"ಬೃಂದಾವನ"
ಮನೆಯ ಹೆಸರೇ ಹೇಳುವಂತೆ ಅದೊಂದು ಬೃಂದಾವನವೇ ಸರಿ ಸುಭಿಕ್ಷವಾದ, ಸುಂದರವಾದ, ಸ್ವಚ್ಛಂದ ಪರಿವಾರ. ಆ ಸಂಜೆಯ ವಿಶೇಷ ಕಾರ್ಯಕ್ರಮಕ್ಕೆ ಬೃಂದಾವನ ಮತ್ತಷ್ಟು ವಿಶೇಷವಾಗಿ ತಯಾರಾಗಿತ್ತು. ಮನೆಯ ಎದುರು ಸಾಲುಸಾಲಾಗಿ ನಿಂತ ಕಾರು ವಾಹನಗಳು ಇದಕ್ಕೆ ಒಂದು ಸಾಕ್ಷಿಯಾದರೆ ದೂರದಿಂದಲೇ ಜಗಮಗಿಸುವ ಆಕರ್ಷಕ ಬಣ್ಣ ಬಣ್ಣದ ಸೀರಿಯಲ್ ಲೈಟುಗಳು ಈ ಸಮಾರಂಭದ ಮತ್ತೊಂದು ಸಾಕ್ಷಿಯಾಗಿದ್ದವು. ವಿಶಾಲವಾದ ಕಬ್ಬಿಣದ ಗೇಟುಗಳಿಗೂ ಸಹ ಹೂವಿನಲಂಕಾರದ ಯೋಗ ಕೂಡಿ ಬಂದಿತ್ತು. ಒಳಗೆ ಪ್ರವೇಶಿದರೆ ದಾರಿಯುದ್ದಕ್ಕೂ ಮೆತ್ತನೆಯ ಕೆಂಪು ಕಾರ್ಪೆಟ್ ನ ಭವ್ಯ ಸ್ವಾಗತ. ಅಕ್ಕಪಕ್ಕದಲ್ಲಿ ಗರಿಬಿಚ್ಚಿ ನಿಂತಿರುವ ಹೂವಿನ ನವಿಲುಗಳು ಸಹ ಬಂದ ಅಥಿತಿಗಳಿಗೆ ಸುಸ್ವಾಗತ ಕೋರುತ್ತಿದ್ದವು. ಒಳಗಡೆ ವಿಶಾಲವಾದ ಬಯಲಂಗಳದಲ್ಲಿ ಬಲಗಡೆಗೆ ಸ್ವರ್ಗವನ್ನೇ ನಾಚಿಸುವಂತ ಮಂಟಪ ಸಿದ್ದವಾಗಿತ್ತು. ಮಂಟಪವನ್ನು ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿ, ಶ್ವೇತ ವರ್ಣದ ಶಾಮೀಯಾನಕ್ಕೆ ಕೆಂಪು ಗುಲಾಬಿಗಳ ಮೆರುಗು ನೀಡುವಂತೆ ಮಾಡಲಾಗಿತ್ತು. ಮಂಟಪದ ತೆರೆಯ ಮೇಲೆ ಪಕ್ಷಿಗಳು ಹಿಡಿದ ಜೋಡಿ ಹೃದಯಗಳ ಚಿತ್ರದಲ್ಲಿ ಜೋಡಿ ಹೆಸರುಗಳನ್ನು ಬರೆಯಲಾಗಿತ್ತು "ಹರ್ಷ" & "ಪರಿಧಿ"
ಬಣ್ಣ ಬಣ್ಣದ ಲೈಟ್ ಗಳಿಂದ ಕಂಗೊಳಿಸುವ ಬಂಗಲೆಯ ಇಂಚಿಂಚಿಗೂ ನಾನಾ ವಿಧದ ಹೂಗಳ ಅಲಂಕಾರ ಸಜ್ಜಾಗಿದೆ. ನಗರದಲ್ಲೇ ಶ್ರೀಮಂತ ಕುಟುಂಬದ ನಿಶ್ಚಿತಾರ್ಥ ಸಮಾರಂಭಕ್ಕೆ ಗಣ್ಯಾತಿಗಣ್ಯರೆಲ್ಲರೂ ಆಗಮಿಸುತ್ತಿದ್ದಾರೆ. ಆ ಮನೆಯ ಹಿರಿಯ ಜೀವ ಅಶ್ವಥ್ ಭಾರ್ಗವ ಅವರು ಮೊಮ್ಮಗ ಮತ್ತು ಮೊಮ್ಮಗಳ (ಮಗಳ ಮಗಳು) ನಿಶ್ಚಯ ಕಾರ್ಯಕ್ರಮಕ್ಕೆ ಇಪ್ಪತ್ತರ ಯುವಕನಂತೆ ಅತ್ತಿಂದಿತ್ತ ಲಗುಬಗೆಯಿಂದ ಓಡಾಡುತ್ತ ಎಲ್ಲರೊಂದಿಗೆ ಸಂಭ್ರಮದಿಂದ ಮಾತನಾಡುತ್ತಿದ್ದರು. ಬರುವ ಅತಿಥಿಗಳ ಸ್ವಾಗತಕ್ಕೆ ಬಾಗಿಲೆದುರು ನಿಂತಿದ್ದಾರೆ ವಿನಾಯಕ ಭಾರ್ಗವ್ ಹಾಗೂ ಅವರ ಧರ್ಮಪತ್ನಿ ಸುಲೋಚನ. ಇಂತಹ ಸಂಭ್ರಮದ ಮಧ್ಯೆ ಅವರ ಕಿರಿಯ ಮಗಳು ಹರಿಣಿ ಓಡಿ ಬಂದು ತಾಯಿಯ ಕಿವಿಯಲ್ಲಿ ಏನೋ ಹೇಳುತ್ತಿದ್ದಂತೆ ಸುಲೋಚನ ಮುಖದ ಭಾವ ಬದಲಾಯಿತು. ಸಂಭ್ರಮದ ಮುಖದಲ್ಲಿ ಆತಂಕ ಮೂಡಿತು. ಆದರೂ ಅದನ್ನು ತೋರಗೊಡದೆ ನಗುನಗುತ್ತಲೇ ಎಲ್ಲರನ್ನೂ ಬರಮಾಡುತ್ತಾ ಮೆಲ್ಲಗೆ ಅಲ್ಲಿನ ಗದ್ದಲದಿಂದ ಸರಿದು ಒಳಗಡೆಯ ಮೇಲಿರುವ ತಮ್ಮ ಸೊಸೆಯ ಕೋಣೆಗೆ ಹೋದರು.
ಪರಿಧಿ ಸುತ್ತಲೂ ನೆರೆದಿದ್ದ ಸ್ನೇಹಿತೆಯರನ್ನು ಸ್ವಲ್ಪ ಹೊರಗಿರುವಂತೆ ಹೇಳಿದರು. ಎಲ್ಲರೂ ಹೊರಗೆ ಹೋದ ಮೇಲೆ ಆತಂಕದಿಂದ ಕೇಳಿದರು - "ಪರಿ ಯಾಕೆ ಏನಾಯ್ತು? ಹುಷಾರಿಲ್ಲವೇನೇ? "
"ಹಾಗೇನಿಲ್ಲ ಅತ್ತೆ ನಾನು ಆರಾಮವಾಗೇ ಇದ್ದೀನಿ ಆದರೆ.. "
"ಏನೇ ಆದರೆ.. ಈ ನಿಶ್ಚಿತಾರ್ಥ ಬೇಡ ಅಂತಿದ್ದೀಯಂತೆ! ಯಾಕೆ? ಹರ್ಷ ಇಷ್ಟ ಇಲ್ವಾ!"
"ಅತ್ತೆ, ಅದು ಹಾಗಲ್ಲ. ಅದು..., ಈ ಕುಟುಂಬಕ್ಕೆ ನನ್ನಿಂದ ಏನಾದ್ರೂ ತೊಂದರೆ ಆದ್ರೆ ಅಂತ ಭಯ ಕಾಡ್ತಿದೆ."
"ಅಯ್ಯೋ ಹುಚ್ಚಿ ಇಷ್ಟೆನಾ.. ಇನ್ನೂ ಯಾವ ಕಾಲದಲ್ಲಿ ಇದಿಯೇ ಮಾರಾಯ್ತಿ, ನಾ ಏನಾಯ್ತೋ ಅಂತ ಗಾಬರಿಯಲ್ಲಿ ಓಡಿ ಬಂದೆ. ಆ ಲಲಿತಾ ಒಳಗೆ ಬಂದಾಗಲೇ ಅನ್ಕೊಂಡೆ ಏನಾದ್ರೂ ಯಡವಟ್ಟು ಮಾಡ್ತಾಳೆ ಅಂತ. ಅವಳದೇ ಗಿಣಿಪಾಟ ತಾನೇ?"
"ಅತ್ತೆ, ಕೆಲವೊಮ್ಮೆ ಚಿಕ್ಕಮ್ಮ ಹೇಳೋದು ನಿಜ ಇರಬಹುದೇನೋ.. ಅನ್ನಿಸಿಬಿಡುತ್ತೆ" ಎನ್ನುಷ್ಟರಲ್ಲಿ
" ಪರಿ.. ಅದೆಲ್ಲ ಹಳೆಮಾತು ಈಗ ಬೇಡ. ನೀನು ಒಬ್ಬ ಡಾಕ್ಟರ್ ಆಗಿ ಅಂತ ಮೂಢನಂಬಿಕೆ ಎಲ್ಲ ನಂಬ್ತಿಯಾ, ನಿನ್ನಿಂದ ಎಷ್ಟೋ ಜನರ ಜೀವ ಉಳಿದಿದೆ, ಎಷ್ಟು ಜನ ಬಾಯ್ತುಂಬ ಹಾರೈಸಿಲ್ಲ ನಿನ್ನ. ಒಂದು ಇರುವೆಗೂ ಅನುಕಂಪ ತೋರಿಸುವ ನಿನ್ನಿಂದ ಯಾರಿಗೇ ತಾನೇ ತೊಂದರೆ ಆಗೋಕೆ ಸಾಧ್ಯ. ಅವೆಲ್ಲ ಯೋಚನೆ ಬಿಡು ಬೇಗ ತಯಾರಾಗು, ಕೆಳಗೆ ಎಲ್ಲರೂ ಕಾಯ್ತಿದಾರೆ. ತಾಳು ಹರಿಣಿನಾ ಕಳಿಸ್ತಿನಿ" ಎಂದು ಮೆಟ್ಟಿಲಿಳಿದು ಕೆಳಗೆ ಬಂದರು.
ಪರಿಧಿ ಮಾತ್ರ ಇನ್ನೂ ತನ್ನ ಗತಜೀವನದ ಕಹಿಘಟನೆಗಳ ಆಘಾತದಿಂದ ಹೊರ ಬಂದಿರಲಿಲ್ಲ. ಎಲ್ಲಿ ತನ್ನ ದುರದೃಷ್ಟದ ನೆರಳು ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ಈ ಕುಟುಂಬದ ಮೇಲೆ ಬೀಳುತ್ತದೆ ಎಂಬ ಭಯದಲ್ಲೇ ಅತ್ತೆಯ ಮಾತಿಗೆ ಬೆಲೆ ಕೊಟ್ಟು ತಯಾರಾಗುತ್ತಿದ್ದಳು. ಅಷ್ಟರಲ್ಲಿ ಒಳಗೆ ಬಂದ ಹರಿಣಿ, ಧೀ ನಾನು ತಲೆ ಬಾಚ್ತಿನಿ ಎಂದು ಬಾಚಣಿಗೆ ತೆಗೆದುಕೊಂಡು ಉದ್ದದ ಜಡೆ ಹಾಕಿ, ಮುತ್ತುಗಳಿಂದ ಶೃಂಗರಿಸಿ, ಮಲ್ಲಿಗೆ ಹೂವಿನ ದಂಡೆ ಹಾಕುವಾಗ, ಪರಿಧಿ ದುಂಡು ಮಲ್ಲಿಗೆ ತರಲಿಲ್ಲವೇನೇ ಎಂದು ಕೇಳಿದಳು. ಇಲ್ಲ ಧೀ.. ಆ ಗೋಪಣ್ಣ ಇದನ್ನೇ ತಂದಿದ್ದಾನೆ ಎಂದು ಹಾಕಿದಳು. ವ್ಹಾವ್ ಧೀ.. ಎಷ್ಟು ಚೆಂದ ಕಾಣ್ತಿಯಾ ನೀನು ಎಂದಳು ಹರಿಣಿ. ಪರಿಧಿ ಮುಗುಳ್ನಗುತ್ತಾ ನಿನ್ನಷ್ಟೇನು ಇಲ್ಲ ಬಿಡು ಎಂದು ಕೆನ್ನೆ ಹಿಂಡಿದಳು. ನಿಜಕ್ಕೂ ಪರಿಧಿ ಅಪ್ರತಿಮ ಸುಂದರಿ. ಕಾಮನಬಿಲ್ಲಿನಂತ ಹುಬ್ಬು, ಸನ್ನೆಯಲ್ಲೇ ಎಲ್ಲ ಮಾತಾಡುವ ಬೊಗಸೆ ಕಂಗಳು, ಚೂಪು ರೆಪ್ಪೆ, ನೀಳವಾದ ಮೂಗು, ಮನ್ಮಥನ ಬಾಣವನ್ನು ಅಣುಗಿಸುವಂತ ಕೆಂದಾವರೆ ತುಟಿಗಳು, ಹೇಳಿ ಮಾಡಿಸಿದಂತಹ ಮೈಮಾಟ, ಬೆಳದಿಂಗಳಂತ ತೇಜಸ್ಸು, ಗಾಳಿಗೆ ಸಾಗರದ ಅಲೆಗಳಂತೆ ಉಕ್ಕುವ ಅವಳ ಕೇಶರಾಶಿ. ದೇವಲೋಕದ ಅಪ್ಸರೆ ಧರೆಗಿಳಿದಂತಿದ್ದಳು. ಅವಳನ್ನ ನೋಡಿದವರು ಯಾರೂ ಅವಳ ಮುಖವನ್ನು ಮರೆಯಲು ಸಾಧ್ಯವೇ ಇಲ್ಲ ಅಂತಹ ರೂಪವತಿ ಪರಿಧಿ. ಇವೆಲ್ಲವನ್ನೂ ಮೀರಿಸುವಂತ ಅವಳ ಸೌಮ್ಯ ಸ್ವಭಾವ, ಅವಳ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರಗು ನೀಡಿತ್ತು. ನಿನಗೆ ಯಾವ ಮೇಕಪ್ ಅಗತ್ಯನೇ ಇಲ್ಲ ಬಿಡೇ ಕಾಡಿಸಿದ್ದರು ಗೆಳತಿಯರು. ಆದರೂ ಇವತ್ತು ನಿನ್ನ ನಿಶ್ಚಿತಾರ್ಥ ಅಲ್ವಾ ಸ್ವಲ್ಪ ಪೌಡರು ಲಿಪ್ ಸ್ಟಿಕ್ ಇರಲಿ ಬಿಡು ಎಂದು ತಯಾರಿ ನಡೆಸಿದ್ದರು. ಮಧ್ಯೆ ಮಧ್ಯೆ ಹರ್ಷನ ಹೆಸರು ಹೇಳಿ ಅವಳ ಕೆನ್ನೆ ಕೆಂಪು ಮಾಡಿದ್ದರು. ಒಬ್ಬಳು, ಎಷ್ಟು ಸ್ಮಾರ್ಟ್ ಇದ್ದಾನೆ ನಿನ್ನ ಹುಡುಗ 5'4 ಹೈಟು, ಕಪ್ಪು ಕಂಗಳು, ಚಿಗುರು ಮೀಸೆ, ಕುರುಚಲು ಗಡ್ಡ, ನಕ್ಕರೆ ಹುಣ್ಣಿಮೆ ತರಾ ಎಂದರೆ ಇನ್ನೊಬ್ಬಳು ಪರಿನಾ ಡ್ರಾಪ್ ಮಾಡಲು ಬಂದಾಗಲೆಲ್ಲ ನಾನು ತುಂಬಾ ಟ್ರೈ ಮಾಡಿದೆ ಕಣ್ರೆ, ಒಂದು ಸ್ಮೈಲ್ ಬಿಸಾಕಿ ಓಡಿ ಹೋಗಿ ಬಿಡ್ತಿದ್ರು ಎಂದಳು. ಯಾಕೆಂದರೆ ಅವರು ಕಮಿಟೆಡ್ ಕಣಮ್ನ ನಮ್ಮ ಪರಿಗೆ ಎಂದು ಗೋಳಾಡಿಸಿದ್ದರು.
ಹರಿಣಿ ಮೇಕಪ್ ಮಾಡುತ್ತಿದ್ದರೆ ಪರಿಧಿಯ ಮನಸ್ಸು ಹರ್ಷನ ಯೋಚನೆಯಲ್ಲಿ ಕಳೆದು ಹೋಗಿತ್ತು. ಹರ್ಷ ಮತ್ತು ಪರಿಧಿ ಚಿಕ್ಕ ವಯ್ಯಸ್ಸಿನಿಂದಲೇ ಕೂಡಿ ಆಡಿ ಬೆಳೆದವರು. ತಾಯಿಯನ್ನು ಕಳೆದುಕೊಂಡ ಪರಿಧಿಯನ್ನು ಅಶ್ವಥ್ ರಾಯರು ತಮ್ಮ ಬಳಿಯೇ ಇರಿಸಿಕೊಳ್ಳಲು ನಿರ್ಧರಿಸಿದರು. ಸುಲೋಚನ ಮತ್ತು ವಿನಾಯಕ ಕೂಡ ಪರಿಧಿಯನ್ನು ಸಂತೋಷದಿಂದ ಒಪ್ಪಿದ್ದರು. ಹರ್ಷ ಮತ್ತು ಪರಿಧಿ ಇಬ್ಬರೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು, ಬರುತ್ತಿದ್ದರು. ಕೆಲವೊಮ್ಮೆ ಕಾರಿನಲ್ಲಿ ಬರಲು ಬೇಜಾರಾಗಿ ಇಬ್ಬರೂ ಒಂದೊಂದು ಟೈರ್ ಪಂಕ್ಚರ್ ಮಾಡಿ ಡ್ರೈವರನ್ನು ಬಿಟ್ಟು ಆಟವಾಡುತ್ತ ಮನೆ ಸೇರುತ್ತಿದ್ದರು. ಹರ್ಷ ಪರಿಧಿಗಿಂತ ನಾಲ್ಕು ವರ್ಷ ದೊಡ್ಡವನು. ಆದರೆ ತುಂಟಾಟ ಮಾಡುವುದರಲ್ಲಿ ಅವಳಿಗಿಂತ ಮೀರಿದವ. ಅಮ್ಮ ಹೊರಗಿನ ತಿಂಡಿ ತಿನ್ನಲು ನಿರ್ಬಂಧ ಹೇರಿದರೆ ಇಬ್ಬರೂ ಅಮ್ಮನಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಕುರುಕಲು, ಐಸ್ ಕ್ರೀಂ ತಿನ್ನುತ್ತಿದ್ದರು. ಶಾಲೆಯಲ್ಲಿ ಪರಿಧಿ ಜೊತೆ ಜಗಳವಾಡುವ ಕೆಲ ಹುಡುಗಿಯರನ್ನು ಹರ್ಷ ಗೋಳು ಹೊಯ್ದುಕೊಂಡು ಅವರ ಜುಟ್ಟು ಎಳೆದು ಇನ್ನೊಮ್ಮೆ ಪರಿಧಿ ತಂಟೆಗೆ ಬರದಂತೆ ಮಾಡುತ್ತಿದ್ದ. ಪರಿಧಿ ಅಂದರೆ ಹರ್ಷನಿಗೆ ಜೀವಕ್ಕಿಂತ ಮಿಗಿಲು. ಅವಳು ಕೇಳಿದ್ದನ್ನೆಲ್ಲ ತಂದು ಕೊಡುತ್ತಿದ್ದ. ಅವಳು ರಾತ್ರಿ ನಿದ್ರೆ ಮಂಪರಿನಲ್ಲಿ ಹೋಂ ವರ್ಕ್ ಮಾಡದೆ ಹಾಗೆಯೇ ಮಲಗಿದ್ದರೆ, ಬೆಳಿಗ್ಗೆ ಎಚ್ಚರವಾಗುವ ಹೊತ್ತಿಗೆ ಎಲ್ಲಾ ಹೋಂ ವರ್ಕ್ ಪೂರ್ತಿಯಾಗಿರುತ್ತಿತ್ತು. ಯಾರು ಮಾಡಿದ್ದು ಎಂದು ಹರ್ಷನನ್ನು ಕೇಳಿದರೆ ಏಂಜಲ್ ಬಂದು ಮಾಡಿರಬೇಕು ಎಂದು ಕಣ್ಣರಳಿಸುತ್ತಿದ್ದ. ಪರಿಧಿಗೆ ಅರ್ಥವಾಗದ ಪ್ರಶ್ನೆಗಳನ್ನು, ಪಾಠಗಳನ್ನು ಬಿಡಿಸಿ ಅರ್ಥ ಮಾಡಿಸುತ್ತಿದ್ದ. ಅವಳ ಪರೀಕ್ಷೆ ಬಂದರೆ ಸಾಕು ತಾನು ಅವಳ ಜೊತೆಗೆ ಎದ್ದು ಕುಳಿತು ತನ್ನ ಅಭ್ಯಾಸದ ಜೊತೆಗೆ ಅವಳಿಗೂ ಓದಿಸುತ್ತಿದ್ದ. ಅವಳು ಮನಸ್ಸಲ್ಲಿ ಏನೋ ಕೇಳಿಕೊಳ್ಳುವ ಮೊದಲೇ ಅವಳ ಕಣ್ಣೆದುರು ಅದನ್ನು ತಂದಿಡುತ್ತಿದ್ದ. ಅದು ಹೇಗೆ ನೀನು ನನ್ನ ಮನಸ್ಸಲ್ಲಿ ಅನ್ಕೊಂಡಿದ್ದೆಲ್ಲ ತಿಳ್ಕೊಂಡು ಬಿಡ್ತಿಯಾ ಎಂದು ಕೇಳಿದಾಗೆಲ್ಲ ನನಗೆನೇ ಗೊತ್ತು ಅದು ಹೇಗೊ ಗೊತ್ತಾಗಿ ಬಿಡುತ್ತೆ! ಎಂದು ಬಿಡುತ್ತಿದ್ದ. ಪರಿಧಿ, ಹರ್ಷನ ಜೊತೆಗೆ ತನ್ನ ತಾಯಿ ತಂದೆಯ ಕೊರತೆಯನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದಳು. ಹರ್ಷ ತನಗೆ ಮಳೆ ಇಷ್ಟವಿಲ್ಲದಿದ್ದರೂ ಪರಿಧಿಗಾಗಿ ಮಳೆಯಲ್ಲಿ ತೋಯುತ್ತಾ ಆಟವಾಡುತ್ತಿದ್ದ. ಶೀತವಾಗಿ ಇಬ್ಬರೂ ಆಂಕ್ಷಿ.. ಆಂಕ್ಷಿ.. ಎಂದು ಸೀನುತ್ತಿದ್ದರೆ, 'ಮಳೆಯಲ್ಲಿ ಹೋಗಬೇಡ ಅಂದ್ರೂ ಕೇಳಲ್ಲ ಕೋತಿಗಳಾ' ಎಂದು ಅವರಮ್ಮ ಬೈಯುತ್ತಿದ್ದರೆ ಇಬ್ಬರೂ ಮುಖ ಮುಖ ನೋಡಿಕೊಂಡು ನಗುತ್ತಿದ್ದರು. ಅಂತಹ ಚಳಿಯಲ್ಲೂ, ಶೀತ ಬಂದಿದ್ದರೂ ಸಹ ಪರಿಧಿ ಆಸೆಪಟ್ಟಳೆಂದು ಹರ್ಷ ರಾತ್ರಿ ಎದ್ದು ಫ್ರಿಜ್ ನಲ್ಲಿದ್ದ ಕೋಲ್ಡ್ ಕೇಕ್ ತರುವಾಗ ಅವರಮ್ಮ ಬಂದಿದ್ದನ್ನು ನೋಡಿ ಇಬ್ಬರೂ ಮರೆಯಾಗಿ ನಿಂತಿದ್ದರು. ಸುಮ್ಮನಿರದ ಹರ್ಷನ ಮಿಯಾಂವ್ ಸದ್ದಿಗೆ ಕಳ್ಳತನ ಬಯಲಾಗಿ ಕಿವಿ ಹಿಂಡಿಸಿಕೊಂಡಿದ್ದರು. ಅವನ್ನೆಲ್ಲ ನೆನಪಿಸಿಕೊಂಡು ನಗುತ್ತಿದ್ದಾಗಲೇ ಹರಿಣಿ ಧೀ.. ನಗಬೇಡ ಕಾಜಲ್ ಸ್ಪ್ರೆಡ್ ಆಗುತ್ತೆ ಎಂದು ಎಚ್ಚರಿಸಿದಳು.
ಪರಿಧಿ ವಾಸ್ತವದ ಅರಿವಾಗಿ ನಾಲಿಗೆ ಕಚ್ಚಿ ಸುಮ್ಮನಾದಳು. 'ಏನಾಯ್ತು ನಗುವಂತದ್ದು' ಎಂದು ಕೇಳುತ್ತಾ ಹರ್ಷ ಒಳಗೆ ಬರುತ್ತಿದ್ದಂತೆ 'ಇನ್ನು ಕೆಲಸ ಕೆಟ್ಟ ಹಾಗೆ' ಎಂದು ಮುಖ ಸಿಂಡರಿಸಿದಳು ಹರಿಣಿ. ಅವಳ ತಲೆಗೊಂದು ಮೊಟಕಿ 'ಗೊತ್ತಾಯ್ತಲ್ಲ ಬಿಡು ದಾರಿ' ಎಂದ ಹರ್ಷ. ಅಮ್ಮ ಹೇಳಿದಾರೆ ನಿಶ್ಚಿತಾರ್ಥದವರೆಗೂ ನೀನು ಧೀ ನಾ ಭೇಟಿ ಆಗೋ ಹಾಗಿಲ್ಲ. 'ನನಗೂ ಗೊತ್ತಮ್ಮಾ. ಕೆಳಗೆ ನಿನ್ನ ಫ್ರೆಂಡ್ಸ್ ಎಲ್ಲಾ ಬಂದಿದಾರೆ, ಅದ್ನೆ ಹೇಳೋಕೆ ಬಂದಿದ್ದೆ ಅನ್ನುತ್ತಿದ್ದಂತೆ ಹರಿಣಿ ಖುಷಿಯಿಂದ 'ಹೇ..ಧೀ ಈಗಲೇ ಎಲ್ಲರನ್ನೂ ಕರ್ಕೊಂಡು ಬರ್ತಿನಿ ವೇಟ್' ಎಂದು ಕೆಳಗೆ ಓಡಿದಳು. ಇದೇ ಅವಕಾಶಕ್ಕೆ ಕಾಯುತ್ತಿದ್ದ ಹರ್ಷ "ಹೇಳು.. ನನ್ನ ಪ್ರಿಯತಮೆ ನಿನ್ನದರದ ಸಿಹಿಜೇನ ಕಾಣಿಕೆಗಾಗಿ ನಾನೇನು ಮಾಡಬೇಕು" ಎಂದು ಕೈ ಚಾಚಿದ.
ಪರಿಧಿ ನಾಚಿ ನೀರಾಗಿ "ಜೇನು ಸವಿಯೋಕೆ ಇನ್ನೂ ತುಂಬಾ ಸಮಯವಿದೆ, ಸದ್ಯಕ್ಕೆ ತಾವಿನ್ನು ನಿರ್ಗಮಿಸಿ ಮಹಾಪ್ರಭು" ಎಂದಳು ತುಂಟದನಿಯಲ್ಲಿ.
"ಅಯ್ಯೋ ನಾವು ಅಷ್ಟು ಕಷ್ಟ ಪಟ್ಟು ಜನಸಾಗರವನ್ನು ದಾಟಿ ಬಂದರೆ ಹೀಗೆ ನಿರಾಸೆ ಮಾಡುವುದೇ ಪ್ರಿಯತಮೆ.. ಛೇ ಇದು ಅನ್ಯಾಯ" ಎಂದು ಮುನಿಸಿಕೊಂಡಂತೆ ನಟಿಸಿದ.
"ಹರ್ಷ, ನನಗೆ ತುಂಬಾ ಭಯವಾಗ್ತಿದೆ. "
"ಅಯ್ಯೋ ಮಾರಾಯ್ತಿ ತಮಾಷೆ ಮಾಡಿದೆ ಅಷ್ಟೇ. ಏನು ಬೇಡ ಬಿಡಮ್ಮ ನೀನು ಆರಾಮವಾಗಿರು" ಎಂದು ಸಪ್ಪೆ ಮುಖ ಮಾಡಿದ.
"ಅದಲ್ಲ, ನೀನು ನನ್ನ ಮದುವೆ ಆಗಲೇ ಬೇಕಾ?"
"ಯಾಕೇ.. ಹೀಗ್ ಕೇಳ್ತಿದಿಯಾ, ನಿನಗೆ ಇಷ್ಟ ಇಲ್ವಾ ನಾನು" ಗಂಭೀರವಾಗಿ ಕೇಳಿದ.
"ಇಷ್ಟ ಕಷ್ಟದ ಮಾತಲ್ಲ. ಏನೋ ಒಂತರಾ ಭಯ, ನಿನಗೇನಾದ್ರೂ ಆದ್ರೆ ನಿನ್ನ ಬಿಟ್ಟು ಬದುಕೋ ಶಕ್ತಿ ನನಗಿಲ್ಲವೋ" ಎಂದು ತಬ್ಬಿಕೊಂಡಳು.
"ನಿನೊಬ್ಬಳು ಹುಚ್ಚಿ ಕಣೇ, ಯಾವುದೋ ಕಾಲದ ಕಹಿನಾ ಇನ್ನೂ ಮನಸ್ಸಲ್ಲೇ ಇಟ್ಟುಕೊಂಡಿದಿಯಲ್ಲ. ಅದೆಲ್ಲ ಕಾಕತಾಳೀಯ ಅಷ್ಟೇ, ಅದನ್ನೆಲ್ಲ ಮರೆತುಬಿಡು ಅಂತ ಎಷ್ಟು ಹೇಳೋದೆ ನಿನಗೆ" ಎಂದು ತನ್ನ ಕೈಯಲ್ಲಿ ಹಿಡಿದಿದ್ದ ದುಂಡು ಮಲ್ಲಿಗೆಯ ದಂಡೆಯನ್ನು ಅವಳ ಕೈಗಿರಿಸಿದ.
"ಪ್ರತಿಸಲ ನಾನು ಮನಸ್ಸಲ್ಲಿ ಅಂದುಕೊಂಡಿದ್ದೆಲ್ಲ ನಿನಗೆ ಹೇಗೋ ಗೊತ್ತಾಗುತ್ತೆ"
"ಮೈ ಡಿಯರ್ ಏಂಜಲ್, ಅದೊಂತರಾ ಮನಸ್ಸೋಲಾಜಿ.. ನೀನಿನ್ನು ಅತ್ತೆ ಹೊಟ್ಟೆಯಲ್ಲಿ ಇದ್ದಾಗಲೇ ನನಗೆ ನಿನ್ನ ಮನಸ್ಸು ಅರ್ಥವಾಗ್ತಿತ್ತು ಗೊತ್ತಾ" ಎಂದು ನಗುತ್ತಾ ತಾನೇ ಹೂ ಮುಡಿಸಿದ.
"ನಿನಗೆ ನಮ್ಮಮ್ಮನ್ನ ನೋಡಿದ ನೆನಪಿದೆಯೇನೋ" ಕನ್ನಡಿಯಲ್ಲಿ ಅವನನ್ನು ನೋಡುತ್ತಾ ಕೇಳಿದಳು ಪರಿಧಿ
"ಹ್ಮೂ... ತುಂಬಾ ಒಳ್ಳೆಯವ್ರು ಅತ್ತೆ, ಥೇಟ್ ನಿನ್ನ ಹಾಗೆ... ಆದ್ರೆ ಒಂದೇ ವ್ಯತ್ಯಾಸ"
ಪರಿಧಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿಕೊಳ್ಳತ್ತಾ "ಏನು?" ಎಂದು ಕೇಳಿದಳು.
" ನಮ್ಮತ್ತೆ, ನಾ ಕೇಳದೆ ಇದ್ರು ಕರೆದು ಕರೆದು ಮುತ್ತು ಕೊಡ್ತಿದ್ರು, ಮುದ್ದು ಮಾಡ್ತಿದ್ರು. ಆದ್ರೆ ನೀನು..."
"ನೀನು ವಿಷಯ ಮರೆಸಬೇಡ, ಹೇಳು ನನ್ನ ಕೊನೆಯವರೆಗೂ ನನ್ನ ಜೊತೆಗೆ ಇರ್ತಿಯಲ್ವ"
ತನ್ನ ಕೈಯನ್ನು ಅವಳ ಕೈ ಮೇಲಿರಿಸಿ "ನಿನ್ನ ಬಿಟ್ಟು ನಾನೆಲ್ಲೂ ಹೋಗಲ್ವೇ. ನೀನು ನನ್ನ ಏಂಜಲ್ ಗೊತ್ತಲ್ವ. ಒಂದು ವೇಳೆ ಯಮನೇ ನನ್ನ ಕರೆಯೋಕೆ ಬಂದ್ರು ಯಮನಿಗೂ ಲಂಚ ಕೊಟ್ಟು ಆಯಸ್ಸು ವೃದ್ದಿಸಿಕೊಂಡು ಬರ್ತಿನಿ ನೋಡ್ತಿರು" ಎಂದು ಭರವಸೆ ಕೊಟ್ಟ.
"ಹರ್ಷ ಇದು ತಮಾಷೆ ವಿಷಯವಲ್ಲ"
"ತಮಾಷೆ ಮಾಡ್ತಿಲ್ವೆ, ನಿಜವಾಗಿಯೂ. ಅವಳ ಕೈಯನ್ನು ಅವಳ ಎದೆಯ ಮೇಲಿರಿಸಿ ಇದು ನಿನ್ನ ಹೃದಯವಲ್ಲ, ನನ್ನ ಹೃದಯ. ಇದರ ಪ್ರತಿ ಮಿಡಿತ ನನ್ನದು. ಪ್ರತಿ ಶ್ವಾಸ ನನ್ನದು. ಇದು ಮಿಡಿಯುವವರೆಗೂ ನನ್ನುಸಿರು ನಿನ್ನ ತೊರೆದು ಹೋಗದು " ಭಾವುಕನಾಗಿ ನುಡಿದ.
ಪರಿಧಿ ಮುಖದಲ್ಲೊಂದು ಮಂದಹಾಸ ಮೂಡಿತು. ಹೀಗೆ ಪ್ರಣಯ ಪಕ್ಷಿಗಳು ಮಾತನಾಡುತ್ತಿರುವಾಗ ಒಳಗೆ ಬಂದ ಹರಿಣಿ ತನ್ನ ಹಿಂದೆ ಬಂದ ತಾಯಿಗೆ 'ನೋಡಮ್ಮ.. ನಾನು ಬೇಡ ಅಂತ ಹೇಳಿದ್ರೂ ಕೇಳದೆ ಹೇಗೆ ಒಳಗೆ ಬಂದಿದ್ದಾನೆ. ನನ್ನ ಫ್ರೆಂಡ್ಸ್ ಬಂದಿದ್ದಾರೆ ಅಂತ ಸುಳ್ಳು ಬೇರೆ ಹೇಳಿದ' ಎಂದು ತಾಯಿ ಎದುರು ದೂರು ನೀಡಿದಳು.
ಅದಕ್ಕೆ ಹರ್ಷ 'ನನ್ನ ಹೆಂಡತಿ ಜೊತೆ ನಾನು ಮಾತಾಡಿದ್ರೆ ನಿನಗೇನೇ ತೊಂದರೆ' ಎಂದ.
"ಮಗನೇ.. ಸ್ವಲ್ಪ ತಾಳ್ಮೆ ಇರಲಿ. ಇನ್ನೂ ಮದುವೆ ಆಗಿಲ್ಲ ಇದು ಬರೀ ನಿಶ್ಚಿತಾರ್ಥ ಅಷ್ಟೇ, ಅಲ್ಲಿಯವರೆಗೂ ನಡೆ ಹೊರಗೆ" ಎಂದು ಕಿವಿ ಹಿಡಿದು ಎಳೆದುಕೊಂಡು ಹೊರಟರೆ, ಹರ್ಷ "ಅಮ್ಮಾss ಕಿವಿ ನೋಯುತ್ತೆ" ಎಂದು ಕುಂಯಿಗುಡುತ್ತಾ ಹಿಂಬಾಲಿಸಿದ.
*****
ಸ್ವಲ್ಪ ಸಮಯದಲ್ಲಿ , ಹರಿಣಿ ಮತ್ತು ತನ್ನ ಸ್ನೇಹಿತೆಯರೊಡನೆ ಪರಿಧಿ ಕೆಳಗೆ ಇಳಿದು ಬಂದಳು. ಪರಿಧಿ, ಶ್ವೇತ ವರ್ಣದ ಕೆಂಪು ಅಂಚಿನ ರೇಷ್ಮೆ ಸೀರೆಯಲ್ಲಿ, ಸರ್ವಾಲಂಕಾರ ಭೂಷಿತೆಯಾಗಿ, ದುಂಡು ಮಲ್ಲಿಗೆ ಮುಡಿದು ಹಂಸದಂತೆ ನಡೆದು ಬಂದರೆ ಎಲ್ಲರ ದೃಷ್ಟಿ ಅವಳ ಮೇಲೆಯೇ. ಹರ್ಷನ ಕಣ್ಣುಗಳು ಮಿಂಚಿದವು. ಸ್ನೇಹಿತರು ಅವನನ್ನು 'ಏನೋ... ದೇವಲೋಕದ ಕನ್ಯೆಯನ್ನೇ ಮದುವೆ ಆಗುತ್ತಿದ್ದೀಯಾ!!' ಎಂದು ಛೇಡಿಸಿದರು. ಮೊಮ್ಮಗಳನ್ನು ನೋಡಿ ಅಶ್ವಥ್ ರಾಯರಿಗೆ ತಮ್ಮ ಮಗಳು ಗೌರಿ ನೆನಪಾದಳು. ಪರಿಧಿಗೆ ಥೇಟ್ ತಾಯಿಯದೆ ಹೋಲಿಕೆ, ನಡವಳಿಕೆ ಕೂಡ ಹಾಗೆಯೇ. ಯಾವತ್ತೂ ಯಾರ ಮನಸ್ಸು ನೋಯಿಸಿದವಳಲ್ಲ. ಕಷ್ಟದಲ್ಲಿದ್ದವರಿಗೆ ತನ್ನಿಂದ ಸಾಧ್ಯವಾದ ಸಹಾಯ ಮಾಡುತ್ತಾಳೆ. ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಾಳೆ, ಹಾಲಿಗೂ ವಿಷಕ್ಕೂ ವ್ಯತ್ಯಾಸ ಗೊತ್ತಿರದ ಮುಗ್ಧೆ, ದೇವರೇ ಈ ಮಗುವಿನ ಬಾಳು ಬಂಗಾರವಾಗಲಿ. ನೂರುಕಾಲ ಸುಖವಾಗಿ ಬಾಳಲಿ ಎಂದು ಮನದಲ್ಲಿ ಹಾರೈಸಿದರು. ನಿಶ್ಚಿತಾರ್ಥದ ಸಮಯ ಪುರೋಹಿತರು ಮಂತ್ರ ಓದುತ್ತಾ ಹಾರ ಬದಲಾಯಿಸಲು ಹೇಳಿದರು. ನಂತರ ಉಂಗುರ ಬದಲಾಯಿಸುವಾಗ ಪರಿಧಿಯ ಮನಸ್ಸು ಒಂದು ಕ್ಷಣ ಕಂಪಿಸಿತು. ಹರ್ಷನ ಮುಖವನ್ನು ನೋಡಿದಳು. ಅವನು ಕಣ್ರೆಪ್ಪೆ ಬಡಿದು ಸನ್ನೆಯಲ್ಲೇ ಧೈರ್ಯ ಹೇಳಿದ. ಇಬ್ಬರೂ ಉಂಗುರ ಬದಲಾಯಿಸಿದರು. ನಿಶ್ಚಿತಾರ್ಥ ಶಾಸ್ತ್ರ ಮುಗಿಸಿ ಮೊದಲು ತಾತನಿಗೆ ನಮಸ್ಕರಿಸಿ ನಂತರ ಅಪ್ಪ ಅಮ್ಮನಿಗೆ ನಮಸ್ಕರಿಸಿದರು. ಪರಿಧಿ, ಹರ್ಷನ ಕೈ ಹಿಡಿದು ಕೆಳಬಂದು ಜಗದೀಶ್ ಕಾಲಿಗೆ ಬಿದ್ದಳು. ಜಗದೀಶ ಯಾವ ಜನ್ಮದ ಋಣವೇ ತಾಯಿ ನೀ ನನಗೆ ಸಿಕ್ಕಿದ್ದು ಎನ್ನುತ್ತಾ ಇಬ್ಬರಿಗೂ ಆಶೀರ್ವದಿಸಿದರು. ಅಪ್ಪಾಜಿ, ಯಾರು ಏನುಬೇಕಾದರೂ ಹೇಳಲಿ ನಾನು ನಿಮ್ಮ ಮಗಳೇ ಎಂದಳು. ಅವಳ ಮಾತಿಗೆ ಅವರ ಹೃದಯತುಂಬಿ ಕಣ್ಣಂಚು ತೇವವಾಯಿತು.
ಮತ್ತೆ ಇಬ್ಬರೂ ಮಂಟಪವೇರಿ ನಿಂತಾಗ ಬಂದ ಅತಿಥಿಗಳೆಲ್ಲ ಅಭಿನಂದನೆ ತಿಳಿಸಿ ಉಡುಗೊರೆ ಕೊಡುತ್ತಿದ್ದರು.
ಆಗ ಮೇಲೆ ಬಂದ ಲಲಿತಾ, ಪರಿಧಿಯ ಕಿವಿಯಲ್ಲಿ "ಏನೇ ಪರಿ, ನಿಮ್ಮ ಅತ್ತೆ ಮಾವ ಇಷ್ಟೆಲ್ಲಾ ಖರ್ಚು ಮಾಡಿ ನಿಶ್ಚಿತಾರ್ಥ ಮಾಡ್ತಿದಾರೆ, ಜೊತೆಗೆ ತಾಳಿನೂ ಕಟ್ಟಿಸಿದ್ರೆ ಚೆನ್ನಾಗಿತ್ತು. ಅಕಸ್ಮಾತ್ ಹರ್ಷನಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಆಸ್ತಿನಾದ್ರೂ ಸಿಗ್ತಿತ್ತು" ಎಂದಾಗ ಒಮ್ಮೆಗೆ ಕೋಪಗೊಂಡ ಪರಿಧಿ "ಚಿಕ್ಕಮ್ಮ.. ವಯ್ಯಸ್ಸಲ್ಲಿ ನನಗಿಂತ ದೊಡ್ಡವ್ರು ಅಂತ ಸುಮ್ನಿದಿನಿ. ನಿಮಗೆ ಒಳ್ಳೆ ಮಾತು ಬರೋದೆ ಇಲ್ವ! ಪ್ಲೀಜ್ ಹೊರಟು ಹೋಗಿ ಇಲ್ಲಿಂದ" ಎಂದು ಜೋರು ಧ್ವನಿಯಲ್ಲಿ ಹೇಳಿದಳು. ಅವಳ ಧ್ವನಿ ಕೇಳಿ ಎಲ್ಲರೂ ಬೆಚ್ಚಿ ಆ ಕಡೆಗೆ ನೋಡುತ್ತಿದ್ದರು.
"ಹೋಗ್ತಿನೇ, ಹೋಗ್ತಿನಿ ಶ್ರೀಮಂತರ ಸೊಸೆಯಾದೆ ಅಂತ ಕೊಬ್ಬಲ್ವ ನಿನಗೆ, ನಾನು ನೋಡ್ತಿನಿ ಎಷ್ಟು ದಿನ ನಡೆಯುತ್ತೆ ಇದೆಲ್ಲಾ. ನಿನ್ನ ಹಣೆಬರಹ ಗೊತ್ತಿಲ್ವ ನನಗೆ" ಎಂದು ವಟಗುಟ್ಟುತ್ತಾ ಹೊರನಡೆದಳು.
ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಸುಲೋಚನ, ಅಳುವನ್ನು ತಡೆಹಿಡಿದ ಪರಿಧಿಯನ್ನು ಒಳಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದರು.
ಮುಂದುವರೆಯುವುದು..
⚛⚛⚛⚛⚛⚛
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ