ವಿಷಯಕ್ಕೆ ಹೋಗಿ

ನೀ ನನ್ನ ಒಲವು.. ❤ ಸಂಚಿಕೆ-2


ಸಾಂಧ್ಯಾ ಸಮಯ ಸುಲೋಚನ ದೇವರ ಮುಂದೆ ದೀಪ ಬೆಳಗುತ್ತಿದ್ದರು ಹೊರಗೆ ಹಾಲ್ ನಲ್ಲಿ ಹರಿಣಿ ನಿನ್ನೆಯ ನಿಶ್ಚಿತಾರ್ಥದ ಫೋಟೋಗಳನ್ನು ನೋಡುತ್ತಿದ್ದರೆ,. ಅಶ್ವಥ್ ರು ಪುಸ್ತಕವೊಂದನ್ನು ಓದುತ್ತಾ ಕುಳಿತಿದ್ದರು. ಸುಲೋಚನ ಹೊರಗೆ ಬಂದವರೇ ಹರಿಣಿಯ ಬೆನ್ನಿಗೊಂದು ಗುದ್ದಿ ಶಾಲೆಯಿಂದ ಬಂದ ತಕ್ಷಣ ಮೊಬೈಲ್ ಹಿಡಿದು ಕೂತುಬಿಡು‌. ನಿನ್ನ ಅಭ್ಯಾಸ ಎಲ್ಲಾ ನಾ ಮಾಡ್ತಿನಿ ಎಂದು ಗದರಿದರು. ಹ್ಮೂ ನಾಳೆಯಿಂದ ಶಾಲೆಗೂ ನೀನೇ ಹೋಗಿಬಿಡು, ನನಗೂ ಬೇಜಾರಾಗಿದೆ ಎಂದಳು ಹರಿಣಿ. ನಿನ್ನೆ ನಿಶ್ಚಿತಾರ್ಥದ ನೆಪ ಮಾಡಿ ಶಾಲೆಗೆ ಹೋಗಿಲ್ಲ ಏನೇನು ಪಾಠ ಮಾಡಿದಾರೋ ಕೇಳಿ ಓದುವುದನ್ನು ಬಿಟ್ಟು ತಲೆಹರಟೆ ಬೇರೆ!  ಈ ವರ್ಷ ಹತ್ತನೇ ಕ್ಲಾಸ್ ನೀನು. ಬೋರ್ಡ್ ಎಕ್ಸಾಂ ಇರುತ್ತೆ ನೆನಪಿದೆ ತಾನೇ! ಎಂದರು. ಅಯ್ಯೋ ಬಿಡಮ್ಮ ನೀ ಎಲ್ಲಿ ಮರೆಯೋಕೆ ಬಿಡ್ತಿಯಾ ಯಾವಾಗಲೂ ಇದೇ ತುತ್ತೂರಿ ಊದುತ್ತಾನೆ ಇರ್ತಿಯಾ ಐದು ನಿಮಿಷ ಬಿಟ್ಟು ಹೋಗ್ತಿನಿ ತಾಳು ಎಂದು, ತಾಯಿಗೂ ನಿಶ್ಚಿತಾರ್ಥದ ಫೋಟೋ ತೋರಿಸಿದಳು ನೋಡು ಎಲ್ಲಾ ಫೋಟೋದಲ್ಲೂ ಹೇಗೆ ಬಾಯಿ ತೆಗೆದಿದ್ದಿಯಾ ಎಂದು ನಕ್ಕಳು.  ತಾತಾ ನೀನಂತೂ ಎಲ್ಲೆಲ್ಲೋ ನೋಡ್ತಾ ನಿಂತು ಬಿಟ್ಟಿದ್ದಿಯಾ! ಯಾವುದೋ ಆಂಟಿ ನೋಡ್ತಿದ್ದೆ ಅನ್ಸುತ್ತೆ ಎಂದು ನಗುವಾಗ ಕಾರಿನ ಸದ್ದು ಕೇಳಿ ಅಣ್ಣ ಬಂದ ಅನ್ಸುತ್ತೆ ನೋಡು ಏನು ಮಾಡ್ತಿನಿ ಎನ್ನುತ್ತಾ ಬಾಗಿಲ ಹಿಂದೆ ಬಚ್ಚಿಟ್ಟುಕೊಂಡಳು. ಅವನು ಒಳಗೆ ಬಂದ ತಕ್ಷಣ ಹುರ್ ಎಂದು ಹೆದರಿಸಿದಳು. ಅವಾಕ್ಕಾದ ಗೋಪಿ ತನ್ನ ಕೈಯಲ್ಲಿ ಹಿಡಿದಿದ್ದ ನೀರಿನ ಜಗ್ಗನ್ನು ಕೈ ಬಿಟ್ಟ. ತುಳುಕಿದ ನೀರು ಅವಳ ತಲೆ ಮೇಲೆ ಸುರಿದವು. ಅವಳು ಮುನಿಸಿಕೊಂಡು ಗೋಪಣ್ಣ ನೀ ಯಾಕೆ ಬಂದೆ ಎಂದಳು ಅಳುದನಿಯಲ್ಲಿ.  ನಂಗೇನ ಗೊತ್ತು ಪುಟ್ಟಿ ನೀನು ನಿಂತಿದ್ದು. ವಾಚಮನ್ ಗೆ ನೀರು ಕೊಟ್ಟು ಬರ್ತಿದ್ದೆ ಅಷ್ಟರಲ್ಲಿ ಹೀಗಾಗೋಯ್ತು ಎಂದು ತಲೆ ಸವರಿ ಒಳನಡೆದ. ಸುಲೋಚನ ಮತ್ತು ರಾಯರು ಹರಿಣಿಯ ಪೆಚ್ಚು ಮುಖ ನೋಡಿ ನಗುತ್ತಿದ್ದರೆ ಒಳಗೆ ಬಂದ ಹರ್ಷ ಕೆಳಗೆ ಚೆಲ್ಲಿದ ನೀರನ್ನು ನೋಡದೆ ಒಳಗೆ ಬಂದವನೇ ಕಾಲು ಜಾರಿ ಬೀಳುವಷ್ಟರಲ್ಲಿ ಬಾಗಿಲನ್ನು ಹಿಡಿದು ಪಕ್ಕದ ಗೋಡೆಗೆ ಆನಿಸಿ ನಿಂತು ಬಿಟ್ಟ. ಅಕಸ್ಮಾತ್ ಜಾರಿ ಬಿದ್ದಿದ್ದರೆ ಹೊಸ್ತಿಲಿನ ಚೂಪಾದ ಮೊಳೆ ತಲೆಗೆ ತಾಕಿ ಪ್ರಾಣ ಹೋಗುವ ಸಂಭವವಿತ್ತು. ಅದೃಷ್ಟವಶಾತ್ ತಲೆ ಗೋಡೆಗೆ ತಾಗಿ ಸ್ವಲ್ಪ ನೋವಾಗಿ ಎಡಗೈಯಿಂದ ತಲೆ ಉಜ್ಜಿಕೊಳ್ಳುತ್ತಾ "ಹರಿ..ಕೋತಿ ನೀರಾಡೋಕೆ ಬೇರೆ ಜಾಗ ಸಿಗಲಿಲ್ಲವೇನೆ" ಎಂದು ಹರಿಣಿಯ ತಲೆಗೆ ಮೊಟುಕಿದ. ನಾನೇನು ಮಾಡೇ ಇಲ್ಲವೆಂದು ಹರಿಣಿ ಅವನ ಕೊಟ್ಟ ಏಟು ವಾಪಸ್ ಮಾಡಲು ಅವನ ಬೆನ್ನಟ್ಟಿದಳು. ಅವನು ಓಡುತ್ತಾ ತನ್ನ ರೂಂ ಬಾಗಿಲು ಹಾಕಿ ಮಿಷನ್ ಇನ್ ಕಂಪ್ಲಿಟ್ ಎಂದು ಕೂಗಿ ನಕ್ಕನು. ಹೊಸ್ತಿಲಲ್ಲಿ ಅವನಿಗಾಗಿ ಬಾಯ್ತೆರೆದು ಕಾಯುತ್ತಿದ್ದ ವಿಧಿಗೆ ನಿರಾಸೆಯಾಯಿತು.

ಅಂದು ರಾತ್ರಿ 8 ಗಂಟೆ ಸುಮಾರಿಗೆ ಟಿವಿಯಲ್ಲಿ ಕಾರ್ಟೂನ್ ನೋಡುತ್ತಾ ಕುಳಿತಿದ್ದ ಹರ್ಷನನ್ನು ದಿಟ್ಟಿಸುತ್ತ ವಿನಾಯಕ್ ಭಾರ್ಗವ್  "ಈ ಗುರುವಾರ ಎಸ್ ಆರ್ ಕಂಪನಿ ಜೊತೆಗೆ ಮೀಟಿಂಗ್  ಫಿಕ್ಸ್ ಆಗಿದೆ. ಈ ಪ್ರಾಜೆಕ್ಟ್ ನಮ್ಮ ಕಂಪನಿಗೆ ತುಂಬಾ ಮುಖ್ಯ ಗೊತ್ತಲ್ವ. ನೀನು ಇದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿಯಾ ಅಂತ ಅನುಮಾನ ನನಗೆ" ಎಂದರು.

"ಅನುಮಾನ ಯಾಕೆ ಪಿತಾಶ್ರೀ.. ನೋಡ್ತಾ ಇರಿ ನಮ್ಮ ಕಂಪನಿನಾ ಇಂಟರ್ ನ್ಯಾಶನಲ್ ಲೆವೆಲ್ ಎತ್ತರಕ್ಕೆ ಬೆಳೆಸುತ್ತೇನೆ." ಎಂದು ಕೈ ಮೇಲೆತ್ತಿದ.

"ನೀನು ಈ ಕಾರ್ಟೂನ್ ನೋಡ್ತಾ ದೊಡ್ಡ ದೊಡ್ಡ ಡೈಲಾಗ್ ಹೇಳುತ್ತಾ ಕೂತಿದ್ರೆ ಕಂಪನಿ ದಿವಾಳಿ ಆಗ್ಬಿಡುತ್ತೆ. ಅದಕ್ಕೆ ತಕ್ಕ ಹಾಗೆ ಪರಿಶ್ರಮ ಕೂಡ ಪಡಬೇಕು" ಎಂದರು. ಈ ಮಾತಿಗೆ ಪಕ್ಕದಲ್ಲಿ ಕುಳಿತಿದ್ದ ಹರಿಣಿ ಕಿಸಕ್ಕನೆ ನಕ್ಕಳು. ಹರ್ಷ ಅವಳ ಜುಟ್ಟು ಹಿಡಿದೆಳೆದ. ಆಗ  ಸುಲೋಚನ ಅಲ್ಲಿಗೆ ಬಂದು "ಹರ್ಷ ಘಂಟೆ ಎಂಟಾಯ್ತು ಪರಿ ಇನ್ನೂ ಬಂದಿಲ್ಲ ಕಣೋ" ಎಂದರು. "ಫೋನ್ ಮಾಡಿದ್ದೆ ಅಮ್ಮ, ಅವಳ ಫ್ರೆಂಡ್ ಹೇಳಿದಳು ಯಾವುದೋ ಆ್ಯಕ್ಸಿಡೆಂಟ್ ಕೇಸ್ ಅಟೆಂಡ್ ಮಾಡ್ತಿದಾಳೆ ಬರೋದು ಲೇಟಾಗುತ್ತಂತೆ"
"ನೀನೇ ಹೋಗಿ ಕರ್ಕೊಂಡು ಬಾರೋ, ತುಂಬಾ ರಾತ್ರಿ ಆಗಿದೆ ಹೇಗೆ ಬರ್ತ್ತಾಳೆ ಒಬ್ಬಳೇ"
"ಬರ್ತಾಳೆ ಬಿಡಮ್ಮ ಸ್ಕೂಟಿ ಇದೆಯಲ್ಲ. ಈ ಚುಮುಚುಮು ಚಳಿಯಲ್ಲಿ ತಿನ್ನೋಕೆ ಬಿಸಿಬಿಸಿ ಪಕೋಡ ಮಾಡಿಕೊಡು" ಎಂದು ಕೇಳಿದ. ಸುಲೋಚನ ಒಳಗೆ ಹೋಗಿ ಪಕೋಡ ಮಾಡಿ ತರುವಷ್ಟರಲ್ಲಿ ಏನೂ ಹೇಳದೆ ಕಾರ್ ಸ್ಟಾರ್ಟ್ ಮಾಡಿಕೊಂಡು ಹೊರಟು ಹೋಗಿದ್ದ. ಎಲ್ಲಿಗೆ ಹೋದನಿವ ಹೇಳದೆ ಎನ್ನುವಾಗಲೇ ಅವನ ಫೋನ್ ರಿಂಗಾಯಿತು. ಫೋನ್ ಕೂಡ ಇಲ್ಲೇ ಮರೆತು ಹೋದನಲ್ಲ ಎನ್ನುತ್ತಾ ಸುಲೋಚನ ಫೋನ್ ರೀಸಿವ್ ಮಾಡಿದರು. ಆಕಡೆಯಿಂದ  'ಹಲೋ ಹರ್ಷ..' ಎಂದಿತು ಪರಿಧಿ ಧ್ವನಿ. 'ಹರ್ಷ ಇಲ್ಲಮ್ಮ ಪರಿ. ಅವನು ಈಗತಾನೇ ಎಲ್ಲೋ ಹೊರಗೆ ಹೋದ ಎಲ್ಲಿ ಅಂತ ಹೇಳಲಿಲ್ಲ, ಯಾಕೆ ಏನಾದ್ರೂ ತೊಂದರೆನಾ'
'ಹಾಗೆನಿಲ್ಲ ಅತ್ತೆ, ಇನ್ನೂ ಸ್ವಲ್ಪ ಹೊತ್ತಿಗೆ ಮನೆಗೆ ಬರ್ತಿದೀನಿ. ಬಾಯ್' ಎಂದಳು
'ಸರಿ ಹುಷಾರು ಕಣೇ' ಎಂದು ಫೋನ್ ಕಟ್ ಮಾಡಿದರು.

                             ****

ತುಸು ಬೇಸರದಿ ಫೋನ್ ಇಟ್ಟು, ಸ್ಟಾರ್ಟ್ ಆಗದೆ ನಿಂತಿದ್ದ ಸ್ಕೂಟಿಯನ್ನು ಇನ್ನೊಮ್ಮೆ ಸ್ಟಾರ್ಟ್ ಮಾಡಲು ಪ್ರಯತ್ನಿಸಿ ಸೋತು ಸಾಕಾಗಿ ಅದನ್ನು ಅಲ್ಲಿಯೇ ಬಿಟ್ಟು ಆಸ್ಪತ್ರೆಯ ಗೇಟಿನಿಂದ ನಡೆದು ಬರುವಾಗ ಎದುರುಗೊಂಡ ರೋಗಿಯ ಸಂಬಂಧಿಯ ಜೊತೆಗೆ ಸ್ವಲ್ಪ ಹೊತ್ತು ಮಾತನಾಡುತ್ತ ನಿಂತಳು ಪರಿಧಿ. ನಂತರ ಹೊರಗೆ ಗೇಟಿನಾಚೆ ಸ್ವಲ್ಪ ದೂರ ನಡೆದು ಯಾವುದಾದರೂ ಆಟೋ ಸಿಗಬಹುದಾ ಎಂದು ಆಕಡೆ ಈಕಡೆ ನೋಡುತ್ತಾ ನಿಂತಾಗ ಕಾರೊಂದು ಎದುರಿಗೆ ಬಂದು ನಿಂತಿತು. "ಅರೆ ಹರ್ಷ!! ಅತ್ತೆ ನೀನೆಲ್ಲೊ ಹೊರಗೆ ಹೋಗಿದ್ದೆ ಅಂತ ಹೇಳಿದ್ರು"  ಎನ್ನುತ್ತಾ ಕಾರಿನಲ್ಲಿ ಕುಳಿತಳು.

"ಹ್ಮೂ ಹೀಗೆ ಒಬ್ಬ ಸ್ನೇಹಿತನನ್ನು ಭೇಟಿ ಮಾಡೋಕೆ ಬಂದೆ ಹಾಗೆ ನಿನ್ನ ಕರ್ಕೊಂಡು ಹೋಗೋಣ ಅಂತ"

"ಒಳ್ಳೆದಾಯ್ತು ಬಿಡು. ಸ್ಕೂಟಿ ಯಾಕೋ ಸ್ಟಾರ್ಟ್ ಆಗ್ಲಿಲ್ಲ. ನಾಳೆ ಬೆಳಿಗ್ಗೆ ನೋಡ್ಬೇಕು"

"ಎಷ್ಟು ಸಲ ಹೇಳಿದೀನಿ ಆ ಡಕೋಟಾ ಸ್ಕೂಟಿ ಬಿಟ್ಟು ಬೇರೆ ತಗೋ ಅಂತ ಕೇಳೊದೇ ಇಲ್ಲ"

"ನಾನು ಪಿಯುಸಿ ಇದ್ದಾಗ ತಾತಾ ಕೊಡಿಸಿದ್ದು ಅದು ಹೇಗೋ ಬಿಡ್ಲಿ"

"ನೀನೋ ನಿನ್ನ ತಾತನ ಗಿಫ್ಟೋ ಸರಿಯಾಗಿದ್ದಿರಾ, ಒಂದು ವೇಳೆ ಈಗ ನಾನು ಹೊಸ ಸ್ಕೂಟಿ ಗಿಫ್ಟ್ ಕೊಟ್ರೆ ಏನೇ ಮಾಡ್ತಿಯಾ??" ಹುಬ್ಬು ಹಾರಿಸಿ ಕೇಳಿದ.

"ಹೇಗೂ ಹರಿಣಿ ಮುಂದಿನ ವರ್ಷ ಕಾಲೇಜು ಸೇರ್ತಾಳಲ್ವ ಅವಳಿಗೆ ಹೊಸ ಸ್ಕೂಟಿ ಕೊಟ್ಟು ಬಿಡ್ತಿನಿ" ಎಂದು ನಕ್ಕಳು

ಅವನು ಅವಳ ಮುಖವನ್ನೆ ದಿಟ್ಟಿಸಿ ನೋಡಿ "ಬಿಟ್ರೆ ನನ್ನನ್ನು ಹರಾಜು ಹಾಕಿ ಮಾರಿ ಬಿಡ್ತಿಯಲ್ವಾ"

"ಹ್ಮೂ ಮಾರಬಹುದೆನೋ ಆದರೆ ಕೊಂಡುಕೊಳ್ಳುವರು ಬೇಕಲ್ವಾ" ಎಂದು ಅಣುಗಿಸಿ ನಕ್ಕಳು

"ತುಮ್ ಇತ್ನಾ ಜೋ ಮುಸ್ಕುರಾ ರಹೇ ಹೋ.. ಕ್ಯಾ ಬಾತ್ ಹೈ ಜೋ ಚುಪಾ ರಹೇ ಹೋ.. ಎಂದು ಹಾಡು ಹೇಳಿ ಯಾಕೋ ಡಾಕುಟ್ರು ತುಂಬಾ ಒಳ್ಳೆಯ ಮೂಡಲ್ಲಿದ್ದಿರಾ" ಎಂದು ಕೇಳಿದ.

"ಇವತ್ತೇನಾಯ್ತು ಗೊತ್ತಾ,  ವಯ್ಯಸ್ಸಾದ ಅಜ್ಜಿಯೊಬ್ಬರಿಗೆ ಆ್ಯಕ್ಸಿಡೆಂಟ್ ಆಗಿ ಆಸ್ಪತ್ರೆಗೆ ಸೇರಿಸಿದ್ರು. ಅವರ ತಲೆಗೆ ಪೆಟ್ಟಾಗಿ ರಕ್ತ ಸುರಿತಿತ್ತು."

"ಓಹ್ ಇದನ್ನು ನೋಡಿನೂ ಖುಷಿಯಾಗುತ್ತ ವಿಚಿತ್ರ ಕಾಲ ಬಂತಪ್ಪ" ಎಂದ.

ಮುಂದೆ ಕೇಳು ಸುಮ್ನೆ ಎಂದು ಅವನ ಬಾಯಿ ಮುಚ್ಚಿ, ತಾನೇ ಮುಂದುವರೆಸಿದಳು "ಆ ಅಜ್ಜಿಯ ಗಂಡ ಬಂದವರೇ ಹೆಂಡತಿಗೊಸ್ಕರ ಅಳ್ತಾ ಗೊಗರೆಯುತ್ತಾ ನನ್ನ ಹೆಂಡತಿ ಪ್ರಾಣ ಉಳಿಸಿ ಡಾಕ್ಟ್ರೆ ಅಂತ ಕೇಳಿಕೊಳ್ತಿದ್ರು. ಸುಕ್ಕುಗಟ್ಟಿದ ಮುಖ, ಆಳಕ್ಕೆ ಇಳಿದ ಕಣ್ಣುಗಳು, ಕೃಷವಾದ ದೇಹ ಈ ವಯಸ್ಸಿನಲ್ಲೂ ಹೆಂಡತಿನಾ ಅದೆಷ್ಟು ಪ್ರೀತಿಸ್ತಾರೆ ಪಾಪ ಅನ್ನಿಸ್ತು.
ಅಜ್ಜಿಯ ತಲೆಗೆ ಸ್ವಲ್ಪ ಪೆಟ್ಟಾಗಿದ್ದರಿಂದ ಏನೂ ತೊಂದರೆ ಆಗಿರ್ಲಿಲ್ಲ. ಟ್ರೀಟ್ ಮೆಂಟ್ ಕೊಟ್ಟು ವಾರ್ಡ್ ಗೆ ಶಿಫ್ಟ್ ಮಾಡಿ. ಅಜ್ಜನಿಗೆ ಒಳಗೆ ಹೋಗಿ ನೋಡಬಹುದು ಅಂತ ತಿಳಿಸಿದೆವು. ಅಜ್ಜ ಒಳಗೆ ಹೋದಾಗ ಅವರನ್ನ ನೋಡಿ ಅಜ್ಜಿ  'ರೀ‌.. ನಂಗೆ ಏನೋ ಆಗೋಯ್ತು ಅಂತ ಅಳ್ತಿದ್ರಂತೆ, ಈಗ ಗೊತ್ತಾಯ್ತ ನನ್ನ ಬೆಲೆ' ಅಂದ್ರು. ಅದ್ಕೆ ಅಜ್ಜ,  'ಲೇ ಸುಬ್ಬಿ.. ನಾನ್ಯಾಕೆ ಅಳ್ತಿನಿ. ನಾಳೆನೆ ಒಂದು ಹುಡುಗಿ ನೋಡೋ ಅಂತ ಬ್ರೋಕರ್ ಗೆ ಹೇಳಿ ಇಟ್ಟಿದ್ದೆ. ಛೇ ನೀನು ನೊಡಿದ್ರೆ ಗಟ್ಟಿಯಾಗೇ ಇದೀಯಲ್ಲೇ' ಅಂದ್ರು
ಅದಕ್ಕೆ ಆ ಅಜ್ಜಿ 'ಅದಕ್ಕೆನಂತೆ ಈಗ್ಲೂ ಕಾಲ ಮಿಂಚಿಲ್ಲ ಡೈವರ್ಸ್ ಕೊಡ್ತಿನಿ, ನಾಳೆನೆ ಹುಡುಗಿ ಹುಡಿಕ್ಕೊಳ್ಳಿ ಆದರೆ ನಿಮ್ಮ ಬಕ್ಕ ತಲೆಗೆ ಹೆಣ್ಣು ಸಿಕ್ರೆ ತಾನೇ' ಎಂದು ನಕ್ಕು ಬಿಟ್ರು. ಹೀಗೆ ಅವರಿಬ್ಬರ ಟಾಮ್ ಆ್ಯಂಡ್ ಜರಿ ವಾರ್ ನಡಿತಾನೇ ಇತ್ತು. ಎಪ್ಪತ್ತರ ವಯ್ಯಸ್ಸಿನಲ್ಲೂ ಎಂತಹ ಅನ್ಯೋನ್ಯ ದಾಂಪತ್ಯ!! ಅವರನ್ನು ನೋಡಿ ಮನಸ್ಸಿಗೆ ಏನೋ ಖುಷಿ ಕಣೋ. ನಾವು ವಯ್ಯಸ್ಸಾದ ಮೇಲೂ ಹೀಗೆ ಇರ್ತಿವಿ ಅಲ್ವಾ" ಎಂದು ಅವನ ಮುಖ ನೋಡಿದಳು.

"ಯಾಕೆ ನಿನಗೀ ಡೌಟು. ಪ್ರೀತಿಗೆ ವಯ್ಯಸ್ಸಿಲ್ಲ ಕಣಮ್ಮ. ಅದು ಯಾವತ್ತಿದ್ರೂ ಶರದೃತುವಿನ ಬೆಳ್ಮುಗಿಲಂತೆ ನವ್ಯನಿರ್ಮಲ..ಪ್ರೀತಿ ನಿಸ್ವಾರ್ಥ ನಿಷ್ಕಲ್ಮಷವಾದ್ದೆ ಆದ್ರೆ ವಯ್ಯಸ್ಸಾದ ಮೇಲೆ ಅಷ್ಟೇ ಅಲ್ಲ ಜನ್ಮ ಜನ್ಮಾಂತರಕ್ಕೂ ಅದನ್ನ ದೂರ ಮಾಡಕ್ಕಾಗಲ್ಲ ಗೊತ್ತಾ"

"ಓಹೋ ಭಾರಿ ಹೋದ ಜನ್ಮದಲ್ಲಿ ಏನಾಗಿದ್ರೋ ತಾವು"

"ನಾನು ಹಸಿರ ಮಲೆನಾಡ ತಪ್ಪಲಿನಲ್ಲಿ ತಂಪಾದ ಮರದ ಕೆಳಗೆ ಕೂತು ದನಕಾಯುವ ಕೊಳಲನೂದುವ ಗೊಲ್ಲನಾಗಿದ್ದೆ."

"ಮತ್ತೆ ನಾನು ಏನಾಗಿದ್ದೆ"

"ನಿನಗೊಸ್ಕರ ತಾನೇ ನಾನು ಕೊಳಲು ಊದುತ್ತಿರೋದು, ಅಂದಮೇಲೆ ನೀನು..."

"ರಾಧೆ ತಾನೇ" ಎಂದಳು ಕೂತುಹಲದಿಂದ

"ಅ..ಲ್ಲಾ.... ದನಾsss..." ಎಂದನು ಎಳೆದು. "ನಾನು ದನ ಕಾಯೋನು ಅಂದ್ಮೇಲೆ  ದನದ ಮೇಲೆ ತಾನೇ  ಪ್ರೀತಿ ಜಾಸ್ತಿ" ಎಂದು ನಕ್ಕ.

"ನೀನು ಗೊಲ್ಲ ನಾನು ದನಾ ನಾ!!  ನಿನ್ನಾ... " ಎಂದು ಕೈ ಚಿವುಟಿ ಭುಜಕ್ಕೆ ಒಂದೆರಡು ಗುದ್ದು ಕೊಟ್ಟಳು.

ಅವನು ನಕ್ಕು "ಪುಣ್ಯಕೋಟಿ ಗೋವು ಅಂದ್ಕೊಂಡಿದ್ನಲ್ಲೇ ನಿನ್ನ.. ಛೇ.." ಎನ್ನುತ್ತಾ ಎಫ್ ಎಮ್ ಹಾಕಿದ
"ಜೀವವೇ ಪ್ರೀತಿಸು ಜೀವ ಹೋಗುವಂತೆ
 ಸಂತೆಯಾ ಮಧ್ಯವೇ ಸ್ವಪ್ನ ತಾಗುವಂತೆ..." ಹಾಡು      ಗುನುಗುತ್ತಿತ್ತು.

ಹಾಡು ಕೇಳುತ್ತಾ ಅವನನ್ನೇ ನೋಡಿದಳು. ಅವನ ಮುಂಗುರುಳು ಗಾಳಿಗೆ ಹಣೆಯ ಮೇಲೆ ನೃತ್ಯ ಮಾಡುತ್ತಿದ್ದವು. ಕಣ್ಣಲ್ಲಿ ಪ್ರೀತಿಯ ತೇಜಸ್ಸಿತ್ತು. ಯಾವತ್ತೂ ಹೇಳಿಕೊಳ್ಳದೆ ಅರ್ಥಮಾಡಿಸುವ ಹಾಗೂ ಅರ್ಥವಾಗುವ ಪ್ರೀತಿಗೆ ಆಯಸ್ಸು ಅಧಿಕವಂತೆ. ನಮ್ಮದು ಹಾಗೆ ಅಲ್ಲವೇನೋ ಹುಡುಗ.. ಮೂರು ಪದಗಳಲ್ಲಿ ಪ್ರೀತಿಯನ್ನು ಹಿಡಿದು, ಮೂರು ಗಂಟಿನಲ್ಲಿ ಅದೇ ಪ್ರೀತಿಯನ್ನು ಬಂಧಿಸಿ, ಯಾಂತ್ರಿಕವಾಗಿ ಬದುಕು ಸಾಗಿಸುವದಕ್ಕಿಂತಲೂ ಮಧುರವಾಗಿದೆ ನಮ್ಮ ಈ ಬಾಲ್ಯದಿಂದಲೇ ಮೊದಲಾದ ಅವಿರತ ಪ್ರೀತಿ!  ಇದುವರೆಗೂ ಒಬ್ಬರಿಗೊಬ್ಬರು ಪ್ರೀತಿಯನ್ನು ಹೇಳಿಕೊಂಡವರಲ್ಲ. ಅದೊಮ್ಮೆ ಮನೆಯಲ್ಲಿ ನಮ್ಮಿಬ್ಬರ ಮದುವೆ ಪ್ರಸ್ತಾಪವಾದಾಗ ನೀನು ನೋಡಿದ ಆ ಕುಡಿನೋಟ ಹೇಗೆ ಮರೆಯಲಾದೀತು. ನಾನು ಏನೂ ಉತ್ತರ ಕೊಡದೆ ಮೌನವಾಗಿ ನಿಂತಾಗ ನೀನು ಗುನುಗಿದ ಹಾಡು ಇನ್ನೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ  "ಜುಕಿ ಜುಕಿ ಸಿ ನಜರ್ ಇನ್ಮೆ ಪ್ಯಾರ್ ಹೈ ಕೆ ನಹೀ..
ದಬಾ ದಬಾ ಸಾ ಸಹೀ ಬೇಕರಾರ್ ಹೈ ಕೆ ನಹೀ.." ಇಲ್ಲವೆಂದು ಹೇಗೆ ಹೇಳಲೋ ಹುಡುಗ. ನಿನ್ನಲ್ಲಿದ್ದ ಪ್ರೀತಿಯನ್ನೆಲ್ಲ ಮೊಗೆಮೊಗೆದು ಕೊಟ್ಟವ,  ಸಾಗರದಷ್ಟು ಸಂತೋಷವನ್ನು ಸುರಿದು ಹನಿ ಪ್ರೀತಿಯ ಕಾಣಿಕೆಗಾಗಿ ಬೊಗಸೆ ಹಿಡಿದು ನಿಂತಿದ್ದ ನಿನ್ನ ಪೆದ್ದು ಎನ್ನಲಾ ಪ್ರೇಮಿ ಎನ್ನಲಾ, ನನ್ನ ಸಂತೋಷಗಳಲ್ಲೇ ನಿನ್ನ ನೆಮ್ಮದಿ ಹುಡುಕುವ ನಿನ್ನ ಪ್ರೇಮಿ ಎನ್ನಲಾ ದೈವ ಎನ್ನಲಾ.. ನನ್ನ ಪಾಲಿನ ದೈವವೇ ಸರಿ ನೀನು..‌ ಸದಾ ನಿನ್ನ ಆರಾಧಿಸುವ ಬರಿಗೈ ಭಕ್ತೆ ನಾನು. ಪ್ರೀತಿ ಹೊರತು ಏನಿದೆಯೋ ಅರ್ಪಿಸಲು ನನ್ನಲ್ಲಿ.  ಅದೆಷ್ಟು ಒಳ್ಳೆಯ ಮನಸ್ಸೋ ನಿನ್ನದು.. ನನಗಾಗಿ ಏನೆಲ್ಲಾ ಮಾಡಿದರು ಯಾವತ್ತೂ ಅದನ್ನು ಹೇಳಿಕೊಂಡವನಲ್ಲ, ಯಾವತ್ತೂ ನನ್ನಿಂದ ಏನೂ ಅಪೇಕ್ಷಿಸಿದವನಲ್ಲ. ಈಗಲೂ ನನಗೊಸ್ಕರನೇ ಬಂದಿದ್ರೂ.... ಎಂದೆಲ್ಲಾ ಪರಿಧಿಯ ಮನಸ್ಸು ಮಾತಾಡುವಾಗ ಹರ್ಷ "ಏನ್ ಡಾಕ್ಟರೇ ಹಂಗ ನೋಡ್ತಿದಿರಾ, ದೃಷ್ಟಿಯಾಗಿಬಿಟ್ರೆ" ಎಂದು ಎಚ್ಚರಿಸಿದ.

ಅವಳು ಯೋಚನೆಯಿಂದ ಹೊರಬಂದು "ಚಂದ್ರನಿಗೂ ಎಂದಾದರೂ ದೃಷ್ಟಿ ಆಗೋದುಂಟಾ" ಎಂದು ಕಣ್ಣು ಮಿಟುಕಿಸಿದಳು.

"ಬಹುಶಃ ಚಂದ್ರ ಯಾರ ಕೈಗೂ ಸಿಗದೆ ದೂರ ಇರೋದಕ್ಕೆ.. ಅವನಿಗೆ ಅಷ್ಟೊಂದು ಬೆಲೆ, ನಾನು ದೂರ ಹೋಗಿಬಿಡ್ಲಾ ಹಾಗಾದ್ರೆ"

"ಹರ್ಷ, ನೀ ಹೀಗೆಲ್ಲ ಮಾತಾಡೋದಾದ್ರೆ ನಂಜೊತೆ ಮಾತಾಡಲೇ ಬೇಡ" ಎಂದು ಮುಖ ಆಕಡೆ ತಿರುಗಿಸಿ ಸಿಟ್ಟಾದಳು.

ಅವನು ನಕ್ಕು "ಹಾಗಲ್ವೆ ದೂರ ಅಂದರೆ ಚಂದ್ರನ ಹತ್ರ ಅಲ್ಲ, ಮುಂಬೈಗೆ" ಎಂದ

ಅವಳು ಮತ್ತೆ ಅವನತ್ತ ತಿರುಗಿ "ಮುಂಬೈಗಾ? ಯಾಕೆ? ಯಾವಾಗ?" ಎಂದಳು

"ಒಂದು ಬ್ಯುಸಿನೆಸ್ ಮೀಟಿಂಗ್ ಅಟೆಂಡ್ ಮಾಡೊಕೆ. ಎಸ್ ಆರ್ ಕಂಪನಿ ಜೊತೆ. ನಾಡಿದ್ದು ಗುರುವಾರ ಹೋಗ್ತಿದಿನಿ. ಬರೋದು ಒಂದು ವಾರ ಆಗ್ಬಹುದು. ನೀನು ಆ ಡಕೋಟಾ ಸ್ಕೂಟಿ ಬಿಟ್ಟು ಕಾರ್ ತಗೊಂಡು ಹೋಗು ಇನ್ಮುಂದೆ ಮಳೆಗಾಲ ಬೇರೆ ಶುರುವಾಗಿದೆ"

"ನೀನೇ ಹೋಗಬೇಕಾ? ಮ್ಯಾನೇಜರ್ ನಾ ಕಳಿಸ್ಬಹುದಲ್ವ" ಸ್ವಲ್ಪ ಆತಂಕದ ಧ್ವನಿಯಲ್ಲಿ ಕೇಳಿದಳು.

"ತಾನು ಮಾಡಿದ್ದು ಉತ್ತಮ ಮಗ ಮಾಡಿದ್ದು ಮಧ್ಯಮ ಆಳು ಮಾಡಿದ್ದು ಹಾಳು ಅನ್ನೋ ಗಾದೆ ಕೇಳಿದೀಯಾ. ಇದು ನಮ್ಮ ಕಂಪನಿ ಕಣೇ ತಾತ, ಅಪ್ಪ ಕಟ್ಟಿ ಬೆಳೆಸಿರೋ ಕಂಪನಿ. ಇದನ್ನ ಇನ್ನೂ ಎತ್ತರಕ್ಕೆ ಬೆಳೆಸ್ಬೇಕು ಅಂತ ನನ್ನಾಸೆ. ಅದಕ್ಕೊಸ್ಕರ ಸ್ವಲ್ಪ ಕಷ್ಟ ಪಡಲೆಬೇಕಲ್ವ" ಎಂದು ಎಡಗೈಯಿಂದ ಅವಳ ಕೈ ತೆಗೆದುಕೊಂಡು ತನ್ನ ಎದೆಯ ಮೇಲಿರಿಸಿ "ನನ್ನ ಎದೆಬಡಿತ ಕೇಳು. ನಿನ್ನ ಬಿಟ್ಟು ಹೋಗೋಕೆ ಇಷ್ಟವಿಲ್ಲದೆ ಎಷ್ಟು ಜೋರಾಗಿ ಬಡಿದುಕೊಳ್ತಿದೆ." ಎಂದ. ಅವಳು ಗಂಭೀರವಾಗಿ ಅವನ ಎದೆಬಡಿತ ಆಲಿಸುವಾಗ ಅವನು  "ಎಲ್ ಹೋಗುತ್ತೇ ನಿನ್ನ ಡಾಕ್ಟರ್ ಬುದ್ದಿ" ಎಂದು ನಕ್ಕು ಬಿಟ್ಟ.

ಅವಳು ತುಸು ಮುನಿಸಿಕೊಂಡು "ಸರಿ ಹಾಗಾದ್ರೆ. ನಿನ್ನ ಹೃದಯ ಇಲ್ಲೇ ಬಿಟ್ಟು ಹೋಗು. ನಾನು ಜೋಪಾನವಾಗಿ ನೋಡ್ಕೊಳ್ತಿನಿ" ಎನ್ನುವಾಗ ಕಾರು ಮನೆಯನ್ನು ಸೇರಿತ್ತು. ಅವನು "ಸರಿ.. ಹಾಗೆ ಮಾಡು" ಎಂದು ಅವಳ ಕೆನ್ನೆ ಹಿಂಡಿದ. ಅವಳ ಕೆನ್ನೆ ಕೆಂಪಾಗಿ, ಹೆಜ್ಜೆಗಳು ನಾಚಿ ಒಳಗೆ ಓಡಿ ಹೋದರೆ ಅವನ ಹೆಜ್ಜೆಗಳು ಅವಳ ಹೆಜ್ಜೆಗಳನ್ನೇ  ಹಿಂಬಾಲಿಸಿದವು.

             

ಮುಂದುವರೆಯುವುದು..

                    ⚛⚛⚛⚛⚛

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...