ವಿಷಯಕ್ಕೆ ಹೋಗಿ

ಚಾರ್ಲಿ


ಪ್ರೀತಿಯನ್ನು ಅತಿಯಾಗಿ ಅದಮ್ಯವಾಗಿ ಪ್ರೀತಿಸುವವರು ಅದರ ಪೂರ್ಣ-ಅಪೂರ್ಣ ಕಥೆಗಳನ್ನು ಅಪ್ಯಾಯವಾಗಿ ಪ್ರೀತಿಸುತ್ತಾರಂತೆ. ನಾನೂ ಅದೇ ಗುಂಪಿಗೆ ಸೇರಿದವಳು‌. ಅಸಂಖ್ಯ ಪ್ರೇಮಕಥೆಗಳು. ಜೀವಂತ ನಿದರ್ಶನಗಳು. ಕೆಲವು ಸುಮಧುರ ಭಾಂಧವ್ಯದಲ್ಲಿ ಬೆಸೆದರೆ, ಕೆಲವು ನಡುವಲ್ಲೇ ಸೂಜಿಮಲ್ಲಿಗೆ ಕಂಪು ಸೂಸಿ ಕೊನೆಯಾಗುವಂತವು.

ಒಂದಷ್ಟು ಮಧುರ ಪ್ರಣಯ, ದುಖಃತಪ್ತ ವಿರಹ, ಆಡಂಬರದ ವಿವಾಹ, ಅನುಮಾನದಲ್ಲಿ ದಹಿಸಿ ಹೋಗುವ ಪ್ರವರ, ಸ್ಪರ್ಶದ ಅನುಭೂತಿ, ಕಿರುಬೆರಳ ವಚನ, ಒಂದು ಕುಡಿ ನೋಟ, ಪತ್ರಗಳ ಅಲೆದಾಟ, ಮುನಿಸುಗಳಲ್ಲೇ ಮೊದಲಾಗುವ ಒಲವಿನ ಪಯಣ, ಭಾವಗಳ ಸಮ್ಮಿಲನ, ವಿರಹದಲ್ಲೂ ಮುದನೀಡುವ ಕವನ-ಗಾಯನ, ಗತಜನ್ಮಗಳ ಪ್ರೇಮ ಪ್ರಕರಣ  ಹೀಗೆ ಎಲ್ಲೋ ಅಂಕುರಿಸುವ ಎಲ್ಲೋ ಶುರುವಾಗಿ ಇನ್ನೆಲ್ಲೋ ಒಂದಾಗುವ, ದೂರಾಗುವ, ದೂರಾದರೂ ಮನಸ್ಸಲ್ಲೇ ಪ್ರೀತಿಯ ನವಿರಾದ ಹೆಜ್ಜೆ ಗುರುತು ಉಳಿಸಿ ಹೋಗುವ ಪ್ರೇಮಕಥೆಗಳ ಮಧ್ಯೆ ತನ್ನದೇಯಾದ ವಿಭಿನ್ನ ಛಾಪು ಮೂಡಿಸುವಂತಹ ಚಿತ್ರ ಮಲಯಾಳಂನ "ಚಾರ್ಲಿ" (2015) 

ಸಹಜವಾದ ಜೀವನವನ್ನು ಇಷ್ಟ ಪಡದೆ ಸದಾ ಅಲೆಯುವ, ಹೊಸತನವನ್ನು ಹುಡುಕುವ ಉತ್ಸಾಹಿ ತರುಣಿ  ಥೆಸ್ಸಾ ಕಥೆಯ ನಾಯಕಿ. ಶ್ರೀಮಂತ ಮನೆತನದ ಥೆಸ್ಸಾ ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್. ಅಮ್ಮನ ಶಿಸ್ತು ಕಟ್ಟುಪಾಡುಗಳಿಗೆ ತದ್ವಿರುದ್ಧ ಜೀವನಶೈಲಿ ಥೆಸ್ಸಾಳದ್ದು.  ಅಮ್ಮ ತೋರಿಸುವ ಹುಡುಗನನ್ನು ಮದುವೆಯಾಗಲು ಒಪ್ಪಿಗೆ ಇರದ ಥೆಸ್ಸಾ  ಮನೆಯಿಂದ ದೂರ ಸಾಗಿ , ಯಾರಿಗೂ ಸಂಪರ್ಕಕ್ಕೆ ಸಿಗದಂತಹ ಊರಿನಲ್ಲಿ ಸ್ನೇಹಿತೆಯ ಸಹಾಯದಿಂದ ಬಾಡಿಗೆ ಮನೆಯೊಂದರಲ್ಲಿ ಉಳಿಯುತ್ತಾಳೆ. 

ಕಥೆ ಆರಂಭವಾಗುವುದೇ ಇಲ್ಲಿ. ಆಕೆ ಉಳಿದುಕೊಂಡದ್ದು ಚಾರ್ಲಿ ಎಂಬ ಅಪರಿಚಿತನೊಬ್ಬನ ಕೋಣೆಯಲ್ಲಿ. ಅವನು ಹೇಗೆ ಬಿಟ್ಟು ಹೋದನೋ ಅದೇ ಸ್ಥಿತಿಯಲ್ಲಿರುವ ಕೋಣೆ. ಅಲ್ಲಿ ಅವನ ಅಸ್ತಿತ್ವದ ಗುರುತುಗಳಿವೆ.ಕೋಣೆಯ ತುಂಬಾ ಅಸ್ತವ್ಯಸ್ತವಾಗಿ ಹರಡಿದ ಆತನ ವಸ್ತುಗಳಿವೆ. ಮೊದಮೊದಲು ಅದರಿಂದ ಕಿರಿಕಿರಿಯಾಗುವ ಥೆಸ್ಸಾ ನೋಡು ನೊಡುತ್ತಾ ಚಾರ್ಲಿಯ ಪೇಂಟಿಂಗ್ಸ್ ಮತ್ತು ಆರ್ಟ್ ವರ್ಕ್‌ಗಳೆಡೆಗೆ ಆಕರ್ಷಿತಳಾಗುತ್ತಾಳೆ.  ಧೂಳು ಕೊಡವಿ ಕೋಣೆಯನ್ನು ಒಪ್ಪವಾಗಿಸುವ ಸಂದರ್ಭದಲ್ಲಿ ಥೆಸ್ಸಾಳ ಗಮನ ಸೆಳೆಯುತ್ತವೆ ಕೆಲವು ಭಾವಚಿತ್ರಗಳು.  ಮಕ್ಕಳೊಂದಿಗೆ ಆತ  ತೆಗೆಸಿಕೊಂಡ ಒಂದು ಚಿತ್ರ ಅವನ ಮುಗ್ಧ ಮನಸ್ಸನ್ನು ಪ್ರತಿಬಿಂಬಿಸಿದರೆ, ಗೋಡೆಗಳ ಮೇಲಿನ ಕಲಾಕೃತಿ, ಅಟ್ಟದ ಮೇಲೆ ಕೂಡಿಟ್ಟ ರಾಶಿ ವಸ್ತುಗಳ ನಡುವೆ ಸಿಗುವ ಅರೆಬರೆ ಗೀಚಿದ ಸ್ಕೆಚ್ ಬುಕ್!  ಚಾರ್ಲಿ ಒಬ್ಬ ಕಲಾತ್ಮಕ ಮಾಯಾವಿ ಎಂಬುದನ್ನು ಮನದಟ್ಟು ಮಾಡುತ್ತವೆ. 

ನಟ್ಟ ನಡುರಾತ್ರಿ ಕಿಟಕಿಯ ಸಂಧಿಯಿಂದ ಕಳ್ಳನೊಬ್ಬ ಮನೆಗೆ ನುಗ್ಗುವ ಚಿತ್ರ ಒಂದು ಕಥೆಯನ್ನು ಹೇಳಿದರೆ, ಆ ಕಳ್ಳನೊಂದಿಗೆ ಕುಳಿತು ಸಲುಗೆಯಿಂದ ಹರಟೆ ಹೊಡೆಯುವ ಚಿತ್ರ ಮತ್ತೊಂದು ಕಥೆಯನ್ನು ಹೇಳುತ್ತದೆ. ಅದು ಹೊಸ ವರ್ಷ ಆರಂಭವಾದ ರಾತ್ರಿ. ಮನೆಗೆ ಬಂದ ಕಳ್ಳನೊಂದಿಗೆ ಆತ್ಮೀಯತೆಯನ್ನು ಬೆಳೆಸುವ ಚಾರ್ಲಿ ಸ್ನೇಹಜೀವಿಯಂತೆ ಕಾಣುತ್ತಾನೆ. ಆತನೊಂದಿಗೆ ಸೇರಿ ಒಂದು ಮನೆಗೆ ಕಳ್ಳತನ ಮಾಡಲು ಮುಂದಾಗುತ್ತಾನೆ. ಒಂದು ಹೆಂಚಿನ ಮನೆಯ ಮೇಲ್ಚಾವಣಿಯಿಂದ ಇಬ್ಬರ ಇಣುಕು ನೋಟದೊಂದಿಗೆ ಸ್ಕೆಚ್ ಕಥೆ ಅಪೂರ್ಣ ಉಳಿಯುತ್ತದೆ. ಅಲ್ಲಿ ಅವರು ಕಂಡದ್ದಾದರೂ ಏನು??  ಸ್ಕೆಚ್ ಬುಕ್‌ನ ಮುಂದಿನ ಪುಟಗಳು ಖಾಲಿ ಖಾಲಿ.‌. ಮುಂದಿನ ಕಥೆಯನ್ನು ತಿಳಿಯಲು ಚಾರ್ಲಿಯ ಹುಡುಕಾಟದಲ್ಲಿ ತೊಡಗುತ್ತಾಳೆ ಥೆಸ್ಸಾ.

ಅವಳ ಹುಡುಕಾಟದ ಹಾದಿಯಲ್ಲಿ ಸಿಗುವ ಚಾರ್ಲಿಯ ತಂದೆ  ಅವನ ಗುಣ ಸ್ವಭಾವಗಳನ್ನು ವಿವರಿಸುತ್ತ ಅವನ ತುಂಟಾಟ ತರಲೆ ಪ್ರಸಂಗಗಳನ್ನು ಹೇಳುತ್ತಾರೆ. ಚಾರ್ಲಿ ಒಂದೆಡೆ ನಿಲ್ಲುವ ಮನುಷ್ಯನಲ್ಲ. ಯಾವಾಗಲೂ ನಗುತ್ತ, ಎಲ್ಲರನ್ನೂ ನಗಿಸುತ್ತ, ಇನ್ನೊಬ್ಬರ ಕಷ್ಟಕ್ಕೆ ನೆರವಾಗುತ್ತಾ ಸದಾ ಅಲೆದಾಡುವ ಅಲೆಮಾರಿಯಂತವನು. ಈ ಮೊದಲೊಮ್ಮೆ ಪತ್ರಿಕೆಯಲ್ಲಿ ತನ್ನ ಶ್ರದ್ಧಾಂಜಲಿಯ ಚಿತ್ರವನ್ನು ತಾನೇ ಹಾಕಿಸಿಕೊಂಡ ಚಾರ್ಲಿಯ ಸ್ವಭಾವ ತುಂಬಾ ವಿಚಿತ್ರವೆನ್ನಿಸಿ ಶಾಕ್ ಒಳಗಾಗುತ್ತಾಳೆ ಥೆಸ್ಸಾ. ಒಂದೆಡೆ ನೆಲೆಯೇ ಇಲ್ಲದ, ಯಾವಾಗ ಎಲ್ಲಿರುವನೆಂಬ ಖಾತ್ರಿಯಿರದ ಚಾರ್ಲಿಯ ಭೇಟಿ ಅವಳಿಗೆ ಲಭ್ಯವಾಗದೆ  ಕಥೆಗಿನ್ನೂ ಪೂರ್ಣ ಉತ್ತರ ಸಿಗುವುದಿಲ್ಲ.

ಈ ಅನ್ವೇಷಣೆಯಲ್ಲಿ ಎದುರಾಗುವ ಮತ್ತೊಬ್ಬ ವ್ಯಕ್ತಿ ಒಬ್ಬ ನಾವಿಕ. ಒಂದು ರಾತ್ರಿ ಚಾರ್ಲಿ ಮರಿಯಾ/ಕ್ವೀನ್ ಮೇರಿ ಎಂಬುವವಳನ್ನು ಅವಳ ಹುಟ್ಟಿದ ಹಬ್ಬ ಆಚರಿಸಲು ಅವನ ದೋಣಿಯಲ್ಲಿ ಕರೆದುಕೊಂಡು ಬಂದಿರುತ್ತಾನೆ. ಕ್ವೀನ್ ಮೇರಿ ಮದುವೆಯಾದ ಎರಡೇ ದಿನಕ್ಕೆ ಗಂಡನಿಂದ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟ ಹೆಂಗಸು. ತನ್ನ ಮಧ್ಯ ವಯ್ಯಸ್ಸಿನಲ್ಲಿ ಏಡ್ಸ್ ಎಂಬ ಮಾರಕ ರೋಗಕ್ಕೆ ತುತ್ತಾಗಿ ಬಳಲುತ್ತಿರುವವಳು.  ಕೊನೆಯ ದಿನಗಳಲ್ಲಾದರೂ ಆಕೆಗೆ ಸಂತೋಷವಾಗಿ ಇಡಬೇಕೆಂಬ ಸದುದ್ದೇಶದಿಂದ ಚಾರ್ಲಿ ಅವಳ ಬರ್ತ್‌ಡೇ ಆಚರಿಸಿದ್ದ. ಸಂತೋಷದಿಂದ ಭಾವುಕಳಾದ ಮೇರಿ ಚಾರ್ಲಿ ಗೆ ಕೃತಜ್ಞತೆ ಹೇಳಿ, ಅದೇ ತೃಪ್ತಿಯಲ್ಲಿ  ದೋಣಿಯಿಂದ ನೀರಿಗೆ ಜಿಗಿದು ಪ್ರಾಣ ಬಿಡುತ್ತಾಳೆ. ಮೇರಿಯ ಸಾವಿಗೆ ಚಾರ್ಲಿ ಬಿಕ್ಕಿ ಬಿಕ್ಕಿ ಅಳುತ್ತಾನೆ. ಈ ಕಥೆಯನ್ನು  ನಾವಿಕ ಥೆಸ್ಸಾಗೆ ಹೇಳಿದಾಗ ಚಾರ್ಲಿಯ ಮಾನವೀಯ ಮೌಲ್ಯಗಳು, ಒಳ್ಳೆಯ ಮನಸ್ಸಿಗೆ ಸೋತ ಥೆಸ್ಸಾಗೆ ಅವನನ್ನು ಭೇಟಿಯಾಗಲೇಬೇಕೆಂಬ ಹಂಬಲ ಹೆಚ್ಚಾಗುತ್ತದೆ.

ಮುಂದೊಮ್ಮೆ ಚಾರ್ಲಿಯ ತಂದೆ ಅವನು ಊರಿಗೆ ಬಂದಿರುವುದಾಗಿ ಥೆಸ್ಸಾಗೆ ತಿಳಿಸಿದಾಗ ಅವನ ಸಲುವಾಗಿ ಆಕೆ ಓಡೋಡಿ ಬರುತ್ತಾಳೆ. ಈ ಹಿಂದೆ ಮೇರಿಯನ್ನು ವೇಶ್ಯಾವಾಟಿಕೆಗೆ ದೂಡಿದ ಅವಳ ಗಂಡ ಈಗ ಅವಳ ಮಗಳನ್ನು ಅದೇ ಕೆಲಸಕ್ಕೆ ಸೇರಿಸುವ ಹುನ್ನಾರದಲ್ಲಿರುತ್ತಾನೆ. ಅದನ್ನು ತಿಳಿದ ಚಾರ್ಲಿ ಮೇರಿಯ ಗಂಡನನ್ನು ಥಳಿಸಿ ಅವಳ ಮಗಳನ್ನು ಆ ನರಕದಿಂದ ಪಾರು ಮಾಡಿ ಕರೆದೊಯ್ಯುತ್ತಾನೆ. ಒಂದೇ ಕ್ಷಣದ ಅಂತರದಲ್ಲಿ ಮತ್ತೊಮ್ಮೆ ಚಾರ್ಲಿಯ ಭೇಟಿ ಕೈತಪ್ಪಿ ಹೋಗುತ್ತದೆ.

ಒಮ್ಮೆ ಚಾರ್ಲಿ ಮನೆಗೆ ನುಗ್ಗಿದ  ಕಳ್ಳ  ಅಚಾನಕ್ಕಾಗಿ ಥೆಸ್ಸಾಗೆ ಸಿಕ್ಕಾಗ ಆ ರಾತ್ರಿಯ ಘಟನೆಯನ್ನ ಮುಂದುವರೆಸುತ್ತಾನೆ.. ಅವತ್ತು ರಾತ್ರಿ, ಆ ಮನೆಯ ಕಿಂಡಿಯಲ್ಲಿ ಒಬ್ಬ ಯುವತಿ ನೇಣಿಗೆ ಕೊರಳೊಡ್ಡುತ್ತಿರುವ ದೃಶ್ಯ ಕಂಡದ್ದನ್ನು, ಚಾರ್ಲಿ ಅವಳನ್ನು ಸಾವಿನಿಂದ ತಪ್ಪಿಸಿದ್ದನ್ನು, ಮತ್ತು ಆ ಹುಡುಗಿ ಓಡಿ ಹೋದಾಗ ಚಾರ್ಲಿ ಅವಳನ್ನು ಹಿಂಬಾಲಿಸಿ ಹೋದನೆಂದು ಹೇಳುತ್ತಾನೆ. ಥೆಸ್ಸಾಳ ಒತ್ತಾಯದ ಮೇರೆಗೆ ತಾನು ಮತ್ತು ಚಾರ್ಲಿ ಸೇರಿ ಕಳ್ಳತನ ಮಾಡಲು ಹೋದ ಆ ಹುಡುಗಿಯ ಮನೆಯನ್ನು ತೋರಿಸುತ್ತಾನೆ.

ಆ ಯುವತಿಯ ಹೆಸರೇ ಖನಿ. ಅವಳನ್ನು ಹುಡುಕುತ್ತಾ ಹೊರಟ ಥೆಸ್ಸಾಗೆ ಊಟಿಯ ಕುಂಜಪ್ಪ ಎಂಬುವವರ ವಿಳಾಸ ದೊರಕುತ್ತದೆ. ಊಟಿಯ ಕುಂಜಪ್ಪನ ಮನೆಯಲ್ಲಿ ಖಣಿ, ಹಾಗೂ ಈ ಮೊದಲು ಚಾರ್ಲಿ ಬಿಡಿಸಿಕೊಂಡು ಬಂದ ಮರಿಯಾ ಮಗಳ ಜೊತೆಗೆ ಅನೇಕ ನೊಂದವರನ್ನು ಒಟ್ಟುಗೂಡಿಸಿ ಬದುಕಿಗೆ ಹೊಸ ಮೆರಗನ್ನು ರೂಪಿಸಿರುತ್ತಾನೆ ಚಾರ್ಲಿ. ಅಲ್ಲಿ ಬರುವ ಥೆಸ್ಸಾಗೆ ಚಾರ್ಲಿ ಮುಖತಃ ಭೇಟಿಯಾಗದೇ ಹೋದರೂ ಅವನ ಬಗ್ಗೆ ಅವಳು ಕೇಳುವ ಒಂದೊಂದು ಕಥೆಯ ಮೂಲಕ ಅವನು ಅವಳನ್ನು ಆವರಿಸುತ್ತಾ ಹೋಗುತ್ತಾನೆ.

ಅವನ್ಯಾರೋ ಇವಳ್ಯಾರೋ? ಯಾವುದೋ ಘಳಿಗೆ ಈಕೆ ಅವನು ಬಿಟ್ಟು ಹೋದ ಅವನ ರೂಮಿಗೆ ಬಾಡಿಗೆಗೆ ಬರುತ್ತಾಳೆ. ಅವನ ಅಸ್ತಿತ್ವಗಳ ಗುರುತುಗಳನ್ನು ಪೇರಿಸಿಟ್ಟುಕೊಂಡ ಕೋಣೆ ಇವಳಿಗೆ ಅವನೆಡೆಗೆ ಆಸಕ್ತಿ ಮೂಡುವಂತೆ ಮಾಡುತ್ತದೆ. ಅವನು ಬಿಡಿಸಿಟ್ಟ ಅರೆಬರೆ ಚಿತ್ರಗಳು ಅಪೂರ್ಣ ಕಥೆಯನ್ನು ಹೇಳುತ್ತವೆ. ಅವನ ಪೂರ್ಣ ಕಥೆ ತಿಳಿಯಲು ಆಕೆಯ ಅನ್ವೇಷಣೆ ಆರಂಭವಾಗುತ್ತದೆ.

 ಒಂದೊಂದು ಕಥೆಯ ತಿರುವಲ್ಲೂ ಆತನ ಒಳ್ಳೆಯ ಮನಸ್ಸು, ವ್ಯಕ್ತಿತ್ವದ ಪರಿಚಯವಾಗುತ್ತ ಹೋಗುತ್ತದೆ. ಆಕೆ ಅವನನ್ನು ಕಂಡು ಹಿಡಿಯುವಲ್ಲಿ ಸಫಲವಾಗುತ್ತಾಳಾ? ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗುತ್ತಾರಾ? ಚಾರ್ಲಿಗೆ ಥೆಸ್ಸಾಳ ಹುಡುಕಾಟದ ಊಹೆಯಾದೆರೂ ಉಂಟಾ? ಗುರುತು ಪರಿಚಯವೇ ಇಲ್ಲದ ಇಬ್ಬರು ಅನಾಮಿಕರ ನಡುವೆ ಒಲವು ಹೀಗೂ ಚಿಗುರೊಡೆಯುತ್ತಾ? ಅದು ಹೇಗೆ? ಎಂಬ ಕೆಲವು ಅವಿನಾಭಾವ ಪ್ರಶ್ನೆಗಳ ನಡುವೆ ಒಂದು ನವಿರಾದ ಪ್ರೇಮ ಕಥೆ ಮನಸ್ಸಿನ ಮೂಲೆಯಲ್ಲಿ ಹೆಪ್ಪುಗಟ್ಟುತ್ತದೆ. 

ಉನ್ನಿ ಆರ್, ಮತ್ತು ಮಾರ್ಟಿನ್ ಪ್ರಕಟ್ ಅವರ ಕಥೆ -ಚಿತ್ರಕತೆ-ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ
ಡುಲ್ಕರ್ ಸಲ್ಮಾನ್ ಮತ್ತು ಪಾರ್ವತಿ ಮೆನನ್ ನಾಯಕನಟ ಹಾಗೂ ನಟಿಯಾಗಿ ಅಭಿನಯಿಸಿದ್ದಾರೆ.  ಜೊಮನ್ ಟಿ. ಜಾನ್ ಅವರ ಛಾಯಾಗ್ರಾಹಣ ಕಂಗಳಿಗೆ ಹಬ್ಬವಾದರೆ, ಗೋಪಿ ಸುಂದರ್ ಅವರ ಸಂಗೀತದ ಮಾಯೆಗೆ ಮನಸ್ಸು ಪ್ರಫುಲ್ಲವಾಗುತ್ತದೆ. 

ಮುಖಕ್ಕೊಂದು ವ್ಯಕ್ತಿತ್ವವಿರುವಂತೆ ವ್ಯಕ್ತಿತ್ವಕ್ಕೂ ಒಂದು ಪರಿಚಯವಿದೆ ; ವ್ಯಕ್ತಿತ್ವಕ್ಕೂ ಒಂದು ಭಾಷ್ಯವಿದೆ  ಎಂದು ತಿಳಿಸುವ ವಿಶಿಷ್ಟವಾದ ಕಥಾಹಂದರವನ್ನು ಒಳಗೊಂಡ ಚಾರ್ಲಿ ಮೂವೀ ತನ್ನ ಕಥೆ ಚಿತ್ರಕಥೆ, ನಿರ್ದೇಶನ, ಉತ್ತಮ ಛಾಯಾಗ್ರಾಹಣ, ಉತ್ತಮ ನಟ-ನಟಿ ಹೀಗೆ 46ನೇ ಕೇರಳ ಸ್ಟೇಟ್ ಫಿಲ್ಮ್ ಅವಾರ್ಡ್ಸ್ ನ ಪಟ್ಟಿಯಲ್ಲಿ ಎಂಟು ಅವಾರ್ಡ್‌ಗಳನ್ನು ತನ್ನ ಮುಡಿಗೇರಿಸಿಕೊಂಡಿದೆ‌. 

ಒಟ್ಟಾರೆಯಾಗಿ ಒಮ್ಮೆಯೂ ಭೇಟಿಯಾಗದ ಒಬ್ಬ ವ್ಯಕ್ತಿಯ ಗುಣ ಅಭಿರುಚಿಗಳು, ಹೆಜ್ಜೆ ಹೆಜ್ಜೆಗೂ ಕೆಣಕುವ ಅವನ ಒಳ್ಳೆಯ ಮನಸ್ಸಿನ ಗುರುತುಗಳು ಕುತೂಹಲವನ್ನು ಕೆರಳಿಸಿ ಒಂದು ಭೇಟಿಗಾಗಿ ಚಡಪಡಿಸುವಂತೆ ಮಾಡಿ ಬಿಡುವ ಈ ಚಿತ್ರದ ಮೋಡಿಗೆ 'ಪ್ರೀತಿ' ಎಂಬ ಎರಡೂವರೆ ಅಕ್ಷರದ ಪದವೂ ಬೆರಗಾಗಿ ಹೋಗುವುದು ಖಚಿತ.

                       ⚛⚛⚛⚛⚛


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...