್ಯೋ ಕೂಸೇ.. ನನಗಿಂತ ಮೊದ್ಲೇ ದೇವರ ದರ್ಶನಕ್ಕೆ ಹೋಗಿ ಬಿಟ್ಟೇನೋ? ನನಗಿಂತಲೂ ಅವಸರಿತ್ತೇನ ನಿನಗ? ದೇವರ ಹುಂಡಿಗೆ ಹಾಕಾಕ ರೊಕ್ಕಾನ ಮರ್ತು ಹೋಗಿಯಲ್ಲss.." ಎಂದು ಚೀಲ ಬಿಚ್ಚಿ, ಕಟ್ಟಿಟ್ಟ ಚಿಲ್ಲರೆ ಕಾಸುಗಳನ್ನು ಅವನ ಮೇಲೆ ತೂರಿ 'ಇವನ್ನು ದೇವರಿಗೆ ತಲುಪಿಸಿ ಬಿಡೋ ನನ್ನಪ್ಪ' ಎಂದು ಗಂಟಲು ಬಿರಿಯುವಂತೆ ರೋಧಿಸತೊಡಗಿದಳು.
ಅತ್ತ ಕಾಶಿಗೆ ಹೊರಡುವ ವಾಹನ ಎದುರು ಬಂದು ನಿಂತಿತ್ತು. ಯಾರ ದುಃಖ ಯಾರಿಗೆ? ಹೊರಡುವವರು ಹೋದರು. ಗಂಗಮ್ಮಳ ಅಳು ಅವ್ಯಾಹತವಾಯಿತು.
ಎಂತಹ ಕಷ್ಟದ ಸಮಯದಲ್ಲೂ ದೇವರನ್ನು ಹಳಿಯದ ಶಾಪಿಸದ, ಅದು ಯಾಕೆ? ಇದು ಯಾಕೆ? ಎಂದು ತಕರಾರು ಮಾಡದ ಗಂಗಮ್ಮ ಅಂದು ರೌದ್ರವಾಗಿದ್ದಳು. ದೇವರ ನೆತ್ತರನ್ನೇ ಬಗೆದು ಪುತ್ರನ ಪ್ರಾಣ ರಕ್ಷಿಸಿಕೊಳ್ಳಲು ಹೊರಟ ಚಂಡಿಯಾಗಿದ್ದಳು.
ದೇವರ ಪ್ರತಿರೂಪವನ್ನೇ ಎತ್ತಿ ಆಚೆ ಎಸೆದಳು. ಇನ್ನೂ ನಗುತ್ತಲೇ ಇದ್ದ ದೀಪವನ್ನೆತ್ತಿ ನೆಲಕ್ಕೆ ಕುಕ್ಕಿದಳು. ಮನೆ ಸ್ಮಶಾನ ಮೌನವಾಯಿತು.
⚛⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ