ಆಸ್ಪತ್ರೆಯಿಂದ ಮನೆಗೆ ಬಂದ ಮಾನ್ವಿಯನ್ನು ಹೊಸ್ತಿಲಲ್ಲೇ ನಿಲ್ಲಿಸಿ ಆರತಿ ತರಲು ಹೇಳಿದರು ಅವಳ ತಾಯಿ ಮಾನಸ. ಮಿಸೆಸ್ ಅರುಣಾರ (ಅಥ್ರೇಯನ ಪತ್ನಿ) ಪ್ರಕಾರ ಈ ಆಚರಣೆ ಸಂಪ್ರದಾಯ ಎಲ್ಲಾ ಟೈಮ್ ವೇಸ್ಟ್!! ಆದರೂ ಸಂಬಂಧಿ ಮನದಿಚ್ಚೆಯನುಸಾರ ಬಿಗುಮಾನದಲ್ಲಿ ತಾವು ಆರತಿಗೆ ಕೈ ಜೋಡಿಸಿದ್ದರು. ಒಳಗೆ ಬಂದ ಮಾನ್ವಿಯ ಯೋಗಕ್ಷೇಮ ವಿಚಾರಿಸಿದರು. ಕೇವಲ ಫಾರ್ಮ್ಯಾಲಿಟಿಗೆ!! ಮಾತಿನಲ್ಲಿ ಆಸಕ್ತಿಯೇ ಇರಲಿಲ್ಲ.
ಅರುಣಾ ಅವರನ್ನು ಮೊದಲ ಬಾರಿಗೆ ನೋಡುತ್ತಿದ್ದಂತೆ ಅಚೇತನನಾದ ಪ್ರಸನ್ನ ಅನ್ಯಮನಸ್ಕನಾಗಿ ಹೆಜ್ಜೆ ಹಿಂದೆ ಹಾಕಿದ್ದ. ಯಾವುದೋ ಟ್ರಾನ್ಸ್ ನಲ್ಲಿದ್ದಂತೆ ಶ್ವಾಸಿಸುವದನ್ನು ಮರೆತು ಪಕ್ಕಕ್ಕೆ ಜರುಗಿ, ಕೆಟ್ಟ ಕನಸಿನಿಂದ ಎಚ್ಚರಗೊಂಡಂತೆ ಗಂಭೀರ ನಿಟ್ಟುಸಿರು ಬಿಟ್ಟ. ಅವನ ಮನಸ್ಸು ಹತೋಟಿಗೆ ಬರಲು ಕೆಲವು ಕ್ಷಣಗಳೇ ಹಿಡಿದವು. ಅವನನ್ನೇ ಗಮನಿಸುತ್ತಿದ್ದ ಪರಿಗೆ ಅವನ ಬದಲಾದ ವರ್ತನೆ ಸಂಶಯ ಹುಟ್ಟು ಹಾಕಿತು.
ಹರ್ಷನ ಬಳಿ ಬಂದ ಅರುಣಾ ಅವನ ಭುಜಕ್ಕೆ ಕೈಹಾಕಿ "ಹೌ ಆರ್ ಯು ಸನ್?" ಕೇಳಿದರು. ಅವರದ್ದೇನಿದ್ದರೂ ಜನನಿಮಿತ್ಯ ಒಂದೆರಡು ಕಳಕಳಿಯ ಮಾತುಗಳು.
"ಗುಡ್ ಮಾಮ್" ಅಷ್ಟೇ ಕ್ಲುಪ್ತವಾಗಿ ಉತ್ತರಿಸಿದ ಹರ್ಷನಿಗೆ ನಿಜವಾದ ಸಂಕಲ್ಪ್ ನ ಬಗ್ಗೆ ಕನಿಕರ ಉಂಟಾಯಿತು.
ಮಾನ್ವಿಯ ಬಳಿ ಬಂದ ಅಥ್ರೇಯ ಅವಳನ್ನು ಬಳಸಿ "ಡಿಯರ್, ನನ್ನ ಫ್ರೆಂಡ್ ರಘು, ನಿನ್ನ ಮತ್ತು ಸಂಕಲ್ಪ್ ಮದುವೆಯನ್ನು ಇನ್ನೂ ಕೆಲವು ದಿನ ಮುಂದೂಡೋಣ ಅಂತಿದ್ದಾನೆ. ಇದಕ್ಕೆ ನೀನೇನು ಹೇಳ್ತಿಯಾ?" ಮೆಲ್ಲಗೆ ಅವಳ ಭುಜ ಹಿಸುಕಿ ಕಣ್ಣಲ್ಲೇ ಜಾಗೃತೆ ನೀಡಿದ.
"ನೋ ಡ್ಯಾಡ್, ಅದರ ಅವಶ್ಯಕತೆ ಇಲ್ಲ. ಈಗ ಫಿಕ್ಸ್ ಆಗಿರೋ ಮುಹೂರ್ತದಲ್ಲಿ ಮದುವೆ ಆಗಲಿ. ಐಮ್ ಆಲ್‌ರೈಟ್" ಕಟುವಾಗಿ ಉತ್ತರಿಸಿದಳಾಕೆ.
"ನೀನೇನು ಹೇಳ್ತಿಯಾ.. ಮೈ ಡಿಯರ್ ಸನ್?" ಎಚ್ಚರಿಕೆಯ ನೋಟ ಹರ್ಷನೆಡೆಗೆ ವಾಲಿತು.
"ಮಾನ್ವಿ ನಿರ್ಧಾರ ಹೇಗಿದೆಯೋ ಹಾಗೆ.... ಮದುವೆ ಇದೇ ಮುಹೂರ್ತದಲ್ಲಿ ನೆರವೇರಲಿ. "
(ಯಾರ ಜೊತೆಗೆ ಅನ್ನೋದು ನನ್ನ ನಿರ್ಧಾರ!) ಮನಸ್ಸಲ್ಲೇ ಉಸುರಿದ ಹರ್ಷ.
ಬಿಗು ವಾತಾವರಣ ಸಂಭ್ರಮದ ಕಡಲಾಯಿತು. ರಘುನಂದನ್ ಮತ್ತು ಮಾನಸಾ ಅವರ ಮೊಗದಲ್ಲಿ ಮಗಳ ಮದುವೆಯ ಸಂತಸದ ಛಾಪು ಮೂಡಿತು. ಮದುವೆಗೂ ಮುಂದಿನ ಶಾಸ್ತ್ರಗಳ ಕಾರ್ಯಕ್ರಮಗಳು ಯತಾರೀತಿ ಮುಂದುವರಿದವು. ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ಆಲಾಪ್ ಗೆ ವಹಿಸಿದ್ದರು ರಘುನಂದನ್.
ಮಾನ್ವಿ ಹರ್ಷನ ನಿರ್ಧಾರ, ಪರಿಯ ಮೌನ ನೋಡಿ ಅವನೂ ಗೊಂದಲಕ್ಕೆ ಸಿಲುಕಿದ. ಆದರೆ ಏನನ್ನೂ ಹೇಳಲಾಗದ ಕೇಳಲಾಗದ ಪರಿಸ್ಥಿತಿಯಲ್ಲಿ ಸುಮ್ಮನೆ ಮುಗುಳ್ನಗುತ್ತ ತಲೆದೂಗಿದ.
********
ಮನೆಗೆ ಕಾಲಿಟ್ಟ ಘಳಿಗೆಯಿಂದ ಪ್ರಸನ್ನನ ನೋಟ ಬೇಡ ಬೇಡವೆಂದುಕೊಂಡರೂ ಅರುಣಾ ಅವರನ್ನೇ ಹಿಂಬಾಲಿಸುತ್ತಿತ್ತು. ಕಾರಣವೇನೆಂದು ತಿಳಿದುಕೊಂಡ ಪರಿಧಿಯ ಮನಸ್ಸು ಭಾರವಾಗಿತ್ತು.
ಮಾನ್ವಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಪರಿಧಿ ವಹಿಸಿಕೊಂಡಳು. ಮದುವೆಗೆ ಹರ್ಷನ ಸಮ್ಮತಿ, ಪರಿಯ ಮೌನ, ಪ್ರಸನ್ನನ ಶಾಂತತೆ ಸುತ್ತಲೂ ನಡೆಯುತ್ತಿದ್ದ ವಿದ್ಯಮಾನಗಳು ನೋಡಲು ವಿಚಿತ್ರ ಎನಿಸಿದರೂ ಯಾಕೆ? ಹೇಗೆ? ಎಂಬ ಪ್ರಶ್ನೆ ಕೇಳುವ ಧೈರ್ಯ ಸಾಲಲಿಲ್ಲ ಮಾನ್ವಿಗೆ.
ನಿರ್ದಿಷ್ಟ ಸಮಯಕ್ಕೆ ಹರ್ಷ ಆಫೀಸ್ ಗೆ ಹೊರಡುತ್ತಿದ್ದಂತೆ, ಅವನ ಹಿಂದೆಯೇ ಹೊರಟ ಡೇವಿಡ್ ಕಾಟ ಕೊಂಚ ತಪ್ಪಿತು. ಮನೆತುಂಬ ಸೆಕ್ಯೂರಿಟಿ ಇತ್ತಾದರೂ ಡೇವಿಡ್ ನಿಗ್ರಾಣಿಯಷ್ಟು ಬಿಗಿಹಿಡಿತ ಇರಲಿಲ್ಲ. ಆಲಾಪ್, ಸಂಜೀವಿನಿಯನ್ನು ಕರೆತರಲು ಮೇಜರ್ ಮನೆಗೆ ತೆರಳಿದ್ದ.
"ಏನ್ ನಡಿತಿದೆ ಇಲ್ಲಿ? ಎಲ್ಲರ ವರ್ತನೆನೇ ಬದಲಾಗಿದೆಯಲ್ಲ" ರೂಮಿನಲ್ಲಿ ತಿಂಡಿ ತಿನಿಸುತ್ತಿದ್ದ ಪರಿಯ ಬಳಿ ಕೇಳಿದಳು ಮಾನ್ವಿ.
"ಅದು ನಿನ್ನೆ ರಾತ್ರಿ.,....."
" ನಿನ್ನ ಪ್ರೀತಿಸಿದ ಪಾಪಕ್ಕೆ ನಿನ್ನೆ ರಾತ್ರಿ ಪ್ರೇಮಿಯೊಬ್ಬ ಶಿವನ ಪಾದ ಸೇರಿದ.." ಪರಿಯ ಅರ್ಧೋಕ್ತಿಯನ್ನು ಪೂರ್ಣಗೊಳಿಸಿದ ಒಳಗೆ ಬಂದ ಪ್ರಸನ್ನ.
"ವ್ಹಾಟ್? ಯಾರ ಬಗ್ಗೆ ಹೇಳ್ತಿದಿಯಾ?" ಮಾನ್ವಿ ಕಣ್ಣು ಕಿರಿದಾದವು.
" ಅದೇ ನೀನು ಅಥ್ರೇಯನ ಬಗ್ಗೆ ಪ್ರೂಫ್ ಕಲೆಕ್ಟ ಮಾಡಲು ಹೇಳಿದ್ದ ಡಿಟೆಕ್ಟಿವ್!! ಅದ್ವೈತ..! " ಪ್ರಸನ್ನನ ಉತ್ತರಕ್ಕೆ ಅರೆ ಕ್ಷಣ ಸ್ಥಂಭೀಭೂತಳಾದಳಾಕೆ.
ರಾತ್ರಿ ಅದ್ವೈತ ಆಸ್ಪತ್ರೆಗೆ ಬಂದಿದ್ದು, ಪ್ರಸನ್ನ ಅವನನ್ನು ಹಿಂಬಾಲಿಸಿದಾಗ ಆತ ಎಲ್ಲವನ್ನೂ ವಿವರಿಸಿ ಹೇಳಿದ್ದು, ನಂತರ ಬಂದ ಅಥ್ರೇಯ ಅವನನ್ನು ಕೊಂದ ಘಟನೆ, ಹರ್ಷನ ತಂದೆ ತಾಯಿ ಅವನ ಬಂಧಿಯಾಗಿದ್ದು, ತಾವೆಲ್ಲರೂ ಎಂತಹ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆಂಬುದನ್ನು ಇಬ್ಬರೂ ಸೇರಿ ಮಾನ್ವಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದರು.
ತನಗೂ ಈ ಸಮಸ್ಯೆಗೂ ಸಂಬಂಧವೇ ಇರದಿದ್ದರೂ ಕೇವಲ ತನಗೆ ಸಹಾಯ ಮಾಡಲು ಬಂದು ಪ್ರಾಣ ಕಳೆದುಕೊಂಡ ಅದ್ವೈತನನ್ನು ನೆನೆದು ಮಾನ್ವಿಯ ಕಣ್ಣು ನೀರಾದವು. ನೆನಪಿನಲ್ಲೂ ಮೂಡಿದ್ದು ಮತ್ತದೇ ಅವನ ಚಂದದ ಮುಗುಳ್ನಗು..
"ಎಲ್ಲಾ ನಿಮ್ಮಿಂದಲೇ ಆಗಿದ್ದು.. ಯಾಕೆ ಬರ್ಬೇಕಿತ್ತು ನೀವಿಬ್ರೂ ಇಲ್ಲಿಗೆ? ನಾನು ಅದ್ವೈತ ಸೇರಿ ಎಲ್ಲಾ ಸರಿ ಮಾಡುತ್ತಿದ್ವಿ. ಎರಡೇ ದಿನದಲ್ಲಿ ಅಥ್ರೇಯನ ಮೋಸದಾಟ ಬಯಲಾಗ್ತಿತ್ತು. ಅವನು ಜೈಲಿಗೆ ಹೋಗ್ತಿದ್ದ. ಆದರೆ ನಿಮ್ಮಿಂದಾಗಿ ಎಲ್ಲಾ ಹಾಳಾಯ್ತು. ಪಾಪ ಅದ್ವೈತ ಕೂಡ..." ಬಿಕ್ಕುವ ಧ್ವನಿಯಲ್ಲಿ ಹಳಿದಳು.
" ನಮಗೇನು ಕನಸು ಬಿದ್ದಿತ್ತಾ,, ಇಲ್ಲಿ ಇಷ್ಟೆಲ್ಲಾ ರಹಸ್ಯ ಇದೆಯಂತ!! ಅವತ್ತು ಪರಿ ನಿನಗೆ ಸಿಕ್ಕಾಗಲೇ ಎಲ್ಲಾ ನಿಜ ಹೇಳ್ಬೇಕಿತ್ತು ತಾನೇ.. " ತನ್ನದೇ ದಾಟಿಯಲ್ಲಿ ಪ್ರಶ್ನಿಸಿದ ಪ್ರಸನ್ನ.
"ಅಚಾನಕ್ಕಾಗಿ ಅವಳನ್ನ ಅಲ್ಲಿ ನೋಡಿ ನನಗೆ ಭಯವಾಯ್ತು. ಅವಳು ಹರ್ಷನ ಎದುರಿಗೆ ಬಂದ್ರೆ.... ಅವರನ್ನು ಸೆಕ್ಯೂರಿಟೀಸ್ ನೋಡಿದ್ರೆ.. ಅವರಿಬ್ಬರ ಜೊತೆ ನನ್ನ ಡ್ಯಾಡ್ ಜೀವಾನೂ... ನೋ...
ಅದಕ್ಕೆ ಅವಳಿಗೆ ಏನೇನೋ ಷರತ್ತು ಹಾಕಿ ಹರ್ಷನಿಂದ ದೂರ ಉಳಿಯುವಂತೆ ಮಾಡಿದೆ.
ಆದರೆ ಅವಳು ಹೀಗೆ ಪತ್ರ ಬರೆಯಬಹುದು, ಗಿಫ್ಟ್ ಕಳಿಸಬಹುದು ಅಂತ ಊಹೆ ಕೂಡ ಮಾಡಿರಲಿಲ್ಲ. ಗಿಫ್ಟ್ ಬಂದಾಗಲೆಲ್ಲ ಅದು ನಾನೇ ಅಂತ ನಂಬಿಸೋಕೆ ಪ್ರಯತ್ನಿಸಿದೆ. ಆದರೆ ಡೇವಿಡ್ ಗೆ ಅದು ಸುಳ್ಳು ಅನ್ನೋದು ಗೊತ್ತಾಗಿತ್ತು. ಡೆಲಿವರಿ ಬಾಯ್ ಮೂಲಕ ಪರಿ ಬಗ್ಗೆ ವಿಚಾರಣೆ ಶುರು ಮಾಡಿದ್ದ. ಅದನ್ನು ತಡೆಯೋದಕ್ಕೆ ಅವಳಿಗೆ ಅದನ್ನು ನಿಲ್ಲಿಸಲು ಒತ್ತಡ ಹೇರಿದೆ.
ನೀನೋ... ಬೇತಾಳನ ಹಾಗೆ ಫ್ರೆಂಡ್ ಅಂತ ಮನೆಗೆ ಬಂದು ಸೇರಿಕೊಂಡೆ.. ಆದರೆ ನಮ್ಮ ಜಗಳ ನೋಡಿ ಡೇವಿಡ್ ಗೆ ನಿನ್ನ ಬಗ್ಗೆ ಅನುಮಾನ ಶುರುವಾಗಿತ್ತು. ಅವನಿಂದ ಅಥ್ರೇಯನಿಗೂ ವಿಷಯ ಮುಟ್ಟಿ ನಿನ್ನನ್ನು ಕೊಲ್ಲಲು ಹೊಂಚು ಹಾಕಿದ್ದ. ಅದಕ್ಕೆ ಅವತ್ತು ಶಾಪಿಂಗ್ ಮಾಲ್ ನಲ್ಲಿ ಸೀನ್ ಕ್ರಿಯೆಟ್ ಮಾಡಿಸಿ, ಯಾವುದೋ ನೆಪದಲ್ಲಿ ನಿನ್ನ ಜೈಲಿಗೆ ಹಾಕಿಸಿದ್ದು, ಈ ಗೊಂದಲ ಬಗೆಹರಿಯೋವರೆಗೂ ಅಲ್ಲೇ ಲಾಕ್ ಮಾಡಲು ನೋಡಿದೆ. ಆದ್ರೆ ನೀನು..."
"ಅವತ್ತೇ ಆಚೆ ಬಂದುಬಿಟ್ಟಿದ್ದೆ!" ಸ್ವಗತದಲ್ಲೇ ಹೇಳಿಕೊಂಡ ಪ್ರಸನ್ನ ಆ ದಿನ ಬೆಳಿಗ್ಗೆ ಮಾನ್ವಿ ಫೋನ್‌ಲ್ಲಿ ಮಾತನಾಡುವಾಗ ಅವನನ್ನು ನೋಡಿ ಗಾಬರಿಯಾಗಿದ್ದನ್ನು ನೆನಪಿಸಿಕೊಂಡ. ಅವಳ ಪ್ರತಿಯೊಂದು ಕ್ರಿಯೆಯ ಹಿಂದಿನ ಉದ್ದೇಶ ಒಳ್ಳೆಯದೇ ಆಗಿತ್ತು. ಆದರೆ ತಾನದನ್ನು ಅಪಾರ್ಥ ಮಾಡಿಕೊಂಡಿದ್ದಕ್ಕೆ ಖೇದವಾಯಿತು. ಪರಿಯ ದೃಷ್ಟಿಯಲ್ಲಿ ಮಾನ್ವಿಯ ಸ್ಥಾನ ಇನ್ನೂ ಎತ್ತರಕ್ಕೇರಿತು.
" ನಿಮ್ಮಿಂದಾಗಿಯೇ ಎಲ್ಲಾ ಹಾಳಾಗೋಯ್ತು.. ಅದ್ವೈತ ಪ್ರಾಣ ಕಳೆದುಕೊಂಡ! ಸಾಕ್ಷಿ ಎಲ್ಲಿವೆಯೋ ಗೊತ್ತಿಲ್ಲ! ಹರ್ಷನ ಪೇರೆಂಟ್ಸ್ ಬಂಧಿಯಾಗಿದ್ದಾರೆ! ಕ್ಷಣಕ್ಷಣಕ್ಕೂ ನನ್ನ ಡ್ಯಾಡ್ ಜೀವ ಅಪಾಯದಲ್ಲಿದೆ! ಮದುವೆ ತಯಾರಿ ಬೇರೆ ಶುರುವಾಗಿದೆ! ಏನ್ಮಾಡ್ಲಿ ನಾನೀವಾಗ?? ಹೇಳಿ.. ಏನ್ಮಾಡ್ಲಿ?? " ಕಿರುಚಿದಳು ಮಾನ್ವಿ.
"ಶ್... ರಿಲ್ಯಾಕ್ಸ್... ಎಲ್ಲಾ ಸರಿಹೋಗುತ್ತೆ. ನೀನು ಟೆನ್ಸ್ ಆಗ್ಬೇಡ; ಏನಾದ್ರೂ ಉಪಾಯ ಹುಡ್ಕೋಣ!" ಪರಿ ಅವಳ ಒತ್ತಡದ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಮಾಧಾನ ಮಾಡಿದಳು.
"ಆಲಾಪ್ ಮದುವೆ ಸಂಜು ಜೊತೆಗೆ ನಡೆದು ಹೋದಾಗ ನಿನ್ನ ಮೇಲೆ ಸಿಟ್ಟಾಗಿದ್ದು ನಿಜ ಕಣೇ.. ಆದರೆ ಯಾವತ್ತೂ ನಿನಗೆ ಕೇಡು ಮಾಡುವ ಯೋಚನೆ ಕೂಡ ಮಾಡಿದವಳಲ್ಲ! ಅವತ್ತು ಹೋಟೆಲ್ ನಲ್ಲಿ ಹರ್ಷನ ಭೇಟಿಯಾದ ನಂತರ ಆಲಾಪ್ ಮದುವೆಯಲ್ಲಿ ನಿನ್ನ ಮಧ್ಯಸ್ಥಿಕೆ ಇರಲಿಲ್ಲ ಅನ್ನೋದು ತಿಳಿದಮೇಲಂತೂ ನನ್ನ ವರ್ತನೆಯ ಮೇಲೆ ನನಗೆ ಅಸಹ್ಯವಾಯ್ತು. ಪ್ರಾಯಶ್ಚಿತ್ತ ಪಟ್ಟೆ. ನಿನ್ನ ಭೇಟಿಯಾಗಿ ಕ್ಷಮೆ ಕೇಳಿ ಮತ್ತೆ ಸ್ನೇಹ ಬಯಸಿ ಹೊರಟಿದ್ದೆ. ಆದರೆ ಅಷ್ಟರಲ್ಲಿ ಹರ್ಷನ ಆ್ಯಕ್ಸಿಡೆಂಟ್, ಅಥ್ರೇಯನ ನಯವಂಚನೆ, ನಾನು ಅಸಾಹಯಕಳಾಗಿದ್ದೆ ಪರಿ.. ಬೇರೆ ದಾರಿ ಇರಲಿಲ್ಲ ಕಣೇ ನನಗೆ.. " ಭಾವರಹಿತ ಮೊಗದಲ್ಲಿ ಕಂಬನಿ ಜಾರಿದವು.
"ನನಗೊತ್ತಿಲ್ವ ನನ್ನ ಫ್ರೆಂಡ್ ಏನಂತಾ.... ನಿನ್ನ ಮೇಲೆ ನನಗೆ ಯಾವ ಕೋಪ ಅನುಮಾನಗಳಿಲ್ಲ. ನೀನು ಅಳೋದನ್ನ ನೋಡಕ್ಕಾಗಲ್ಲ ಕಣೇ.. ಪ್ಲೀಸ್ ಸಮಾಧಾನ ಮಾಡ್ಕೊ" ಗೆಳತಿಯರಿಬ್ಬರೂ ಬಹು ದಿನಗಳ ನಂತರ ವೈಮನಸ್ಯ ತೊರೆದು ಮುಕ್ತವಾದರು.
***********
ಅಥ್ರೇಯ ಹೊಸ ಲಾಭದ ನಿರೀಕ್ಷೆಯಲ್ಲಿ ತುಂಬಾ ಉತ್ಸುಕನಾಗಿದ್ದ. ಇದೇ ಸಂದರ್ಭವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಹರ್ಷ ಕೂಡ ಸನ್ನದ್ದನಾಗಿದ್ದ.
ಉಲ್ಲಾಸಕರ ನವೋತ್ಸಾಹದೊಂದಿಗೆ ಕ್ಲೈಂಟ್ ಗಳ ಜೊತೆಗೆ ಕೈಕುಲುಕಿದ ಹರ್ಷ ಅದೇ ಹುಮ್ಮಸ್ಸಿನಲ್ಲಿ ಮೀಟಿಂಗ್ ಆರಂಭಿಸಿದ. ತನ್ನದೇ ವಿಶೇಷ ಶೈಲಿಯಲ್ಲಿ ಕಂಪನಿಯ ಪ್ಲಸ್ ಪಾಯಿಂಟ್ ಗಳನ್ನು ಅವರ ಮುಂದೆ ವಿಶ್ಲೇಷಿಸಿ ಸೂಕ್ತ ರೀತಿಯಲ್ಲಿ ಅವರ ಮನಸ್ಸು ಒಲಿಸಿದ.
ಕಂಪನಿಯ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸಿ ಇನ್ನೇನೂ ಪ್ರಾಜೆಕ್ಟ್ ಗೆ ಸಹಿ ಅಪ್ರೂವ್ ಆಗುವ ಸಮಯದಲ್ಲಿ ಪ್ರಾಜೆಕ್ಟ್ ಮೀಟಿಂಗ್ ಗೆ ತಲೆನೋವಿನ ನೆಪವೊಡ್ಡಿ ಚಿಕ್ಕ ವಿರಾಮವನ್ನು ಘೋಷಿಸಿ, ತನ್ನ ಕ್ಯಾಬಿನ್‌ಗೆ ತೆರಳಿದ. ಕ್ಷಣದಲ್ಲೇ ಅಥ್ರೇಯನ ಪಾಲಿನ ಕೋಟ್ಯಾಂತರ ಮೌಲ್ಯದ ಯೋಜನೆ ಬಾಯಿಗೆ ಬಂದೂ ತಿನ್ನಲಾಗದ ತುತ್ತಾಗಿತ್ತು. ಕೋಪದಿಂದ ಕ್ಯಾಬಿನ್ ಒಳಗೆ ನುಗ್ಗಿದವನೇ..
" ಹ್ಯಾವ್ ಯು ಲಾಸ್ಟ್ ಯುವರ್ ಮೈಂಡ್!! ಸೈನಾಗೋ ಲಾಸ್ಟ್ ಮೂಮೆಂಟ್ನಲ್ಲಿ ಏನಿದು ಹುಚ್ಚುತನ? ಹರ್ಷ, ನನ್ನ ಜೊತೆಗೆ ಹುಡುಗಾಟದ ಪರಿಣಾಮ ಎಷ್ಟು ಭೀಕರವಾಗಿರುತ್ತೆ ಅಂತ ನಿನಗೂ ಗೊತ್ತು! ಅದನ್ನು ಮತ್ತೆ ಮತ್ತೆ ಪ್ರೂವ್ ಮಾಡುವ ಹಾಗೆ ನಡೆದುಕೊಳ್ಳಬೇಡ" ಗದರಿದ.
"ಓಹ್ ಕಮಾನ್ ಮಿ.ಅಥ್ರೇಯ, ಜಸ್ಟ್ ಒನ್ ಅವರ್ ಬ್ರೇಕ್ ಅಷ್ಟೇ.. ನಿಮಗೆ ನಿಮ್ಮ ಪ್ರಾಜೆಕ್ಟ್ ಕೈ ಸೇರುತ್ತೆ! ಆದ್ರೆ ನನಗೆ??" ಸ್ಪಿನ್ನಿಂಗ್ ಚೇರ್ ತಿರುಗಿಸಿ ಟೇಬಲ್ ಮೇಲೆ ಕೈ ಕುಟ್ಟಿದ
"ವಾಟ್ ಡು ಯು ವಾಂಟ್"
"ನನ್ನ ಅಪ್ಪ ಅಮ್ಮನ ಬಿಡುಗಡೆ"
"ವೇರಿ ಫನ್ನಿ... ದಾಳಗಳೇ ಇಲ್ಲದೇ ಆಟ ಮುಂದುವರೆಯೋದು ಹೇಗೆ? ಅದು ಸಾಧ್ಯವಿಲ್ಲ"
"ಹಾಗಾದ್ರೆ ನಾನವರನ್ನು ನೋಡಬೇಕು ಈ ಕೂಡಲೇ..!!"
"ಇಟ್ಸ್ ನಾಟ್ ಪಾಸಿಬಲ್. ಮೊದಲು ಪ್ರಾಜೆಕ್ಟ್! ಆಮೇಲೆ ಭೇಟಿ! ನಿನ್ನ ಹಠ ನಿನ್ನ ತಂದೆ ತಾಯಿ ಸಾವಿಗೆ ಕಾರಣವಾಗಬಹುದು ಎಚ್ಚರವಿರಲಿ"
"ಈಗಲೂ ಕ್ಷೇಮವಾಗಿದ್ದಾರೆ ಅನ್ನೋದಕ್ಕೆ ಗ್ಯಾರೆಂಟಿ ಏನಿದೆ?? ನಾನವರನ್ನು ನೋಡಲೇಬೇಕು... ಈಗಲೇ.. ನೀವು ಸುಮ್ನೆ ಸಮಯ ವ್ಯರ್ಥ ಮಾಡ್ತಿದಿರಾ" ಕೈ ಗಡಿಯಾರ ನೋಡಿಕೊಳ್ಳುತ್ತ ಪಿಚ್ಚೆಂದ. ಅಥ್ರೇಯ ತನ್ನ ಫೋನ್ ಕೈಗೆತ್ತಿಕೊಳ್ಳುತ್ತಲೇ ಅದನ್ನು ಕಸಿದುಕೊಂಡ ಹರ್ಷ
"ನೇರವಾಗಿ ಭೇಟಿಯಾಗಬೇಕು. ಫೋನ್‌ಲ್ಲಿ ಅಲ್ಲ"
ಅಥ್ರೇಯನಿಗೆ ಒಪ್ಪದೇ ವಿಧಿಯಿರಲಿಲ್ಲ. ಡೇವಿಡ್ ಮುಂದಾಳತ್ವದಲ್ಲಿ ಹರ್ಷನನ್ನ ಅವರ ಬಳಿಗೆ ಕರೆದುಕೊಂಡು ಹೋಗಲಾಯಿತು.
ಕಾರ್‌ನಲ್ಲಿ ಕುಳಿತ ತಕ್ಷಣ ಕಣ್ಣಿಗೆ ಬಟ್ಟೆ ಕಟ್ಟಿ ವೇಗವಾಗಿ ಸಾಗಿ ಹದಿನೈದು ಇಪ್ಪತ್ತು ನಿಮಿಷಗಳಲ್ಲಿ ಒಂದು ತಾಣ ತಲುಪಲಾಯಿತು. ಕೋಣೆಗೆ ಹೋದ ನಂತರವೇ ಕಣ್ಣಪಟ್ಟಿಯನ್ನು ತೆಗೆದದ್ದು..
ಅದೆಷ್ಟೋ ಮಾಸಗಳ ನಂತರ ದುಃಖ ಅಸಹನೆ ನಿರಾಸೆಗಳ ಮಡಿಲಿನಿಂದ ಎಚ್ಚೆದ್ದು ತಂದೆ ತಾಯಿಯನ್ನು ಮತ್ತೆ ಸಂಧಿಸಿದ್ದ.
ವಿನಾಯಕ್, ಮಗ ಬದುಕಿರುವ ವಿಷಯವನ್ನು ತಿಳಿಸಿಯೇ ಪತ್ನಿಯನ್ನು ಕರೆದುಕೊಂಡು ಮುಂಬೈಗೆ ಬಂದಿಳಿದಿದ್ದರು. ಆದರೆ ಊಹಿಸದ ರೀತಿಯಲ್ಲಿ ಆಗಂತುಕರ ಕೈಗೆ ಸಿಕ್ಕು ಕೋಣೆಯೊಂದರಲ್ಲಿ ಬಂಧಿಯಾಗಿದ್ದರು. ಸತ್ತನೆಂದು ಭಾವಿಸಿ ದಹಿಸಿ ಹೋಗಿ, ದಿನಂಪ್ರತಿ ನೆನೆದು ಕೊರಗುತ್ತಿದ್ದವರು ಮಗನನ್ನು ಕಂಡ ಸಂತೋಷಕ್ಕೆ ಇಬ್ಬರಿಗೂ ಮಾತುಗಳೇ ಬರದಾಗಿದ್ದವು..
"ಹರ್ಷ...." ತಾಯಿ ಜೀವ ಕನಲಿತು. ಕಣ್ಣ ಮೋಡದಿಂದ ಮೊದಲ ಸೋನೆಹನಿ ಜೀವ ಪಡೆದಿತ್ತು. ಬೊಗಸೆಯೊಳಗೆ ಅವನ ಮುಖ ಹಿಡಿದು ಮನದ ಸಂಶಯ ನಿವಾರಣೆ ಆಗೋವರೆಗೂ ಅವನನ್ನು ಕಣ್ತುಂಬಿಕೊಂಡರು.
"ಅಮ್ಮಾ....ಪಾ..." ಒಂದೇ ಬಾರಿ ಇಬ್ಬರನ್ನೂ ತೋಳಬಂಧಿಯಲ್ಲಿ ಅಪ್ಪಿಕೊಂಡಿದ್ದ. ಭಾವನೆಗಳ ವಿನಿಮಯಕ್ಕೆ ಹೆಚ್ಚು ಸಮಯವಿರಲಿಲ್ಲ.
ಅವರಿಗೆ ಧೈರ್ಯ ನೀಡಿ, ಇನ್ನು ಕೆಲವೇ ದಿನಗಳಲ್ಲಿ ಅಲ್ಲಿಂದ ಕರೆದುಕೊಂಡು ಹೋಗುವುದಾಗಿ ಆಶ್ವಾಸನೆ ತುಂಬಿ, ಅಲ್ಲಿಯವರೆಗೂ ನಿಶ್ಚಿಂತ ಹಾಗೂ ಧೈರ್ಯವಾಗಿ ಇರುವಂತೆ ತಿಳಿಸಿದ. ತಾವಿಲ್ಲಿ ಬಂಧಿಯಾಗಿರುವ ವಿಷಯ ಮರೆಮಾಚಲು, ಮನೆಗೂ ಕರೆ ಮಾಡಿಸಿ ಅವರಿಂದಲೇ ಮಾತನಾಡಿಸಿ ಸನ್ನಿವೇಶ ತಿಳಿಯಾಗಿಸಿದ್ದ.
*********
" ಅದ್ವೈತ ಎಲ್ಲಿ ಸ್ಟೇ ಮಾಡಿದ್ದ? ಏವಿಡೆನ್ಸ್ ಎಲ್ಲಿಟ್ಟಿರಬಹುದು? ಏನಾದ್ರೂ ಗೊತ್ತಿದೆಯಾ?" ಕೇಳಿದ ಪ್ರಸನ್ನ
"ನೋ,,,, ನಾವು ಯಾವಾಗಲೂ ಭೇಟಿಯಾಗ್ತಿದ್ದದ್ದು ಹಾಸ್ಪಿಟಲ್ ನಲ್ಲಿ! ಅದು ಕೆಲವೇ ನಿಮಿಷ! ಅಥ್ರೇಯನ ಬಗ್ಗೆ ಮಾತಾಗ್ತಿತ್ತು. ಅದ್ವೈತ ಬಗ್ಗೆ ನಾನು ಯಾವತ್ತೂ ಏನೂ ಕೇಳಲೇ ಇಲ್ಲ!"
"ಅದ್ವೈತ ಸಾಯುವ ಮುನ್ನ ನಿಮಗೆ ಏನೋ ಹೇಳಿದ ಹಾಗಿತ್ತಲ್ವ? ಏನದು?" ಸಂಶಯದಿಂದ ಕೇಳಿದಳು ಪರಿ.
"ಅದೂ... ಅವನು... " ಮುಂದಿನ ಮಾತುಗಳು ಗಂಟಲಲ್ಲೇ ಸಿಕ್ಕಿಕೊಂಡಂತಾಯಿತು ಪ್ರಸನ್ನನಿಗೆ.
"ಪ್ರೂಫ್ ಎಲ್ಲಿವೆಯಂತ ಏನಾದರೂ ಹೇಳಿದ್ದನಾ? ನೆನಪು ಮಾಡ್ಕೊಳ್ಳಿ.." ಒತ್ತು ನೀಡಿದಳು.
"ಅದಲ್ಲ. ಅದೂ ಬೇರೆ ಏನೋ..." ಮಾನ್ವಿ ಮುಖ ನೋಡುತ್ತಾ ತಲೆ ನೀವಿಕೊಂಡ.
"ಪರಿ, ಈ ಹಿಟ್ಲರ್ ಗೆ ಎಲ್ಲಾ ಗೊತ್ತಿದೆ. ಆದರೂ ಮುಚ್ಚಿಡ್ತಿದ್ದಾನೆ. ಯಾರಿಗೊತ್ತು.. ದುಡ್ಡಿನಾಸೆಗೆ ಇವನೂ ಅಥ್ರೇಯನ ಕಡೆಗೆ ಆಗಿದ್ದಾನೋ ಏನೋ!!!" ಮಾನ್ವಿ ಅಪವಾದ ಹೇರಿದಳು.
"ಹಲೋ... ನಿನ್ನಷ್ಟು ಗುಗ್ಗು ಏನಲ್ಲ ನಾನು; ಯಾರ್ ಏನೇ ಹೇಳಿದ್ರು ನಂಬಿ, ಅವರ ಹಾಗೆ ಕೇಳೋದಕ್ಕೆ"
"ನಾನು ಯಾವುದನ್ನೂ ಬೇಕೂಂತ ಮಾಡಲಿಲ್ಲ. ಪರಿಸ್ಥಿತಿ ಹಾಗಿತ್ತು. ಪದೇ ಪದೇ ಅದನ್ನೇ ಕೆಣಕಬೇಡ" ಬೆರಳೆಚ್ಚರಿಕೆ ತೋರಿದಳು.
"ನಾನು ಪರಿಹಾರ ಯೋಚನೆ ಮಾಡ್ತಿದ್ದೆ. ಕೆಣಕಿದ್ದು ನೀನು... ನನ್ನನ್ನ.."
"ಹಾಗಿದ್ರೆ ಅದ್ವೈತ ಏನು ಹೇಳಿದಂತ ಬೊಗಳೋದು ತಾನೇ.."
"ಬೊಗಳೋದೇನಿದ್ರು ನಿನ್ನ ಕೆಲಸ. ನಾನು ನಿಧಾನವಾಗಿ ಹೇಳ್ತಿದ್ದೆನೆ ತಾನೇ..!"
"ನೀವಿಬ್ರೂ ಜಗಳ ನಿಲ್ಲಿಸ್ತಿರಾ! " ಇಬ್ಬರನ್ನೂ ದೂರ ಸರಿಸಿದಳು.
"ಡಾ.ಪ್ರಸನ್ನ, ಅದ್ವೈತ ನಿಮ್ಮುಂದೆ ಏನು ಹೇಳಿದ, ಸ್ಪಷ್ಟವಾಗಿ ಹೇಳಿ" ಪರಿ ವಾರ್ನ್ ಮಾಡಿದಳು.
"ಅದ್ವೈತ ಹೇಳಿದ್ದ... ಅವನು.. ಅದೂ.. ಇವಳಿಗೆ ಹೇಳುವಂತೆ.."
"ಮಾನ್ಚಿಗೆ ಏನು ಹೇಳಲು ಹೇಳಿದ್ದ? ಹೇಳಿ ಪ್ರಸನ್ನ ಬೇಗ"
"ಅದೂ ಮಾನ್ವಿ, ಐ.. ಅಲ್ಲಲ್ಲ ಹಿ.. ಸ್ಟಿಲ್ ಲವ್ ಯು ವೆರಿ ಮಚ್ ಅಂತೆ!!" ಹೇಳಿ ಉಸಿರು ದೂಡಿದ.
" ಇದನ್ನೇ ನಿನಗೆ ಹೇಳೋಕೆ ಹೇಳಿದ. ಇದರಲ್ಲಿ ಏನು ಕ್ಲೂ ಇರೋಕೆ ಸಾಧ್ಯ" ಎಂದು ಮರುಪ್ರಶ್ನೆ ಹಾಕಿದ. ಇಷ್ಟೇನಾ ಎಂದು ಪರಿ ದುರುದುರು ಮುಖ ನೋಡಿದಳು. ಮಾನ್ವಿ ಮತ್ತೆ ಭಾವುಕಳಾದಳು. ಅದ್ವೈತನ ನೆನಪಾಗಿ ಸ್ಟೋನಿಯನ್ನು ಸನಿಹ ಎಳೆದುಕೊಂಡು ತಬ್ಬಿಕೊಂಡಳು.
"ಪರಿ, ಅದ್ವೈತ್ ಯಾವತ್ತೂ ತನ್ನನ್ನು ಪ್ರೀತಿಸು ಅಂತ ಒತ್ತಾಯ ಹೇರಲಿಲ್ಲ. ತಿರಸ್ಕರಿಸಲಿಲ್ಲ. ತನ್ನ ಪ್ರೀತಿಯನ್ನು ವ್ಯಕ್ತಪಡಿಸುವದನ್ನು ನಿಲ್ಲಿಸಲಿಲ್ಲ. ಈ ಸ್ಟೋನಿ ಅವನೇ ಕೊಟ್ಟ ಫರ್ಸ್ಟ್ ಗಿಫ್ಟ್! ಎಲ್ಲಾ ಸ್ನೇಹಿತರನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ನನಗೆ ಸೋಲ್‌ಮೇಟ್ ಇವನು " ಸ್ಟೋನಿಯನ್ನು ಬಳಿಗರೆದು ತಬ್ಬಿ ಮುದ್ದಿಸುತ್ತಿದ್ದ ಮಾನ್ವಿ ಇದ್ದಕ್ಕಿದ್ದಂತೆ ಆಶ್ಚರ್ಯಕರವಾಗಿ ಪರಿಯೆಡೆಗೆ ನೋಡಿದಳು.
ಏನಾಯಿತೆಂದು ಸಂಶಯದಿಂದ ಎದ್ದು ನಿಂತರು ಪರಿ, ಪ್ರಸನ್ನ..
ಸ್ಟೋನಿಯ ಕೊರಳ ಪಟ್ಟಿಯಲ್ಲಿ ಓಲಾಡುತ್ತಿದ್ದ ಗಂಟೆಯಾಕಾರದ ಕ್ರಿಸ್ಟಲ್ ಬಾಲ್ ಕೈಗೆತ್ತಿಕೊಂಡ ಮಾನ್ವಿ ಅದನ್ನೇ ಗಮನಿಸಿದಳು. ಬೆಲ್ಟ್ ಬಿಚ್ಚಿ ಕ್ರಿಸ್ಟಲ್ ಬಾಲ್ ಬಿಡಿಸಿದಾಗ ಅದು ಮಧ್ಯದಿಂದ ಇಬ್ಬಾಗವಾಯಿತು. ಅದನ್ನು ನೋಡಿ ಮೂವರ ಮುಖದಲ್ಲಿ ಆಶ್ಚರ್ಯ ಹಾಗೂ ನಿರಾಳತೆಯ ಮಿಶ್ರಭಾವ ವ್ಯಕ್ತವಾಯಿತು.
**********
ಔಟ್‌ಹೌಸ್‌ನಿಂದ ಮರಳಿ ಬರುವ ಮುನ್ನ ಡೇವಿಡ್ ನನ್ನು ಗಟ್ಟಿಯಾಗಿ ತಬ್ಬಿಕೊಂಡ ಹರ್ಷ ಅವನಿಗೆ ಧನ್ಯವಾದ ತಿಳಿಸಿದ. ತನ್ನ ತಂದೆ ತಾಯಿಯನ್ನು ಕ್ಷೇಮವಾಗಿ ನೋಡಿಕೊಳ್ಳುತ್ತಿರುವುದಕ್ಕೆ..
ಹರ್ಷನ ಪ್ರತಿಕ್ರಿಯೆ ಡೇವಿಡ್ ಗೆ ಹೊಸತು. ಅವನು ಶಾಂತವಾಗಿ ಆತನ ಭುಜ ತಟ್ಟಿ ಹೊರಡಲು ಅವಸರಿಸಿದ. ಅವನನ್ನೇ ಅನುಸರಿಸಿದ ಹರ್ಷ..
"ಡೇವಿಡ್, ನಿನಗೆ ಈ ಗುಲಾಮನ ಜೀವನ ಬೇಸರ ಅನ್ನಿಸೋದಿಲ್ವ. ಎಲ್ಲಿಯವರೆಗೆ ಅಥ್ರೇಯನ ಆಜ್ಞೆಯಂತೆ ಬದುಕ್ತಿಯಾ?"
"ಇನ್ನೇನೂ ನಿನ್ನ ಆಜ್ಞೆ ಪಾಲಿಸಬೇಕಾ? ಸುಮ್ನೆ ಟೈಮ್ ವೇಸ್ಟ್ ಮಾಡಬೇಡ. ಬೇಗ ಇಲ್ಲಿಂದ ಹೊರಡು." ಗದರಿದ ಡೇವಿಡ್
"ಛೇ ಛೇ ಹಾಗಲ್ಲ. ನೀನು ಸ್ವತಂತ್ರವಾಗಬೇಕು ಡೇವಿಡ್! ಲೈಫ್ ನಲ್ಲಿ ಎತ್ತರಕ್ಕೆ ಬೆಳೆಯಬೇಕು. ಶ್ರೀಮಂತನಾಗಬೇಕು. ಸಂಬಳಕ್ಕಾಗಿ ಕೈ ಚಾಚೋದಲ್ಲ, ನೀನೇ ಯಜಮಾನನಾಗಿ ಸಂಬಳ ಕೊಡುವಂತಾಗಬೇಕು. ನಿನಗೂ ನಿನ್ನದೇಯಾದ ಆಸೆ ಕನಸು ಇಲ್ವಾ..."
ಹರ್ಷನ ಒಂದೊಂದು ಮಾತಿಗೂ ಡೇವಿಡ್ ಆಳವಾದ ಯೋಚನೆಗೆ ಬಿದ್ದ.
"ಫ್ಯಾಕ್ಟರಿಯಲ್ಲಿ ಎಲ್ಲಾ (ಅ)ವ್ಯವಹಾರ ನೋಡಿಕೊಳ್ಳುವವನು ನೀನು, ಕೇಸ್, ಜೈಲು, ಕೋರ್ಟ್ ಅಂತ ಅಲೆದಾಡಿ ರಿಸ್ಕ್ ತೆಗೆದುಕೊಳ್ಳುವವನು ನೀನು, ಒಂದೊಮ್ಮೆ ಸಿಕ್ಕುಬಿದ್ದರೆ ಕೊಲೆಯ ಆಪಾದನೆಗಳನ್ನು ಹೊರಬೇಕಾದವನು ನೀನು, ಆದರೆ ನಿನಗೆ ಸಿಗೋದು ಬಿಡಿಗಾಸು ಅಷ್ಟೇನಾ? ನಿನಗೆ ದೊಡ್ಡ ಸ್ಥಾನ ಮಾನ ಕೊಡದಿದ್ದರೂ ಪರವಾಗಿಲ್ಲ, ವ್ಯವಹಾರದ ಅರ್ಧದಷ್ಟು ಲಾಭವನ್ನಾದರೂ ನಿನಗೆ ಕೊಡಬೇಕಲ್ವ ಅಥ್ರೇಯ..."
ಡೇವಿಡ್ ಮುಖ ಗಂಭೀರವಾಯಿತು. ಮಾತಿನ ಸಣ್ಣ ಕಿಡಿ ಕಾಡ್ಗಿಚ್ಚಿನಂತೆ ಅಥ್ರೇಯನ ಸ್ವಪ್ನ ಸಿಂಹಾಸನವನ್ನು ಭಗ್ನಗೊಳಿಸಲು ಸನ್ನದ್ಧವಾಯಿತು.
"ನನ್ನ ಮದುವೆ ಮುಗಿಯುತ್ತಿದ್ದಂತೆ ಅಥ್ರೇಯನಿಗೆ ಮಗನ ಆಸ್ತಿ ಸಿಗುತ್ತೆ. ಅದರಿಂದ ನಿನಗೇನು ಲಾಭ? ಅವಕಾಶ ಇರುವಾಗಲೇ ನಮ್ಮ ಅದೃಷ್ಟದ ರೇಖೆಯನ್ನು ನಾವೇ ಎಳೆಯಬೇಕು ಡೇವಿಡ್! No buddy come to change your fate. Think about it"
ಕೊನೆಯದಾಗಿ ನುಡಿದು ಕಾರ್ ನಲ್ಲಿ ಕುಳಿತ ಹರ್ಷ. ಡೇವಿಡ್ ಮನಸ್ಸು ವಿಹ್ವಲವಾಯಿತು.
ಅಲ್ಲಿಂದ ನೇರವಾಗಿ ಆಫೀಸ್ ತಲುಪಿದ ಹರ್ಷ ಮೀಟಿಂಗ್ ಮುಂದುವರೆಸಿ, ಅಪ್ರೂವ್ಡ್ ಪ್ರಾಜೆಕ್ಟ್ ಪೇಪರ್ಸ್‌ನ್ನು ಅಥ್ರೇಯನ ಕೈಗಿಟ್ಟ. ಬಿಗ್ ಬಜೆಟ್ ಪ್ರಾಜೆಕ್ಟ್ ಕೈಗೆ ಸಿಕ್ಕ ಖುಷಿಯ ಸಂಭ್ರಮದಲ್ಲಿ ತೇಲುತ್ತಿದ್ದ ಅಥ್ರೇಯ, ಹುಬ್ಬು ಗಂಟಿಕ್ಕಿ ಮತ್ಸರದ ಹೊಗೆಯುಗುಳುತ್ತಿದ್ದ ಡೇವಿಡ್ ನನ್ನು ಆ ಕ್ಷಣ ಗಮನಿಸಲಿಲ್ಲ.
***********
ಇದೇ ವಿಷಯವಾಗಿ ಸಂಜೆ ಹರ್ಷನ ಕೋಣೆಯಲ್ಲಿ ಅಥ್ರೇಯ ಹಾಗೂ ಡೇವಿಡ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಈ ವಾಕ್-ಸಮರದ ಮುಖಪ್ರೇಕ್ಷಕನಾಗಿದ್ದ ಹರ್ಷ, ಅಮಾಯಕನ ಹಾಗೆ ಮೊಬೈಲ್ ಹಿಡಿದು ಕೂತಿದ್ದ.
* ಫ್ಯಾಕ್ಟರಿ ವ್ಯವಹಾರದಲ್ಲಿ ನನಗೆ 50% ಶೇರ್ ಬೇಕು. ನಿಮ್ಮ ಅನುಪಸ್ಥಿತಿಯಲ್ಲಿ ಇಲ್ಲಿನ ಸಂಪೂರ್ಣ ಜವಾಬ್ದಾರಿ ನನಗೆ ಮಾತ್ರ ಇರಬೇಕು" ನೇರವಾಗಿ ಬೇಡಿಕೆ ಮುಂದಿಟ್ಟ ಡೇವಿಡ್.
"ಡೇವಿಡ್, ಏನಿದು ತಮಾಷೆ? ಈಗ ಯಾಕೆ ಈ ಚರ್ಚೆ? ಇನ್ನೂ ಕೆಲವೇ ದಿನ.. ಮದುವೆ ಮುಗಿಯಲಿ ಆಮೇಲೆ ಯೋಚನೆ ಮಾಡೋಣ" ಸಾರಾಸಗಟಾಗಿ ತಳ್ಳಿಹಾಕಿದ.
"ಓಹೋಹೋ... ಮದುವೆ ಮುಗಿದ ನಂತರ ಅಥ್ರೇಯ ಸರ್ ಪಾದ ನೆಲದ ಮೇಲೆ ಇರುತ್ತವಾ? ಆಗ ನಮ್ಮಂತ ಗುಲಾಮರು ನಿಮ್ಮ ಕಣ್ಣಿಗೆ ಕಾಣುತ್ತೇವೋ ಇಲ್ಲವೋ..? ಏನೇ ತೀರ್ಮಾನವಿದ್ದರೂ ಇಲ್ಲೇ ಈಗಲೇ ಆಗಬೇಕು. " ವ್ಯಂಗ್ಯವಾಗಿ ಹಠಕ್ಕೆ ಬಿದ್ದ ಡೇವಿಡ್. ಅಥ್ರೇಯನ ಕಣ್ಣು ಕಿಡಿಯಾದವು.
"ಯು #####, ಎಷ್ಟು ಹೆಚ್ಕೊಂಡಿದ್ದೀಯಾ ಇವತ್ತು!! ಹಾಕ್ತಿರೋ ಭಿಕ್ಷೆ ಸಾಲುತ್ತಿಲ್ಲವಾ?? ಅರ್ಧ ಲಾಭ ಕೊಡಬೇಕಾ? ಹ್ಮ್... ಒಂದು ಸೆಕೆಂಡ್ ಸಾಕು... ನಿನ್ನ ಜೈಲಿಗೆ ಹಾಕಿಸೋಕೆ, ಲೆಕ್ಕವಿಲ್ಲದಷ್ಟು ಕೊಲೆ ಕೇಸ್ ಇವೆ ನಿನ್ನಮೇಲೆ.. ನನ್ನ ದುಡ್ಡು ಅಧಿಕಾರದ ಪ್ರಭಾವದಿಂದ ಇಲ್ಲಿ ನಿಂತಿದೀಯಾ! ನೆನಪಿರಲಿ.." ಬೆರಳೆಚ್ಚರಿಕೆ ನೀಡಿದ
"ಹೌದು, ಕೊಲೆಗಾರನೇ! I'm a brutal killer.. ಸಾಕಷ್ಟು ಕೊಲೆ ಮಾಡಿದೀನಿ ನಿಜ. ಆದರೆ ಯಾವುದೂ ಸ್ವಂತಕ್ಕಲ್ಲ. ನಿನ್ನ ಲಾಭಕ್ಕೆ... ನೀನು ಆರ್ಡರ್ ಮಾಡಿದ್ದಕ್ಕೆ! ಜೈಲಿಗೆ ಹೋಗಿ ಶಿಕ್ಷೆ ಅನುಭವಿಸೋಕು ರೆಡಿ. ಹೋದ್ರೆ ಒಬ್ಬನೇ ಹೋಗಲ್ಲ, ನಿನ್ನನ್ನು ಜೊತೆಗೆ ಎಳೆದುಕೊಂಡು ಹೋಗ್ತಿನಿ. After all we are crime partners you know.." ಗಂಭೀರವಾಗಿತ್ತು ಡೇವಿಡ್ ಧ್ವನಿ.
ತಬ್ಬಿಬ್ಬಾದ ಅಥ್ರೇಯ ಅವನನ್ನೇ ದುರುಗುಟ್ಟಿ ನೋಡಿ "ಇಬ್ಬರ ಮಧ್ಯ ವೃಥಾ ತಕರಾರು ಬೇಡ, ನಿನ್ನ ಪಾಲು ನಿನಗೆ ಸಿಗುತ್ತೆ. ಅಲ್ಲಿಯವರೆಗೆ ತೆಪ್ಪಗಿರು" ಹೇಳಿ ಹೊರಟು ಹೋದ. ಡೇವಿಡ್ ಮನಸ್ಸಿನ ದಳ್ಳುರಿ ಮಾತ್ರ ಕಡಿಮೆಯಾಗಲಿಲ್ಲ. ಎಂತಹ ಕಟುಕನಿಗೂ ಆತ್ಮಾಭಿಮಾನ ಎನ್ನುವುದು ಸಹಜವಲ್ಲವೇ!!
ತಂದೆಯ ಸ್ಥಾನದಲ್ಲಿದ್ದ ಅಥ್ರೇಯನ ಮಾತಿಗೆ ತಲೆದೂಗುತ್ತ ಇದೇ ಅವಕಾಶಕ್ಕಾಗಿ ಕಾದು ಕುಳಿತಿದ್ದ ಹರ್ಷ ಮುಗ್ದವಾಗಿ ಡೇವಿಡ್ ಭುಜ ಸವರುತ್ತ ಅವನನ್ನು ಸಮಾಧಾನ ಮಾಡಿದ.
**********
ರಾತ್ರಿ ಬೆಳದಿಂಗಳ ಬೆಳಕಲ್ಲಿ ಹಾಡು ಹರಟೆಯ ಜೊತೆಗೆ ಸಂಭ್ರಮದ ವಾತಾವರಣ ಕಂಗೊಳಿಸುತ್ತಿತ್ತು. ಆಲಾಪ್, ಪರಿ, ಹರ್ಷ, ಸಂಜೀವಿನಿ, ಮಾನ್ವಿ, ಪ್ರಸನ್ನ ಸೇರಿದಂತೆ ಇನ್ನೂ ಕೆಲವು ಸಂಬಂಧಿಕರು ಸುತ್ತ ನೆರೆದಿದ್ದರು.
"ಇಷ್ಟು ದಿನ ಮಾನ್ವಿ ಜೊತೆಗೆ ಇದ್ದು ನನಗೆ ಅವಳ ಬಗ್ಗೆ ಅಭಿಮಾನ ಬೆಳೆದು ಬಿಟ್ಟಿದೆ ಕಣೇ... ನಾನು ಅವಳನ್ನೇ ಮದುವೆಯಾಗೋದು ಸರಿ ಎನಿಸುತ್ತೆ. ನಿನಗೆ ಬೇಜಾರಿಲ್ಲ ತಾನೇ.." ದಿಂಬು ಪಾಸ್ ಮಾಡಿ ಪರಿಯ ಕಿವಿಯಲ್ಲಿ ಉಸುರಿದ ಹರ್ಷ.
ಒಂದು ಕ್ಷಣ ಅಚ್ಚರಿಯಿಂದ ಹರ್ಷನೆಡೆ ನೋಡಿದವಳೇ ಅವನ ಕಣ್ಣಲ್ಲಿ ಮತ್ತದೇ ಹಳೆಯ ಹುಡುಗಾಟದ ನಗು ಕಂಡು ಮುಗುಳ್ನಗುತ್ತ
"ಬೇಜಾರಂತೂ ಆಗುತ್ತೆ ನಿಜ. ಆದರೆ ನನಗಿಂತಲೂ ಹೆಚ್ಚು ಬೇಜಾರು ಡಾ.ಪ್ರಸನ್ನನಿಗೆ ಆಗುತ್ತೆನೋ. ಛೇ ಪಾಪ!!" ಎಂದು ತಮಾಷೆಯಾಗಿ ನಕ್ಕಳು.
"ಸೀರಿಯಸ್ಲಿ ಕಣೇ... ಆ ಕಾಲದಿಂದಲೂ ಇಬ್ಬರ ಮಧ್ಯೆ ಏನೋ ಇದೆ. ಒಪ್ಪಿಕೊಳ್ತಿಲ್ಲ ಇಬ್ಬರೂ.. ನಾವಂತೂ ಹಳ್ಳಕ್ಕೆ ಬಿದ್ದಾಗಿದೆ. ಈ ಸಲ ಇವಳನ್ನ ತಳ್ಳೋದೆ.." ಆಲಾಪ್ ಗುನುಗಿದ.
"ಫ್ರೆಂಡ್ಸ್ ಅಂತ ನಾವೆಲ್ಲ ಇರೋದ್ಯಾಕೆ ಮತ್ತೆ..! ನೋಡು ಈಗಲೂ ಇಬ್ಬರೇ ಏನೋ ಡಿಸ್ಕಸ್ ನಡೆಸಿದ್ದಾರೆ" ಪರಿ ಕೆಣಕಿದಳು.
"ಡಿಸ್ಕಷನ್ ಅಲ್ವೇ... ಡೀಪ್ ಡಿಸ್ಕಷನ್..!" ನಕ್ಕರು ಮೂವರು.
-----------
"ಏನಾಗಿದೆ ನಿನಗೆ? ಯಾಕೆ ಯಾವಾಗಲೂ ಅರುಣಾ ಆಂಟಿ ಮೇಲೆ ಕಣ್ಣು?" ಎತ್ತಲೋ ನೋಡುತ್ತಿದ್ದ ಪ್ರಸನ್ನನ ಮೊಟಕಿದಳು ಮಾನ್ವಿ.
"ಅರುಣಾ ಆಂಟಿ? ಯಾರು?" ತಬ್ಬಿಬ್ಬಾಗಿ ದಿಂಬು ಮುಂದೆ ಜರುಗಿಸಿದ.
"ಅದೇ ಈಗ ಗುರಾಯಿಸ್ತಾ ಇದ್ದೆಯಲ್ಲ ಅವರೇ.. ಸಂಕು ಮಾಮ್.."
"ಓಹ್ ಅವರಾ? ಪಾಪ... ವಾಸ್ತವ ಗೊತ್ತಾದ ನಂತರ ಅವರ ಪರಿಸ್ಥಿತಿ ಹೇಗೆ ಅಂತ ಯೋಚಿಸ್ತಿದ್ದೆ!"
"ಆ ತರ ಏನಿಲ್ಲ.. ಅವರು ತುಂಬಾ ಪ್ರ್ಯಾಕ್ಟಿಕಲ್! ಮಗನ ಮೇಲೆ ಪ್ರೀತಿ ಇದೆ ನಿಜ. ಆದರೆ ಅದಕ್ಕಾಗಿ ಕೊರಗ್ತಾ ಕೂರುವಂತಹ ಮನಸ್ಥಿತಿಯವರಲ್ಲ. ತಮ್ಮ ಹೆಸರಿನ ಆಸ್ತಿಗೆ ಒಬ್ಬ ವಾರಸ್ದಾರ ಬೇಕು ಅನ್ನಿಸಿದ್ರೆ ಒಂದು ಮಗುನ ಅಡಾಪ್ಟ್ ಮಾಡಿಕೊಳ್ಳಬಹುದೇನೋ.. ಅವರ ತಂದೆ ತೀರಿದಾಗಲೂ ಅಷ್ಟೇ,, ಕಂಪನಿ ಜವಾಬ್ದಾರಿ ತಾವೇ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿ, ಈ ಮಟ್ಟದಲ್ಲಿ ಬೆಳೆಸಿದ್ದಾರಂತೆ.. ಡ್ಯಾಡ್ ಹೇಳ್ತಿದ್ರು.."
"ಅದೂ ನಿಜ.. ವ್ಯವಹಾರದ ಜ್ಞಾನ ಅತೀಯಾದಾಗ ಮಾನವೀಯ ಮೌಲ್ಯಗಳು ಶೂನ್ಯವಾಗಿ ನಿಕೃಷ್ಟವಾಗಿ ಕಾಣುತ್ತವೆ. ಅದಕ್ಕೆ ಹೇಳುವುದು ಬದುಕಲು ಎಷ್ಟು ಬೇಕೋ ಅಷ್ಟೇ ಸಂಪಾದಿಸಿ, ಅಷ್ಟರಲ್ಲೇ ತೃಪ್ತರಾಗಬೇಕು. ಯದ್ವಾತದ್ವಾ ಆಸ್ತಿ ಮಾಡಿದ್ರೆ ಹೀಗೆ ಸಂಬಂಧಗಳ ಬೆಲೆ ಗೊತ್ತಾಗೋದಿಲ್ಲ" ಅವನ ಮಾತಿನ ದಾಟಿಯಲ್ಲಿ ನೋವಿನ ಎಳೆಯನ್ನು ಗ್ರಹಿಸಿದಳು ಮಾನ್ವಿ.
ಪ್ರದಕ್ಷಿಣೆ ಹಾಕುತ್ತಿದ್ದ ದಿಂಬು ಹರ್ಷನ ಕೈ ಸೇರಿದ್ದಾಗ ಮ್ಯುಸಿಕ್ ಆಫ್ ಆಗಿತ್ತು . ಎಲ್ಲರಿಂದಲೂ ಹಾಡಿಗಾಗಿ ಫರ್ಮಾನು ಬಂದಿತು. ಅವನ ಬೆರಳುಗಳು ಗೀಟಾರ್ ಮೇಲೆ ಲಾಸ್ಯವಾಡಿದವು..
ತೂ, ತೂ ಹೇ ವಹೀ.. ದಿಲ್ ನೆ ಜೀಸೆ, ಅಪನಾ ಕಹಾ..
ತು ಹೇ ಜಂಹಾ.. ಮೇ ಹ್ಮೂ ವಂಹಾ
ಅಬ್ ತೋ ಯೇ ಜೀನಾ, ತೇರೆ ಬಿನ್ ಹೇ ಸಜ಼ಾ..
ಮಿಲ್ ಜಾಯೇ ಇಸ್ತರಾ.. ದೋ ಲೆಹ್ರೇ ಜಿಸ್ತರಾ..||
ಫಿರ್ ಹೋ ನಾ ಜುದಾ.. ಹ್ಮಾ ಯೇ ವಾದಾ ರಹಾ..
ಪರಿ ಮನಸ್ಸಲ್ಲೇ ಸಂಭ್ರಮಿಸಿ ಗತವನ್ನು ಸ್ಮರಿಸಿದಳು..
ಹಾಡು ಪರಿಗೆ ಸಮರ್ಪಿತವಾಗಿದ್ದರೂ ಹರ್ಷನ ನೋಟ ಮಾನ್ವಿ ಕಡೆಗೆ ಇತ್ತು. ಅದಕ್ಕೆ ಪ್ರತಿಯಾಗಿ ಮಾನ್ವಿ ಕೂಡ ಮುಗುಳ್ನಕ್ಕು ತಲೆ ತಗ್ಗಿಸಿದಳು.
"ಪ್ಚ್, ಒಪ್ಪಿದೆ. ಅವನು ನಿನಗೋಸ್ಕರನೇ ಈ ಹಾಡು ಹಾಡಿದ್ದು!! ಅದಕ್ಕೆ ಸ್ಟಾರ್ಟಿಂಗ್ ನಲ್ಲೇ ಥೂ..ಥೂ.. ಅಂತ ಎರಡು ಸಲ ಕ್ಯಾಕರಿಸಿ ಉಗಿದ!!" ಗೊಳ್ಳನೇ ನಕ್ಕು ಬಿಟ್ಟ ಪ್ರಸನ್ನ. ಮಾನ್ವಿ ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದರೂ ಅವನ ನಗು ಆರಲಿಲ್ಲ.
"ಆಸ್ಪತ್ರೆಯಲ್ಲಿ ಎಂತದೋ ಹೇಳಿದೆಯಲ್ಲ..? ಏನದು?" ಈ ಪ್ರಶ್ನೆಗೆ ಪ್ರಸನ್ನ ಗಪ್ ಚಿಪ್ ಆದ.
(ಸಾರಿ ಕೊಲೆಸ್ಟ್ರಾಲ್.. ನಾನು ನಿನ್ನನ್ನ ತುಂಬಾ ಅಪಾರ್ಥ ಮಾಡಿಕೊಂಡಿದ್ದೆ. ನಿನಗೆ ತುಂಬಾ ತೊಂದರೆ ಕೊಟ್ಟು ಬಿಟ್ಟೆ. ಐಮ್ ಸಾರಿ) ಸ್ಪ್ಯಾನಿಶ್ ನಲ್ಲಿ ಒದರಿದ್ದನ್ನು ಆಂತರ್ಯದಲ್ಲೇ ವಿಷಾದದಿಂದ ಮಣಮಣಿಸಿದ. ಅಪ್ಪಿತಪ್ಪಿಯೂ ಅವಳೆದುರು ಹೀಗೆಂದು ಹೇಳಲಿಲ್ಲ.
**********
ಅಥ್ರೇಯನ ಗೋಮುಖ ವ್ಯಾಘ್ರನ ನಿಜರೂಪ ತಿಳಿಯದ ರಘುನಂದನ್ ಅವನ ಸ್ನೇಹವನ್ನು ಸಂಬಂಧವಾಗಿ ಮಾರ್ಪಡಿಸುವ ಮದುವೆ ಎನ್ನುವ ಸಂಭ್ರಮದಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಭಾಗಶಃ ಭಾಗಿಯಾಗಿದ್ದರು. ಮನಸ್ಸಿನಲ್ಲಿ ಇದು ಹರ್ಷನಿಗೆ ಮಾಡುತ್ತಿರುವ ದ್ರೋಹ ಎಂಬ ಅಳುಕಿತ್ತು ಅವರಿಗೆ. ಆದರೆ ಮಗಳ ಸಂತೋಷದ ಮುಂದೆ ಎಲ್ಲವೂ ಗೌಣ.
ತೋರಣ ಕಟ್ಟುವುದು, ಮೆಹಂದಿ ಬಳೆ ಶಾಸ್ತ್ರ, ನೃತ್ಯ ಸಂಗೀತ ರಸಂ, ಒಂದೊಂದು ದಿನವೂ ಸಂಪ್ರದಾಯಬದ್ಧವಾಗಿ ಕಾರ್ಯಕ್ರಮಗಳು ನೆರವೇರಿದವು. ಎಲ್ಲವನ್ನೂ ಮುಂದೆ ನಿಂತು ಅಚ್ಚುಕಟ್ಟಾಗಿ ನೆರವೇರಿಸಿದರು ರಘುನಂದನ್ ಹಾಗೂ ಅವರ ಪತ್ನಿ. ಒಬ್ಬಳೇ ಮಗಳ ವಿವಾಹ ಮಹೋತ್ಸವದ ಕ್ಷಣಗಣನೆಯಲ್ಲಿ ಉತ್ಸುಕರಾಗಿದ್ದರು. ಎಲ್ಲಾ ಸಂಭ್ರಮದ ನಡುವೆಯೂ ಮಗಳ ಮುಖದಲ್ಲಿ ಕಳೆಗುಂದಿದ ನೋಟವನ್ನು ಗಮನಸಿದ್ದರು ರಘುನಂದನ್. ಹರ್ಷನ ಅನ್ಯಮನಸ್ಕತೆಯನ್ನು ಕೂಡ!! ಒಲ್ಲದ ಮನಸ್ಸಿನಿಂದಲೇ ಪ್ರತಿಯೊಂದು ಆಚರಣೆಯಲ್ಲಿ ಭಾಗಿಯಾಗಿದ್ದರು ಹರ್ಷ ಮಾನ್ವಿ.
ಅರುಣಾ ತಮ್ಮದೇ ಠೀವಿಯಲ್ಲಿ ಮಗನ ಸಮೃದ್ಧ ಜೀವನದ ಆಶಯದಲ್ಲಿದ್ದರು. ವಿವಾಹಕ್ಕೆ ಸನಿಹವಾಗುವ ಒಂದೊಂದು ಶಾಸ್ತ್ರವೂ ಅಥ್ರೇಯನಿಗೆ ತನ್ನ ವಿಜಯೋತ್ಸವದ ದಾರಿಯನ್ನು ಸುಗಮ ಮಾಡುತ್ತಿತ್ತು. ಆತ ತನ್ನದೇ ಜಯಭೇರಿಯ ಕಲ್ಪನೆಯ ಲೋಕದಲ್ಲಿ ತೇಲಾಡುತ್ತಿದ್ದ. ಪರಿ ಪ್ರಸನ್ನ ಈ ಮದುವೆಯನ್ನು ಅಸಾಹಕರಂತೆ ನೋಡುವ ಹೊರತು ಬೇರೇನೂ ಅನ್ಯ ಮಾರ್ಗವೇ ಇಲ್ಲವೆಂಬಂತೆ ನಿರಾಶೆಯ ಭಾವ ಹೊಂದಿದ್ದರು.
ಮದುವೆಯ ಹಿಂದಿನ ರಾತ್ರಿ ಮಗಳ ಕೋಣೆಯ ಹೊರಭಾಗದಲ್ಲಿ ನಿಂತಿದ್ದರು ರಘುನಂದನ್..
ರೂಮಿನೊಳಗೆ ಮಾನ್ವಿ ಸಂಜೀವಿನಿ ಪರಿ, ಮಗುವಿನ ಜೊತೆಗೆ ಆಟವಾಡುತ್ತಿದ್ದರು. ಮಗಳ ಖುಷಿಯನ್ನು ಕಣ್ತುಂಬಿಕೊಳ್ಳುತ್ತಿದ್ದವರಿಗೆ, ಗಂಟಲು ಸರಿ ಮಾಡಿಕೊಳ್ಳುತ್ತ ಎದುರಾಗಿದ್ದ ಪ್ರಸನ್ನ..
"ಮಗಳು ಅಂದ್ರೆ ಪ್ರಾಣ ಅಲ್ವಾ ನಿಮಗೆ?" ಕೇಳುವ ಪ್ರಶ್ನೆಯೇ ಅಲ್ಲವೆಂಬಂತೆ ಅವರು ಸುಮ್ಮನೆ ನಿಂತರು.
"ನಿಮಗೆ ಅವಳ ಫೇವರೆಟ್ ಕಲರ್ ಯಾವುದು ಅಂತ ಗೊತ್ತಾ ?"
"ಬ್ಲ್ಯಾಕ್ " ವಿಚಿತ್ರವಾಗಿ ನೋಡಿದರೂ ಸಮಂಜಸವಾಗಿ ಉತ್ತರಿಸಿದರು.
"ಫೇವರೆಟ್ ಡಿಶ್?"
"ಫೇವರೆಟ್ ಮೂವಿ?"
"ಫೇವರೆಟ್ ಸಾಂಗ್?"
"ಫೇವರೆಟ್ ಸ್ಪಾಟ್?" ಅವನ ಸಾಲು ಸಾಲು ಪ್ರಶ್ನೆಗೆ ಉತ್ತರಿಸಿದ ರಘುನಂದನ್..
" ಅಫ್ಕೋರ್ಸ್ ಅವಳ ಇಷ್ಟ ಕಷ್ಟ ಎಲ್ಲವೂ ಗೊತ್ತು! ನಿನ್ನಿಂದ ಕಲಿಬೇಕಿಲ್ಲ" ತುಸು ಕಿರಿಕಿರಿಯಾದರು.
"ಒಕೆ. ಒನ್ ಮೋರ್ ಲಾಸ್ಟ್... ಅವಳ ಫರ್ಸ್ಟ್ ಲವ್??" ಈ ಪ್ರಶ್ನೆಗೆ ರಘುನಂದನ್ ಕ್ಷಣ ಮೌನ ತಾಳಿದರು
"ಮಗಳ ಬಗ್ಗೆ ಎಲ್ಲಾ ಗೊತ್ತಿರುವವರಿಗೆ ಇದೂ ಗೊತ್ತಿರಬೇಕಲ್ವಾ..? ಅವಳಿಗೆ ಏನಿಷ್ಟ ಅಂತ ತಿಳಿದವರು, ಅವಳಿಗೆ ಯಾರಿಷ್ಟ ಅನ್ನೋದನ್ನು ತಿಳಿದೇ ಇರ್ತಿರಾ ಬಿಡಿ." ರಘುನಂದನ್ ನೋಟ ಈಗಲೂ ಪ್ರಶ್ನಾರ್ಹವಾಗೇ ಇತ್ತು.
"ಯಾಕೆ? ಗೊತ್ತಿಲ್ವ..? ಅದ್ಹೇಗೆ ಸಾಧ್ಯ? ಮಾನ್ವಿ ಆಲಾಪ್‌ನನ್ನು ಪ್ರೀತಿಸಿದ್ದು, ಅವನು ಬೇರೆ ಯಾರನ್ನೋ ಮದುವೆಯಾಗಿದ್ದು, ಅದೇ ಕೋಪದಲ್ಲಿ ಎಲ್ಲ ಸ್ನೇಹಿತರಿಂದ ಮಾನ್ವಿ ದೂರವಾಗಿದ್ದು, ಯಾವುದೂ ಗೊತ್ತಿಲ್ವಾ...? ಹ್ಮ್... ವೆರಿ ಸ್ಟ್ರೇಂಜ್.." ಗಡ್ಡ ಕೆರೆದುಕೊಂಡ.
"ಮತ್ತೆ ಈಗ ಹರ್ಷನನ್ನ ಯಾಕೆ ಮದುವೆಯಾಗ್ತಿದ್ದಾಳೆ, ಅದಾದ್ರೂ ಗೊತ್ತಿದೆಯಾ?" ಯೋಚನೆಯಲ್ಲಿ ಕಳೆದುಹೋದವರ ಎದುರು ಚಿಟಿಕೆ ಬಾರಿಸಿ ಕೇಳಿದ. ಅವರದು ವಿಕಟ ಮೌನ!
"ಮಕ್ಕಳು ಕೇಳಿದ್ದನ್ನೆಲ್ಲ ತಂದು ಕೊಡೊದಷ್ಟೇ ಪ್ರೀತಿಯಲ್ಲ. ಅವರನ್ನು ಅರ್ಥ ಮಾಡಿಕೊಳ್ಳುವುದು.. ತಪ್ಪಿದಾಗ ತಿದ್ದಿ ಬುದ್ದಿ ಹೇಳುವುದು.. ಸಾಧನೆಗೆ ಪ್ರಶಂಶಿಸುವುದು.. ಅವರ ದುಃಖದಲ್ಲಿ ಹೆಗಲಾಗುವುದು ಕೂಡ.."
"ಇವತ್ತಿನ ಮ್ಯಾಚ್ ಸಖತ್ ಇಂಟರೆಸ್ಟಿಂಗ್ ಇದೆ. ಬನ್ನಿ ನೋಡೋಣ" ಕೊನೆಯಲ್ಲಿ ಅಸಾಂಧರ್ಭಿಕ ಮಾತನಾಡಿ ಅಲ್ಲಿಂದ ತೆರಳಿದ ಪ್ರಸನ್ನನನ್ನೇ ನೋಡುತ್ತಿರುವಾಗ ಅವರ ಭುಜಕ್ಕೆ ಕೈ ಹಾಕಿದ ಅಥ್ರೇಯ..
"ಏನು ಇಷ್ಟೊಂದು ಗಹನವಾದ ಯೋಚನೆ? ಏನು ಹೇಳ್ತಿದ್ದ ಅವನು?"
"Nothing important" ಕ್ಲುಪ್ತವಾಗಿ ಉತ್ತರಿಸಿ ರೂಮಿಗೆ ಹೊರಟ ರಘುನಂದನ್, ಮಗಳ ಭವಿಷ್ಯ ರೂಪಿಸುವ ಭರದಲ್ಲಿ ಅವಳನ್ನು ಅರ್ಥ ಮಾಡಿಕೊಳ್ಳಲಾಗದೆ ಸೋತು ಹೋಗಿದ್ದಕ್ಕೆ ಬೇಸರಿಸಿಕೊಂಡರು. 'ಅವಳ ಇಷ್ಟದ ಪ್ರಕಾರ ಈ ಮದುವೆ ನಡೆಯುತ್ತಿಲ್ವಾ.. ಏನು ನಡೀತಿದೆ ಅವಳ ಬದುಕಿನಲ್ಲಿ.. ನಾಳೆಯೊಳಗೆ ಎಲ್ಲಾ ಸರಿ ಮಾಡಲೇಬೇಕು' ಅವರ ಯೋಚನಾಲಹರಿ ಜಾರಿಯಿತ್ತು.
ಇನ್ನೊಂದೆಡೆ ಡೇವಿಡ್ ಮತ್ತು ಹರ್ಷನ ಮಧ್ಯ ಹೊಸದೊಂದು ಡೀಲ್ ಏರ್ಪಟ್ಟಿತು.
ಅಥ್ರೇಯನಿಗೆ ಪ್ರಸನ್ನನ ಮೇಲೆ ಅನುಮಾನ ಬಲವಾಗಿ..
"ಗೋವರ್ಧನ ಆಶ್ರಮದ ಎದುರಿಗೆ ನಮ್ಮ ಹುಡುಗರು ಕಾವಲು ಕಾಯ್ತಿದ್ದಾರೆ. ನನ್ನ ಒಂದು ಆಜ್ಞೆ ಸಾಕು.. ಒಂದು ಸ್ಪೋಟ.. ಭೂಮ್.. ಎಲ್ಲಾ ಧ್ವಂಸ... ಬೇಕಾ ನಿನಗಿದು?" ಎಚ್ಚರಿಸಿದ. ಪ್ರಸನ್ನನ ಮುಷ್ಟಿ ಬಿಗಿಯಾಗಿ ಸಡಿಲವಾಯಿತು. ಕೊನೆಯ ಘಳಿಗೆಯ ತಾಳ್ಮೆ ತುಂಬಾ ಮುಖ್ಯವಾಗಿತ್ತು.
ಮುಂದುವರೆಯುವುದು....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ