ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-52



ಪ್ಯಾರಡೈಸ್ ಗ್ಲಾಸ್ ಹೌಸ್

ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು. 

ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು. 

ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ಮುಗುಳ್ನಕ್ಕಳು ಪರಿ.  ಹನಿ ಜಿನುಗಿ ಮರೆಯಾಯಿತು.

ತನ್ನ ಬಿಗಿ ಬಂದೋಬಸ್ತಿನ ಸೆಕ್ಯೂರಿಟಿ ವ್ಯವಸ್ಥೆಯನ್ನು ಹೆಮ್ಮೆಯಿಂದ ದೃಷ್ಟಿಸಿದ ಅಥ್ರೇಯ ತನ್ನ ಕಪಿಮುಷ್ಟಿಯನ್ನು ಕೊಚ್ಚಿಕೊಳ್ಳುತ್ತ "ಇನ್ನು ಕೆಲವೇ ಕ್ಷಣ... ಮದುವೆಯ ಶಾಸ್ತ್ರ ಮುಕ್ತಾಯ. ಇವತ್ತು ಸಂಜೆಯ ಫ್ಲೈಟ್‌ಗೆ ಹೊರಟರೆ ನಾಳೆಯೇ ಪ್ರಾಪರ್ಟಿ ಎಲ್ಲಾ ನನ್ನದು!!" ಬೀಗಿದ.

ಬಿಳಿ ವಸ್ತ್ರ ಹಾಗೂ ಪಂಚೆ ಧರಿಸಿದ್ದ ಹರ್ಷ ಮಂಟಪದ ಬಳಿ ಬರುತ್ತಿದ್ದಂತೆ ಡೇವಿಡ್ ಅವನ ಕಿವಿಯಲ್ಲಿ ಉಸುರಿ ಅವನಿಂದ ದೂರ ಸರಿದ.

ಮಾನ್ವಿ ಸರ್ವಾಲಂಕೃತಳಾಗಿ ಮಂಟಪದ ಬಳಿ ಬರುತ್ತಿದ್ದಳು. ಹರ್ಷ ಆಗಲೇ ಮಣೆಯ ಮೇಲೆ ಕುಳಿತಿದ್ದ. ಅವನ ನೋಟದಲ್ಲಿ ಗೆಲುವಿತ್ತು. ಆತ ಡೇವಿಡ್ ಕಡೆಗೆ ನೋಡಿ  ಸಂಜ್ಞೆ ಮೂಲಕ ಏನೋ ಹೇಳಿದ. ಡೇವಿಡ್ ಥಮ್ಸ್‌ಪ್ ಮಾಡಿ ಹೊರಗೆ ನಡೆದ. 


ಹಿಂದಿನ ರಾತ್ರಿ ಡೇವಿಡ್ ಮತ್ತು ಹರ್ಷನ ಮಧ್ಯ ನಡೆದ ಡೀಲ್ ಪ್ರಕಾರ ಈ ಕಡೆಗೆ ಹರ್ಷ-ಮಾನ್ವಿಯ ಮದುವೆ ನಡೆಯುತ್ತಿದ್ದಂತೆ ಮಂಟಪದಲ್ಲಿ ಪೋಲಿಸರ ದಾಳಿಯಾಗುತ್ತದೆ. ಅಥ್ರೇಯ ಅವರ ಅಥಿತಿಯಾಗುತ್ತಾನೆ. ತನ್ನ ಮಗ ಸಂಕಲ್ಪ್‌ನ ಕೊಲೆ, ಅದ್ವೈತನ ಕೊಲೆ, ಆಸ್ತಿಗಾಗಿ ಮಾಡಿದ ಮೋಸ, ಮತ್ತು ಹರ್ಷನ ತಂದೆ ತಾಯಿಯರನ್ನು ಅಪಹರಿಸಿದ ಅಪರಾಧಗಳಿಗಾಗಿ...

 ಅಥ್ರೇಯನ ವಿರುದ್ಧ ದೂರು ನೀಡುವವನು, ಎಲ್ಲಾ ಅಪರಾಧದಲ್ಲಿ ಭಾಗಿಯಾದ ಅವನ ಬಲಗೈ ಭಂಟ ಸ್ವತಃ ಡೇವಿಡ್‌ನೇ! ಆದರೆ ಅಪಾರಾಧಿಯಾಗಿ ಅಲ್ಲ. ಹರ್ಷನ ಹಿತೈಷಿಯಾಗಿ! ಅದಕ್ಕೆ ಸಾಕ್ಷಿದಾರರು ಖುದ್ದು ಹರ್ಷನ ತಂದೆ ತಾಯಿ!! 

ಅವರನ್ನು ಅಪಹರಿಸಿದ ಸ್ಥಳದಿಂದ ಬಿಡಿಸಿಕೊಂಡು ಪೋಲಿಸ್ ಸ್ಟೇಷನ್‌ಗೆ ತೆರಳಿ ಅವರ ಸಮ್ಮುಖದಲ್ಲಿ ಅಥ್ರೇಯನ ವಿರುದ್ಧ ದೂರು ದಾಖಲಿಸಲಾಗುವುದು. ಮಾಡಿದ ಅಪರಾಧಗಳಿಗೆ ಪ್ರತಿಯಾಗಿ ಅಥ್ರೇಯ ಜೈಲುವಾಸ ಅನುಭವಿಸಿದರೆ, ಇತ್ತ ರಘುನಂದನ್ ಅಳಿಯನಾಗಿರುವ ಹರ್ಷ ಡೇವಿಡ್ ‌ಗೆ ಫ್ಯಾಕ್ಟರಿಯ ಸಂಪೂರ್ಣ(ಅವ್ಯವಹಾರಿಕ) ಜವಾಬ್ದಾರಿಯನ್ನು ವಹಿಸುವುದಾಗಿ ಹೇಳಿದ್ದ.

ಆದರೆ ವಾಸ್ತವದಲ್ಲಿ ಅಥ್ರೇಯನಿಗೂ ಮೊದಲು ಪೋಲಿಸರ ಅಥಿತಿಯಾಗುವವನು ತಾನೇಯೆಂಬುದು ಡೇವಿಡ್ ತಿಳಿವಳಿಕೆಗೆ ಮೀರಿದ ವಿಷಯ! ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತದ ಅರಿವಿಲ್ಲದೆ ತಾನಾಗಿಯೇ ಕಾನೂನಿಗೆ ಶರಣಾಗತನಾಗಲು ಹೊರಟಿದ್ದವನನ್ನು ನೋಡಿ ಹರ್ಷ ಮನದಲ್ಲಿ ಮುಗುಳ್ನಕ್ಕಿದ್ದ. 

                      **********


ಮಂತ್ರಘೋಷಗಳ ಸದ್ದು ಘಂಟಾಘೋಷವಾಗಿ ಮೊಳಗುತ್ತಿದ್ದರೆ ಕ್ಷಣ ಕ್ಷಣವೂ ಎದೆಬಡಿತ ಜೋರಾಗುತ್ತಿತ್ತು‌. ಮಾನ್ವಿ ಪದೇಪದೇ ಪರಿಯ ಮುಖವನ್ನು ನಿರುಕಿಸುತ್ತಿದ್ದಳು. ಆ ಸ್ಥಾನದ ನಿಜವಾದ ಒಡತಿ ಅವಳೇ ಅಲ್ಲವೇ? ಅವಳ ಮೊಗದಲ್ಲಿ ಭಾವರಹಿತ ನೋಟ! ಆ ನೋವಿನ ಆಳವನ್ನು ಅಳೆಯಬಲ್ಲಳು ಮಾನ್ವಿ. ಖೇದದಿಂದ ಎದುರಿಗೆ ನಿಂತಿದ್ದ ಆಲಾಪ್ ಕಡೆಗೆ ನೋಡಿದಳು. 

'ತಾಳ್ಮೆಯಿರಲಿ' ಕಣ್ಣಲ್ಲೇ ಧೈರ್ಯ ಹೇಳಿದನಾತ.

 ಎವೆಯಿಕ್ಕದೆ ಮಾನ್ವಿಯನ್ನು ದಿಟ್ಟಿಸುತ್ತಲಿದ್ದ ಪ್ರಸನ್ನನ ಪಕ್ಕೆಗೆ ಜೋರಾಗಿ ತಿವಿದ ಹರ್ಷ "ಕಾಲ್ ಬಂದಾಯ್ತಾ? Any updates? " 

"ಹ್ಮಾ.. ಏನು? ಕಾಲ್ ಆ? ಇನ್ನೂ ಇಲ್ಲ ಅನ್ಸುತ್ತೆ. ಅದ್ಯಾಕೋ ಗೊತ್ತಿಲ್ಲ, ಸೀರೆ ಅಲಂಕಾರ ಮಾಡಿಕೊಂಡ ಈ ರಾಕ್ಷಸಿ ಇವತ್ತು ಇದ್ದಕ್ಕಿದ್ದಂತೆ ನನ್ನ ಕಣ್ಣಿಗೆ ಅಪ್ಸರೆ ತರಹ ಕಾಣಿಸ್ತಿದ್ದಾಳೆ. I think I should check my eyes" ಕಣ್ಣುಜ್ಜಿಕೊಂಡ. 

ರಪ್ಪನೇ ತಲೆಗೆ ಹೊಡೆದುಕೊಂಡ ಹರ್ಷ ಅದೇ ಪ್ರಶ್ನೆಯನ್ನು ಸನ್ನೆಯಲ್ಲಿ ಆಲಾಪ್ ಗೆ ಕೇಳಿದ. ಒಮ್ಮೆ ಮೊಬೈಲ್ ನೋಡಿ ಇಲ್ಲವೆಂದು ತಲೆ ಹಾಕಿದನಾತ.


ಒಂದೇ ಒಂದು ಸಂದೇಶಕ್ಕಾಗಿ ಬೆಂಕಿಯ ಮೇಲೆ ಕಾಲಿಟ್ಟ ಹಾಗೆ ತವಕದಿಂದ ಕಾಯುತ್ತಿದ್ದರು ಎಲ್ಲರೂ. ನಂತರ ಅಥ್ರೇಯನ ಕಪಟದಾಟವೆಲ್ಲ ಬಯಲು ಮಾಡುವ ಯೋಜನೆ ಸಿದ್ಧವಾಗಿತ್ತು.

              *********


ಆಗಲೇ ಕರೆಯೊಂದನ್ನು ಸ್ವೀಕರಿಸಿದ ಅಥ್ರೇಯ ತುಂಬಿದ ಮಂಟಪದ ನಡುವೆ ಎದ್ದು ಹೊರನಡೆದಿದ್ದ. ಆಲಾಪ್ ಬಂದು ರಘುನಂದನ್ ಅವರನ್ನು ಕೇಟರಿಂಗ್ ವ್ಯವಸ್ಥೆಯ ಕುರಿತು ಕೇಳಲು ಫುಡ್ ಕೌಂಟರ್ ಕಡೆಗೆ ಕರೆದುಕೊಂಡು ಹೋದ. ಅವರನ್ನೇ ಹಿಂಬಾಲಿಸಿದ ಪಿಎ ಹಾಗೂ ಸೆಕ್ಯೂರಿಟಿಯನ್ನು ಮ್ಯಾನೇಜ್ಮೆಂಟ್ ಕಡೆಯವರು ಮಾತಿನಲ್ಲಿ ಸಿಲುಕಿಸಿ ನಿಲ್ಲಿಸಿದ್ದರು.

ಹರ್ಷನ ತಂದೆ ತಾಯಿಯನ್ನು ಬಿಡಿಸಿಕೊಂಡ ಅಧಿಕಾರಿಗಳು ಡೇವಿಡ್ ಹಾಗೂ  ತಮ್ಮ ಕೆಲವು ರೌಡಿಗಳನ್ನು ಬಂಧಿಸಿದ ವಿಷಯ ಅಕಸ್ಮಾತ್ತಾಗಿ ಅಥ್ರೇಯನಿಗೆ ತಿಳಿದು ಹೋಗಿತ್ತು. ಕರೆ ತುಂಡರಿಸಿ ಒಳಬಂದಾಗ ರಘುನಂದನ್ ಮತ್ತು ಅವನ ಅನುಚರರು ಕಾಣದೆ‌ ಮುಂದೆ ನಡೆಯಬಹುದಾದ ಅಪಾಯವನ್ನು ಮನಗಂಡಿದ್ದ ಅಥ್ರೇಯ. 

ಅಲ್ಲಿಯೇ ಮುಗ್ದನಾಗಿ ನಿಂತಿರುವ ಪ್ರಸನ್ನನನ್ನು ಬಲವಾಗಿ ಕೈ ಹಿಡಿದು ಹಾಲ್ ಆಚೆಗೆ ಎಳೆದುಕೊಂಡು ಹೋದ. ಗಾಬರಿಯಿಂದ ಪರಿ ಕೂಡ ಅವರನ್ನು ಹಿಂಬಾಲಿಸಿದ್ದಳು. 
"ಏಯ್... ಹೇಳಿದ್ದೆ ತಾನೇ ಮದುವೆ ಮುಗಿಯುವವರೆಗೂ ನಿನ್ನ ನರಿ ಬುದ್ದಿ ಉಪಯೋಗಿಸಬೇಡ ಅಂತ.. 

" ನಾನೇನ್ ಮಾಡಿದೆ ಈಗ? " ಅಮಾಯಕನಾಗಿ ಕೇಳಿದ

"ಡೇವಿಡ್ ಎಲ್ಲಿ?"

"ಡೇವಿಡ್? ನನಗೇನು ಗೊತ್ತು?" ನಿರ್ಲಕ್ಷಿಸಿದನಾದರೂ ಈ ವಿಷಯ ಇಷ್ಟು ಬೇಗ ಅಥ್ರೇಯನಿಗೆ ತಿಳಿದದ್ದು ಗಾಬರಿ ಉಂಟು ಮಾಡಿತು.

" ಇಂತಹ ದುಸ್ಸಾಹಸ ಮಾಡುವ ಮೊದಲು ನಿನ್ನ ಆಶ್ರಮ, ಅಲ್ಲಿರುವ ನಿನ್ನ ಮಕ್ಕಳ ಬಗ್ಗೆ ಒಮ್ಮೆ ಯೋಚನೆ ಮಾಡಬೇಕಿತ್ತು. It's too late Dr." ಕ್ರೋಧದಲ್ಲಿ ಸಿಡಿದ ಅಥ್ರೇಯ ತನ್ನ ಮೊಬೈಲ್ ನಲ್ಲಿ ಮಾತನಾಡುತ್ತಾ ಆಶ್ರಮದ ಮೇಲೆ ದಾಳಿ ಮಾಡಿ ಒಂದೊಂದು ಮಗುವನ್ನು ಹಿಡಿದು ಹಿಂಸಿಸಿ ಕೊಲ್ಲಲು ಆದೇಶಿಸಿದ.

ಈ ಯೋಜನೆ ಇಷ್ಟು ಬೇಗ ಅಥ್ರೇಯನಿಗೆ ತಿಳಿಯಬಹುದೆಂದು, ಅದರ ಪರಿಣಾಮ ಈ ರೀತಿ ಭೀಕರವಾಗಿರಬಹುದೆಂದು ಊಹಿಸದ ಪರಿ ತತ್ತರಿಸಿದಳು.

"ಮಿ.ಅಥ್ರೇಯ, ನಿಮ್ಮ ಕೋಪ ದ್ವೇಷ ಏನಿದ್ದರೂ ನಮ್ಮ ಮೇಲೆ ತಾನೇ... ಆ ಮುಗ್ದ ಮಕ್ಕಳನ್ನು ಬಲಿಪಶು ಮಾಡೋದೇತಕ್ಕೆ? ಮನುಷ್ಯರಾಗಿ ಹುಟ್ಟಿದ್ದಿರಾ ಸ್ವಲ್ಪ ಮನುಷ್ಯತ್ವದಿಂದ ನಡೆದುಕೊಳ್ಳಿ. ಕ್ರೂರ ಮೃಗದ ಹಾಗೆ ವರ್ತಿಸಬೇಡಿ" ಏರು ಧ್ವನಿಯಲ್ಲಿ ಗುಡುಗಿದಳು.

"ಕೋಟಿ ಕೋಟಿ ಸಂಪತ್ತಿಗಾಗಿ ಸ್ವಂತ ಮಗನನ್ನೇ ಸಾವಿನ ದವಡೆಗೆ ನೂಕಿದವನು ನಾನು.. ಇನ್ನು ದಿಕ್ಕು ದೆಸೆಯಿಲ್ಲದ ಅನಾಥ ಮಕ್ಕಳ ಬಗ್ಗೆ ಕನಿಕರ ಎಲ್ಲಿಂದ ಬರಬೇಕು. ನೋಡಲು ನನ್ನ ಮಗನ ಹಾಗೇ ಇರುವ ಕಾರಣಕ್ಕೆ ಇನ್ನೂ ಜೀವಂತವಾಗಿದ್ದಾನೆ ನಿನ್ನ ಪ್ರಿಯಕರ ಹರ್ಷ. ನನ್ನ ವ್ಯವಹಾರದ ಮಧ್ಯೆ ತಲೆ ಹಾಕಿದವನನ್ನೇ ಮಗನಾಗಿ ಸಾಕುವಷ್ಟು ಒಳ್ಳೆಯವನಲ್ಲ ನಾನು. ಹೋಗಿ ಹೇಳು ಆ ನಿನ್ನ ಪ್ರಿಯತಮನಿಗೆ ತೆಪ್ಪಗೆ ಶಾಸ್ತ್ರ ಮುಗಿಸು ಎಂದು. ತಂದೆ ತಾಯಿ ಬದುಕಿದ ಸಂತೋಷದಲ್ಲಿ ಅನಾಥ ಮಕ್ಕಳ ಪ್ರಾಣ ಹೋಗಬಾರದಲ್ವಾ... ಹೋಗು, ಹೇಳವನಿಗೆ.. " ತಾಕೀತು ಮಾಡಿ ಫೋನ್ ತಿರುಗಿಸಿದ್ದ.

ಅಷ್ಟರಲ್ಲಿ ಮಂತ್ರಘೋಷಗಳು, ಹಿನ್ನೆಲೆಯ ಗಾನ ಸ್ತಬ್ಧವಾಗಿ ನಿಶ್ಯಬ್ದ ಆವರಿಸಿತ್ತು. ಅನುಮಾನದಿಂದ  ಒಳಗಡೆ ಧಾವಿಸಿದ ಅಥ್ರೇಯನಿಗೆ ಅರ್ಧಕ್ಕೆ ಮದುವೆ ನಿಲ್ಲಿಸಿ ಎದ್ದು ನಿಂತಿದ್ದ ಹರ್ಷ ಮಾನ್ವಿ ಕಂಡಿದ್ದರು.

 ಹರ್ಷ ಏನೋ ಮಾತನಾಡುವ ಮೊದಲೇ ಅವನ ಬಳಿಗೆ ಬಂದು ಕೊನೆಯ ಎಚ್ಚರಿಕೆಯನ್ನು ನೀಡಿದ ಅಥ್ರೇಯ. ಆದರೆ ಅದಕ್ಕೆ ಹರ್ಷ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮಾನ್ವಿಯೆಡೆಗೆ ಬಿರುಸಾದ ನೋಟ ಬೀರಿದ. ಮೂಗಿನ ತುದಿಯಲ್ಲಿ ಕೋಪ ಬುಸುಗುಡುತ್ತ ನೋಡಿದಳೇ ವಿನಃ ಚೂರು ಭಯಪಡಲಿಲ್ಲ. ಮಾನ್ವಿಯ ಅಮ್ಮ ಮಾನಸಾ ಹಾಗೂ ಅಥ್ರೇಯನ ಪತ್ನಿ ಅರುಣಾ ಏನಾಯಿತೆಂದು ತಿಳಿಯದೆ ವಿಚಾರಿಸತೊಡಗಿದರು. 

ಅದೇ ಸಮಯದಲ್ಲಿ ಮರಳಿದ ರಘುನಂದನ್ ಏನು ನಡೆಯುತ್ತಿದೆ ಎಂದು ಜೋರಾಗಿ ಕಿರುಚಾಡಲು ಹರ್ಷ ಸಣ್ಣ ಮನವಿಯನ್ನು ಮಾಡಿಕೊಂಡ. 

"ಅಂಕಲ್, ನನ್ನದೊಂದು ಚಿಕ್ಕ ಆಸೆ. ಮದುವೆಗೆ ಮೊದಲು ನಮ್ಮ ಲವ್‌‌ಸ್ಟೋರಿ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕೆಂದು.. ನಿಮ್ಮ ಅಭ್ಯಂತರವಿಲ್ಲ ತಾನೇ.."

ಮುಹೂರ್ತದ ಸಮಯದಲ್ಲಿ ಹರ್ಷನ ಅಧಿಕಪ್ರಸಂಗತನ ಕಂಡು ರಘುನಂದನ್ ಮುಷ್ಟಿ ಬಿಗಿಯಾಯಿತು. 

ಮಾನ್ವಿಯ "ಪ್ಲೀಸ್ ಡ್ಯಾಡ್" ಎಂಬ ಕೋರಿಕೆಗೆ ಕರಗಿ ಸುಮ್ಮನಾದರು.

ವಿಡಿಯೋ ಆನ್ ಆಯಿತು
ಮಂಟಪದ ಹಿಂದಿನ ತೆರೆಯ ಮೇಲೆ ಅಕ್ಷರಗಳು ಮೂಡಲಾರಂಭಿಸಿದವು.

M.R.INDUSTRIES ನ ದಪ್ಪ ಅಕ್ಷರಗಳು..

ಅಥ್ರೇಯನ ತೀಕ್ಷ್ಣ ಮತಿಗೆ ಅಪಾಯದ ಮುನ್ಸೂಚನೆ ಸಿಕ್ಕುಬಿಟ್ಟಿತು.


ನಂತರ ಫ್ಯಾಕ್ಟರಿಯ ದೃಶ್ಯಗಳು ಮೂಡಿದವು.

ಒಂದೇ ಸೆಕೆಂಡಿಗೆ ಅಥ್ರೇಯ ಪದತಲ ಬೆವೆತು ಹೋದ. ರಘುನಂದನ್‌ನ ಪರ್ಸ್ನಲ್ ಅಸಿಸ್ಟೆಂಟ್ ಕಡೆಗೊಮ್ಮೆ ನೋಡಿ ಕೈ ಸನ್ನೆ ಮಾಡಿದ. ಪೇಸ್ ಮೇಕರ್ ನ ಒತ್ತಡ ಹೆಚ್ಚಿಸಿ ಸಣ್ಣ ಆಘಾತ ಕೊಡಬೇಕಿದ್ದ ಪಿಎ ಅಸಹಾಯಕ ಮುಖ ಹೊತ್ತು ಕೈ ಹಿಂದೆ ಕಟ್ಟಿ ತಲೆ ತಗ್ಗಿಸಿದ್ದ. 

ಕ್ರೋಧದಿಂದ ಮುಂಗೈಗೆ ಮುಷ್ಟಿಯಿಂದ ಗುದ್ದಿಕೊಂಡ ಅಥ್ರೇಯ ಸಮಯ ಮೀರದಂತೆ ವಿಡಿಯೋ ಸ್ತಬ್ಧಗೊಳಿಸಲು ಪ್ರಸನ್ನನ ಕಡೆಗೊಮ್ಮೆ ಎಚ್ಚರಿಕೆಯ ಬೆರಳು ತೋರಿದ.


ಪ್ರಸನ್ನನ ಮುಖದಲ್ಲಿ ಆತಂಕದ ಛಾಯೆಯಿತ್ತಾದರೂ ಹರ್ಷನನ್ನು ತಡೆಯಲು ಯತ್ನಿಸಲಿಲ್ಲ. ಪರಿಯ ಪರಿಸ್ಥಿತಿ ಕೂಡ ಅದಕ್ಕೆ ಹೊರತಾಗಿರಲಿಲ್ಲ. 

ಇನ್ನು ಆಶ್ರಮ ಉಳಿಯಲೇ ಬಾರದೆಂದು ನಿರ್ಧರಿಸಿದವನೇ ಫೋನ್ ಕೈಗೆತ್ತಿ ತನ್ನ ಅನುಚರರಿಗೆ ಕರೆ ಮಾಡಿ, ಆಶ್ರಮದ ಸಣ್ಣ ಅವಶೇಷ ಸಹ ಉಳಿಯದಂತೆ ಅದನ್ನು ವಿಧ್ವಂಸ ಮಾಡುವಂತೆ ಹಲ್ಲು ಕಟಿದ‌.

ಆ ಕಡೆಯಿಂದ ಬಂದ ಪ್ರತ್ಯುತ್ತರ ಅಥ್ರೇಯನನ್ನು ದಂಗು ಬಡಿಸಿತ್ತು. 
"ಸಾರಿ ಮಿ.ಅಥ್ರೇಯ ನಿಮ್ಮ ಸೋ ಕಾಲ್ಡ್ ರೌಡಿಗಳು ಈಗ ಬಿಜಿ ಇದ್ದಾರೆ‌. ಜೈಲಿಗೆ ಹೋಗಬೇಕು, ಕೇಸ್ ಫೈಲಾಗುತ್ತೆ, ನಾಳೆ ಕೋರ್ಟ್ ಗೆ ಹೋಗಿ ಸಾಕ್ಷಿ ಹೇಳಬೇಕು, ಶಿಕ್ಷೆ ಅನುಭವಿಸಬೇಕು. ಎಷ್ಟೊಂದು ಕೆಲಸ ಇವೆ. ನೀವು ಹೇಳಿದ ಕೆಲಸ ಆಗಲ್ಲ ಬಿಡಿ. "

"Who the hell are you?" ಬಹುತೇಕ ಕಿರುಚಿದ್ದ.

"ನಾನು ಡಾ.ರೋಹಿತ್.. ಡಾ.ಪ್ರಸನ್ನ ಇದ್ದಾರಲ್ಲ, ಅವರ ಶಿಷ್ಯ! ನಮ್ಮ ಗುರುಗಳು ಹೇಳಿದ್ದರು ಎರಡು ದಿನದೊಳಗೆ ಆಶ್ರಮದಲ್ಲಿ ಇರುವವರನ್ನು ಯಾರಿಗೂ ಗೊತ್ತಾಗದಂತೆ ಬೇರೆ ಕಡೆಗೆ ಶಿಫ್ಟ್ ಮಾಡುವಂತೆ; ಮಕ್ಕಳನ್ನೆಲ್ಲ ಸುರಕ್ಷಿತವಾಗಿ ಬೇರೆಡೆಗೆ ಸಾಗಿಸಿ, ನಿಮ್ಮವರನ್ನು ಈಗತಾನೇ ಪೋಲಿಸ್‌ನವರಿಗೆ ಕೆಂಪುಕೈಯಲ್ಲಿ (red hand) ಹಿಡಿದು ಕೊಟ್ಟಿದ್ದೇನೆ.  ನಮ್ಮ ಗುರುಗಳು ಹೇಳಿದ್ದನ್ನ ಶಿರಸಾವಹಿಸಿ ಚಾಚು ತಪ್ಪದೆ ಪಾಲಿಸಿದ್ದೇನೆಂದು ಅವರಿಗೆ ತಿಳಿಸಿಬಿಡಿ ಆಯ್ತಾ.. ಮತ್ತೆ ಅವರಿಗೆ ನನ್ನ ಜಾಬ್ ರೆಫರೆನ್ಸ್ ಬಗ್ಗೆ ಸ್ವಲ್ಪ ಗಮನ ಹರಿಸೋಕೆ ಹೇಳಿ ಪ್ಲೀಸ್‌..."

'ಹಲೋ ಸರ್, ಇವನೊಬ್ಬನೇ ಮಾಡಿದ್ದಲ್ಲ ನಾನು ದಿವಿ, ದೃವ್ ಎಲ್ಲರೂ ಹೆಲ್ಪ್ ಮಾಡಿದೀವಿ ನಮ್ಮ ರೆಫರೆನ್ಸ್ ಕೂಡ... ' ಹಿಂದಿನಿಂದ ಶ್ರಾವ್ಯ ಗೊಣಗಿದರೆ, 'ಹೇ ನಿನ್ನ ಹೆಸರು ಹೇಳ್ಲಿಲ್ವಲ್ಲೆ' ದಿವ್ಯಳ ಎಚ್ಚರಿಕೆಯ ಪಿಸುಮಾತು..

ಅಥ್ರೇಯನ ತಲೆ ಚಿಟ್ಟು ಹಿಡಿದು ಹದಗೆಟ್ಟು ಹೋಯಿತು. ತಲೆ ತಡವಿ ಕರೆ ತುಂಡರಿಸಿದ.ಅವನ ಭರವಸೆಯ ಗೋಪುರ ಚದುರಿ ಹೋಯಿತು. ಉಗ್ರವಾದ ಕೆಂಡ ಕಣ್ಣಿನಿಂದ ಪ್ರಸನ್ನನ ಕಡೆಗೆ ನೋಡಿದ. ಅವನ ನೋಟವೇ ಪ್ರಸನ್ನನಿಗೆ ಆಶ್ರಮದ ಮಕ್ಕಳ ಕ್ಷೇಮ ಸಂದೇಶವನ್ನು ಸಾರಿತ್ತು. ಪ್ರಸನ್ನ ನಿರಾಳವಾಗಿ  ನೆಮ್ಮದಿಯ ಉಸಿರು ದೂಡಿದ.

                        ********


ಎಂ.ಆರ್ ಫ್ಯಾಕ್ಟರಿಯ ದೊಡ್ಡ ಹೆಸರಿನೊಂದಿಗೆ ಆರಂಭಗೊಂಡ ವಿಡಿಯೋ ದೃಶ್ಯಗಳಲ್ಲಿ ಫ್ಯಾಕ್ಟರಿಯಲ್ಲಿ ನಡೆಯುತ್ತಿದ್ದ ಗನ್ ಮಾಫಿಯಾದ ಸಂಪೂರ್ಣ ಚಿತ್ರಣವೇ ಜನರೆದುರು ಅನಾವರಣಗೊಂಡಿತ್ತು. 

ತಮ್ಮದೇ ಫ್ಯಾಕ್ಟರಿಯ ಗೋದಾಮಿನ ಕೆಳಗೆ ಅಕ್ರಮವಾಗಿ ನಡೆಯುತ್ತಿದ್ದ ಶಸ್ತ್ರಾಸ್ತ್ರ ಬಾಂಬ್ ವಿಸ್ಪೋಟಕ ವಸ್ತುಗಳ ತಯಾರಿಕೆ ಸರಬರಾಜಿನ ದೃಶ್ಯಗಳನ್ನು ನೋಡಿ ರಘುನಂದನ್ ದಿಗ್ಭ್ರಾಂತರಾಗಿದ್ದರು. ತಮಗೂ ತಿಳಿಯದಂತೆ ಇಂತಹ ದೇಶದ್ರೋಹಿ ಕೃತ್ಯವೆಸಗಿ ತಮ್ಮ ಹೆಸರು ಕೆಡಿಸುತ್ತಿರುವವರಾದರು ಯಾರು ಎಂಬ ಪ್ರಶ್ನೆ ಅವರನ್ನು ಬಹುವಾಗಿ ಕಾಡಿತು. 

ರಘುನಂದನ್ ಗೆ ಸಂಪೂರ್ಣ ವಿಷಯ ತಿಳಿಯುವ ಮೊದಲೇ ಏನಾದರೂ ಮಾಡಲೇಬೇಕೆಂಬ ಉದ್ದೇಶದಿಂದ ಮಾನ್ವಿಗೆ ಕೊನೆಯ ಬಾರಿ ಎಚ್ಚರಿಸಿದ್ದ.
"ನೀನು ಮರೆತಿದ್ದಿಯಾ ಬಹುಶಃ, ಇಲ್ಲಿರುವ ಸೆಕ್ಯುರಿಟಿ ಕೂಡ ನನ್ನವರೇ.. ಕೂಡಲೇ ವಿಡಿಯೋ ನಿಲ್ಲಿಸದಿದ್ದರೆ ರಾಶಿ ರಾಶಿ ಹೆಣ ಬೀಳುತ್ತವೆ ಇಲ್ಲಿ.‌. ಮದುವೆಮನೆ ಸ್ಮಶಾನವಾಗುತ್ತೆ!!" ಅವನ ಬೆದರಿಕೆಗೆ ವ್ಯಂಗ್ಯವಾಗಿ ನಕ್ಕಿದ್ದಳು ಮಾನ್ವಿ.

 ತಾನೇ ನೇಮಿಸಿದ ಸೆಕ್ಯುರಿಟಿ ಟೀಮ್ ಗೆ ರಘುನಂದನ್ ಮೇಲೆ ದಾಳಿಯಾದಂತೆ ಸಣ್ಣ ಆತಂಕ ಸೃಷ್ಟಿಸಲು ಸೂಚನೆ ನೀಡಿದ. ಅವನ ಸನ್ನೆ ಅರಿತೂ ಸಹ ಹಲ್ಲು ಕಿತ್ತ ಹಾವಿನಂತೆ ಬುಸುಗುಡುತ್ತ ನಿಂತಿದ್ದ ಸೆಕ್ಯುರಿಟಿಯನ್ನು ಕಂಡು ಅವನ ಕೋಪ ಮತ್ತಷ್ಟು ಉದ್ರೇಕಗೊಂಡಿತು. ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಕಂಗೆಟ್ಟು ಭಾವಶೂನ್ಯನಾದ.

ಅಷ್ಟರಲ್ಲಿ ಅಥ್ರೇಯ ಹಾಗೂ ಡೇವಿಡ್ ಮಧ್ಯದಲ್ಲಿ ನಡೆದ ಕೆಲವು (ಅ)ವ್ಯವಹಾರದ ಸಂಭಾಷಣೆಯ ತುಣುಕುಗಳು, ಕೆಲವು ವಿದೇಶಿ ವ್ಯಾಪಾರಿಗಳ ಜೊತೆಗೆ ರಘುನಂದನ್ ಎಂಬ ಹೆಸರನ್ನೇ ಉಪಯೋಗಿಸಿಕೊಂಡು ವ್ಯಾಜ್ಯ ಮಾಡಿದ ದಾಖಲೆಗಳು, (ಅ) ವ್ಯವಹಾರದ ಮೂಲದಿಂದ ಗಳಿಸಿದ ಬಹುತೇಕ ಮಟ್ಟದ ಸಂಪತ್ತನ್ನು ಅಥ್ರೇಯ ಕೂಡಿಟ್ಟ ಅಕೌಂಟ್ ಮಾಹಿತಿ, ಕೆಲವು ಪೇಪರ್ ಡಾಕ್ಯುಮೆಂಟ್ಸ್ ಎಲ್ಲ ಎಲ್ಲವೂ ತೆರೆಯ ಮೇಲೆ ಒಂದೊಂದಾಗಿ ಮೂಡಿ ಬಂದಿದ್ದವು..  


ಅಥ್ರೇಯನ ವಂಚನೆ ಬಯಲಾಗಿತ್ತು. ಆತ ಪದತಲ ಬೆವೆತು ಹೋದ.
ಹಿತೈಶಿ, ಆಪ್ತ, ಸಹೋದರ, ಕುಟುಂಬದ ಸದಸ್ಯನೆಂದೇ ಭಾವಿಸಿದ್ದ ಮಿತ್ರನ ಕುಟಿಲ ಬುದ್ದಿಯ ನಯವಂಚನೆಯನ್ನು ಸಹಿಸಲಾರದೆ ರಘುನಂದನ್ ಕುಸಿದು ಕುಳಿತಿದ್ದರು. ಪರಿ ಹಾಗೂ ಮಾನಸ ಅವರನ್ನು ಸಂಭಾಳಿಸಿದರೆ ಮಾನ್ವಿ ತಂದೆಯ ಬಳಿ ಧಾವಿಸಿ ಬಂದು ಬಿಕ್ಕಳಿಸಿದಳು.

ವಿಡಿಯೋ ದೃಶ್ಯಗಳು ಇನ್ನೂ ಓಡುತ್ತಲೇ ಇದ್ದವು. ಅಥ್ರೇಯನ ವಂಚನೆಯ ಸಾಕ್ಷ್ಯ ಸಮೇತವಾಗಿ..


ಕೊನೆಯಲ್ಲಿ ಈಗಷ್ಟೇ ಪ್ರಸನ್ನ ಪರಿಯ ಜೊತೆಗಿನ ವಾದದ ದೃಶ್ಯಗಳು ಕೂಡ ಪ್ರಸಾರವಾದವು. ಆಗ ಬೆಳಕಿಗೆ ಬಂದಿತ್ತು ಸಂಕಲ್ಪ್ ನ ಸಾವಿನ ರಹಸ್ಯ ಹರ್ಷನನ್ನು ಸಂಕಲ್ಪನಾಗಿ ಬದಲಾಯಿಸಿದ ಉದ್ದೇಶ!!


ಮಂಟಪದಲ್ಲಿ ಕರಾಳ ಮೌನ ಆವರಿಸಿತ್ತು. ಮದುವೆಯಾಗುತ್ತಿರುವವನು ಅಸಲಿಗೆ ಸಂಕಲ್ಪ ಅಲ್ಲವೇ ಅಲ್ಲ. ಅವನ ಹಾಗೆಯೇ ಇರುವ ಹರ್ಷ! ಹರ್ಷ ಭಾರ್ಗವ್! ಸಂಕಲ್ಪ್‌ನನ್ನು ಕೊಂದಿದ್ದು ತಂದೆ ಎನಿಸಿಕೊಂಡ ಇದೇ ಅಥ್ರೇಯ! ಅದೂ ಕೇವಲ ಆಸ್ತಿಗೋಸ್ಕರ ಎಂಬ ಸತ್ಯ ನೆರೆದವರ ಹೃದಯ ಕಂಪಿಸಿತು. ಮುಖ್ಯವಾಗಿ ಅರುಣಾ!! 

"What the hell is this Mr.ಅಥ್ರೇಯ. ನಮ್ಮ ಮಗ ಸಂಕಲ್ಪ್‌ನನ್ನ ಕೊಂದುಬಿಟ್ರಾ? ಅದೂ ಆಸ್ತಿಗೋಸ್ಕರ? ಇವನು ಸಂಕಲ್ಪ್ ಅಲ್ಲವಾ?  I want to know the truth damn it!!" ಕೋರ್ಟಿನ ತುದಿ ಎಳೆದು ಪ್ರಲಾಪಿಸಿದರು.

ಅಥ್ರೇಯ ಸುತ್ತಲಿನ ಜನರ ಮಧ್ಯೆ ತನ್ನ ಘನತೆ ಹಾಳಾದ ವ್ಯಥೆಯಲ್ಲಿ ಹಲ್ಲು ಕಟಿದು ಕೈ ಬಿಡಿಸಿಕೊಂಡ. 

ಪರಿವಾರ ಸಮೇತ ಮದುವೆಗೆ ಆಗಮಿಸಿದ್ದ ಮೇಜರ್ ಜನರ ಮಧ್ಯದಿಂದ ಎದ್ದು ಬಂದು ಅರುಣಾಳ ಸಂದೇಹಗಳಿಗೆ‌ ಜವಾಬು ನೀಡಿದ್ದರು. 

"ಯೆಸ್ ಮಿಸೆಸ್ ಅಥ್ರೇಯ. ನಿಮ್ಮ ಗಂಡ ಒಬ್ಬ ದೇಶದ್ರೋಹಿ, ಕ್ರಿಮಿನಲ್, ಮರ್ಡರರ್! ಆಸ್ತಿಗಾಗಿ ಸ್ವಂತ ಮಗನನ್ನೇ ಕೊಂದವನು, ಲಾಭಕ್ಕಾಗಿ ಮಿತ್ರನಿಗೆ ಮೋಸ ಮಾಡಿದವನು! ಇದನ್ನು ವಿರೋಧಿಸಿದ ಎಷ್ಟೋ ಜನರ ಮಾರಣಹೋಮ ನಡೆಸಿ ಈಗ ಸಿಕ್ಕು ಬಿದ್ದಿದ್ದಾನೆ.. ಇಲ್ಲಿರೋ ಸೆಕ್ಯುರಿಟಿ ಕೂಡ ಇವನದೇ ಗ್ಯಾಂಗ್! ಇಷ್ಟು ಜನರನ್ನ ಹೇಗೆ ಅರೆಸ್ಟ್ ಮಾಡ್ತಾರೆಂದು ಯೋಚಿಸ್ತಿದಿರಾ ಅಥ್ರೇಯ?? don't worry  ಇಲ್ಲಿರುವ ಮ್ಯಾನೆಜ್‌ಮೆಂಟ್‌ ಪೂರ್ತಿ ಮಿಲಿಟರಿ ಅಧಿಕಾರಿಗಳು!! ನಿಮ್ಮ ಸನ್ಮಾನಕ್ಕೆ ಎಲ್ಲಾ ವ್ಯವಸ್ಥೆ ಆಗಿದೆ. ಹಾಗೆ ಫ್ಯಾಕ್ಟರಿ ಬಗ್ಗೆ ಕೂಡ ಚಿಂತೆ ಬೇಡ. ಫ್ಯಾಕ್ಟರಿ ಸೀಜಾಗಿದೆ, ಮತ್ತು ಎಲ್ಲರೂ ನಿಮ್ಮ ಸ್ವಾಗತಕ್ಕೆ ಕಾಯುತ್ತಿರಬಹುದು. ಹೊರಡಿ" ಅಥ್ರೇಯನ ಅಹಂಕಾರವೇನು ಕುಗ್ಗಲಿಲ್ಲ. ದ್ವೇಷದ ಜಿಜ್ಞಾಸೆಯಲ್ಲಿ ಕುದಿಯುತ್ತಿದ್ದ.

ಸುತ್ತಲೂ ಮ್ಯಾರೇಜ್ ಮ್ಯಾನೆಜ್‌ಮೆಂಟ್‌ ವೇಷದಲ್ಲಿ ನೆರೆದಿದ್ದ ಪೋಲಿಸ್ ಹಾಗೂ ಮಿಲಿಟರಿ ಸಿಬ್ಬಂದಿಗಳು ಅಥ್ರೇಯ ಹಾಗೂ ಅವನ ಕಡೆಯವರನ್ನು ಮುತ್ತಿಗೆ ಹಾಕಿದರು. 




ಆಗಲೇ ವಿವೇಕ್, ವಿನಾಯಕ್ ಭಾರ್ಗವ್ ಹಾಗೂ ಅವರ ಪತ್ನಿ ಸುಲೋಚನ ಅವರೊಂದಿಗೆ  ಅಲ್ಲಿಗೆ ಆಗಮಿಸಿದ್ದ. ಅವರನ್ನು ಹರ್ಷನ ನಿಜವಾದ ತಂದೆ ತಾಯಿಯೆಂದು ಪರಿಚಯಿಸಿದ ಮಾನ್ವಿ ಅಥ್ರೇಯ ತನ್ನನ್ನು ಹೇಗೆಲ್ಲ ಹೆದರಿಸಿ ಮೋಸ ಮಾಡಿ ತನ್ನ ಕಾರ್ಯ ಸಾಧಿಸಿದ ಎಂಬುದನ್ನು ತನ್ನ ತಂದೆ ಹಾಗೂ ಅರುಣಾರಿಗೆ ವಿವರಿಸಿ ದೂರಿದ್ದಳು. 

ಇದ್ದಾಗ ಇಲ್ಲದ ಮಮಕಾರ ವಾತ್ಸಲ್ಯ ಭಾವ‌ ಮಗ ತೊರೆದು ಹೋದ ಕಟು ವಾಸ್ತವವನ್ನು ತಿಳಿದು ತುಸು ಹೆಚ್ಚಿನ ಪ್ರಮಾಣದಲ್ಲಿ ಉಕ್ಕಿ ಬಂದಿತ್ತು. ಇನ್ನೆಂದೂ ಮರಳದ ಮಗನ ತದೃಪಿ ಹರ್ಷನನ್ನು ಬಿಗಿಯಾಗಿ ಅಪ್ಪಿ ಬಿಕ್ಕಿದರು ಅರುಣಾ.


ಇನ್ನೇನು ತನ್ನ ಅಸ್ತಿತ್ವದ ನಿರ್ನಾಮವಾಯಿತು ಎನ್ನುವ ಪರಿಸ್ಥಿತಿಯಲ್ಲಿ ತನ್ನ ಮಾನಸಿಕ ಸಂತುಲನೆ ಕಳೆದುಕೊಂಡು ಅಕ್ಷರಶಃ ಹುಚ್ಚನಂತಾದ ಅಥ್ರೇಯ ರಘುನಂದನ್ ಕೊರಳು ಅದುಮಿ,, 

"ನಿನ್ನಿಂದಲೇ ಇದೆಲ್ಲಾ ಆಗಿದ್ದು. ನೀನು ಬಿಜಿನೆಸ್ ಫೀಲ್ಡ್ ಗೆ ಬಂದ ಮೇಲೆಯೇ ನನ್ನ ಅವನತಿ ಶುರುವಾಗಿದ್ದು, ಗೌರವ ಕುಂದಿದ್ದು, ಟಾಪ್ ಬಿಜಿನೆಸ್ ಮೆನ್ ಮಟ್ಟದಲ್ಲಿದ್ದ ನಾನು ನೆಲಕ್ಕೆ ಮುಗ್ಗರಿಸಿದ್ದು.‌.. ನಿನ್ನ ಸಂತೋಷ ಏಳ್ಗೆ ನನ್ನಿಂದ ಸಹಿಸಲಾಗದು ರಘುನಂದನ್ ರೈ!! ನೀನು ಸಾಯಬೇಕು." ಹಿಸ್ಟಿರಿಕ್ಕಾಗಿ ಕಿರುಚಿ, ಕತ್ತು ಹಿಸುಕಿ ಸಾಯಿಸುವ ಪ್ರಯತ್ನ ಮಾಡಿದ. ಆದರೆ ಪೋಲಿಸರ ಸಮ್ಮುಖದಲ್ಲಿ ಅವನ ಯತ್ನ ವಿಫಲವಾಗಿತ್ತು. 

 ಮಾನ್ವಿ ಅವನಿಂದಾಗಿ ತನ್ನ ತಂದೆ ಪಟ್ಟ ನೋವಿಗೆ ಪರ್ಯಾಯವಾಗಿ ಕೋಪ ತಣಿಯುವವರೆಗೂ ಅವನ ಕಪಾಳಕ್ಕೆ ಬಾರಿಸುತ್ತಿದ್ದರೆ;
ಆಪ್ತ ಸ್ನೇಹಿತನ ದುರ್ವರ್ತನೆ, ಸಂಪತ್ತಿನ ಮೋಹವನ್ನು ನೋಡಿ ರಘುನಂದನ್ ಬುದ್ದಿಹೀನರಾಗಿ ಕುಳಿತು ಬಿಟ್ಟಿದ್ದರು. ಅವರ ನಂಬಿಕೆಯ ಮೇಲೆ ಬಲವಾದ ಪ್ರಹಾರವಾಗಿತ್ತು. ಪ್ರೀತಿಯ ಮಗಳೇ ಇಷ್ಟು ದಿನ ಅದಕ್ಕೆ ಬೆಲೆ ತೆತ್ತಿದ್ದಳು. ಮದುವೆ ನಿಂತು ಹೋದರೆ, ಮುಂದೆ ಮಗಳ ಭವಿಷ್ಯ ಏನು ಎಂಬ ಯೋಚನೆಯೇ ಅವರ ಮನಸ್ಸನ್ನು ಕಿತ್ತು ತಿನ್ನುತ್ತಿತ್ತು.

ಅವರ ಹಿಂದೆಯೇ ಬಂದ ಅರುಣಾ ಗಂಡನ ಕಪಾಳಕ್ಕೊಂದು ಕೈ ಬೀಸಿ, ಕೊರಳಪಟ್ಟಿ ಜಗ್ಗಿ ಕೂಗಿಕೊಂಡರು..
"ಆಸ್ತಿ ಬೇಕಲ್ಲವಾ ನಿನಗೆ. ಸಿಗುತ್ತೆ. ಹತ್ತಲ್ಲ ಇಪ್ಪತ್ತು ಸಾವಿರ ಕೋಟಿ... ಅದರ ದುಪ್ಪಟ್ಟು ಕೊಡುತ್ತೇನೆ. ನನ್ನ ಮಗ ನನಗೆ ಸಿಗುತ್ತಾನಾ?? ಹೇಳು... ನನ್ನ ಮಗನನ್ನು ನನಗೆ ಬದುಕಿಸಿ ಕೊಡಬಲ್ಲೆಯಾ" ಭಾವೋದ್ರೇಕದಲ್ಲಿ ಕೂಗಾಡಿದ್ದರು.

"ಸಾಕು ನಿಲ್ಲಿಸೇ ನಿನ್ನ ಮೊಸಳೆ ಕಣ್ಣೀರು.. ಈಗ ಮಾತೃ ವಾತ್ಸಲ್ಯ ಉಕ್ಕಿ ಹರಿಯುತ್ತಿದೆಯಾ? ಬದುಕಿದ್ದ ಮಗನಿಗೆ ಒಂದು ದಿನ ಹೇಗಿದ್ದಾನೆಂದು ವಿಚಾರಿಸಲಿಲ್ಲ. ಈಗ ಈ ವರಸೆ.. ಮದುವೆಗೆ ಮೊದಲೇ ಯಾರಿಗೋ ಹಡೆದ ಮಗುವನ್ನು ಮರ್ಯಾದೆಗೆ ಹೆದರಿ ಸಾಯಿಸಲು ಹೇಳಿದವಳು ನೀನು.. ನಿನಗೆಲ್ಲಿಂದ ಬಂತು ಈ ಹಾಳು ಮಮಕಾರ" ಅಥ್ರೇಯ ಬಾಯಿ ಹರಿಬಿಟ್ಟಿದ್ದ. ಅರುಣಾ ಸ್ತಬ್ಧವಾಗಿ ನಿಂತು ಬಿಟ್ಟರು.

"ಯಾಕೆ? ಸತ್ಯ ಜೀರ್ಣ ಆಗುತ್ತಿಲ್ಲವಾ? ನಿನ್ನ ಬಗ್ಗೆ ಎಲ್ಲಾ ಗೊತ್ತಿದ್ದು ನಿನ್ನ ಮದುವೆಯಾದೆ. ಯಾಕೆ ಗೊತ್ತಾ?? ನಿಮ್ಮಪ್ಪನ ಆಸ್ತಿಗಾಗಿ! ಆದರೆ ಮುದುಕ ವಿಲ್ ಬರೆದಿಟ್ಟು ಕೊನೆಯಲ್ಲಿ ಮೋಸ ಮಾಡಿಬಿಟ್ಟ. " ಹಳಹಳಿಸಿದ. ಅರುಣಾ ನೆಲಕ್ಕೆ ಕುಸಿದು ಬಿಕ್ಕಿ ಬಿಕ್ಕಿ ಅತ್ತರು. ಅವರನ್ನು ಸಂಭಾಳಿಸಿ ಸಮಾಧಾನ ಮಾಡಿದ್ದರು ಹರ್ಷ ಮತ್ತವನ ತಾಯಿ ಸುಲೋಚನ. ಮೂಕಪ್ರೇಕ್ಷಕರಾಗಿದ್ದರು ಉಳಿದವರು. 

ಮೊಟ್ಟಮೊದಲ ಬಾರಿಗೆ ಹೃದಯದಿಂದ ಹರ್ಷನನ್ನ ತಬ್ಬಿಕೊಂಡು ತಲೆ ನೇವರಿಸುತ್ತ ಇನ್ನಿರದ ಮಗನ ನೆನಪನ್ನು ಮರೆಮಾಚಲು ಯತ್ನಿಸಿ ಕಂಬನಿಗರೆದಿದ್ದರು ಅರುಣಾ.

 ವ್ಯಕ್ತಿಯಾಗಲಿ ವಸ್ತುವಾಗಲಿ ಕಳೆದುಕೊಂಡ ನಂತರವೇ ಅವುಗಳ ಅಸ್ತಿತ್ವದ ಬೆಲೆಯ ಅರಿವಾಗುವುದು. ಪ್ರತಿಯೊಬ್ಬರೂ ಈ ಅನುಭವಕ್ಕೆ ಹೊರತಲ್ಲ‌..

ಪ್ರಸನ್ನ ಅವರನ್ನು ಅನುಕಂಪದಿಂದ ನೋಡಿ ವಿಷಾದದಿಂದ ನಕ್ಕ. 

                 *********


ಅಥ್ರೇಯ ಹಾಗೂ ಅವನ ಅನುಚರರನ್ನು ಬಂಧಿಸಿ ಎಳೆದೊಯ್ಯಲಾಯಿತು. ಮದುವೆಯ ಮಂಟಪ ಊಹಾಪೋಹಗಳ ರಹಸ್ಯದ ಮಾತುಕತೆಗಳ ತಾಣವಾಯಿತು. ಅಸಲಿಗೆ ಈಗ ಮುಂದೆ ಏನು? ರಘುನಂದನ್ ರೈ ಮಗಳ ಮದುವೆ ಉಂಟೋ ಇಲ್ಲವೋ? ಜರುಗುವುದಾದರೆ ಯಾರೊಂದಿಗೆ? ಹರ್ಷನೊಂದಿಗಾ? ಮತ್ತೆ ಅವನು ಪ್ರೀತಿಸಿದ ಹುಡುಗಿಯ ಗತಿ ಏನು? ಜನ ಸಮೂಹದಲ್ಲಿ ಗಾಸಿಪ್ ಹರಿದಾಡತೊಡಗಿದವು. ಇನ್ನೊಂದೆಡೆ ಪ್ರಮುಖರೆಲ್ಲ ಸೇರಿ ಸಮಾಲೋಚನೆ ನಡೆಸಿದ್ದರು. 

ಪರಿಸ್ಥಿತಿಗೆ ಬೆಂಗಾವಲಾಗಿ ನಿಂತಿದ್ದ ಮೇಜರ್, ರಘುನಂದನ್ ಮನಸ್ಸಿಗಾದ ಆಘಾತವನ್ನು ಅರಿತು ಅವರನ್ನು ಸಮಾಧಾನ ಹೇಳಿದ್ದರು. ಮತ್ತು ಅವರಿಂದಾದ ಪ್ರಮಾದಗಳಿಗೆ ಪರಿಹಾರವಾಗಿ ದೂರ ಮಾಡಿದ ಪ್ರೇಮಿಗಳ (ಹರ್ಷ-ಪರಿಧಿ) ಮದುವೆಯನ್ನು ಅದೇ ಮಂಟಪದಲ್ಲಿ ತಾವೇ ಮುಂದೆ ನಿಂತು ನೆರವೇರಿಸಲು ಕೋರಿದರು. ಇದಕ್ಕೆ ಮಾನ್ವಿ ಕೂಡ ಸಮ್ಮತಿಯನ್ನು ಸೂಚಿಸಿ ತಂದೆಗೆ ದುಂಬಾಲು ಬಿದ್ದಳು. 

ಆದರೆ ರಘುನಂದನ್ ಯೋಚಿಸುವದಕ್ಕೂ ಮೊದಲೇ ಪರಿ ಮದುವೆಗೆ ನಿರಾಕರಿಸಿ ಬಿಟ್ಟಳು.‌ ಆಪ್ತಸ್ನೇಹಿತೆಯ ಜೀವನವನ್ನು ಬರಿದು ಮಾಡಿ ತನ್ನ ಸಂತೋಷವನ್ನು ಮರಳಿ ಪಡೆಯಲು ಆಕೆಗೆ ಸಹಮತವಿರಲಿಲ್ಲ. ಅವಳ ನಿರ್ಧಾರ ಕೇಳಿ ಉಳಿದವರು ಚಕಿತರಾಗಿದ್ದರೆ, ರಘುನಂದನ್ ಪರಿಯ ಮಾತನ್ನು ಅನುಮೋದಿಸಿದ್ದರು. 

"ಮಗಳ ಹಾಗೆ ಇರುವ ನಿನಗೆ ತಿಳಿದೋ ತಿಳಿಯದೆಯೋ ನನ್ನಿಂದ ತುಂಬಾ ಅನ್ಯಾಯವಾಗಿ ಬಿಟ್ಟಿದೆ ಪರಿ, ಅದಕ್ಕೆ ಪ್ರಾಯಶ್ಚಿತ್ತವಾಗಿ ನಾನೇ ನಿನ್ನ ತಂದೆಯ ಸ್ಥಾನದಲ್ಲಿ ನಿಂತು ಈ ಮದುವೆ ನೆರವೇರಿಸುತ್ತೇನೆ‌. ಇದಕ್ಕೆ ನೀನು ಒಪ್ಪಲೇ ಬೇಕು. ಇನ್ನೂ ನನ್ನ ಮಗಳ ಜೀವನದ ಬಗ್ಗೆ ನಿನಗಿರುವ ಕಾಳಜಿ ನನಗೂ ಇದೆ. ಅದಕ್ಕೆ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ, ನಾನು ಆಯ್ಕೆ ಮಾಡುವ ಹುಡುಗನ ಜೊತೆಗೆ ಇದೇ ಮಂಟಪದಲ್ಲಿ ಮಾನ್ವಿ ಮದುವೆ ಕೂಡ ನಡೆಯುವುದು." ಪರಿಯ ಮೊಗದಲ್ಲಿ ಸಂತಸದ ಕಾಂತಿ ಚಿಮ್ಮಿತು.

"ಡ್ಯಾಡ್....?!!!" ದಂಗಾದಳು ಮಾನ್ವಿ

"ಇದುವರೆಗೆ ನೀನು ಹೇಳಿದ್ದನ್ನೆಲ್ಲ ನಾನು ಕೇಳಿದ್ದೇನೆ. ಇದೊಂದು ಬಾರಿ ನನ್ನ ಮಾತು ಕೇಳ್ತಿಯಲ್ವಾ ಪ್ರಿನ್ಸೆಸ್" ಭಿನ್ನೈಸಿದರು. ಮಾನ್ವಿಗೆ ಇಲ್ಲವೆನ್ನಲಾಗಲಿಲ್ಲ.

"ಪ್ರಾಮಿಸ಼್ ಯು ಡ್ಯಾಡ್.. ಇನ್ಮುಂದೆ ನೀವು ಏನೇ ಹೇಳಿದರೂ ಇಲ್ಲವೆನ್ನಲ್ಲ." ಅವರೆದೆಗೆ ತಲೆಯಾನಿಸಿದಳು.

"ಹರ್ಷ, I'm sorry my boy.. I'm sorry Mr n Mrs ಭಾರ್ಗವ್.. ಗೊತ್ತು, ಕ್ಷಮೆಗೆ ಅರ್ಹವಾದ ತಪ್ಪಲ್ಲ ನಾನು ಮಾಡಿದ್ದು. ಆದರೂ ನನ್ನೊಳಗಿನ ತಪ್ಪಿತಸ್ಥ ಭಾವನೆ ಕಡಿಮೆಯಾಗಬೇಕೆಂದರೆ ನೀವು ನನ್ನ ಕ್ಷಮಿಸಲೇಬೇಕು " ಹರ್ಷ ಹಾಗೂ ಅವನ ತಂದೆ ತಾಯಿಗೆ ಕ್ಷಮೆ ಯಾಚಿಸಿದ್ದರು ರಘುನಂದನ್.

" ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು.. ನಿಮ್ಮ ಮಗಳ ಪ್ರಯತ್ನದಿಂದ ನಾವು ಮತ್ತೆ ನಮ್ಮ ಮಗನನ್ನು ನೋಡುವಂತಾಯಿತು.  ಹಾಗೆ ನೋಡಿದರೆ ನಾವೇ ನಿಮ್ಮ ಮಗಳಿಗೆ ಕೃತಜ್ಞತೆ ತಿಳಿಸಬೇಕು. " ವಿನಾಯಕ್ ಉತ್ತರಿಸಿದರು. 

"ಸರಿ ಮತ್ತೆ ನಿಮ್ಮ ಕ್ಷಮೆ ಅವರ ಕೃತಜ್ಞತೆ ಎರಡೂ ಸಮವಾಯ್ತಲ್ಲ ಇದನ್ನ ಇಲ್ಲಿಗೆ ನಿಲ್ಲಿಸಿ, ಬೇಗ ಬೇಗ ಮದುವೆ ಶಾಸ್ತ್ರ ಮಾಡಿ ಮುಗಿಸಿ." 
'ಹೊಟ್ಟೆ ತಾಳ ಹಾಕ್ತಿದೆ' ಅವಸರಿಸಿ ಗೊಣಗಿದ್ದ ಪ್ರಸನ್ನ. 

"ಆದರೆ ಅಂಕಲ್ ನೀವು ಮಾನ್ವಿಗಾಗಿ ಆಯ್ಕೆ ಮಾಡಿರುವ ಹುಡುಗ ಯಾರೆಂದು ಹೇಳಲೇ ಇಲ್ವಲ್ಲ" ಹರ್ಷ ಗೊತ್ತಿದ್ದು ಕೆಣಕಿದ.

"ಬೇರೆ ಯಾರೋ ಅಲ್ಲ, ಇವರೇ ಡಾ.ಪ್ರಸನ್ನ!" ತಮ್ಮ ಆಯ್ಕೆಯ ಮೇಲೆ ಅವರಿಗೆ ಹೆಮ್ಮೆಯಿತ್ತು. ಮಾನ್ವಿಗೆ ನುಂಗಲಾರದ ಶಾಕ್ ತಗುಲಿತ್ತು.

"ಹಿ ಇಸ್ ಪರ್ಫೆಕ್ಟ್ ಫಾರ್ ಯು ಪ್ರಿನ್ಸೆಸ್! ಈ ಹಿಂದೆ ನಿನ್ನ ರೆಸ್ಟಿಗೆಟ್ ಮಾಡಿದಾಗಲೇ ಅವನ ಬಗ್ಗೆ ವಿಚಾರಿಸಿದ್ದೆ. ಯಾವ ಕಪ್ಪು ಚುಕ್ಕೆ ಇಲ್ಲದೆ ತನ್ನ ಸ್ವಂತ ಆಯ್ಕೆ ಆಸಕ್ತಿ ಪರಿಶ್ರಮದಿಂದ ಓದಿ ಈ ಮಟ್ಟದ ಸಾಧನೆ ಮಾಡಿದ್ದಲ್ಲದೆ, ಬೆಳೆಸಿದ ಆಶ್ರಮಕ್ಕೆ ಇನ್ನೂ ಬೆನ್ನೆಲುಬಾಗಿ ನಿಂತಿದ್ದಾರೆ.. ಎಷ್ಟೋ ಜನ ಕಷ್ಟದಲ್ಲಿ ಇರುವವರಿಗೆ ಆಸರೆಯಾಗಿದ್ದಾನೆ. ನೀನು ಮಾಡಿದ ತಪ್ಪನ್ನು ಸಮರ್ಥಿಸದೆ ಖಂಡಿಸಿ ನಿನ್ನ ರೆಸ್ಟಿಗೇಟ್ ಮಾಡಿದ್ದಲ್ಲದೆ ಆ ಮಗುವಿನ ಸಂಪೂರ್ಣ ಜವಾಬ್ದಾರಿ ಸಹ ಹೊತ್ತುಕೊಂಡು ನಿರ್ವಹಿಸಿದ್ದರು. ಆಗಲೇ ಅವರ ವ್ಯಕ್ತಿತ್ವ, ವೃತ್ತಿ ಶ್ರದ್ಧೆಯ ಮೇಲೆ ಅಭಿಮಾನ ಮೂಡಿದ್ದು. ಎಲ್ಲೋ ಒಂದು ಕಡೆ ನಿನಗೆ ಸರಿತಪ್ಪು ತಿದ್ದಿ ಬುದ್ದಿ ಹೇಳುವಲ್ಲಿ ನಾನು ಎಡವಿದ್ದು ಅನ್ನಿಸಿದ್ದು ಆಗಲೇ!!!
ಈಗ ಅವರಿಗೆ ನಿನ್ನ ಜವಾಬ್ದಾರಿ ವಹಿಸಬೇಕು ಎಂದು ಸ್ಪಷ್ಟ ನಿರ್ಧಾರ ಮಾಡಿದ್ದೇನೆ. ನಿನಗೆ ಒಪ್ಪಿಗೆ ತಾನೇ?" ಕೇಳಿದರು‌. ಇದನ್ನು ಕೇಳಿದ್ದೆ ಪ್ರಸನ್ನನ ಹಸಿವೇ ಇಂಗಿಹೋಯಿತು. ಮಾನ್ವಿಯ ಮಿದುಳು ನಿಷ್ಕ್ರಿಯವಾಯಿತು‌.

 "ಆಲಾಪ್ ಮತ್ತೆ ಹರ್ಷ, ಮಾನ್ವಿಗಾಗಿ ಇವರ ಹೆಸರನ್ನು ಪ್ರಸ್ತಾಪ ಮಾಡಿದಾಗ ನಾನು ತುಂಬಾ ಯೋಚನೆ ಮಾಡಿ ಈ ನಿರ್ಧಾರವನ್ನು ತೆಗೆದುಕೊಂಡೆ. ನನಗೆ ನಂಬಿಕೆಯಿದೆ ನೀವು ನನ್ನ ಪ್ರಿನ್ಸೆಸ್‌ನ್ನು ನನಗಿಂತ ಚೆನ್ನಾಗಿ ನೋಡಿಕೊಳ್ಳಬಲ್ಲಿರೆಂದು... ನಿಮಗೆ ಈ ಮದುವೆ ಒಪ್ಪಿಗೆ.."  

"ಖಂಡಿತ ಒಪ್ಪಿಗೆ ಇದೆ. ನೀವು ಚಿಂತೆ ಬಿಡಿ" ಪ್ರಸನ್ನನಿಗೂ ಮುಂಚಿತವಾಗಿ ಹರ್ಷ ಛೇಡಿಸಿ ಮಾತು ಕಸಿದಿದ್ದ.

ಪ್ರಸನ್ನ ಮಾನ್ವಿ ಕೆಂಡಾಮಂಡಲವಾಗಿ ಹರ್ಷ ಮತ್ತು ಆಲಾಪ್ ಮುಖವನ್ನೊಮ್ಮೆ ದಿಟ್ಟಿಸಿದರು. ಮಾನ್ವಿಗೆ ನಿರಾಕರಣೆಗೆ ಅವಕಾಶವೇ ಇರಲಿಲ್ಲ. ಆದರೆ ಅವಳಿಗೆ ನಂಬಿಕೆಯಿತ್ತು ಈ ಹಿಟ್ಲರ್ ಯಾವುದೇ ಕಾರಣಕ್ಕೂ ತನ್ನೊಂದಿಗೆ ವಿವಾಹವಾಗುವದಿಲ್ಲವೆಂದು! ಆದರೆ ದುರಾದೃಷ್ಟವಶಾತ್ ಆತ ಮದುವೆಗೆ ಒಪ್ಪಲೇಬೇಕಾಯಿತು.

ಪ್ರಸನ್ನನ ಘೋರ ಕಠೋರ ಸಹಸ್ರ ನಿರಾಕರಣೆಗಳನ್ನು ಧಿಕ್ಕರಿಸಿದ ಸುಲೋಚನಾರವರು ಅವನಿಗೆ ಕಟುವಾಗಿ ಆಜ್ಞಾಪಿಸಿ ಹೋಗಿದ್ದರು..

"ನೀನು ನಿಜವಾಗಿಯೂ ಮನಸ್ಪೂರ್ವಕವಾಗಿ ನನ್ನನ್ನು ನಿನ್ನ ತಾಯಿಯೆಂದೇ ಭಾವಿಸಿದ್ದರೇ ಕೂಡಲೇ ಸಿದ್ದವಾಗಿ ಕೆಳಗೆ ಬಾ.. ಇಲ್ಲ, ನಿನಗೆ ನಿನ್ನ ಹಟ, ನಿನ್ನ ಆದರ್ಶಗಳೇ ಮುಖ್ಯವಾದರೇ ಇನ್ನೆಂದೂ ನನ್ನನ್ನು ಅಮ್ಮಾ ಎಂದು ಕರೆಯಬೇಡ" 

ಅಪರೂಪಕ್ಕೆ ಸಿಕ್ಕ ತಾಯಿ ಪ್ರೀತಿಯನ್ನು ಕಳೆದುಕೊಳ್ಳಲಾಗದೆ, ಸನ್ಯಾಸತ್ವ ಸ್ವೀಕರಿಸಬೇಕಾಗಿದ್ದ ಶ್ರೀ ಶ್ರೀ ಪ್ರಸನ್ನಾನಂದರು ತಮ್ಮ ಸರ್ವ ಸ್ವತಂತ್ರ ಬ್ರಹ್ಮಚಾರಿ ಜೀವನಕ್ಕೆ ತಿಲಾಂಜಲಿ ಬಿಟ್ಟು ಮನಸ್ಸು ಕಲ್ಲು ಮಾಡಿಕೊಂಡು, ಸಂಸಾರಿಯಾಗಲೇಬೇಕೆಂಬ ತೀರ್ಮಾನಕ್ಕೆ ಬದ್ದರಾಗಿ ಸಿದ್ದರಾಗಿ ಕೆಳಗೆ ಬಂದರು.


                               **********

ಮಂಗಳವಾದ್ಯ ಮಂತ್ರಘೋಷಗಳು ಅಕ್ಷತೆಯ ಸುರಿಮಳೆಯ ಮಧ್ಯೆ ಎರಡು ಜೋಡಿಗಳು ನವ ದಾಂಪತ್ಯದ ಬದುಕಿಗೆ ಕಾಲಿಡುವ ಶುಭಘಳಿಗೆ‌...

 ಬಾಲ್ಯದ ಸ್ನೇಹ ಹರೆಯದ ಪ್ರೀತಿಯಾಗಿ, ದಾರಿಯ ಕಲ್ಲು ಮುಳ್ಳುಗಳ ಹಾದಿ ತುಳಿದು, ಬದುಕಿನ ಮುಖ್ಯ ಘಟ್ಟದಲ್ಲಿ ಹೆಜ್ಜೆ ಇಡುತ್ತಾ ಜನ್ಮ ಜನ್ಮಗಳ ಭಾವಬಂದನದೊಳಗೆ ಸಿಲುಕಿತು.  ಜೋಡಿ ಕಂಗಳಲಿ ಹರ್ಷದ ಹನಿಗಳು ಸಿಂಚನವಾಗಿ ಪಿಸುಗುಟ್ಟಿದವು. ಮೌನವಾಗೇ ಕೆಲವು  ವಾಗ್ದಾನಗಳು ವಿನಿಮಯವಾದವು. 

ವಿನಾಯಕ್ ಮತ್ತು ಸುಲೋಚನ ದಂಪತಿಗಳ ಸಂಭ್ರಮದ ತೀರ ಮೀರಿದ ಕಡಲಾಗಿತ್ತು. ಆ ಘಳಿಗೆ ಮನೆಯಲ್ಲಿದ್ದ ಅಶ್ವತ್ಥರು, ಮಗಳು ಹರಿಣಿಯ ನೆನಪು ಕಾಡದೇ ಇರಲಿಲ್ಲ.

ಪರಿ ಹೇಳಿದ್ದ ಕಥೆಯ ರಾಜಕುಮಾರನಿಗೆ ನೆನಪು ಮರಳಿ ತನ್ನ ಏಂಜಲ್ ಮತ್ತೆ ದೊರಕಿ ಇಬ್ಬರೂ ಒಂದಾಗಿದ್ದರು. ಆ ಕಥೆಯಲ್ಲಿ ತಮ್ಮದೇ ಅಳಿಲುಸೇವೆ ಸಲ್ಲಿಸಿದ್ದ ಪುಟಾಣಿ ಕಿಲ್ಲರ್ಸ್‌ಗಳ ಸಂತೋಷಕ್ಕೂ ಎಣೆಯಿರಲಿಲ್ಲ. ಜಿಗಿಜಿಗಿದು ಅಕ್ಷತೆಯನ್ನು ತಲೆಗೆ ಎರಚಿದ್ದರು.

"ಪತ್ರ ಬರೆದು ತಲೆ ಕೆಡಿಸಿದ್ದ ಭಾವಿ ಅರ್ಧಾಂಗಿ ಈಗ ಸಂಪೂರ್ಣ ಭಾರ್ಯೆಯಾಗಿದ್ದಾಯ್ತು. ಇನ್ನು ಏಳಲ್ಲ ನೂರು ಜನ್ಮವೆತ್ತಿ ಬಂದರೂ ನೀನು ನನ್ನವಳು, ನಾನು ನಿನ್ನವನೇ! ನೀ ಬಯಸಿದ ಹಾಗೆ ನನಗೆ ಗತದ ಬಗ್ಗೆ ಪೂರ್ಣ ನೆನಪುಗಳಿನ್ನೂ ಮರಳಿಲ್ಲ ನಿಜ. ಆದರೆ ಮನದಲ್ಲಿ ನಿನ್ನ ಪ್ರೀತಿ ಹರಿಯುವ ರಭಸ ಮಾತ್ರ ಯತಾರ್ಥವಾಗಿ, ಇನ್ನೂ ತೀವ್ರ ಗತಿಯಲ್ಲಿದೆ ಗೊತ್ತಾ.. ಬೇಕಾದರೆ ಕೇಳಿ ನೋಡು ನನ್ನ ಎದೆಬಡಿತ.." ಅವಳ ಕೈ ತನ್ನೆದೆಗಾನಿಸಿಕೊಂಡ. ಆಕೆ ಗಮನವಿಟ್ಟು ಆಲಿಸತೊಡಗಿದಳು. ಎಂದಿನಂತೆ ಆತ ನಕ್ಕುಬಿಟ್ಟ. ಕೋಟಿ ಕಿರಣಗಳು ಒಮ್ಮೆ ಭೂವಿಯೊಡಲ ಸ್ಪರ್ಶಿಸಿದಂತೆ‌. ತಾವರೆಯೊಂದು ಅರಳಿ ನಗುವಂತೆ... ಅವಳ ಮನಸ್ಸಿನಲ್ಲಿ ಸಾವಿರ ಕನಸುಗಳು ನನಸಾದ ಉತ್ಸವ..

"ತಲೆ ಕೆಡಿಸಿದ್ದಲ್ಲ, ಕೆಟ್ಟಿರೋ ತಲೆನಾ ಸರಿ ಮಾಡಿದೆ. ಆಗೆಲ್ಲ ಗುಮ್ಮಂತಿದ್ದೆ. ಈಗ ಪರವಾಗಿಲ್ಲ ನಗೊದನ್ನಾದರೂ ಕಲಿತಿದ್ದೀಯಾ!" ಹುಬ್ಬು ಕುಣಿಸಿದ್ದಳು.

"ಅದೂ ನಿಜ. ಎಷ್ಟೆಂದರೂ ಡಾಕ್ಟರ್ ತಾನೇ. ನಿಮ್ಮ ಅಸಿಸ್ಟೆಂಟ್ ಗಳ ಶ್ರಮನೂ ತುಂಬಾ ಇದೆ" ಅಖಿಲಾಳೆಡೆ ನೋಡಿ ನಸುನಕ್ಕ. ಮುಗ್ದ ನಗುವಿನ ಮಗು ಮತ್ತೆ ಹೃದಯ ಗೆದ್ದಿತು.

                     ------------

ಇನ್ನೊಂದೆಡೆ ನಾಲ್ಕಾಣೆಯೂ ಮ್ಯಾಚಾಗದ ಯಡವಟ್ಟು ಬದ್ದ ವೈರಿಗಳು, ಜೀವನಪರ್ಯಂತ ಜೊತೆಯಾಗಿ (ಕಿತ್ತಾಡಿಕೊಂಡೇ) ಬಾಳುವ ಪ್ರಮಾಣದೊಂದಿಗೆ ಸಪ್ತಪದಿ ತುಳಿದಿದ್ದರು‌.

ತಾಳಿ ಕಟ್ಟುವ ವೇಳೆ ಮಾನ್ವಿ ದುರುದುರು ನೋಡುತ್ತ ಮೂಗು ಹಿಗ್ಗಿಸಿದರೆ, ಪ್ರಸನ್ನ ಕಳ್ಳ ಬೆಕ್ಕಿನಂತೆ ನೋಟ ಹೊರಳಿಸಿ ಅವಸರವಾಗಿ  ಮೂರು ಗಂಟು ಬಿಗಿದು ಗಪ್ಪನೇ ಕುಳಿತು ಬಿಟ್ಟಿದ್ದ. 

ಕಣ್ಣು ಬಾಯಿ ಬಿಟ್ಟುಕೊಂಡೇ ನೋಡುತ್ತಿದ್ದ ಮಾನ್ವಿಗೆ ಕನಸಿನಲ್ಲಿರುವಂತಹ ಭ್ರಮೆ! ಪಕ್ಕದಲ್ಲಿದ್ದವನ ಕೈ ಚಿವುಟಿಯೇ ಬಿಟ್ಟಳು. ಸಣ್ಣಗೆ ಕಿರುಚಿ ಕೈ ಉಜ್ಜಿಕೊಂಡವ 
"ಇದು ಕೂಡ ಶಾಸ್ತ್ರನಾ? ಆ ಪಂಡಿತ ಹೇಳಲೇ ಇಲ್ಲ?" ಕೆಣಕಿದ

"ಶಾಸ್ತ್ರ ಇಲ್ಲ ಮಣ್ಣು ಇಲ್ಲ ‌.. ನೀ ಹೇಗೆ ಒಪ್ಪಿದೆ ಈ ಮದುವೆಗೆ?

"ಓ,, ಅದಾ.. ನಮ್ಮ ಮಾವಾ ತಮ್ಮ ಎಲ್ಲಾ ಆಸ್ತಿನೂ ನನಗೆ ಬರಿತೇನೆ ಅಂದ್ರು. ಪಿಶಾಚಿ ಜೊತೆಗೆ ಲಕ್ಷ್ಮೀನೂ ಬರ್ತಾಳಲ್ವಾ ಅಂತ.." ಮಾತಿಗೂ ಮುನ್ನ ಮತ್ತೊಮ್ಮೆ 'ಅಮ್ಮಾ' ಎಂದು ಜೋರಾಗಿ ಕಿರುಚಿದ್ದ‌. ಈ ಬಾರಿ ಮೊದಲಿಗಿಂತ ಜೋರಾಗಿಯೇ ಚಿವುಟಿದ್ದಳೇನೋ ಪಾಪ..!

                   ---------------

"ಮಾನ್ವಿಗೆ ಕೋಪ ಬಂದ್ರೆ ಚರ್ಮ ಕಿತ್ತುವ ಹಾಗೆ ಚಿವುಟ್ತಾಳೆ. ಡಾಕ್ಟರ್ ಕಥೆ ಇನ್ನೂ ಗೋವಿಂದ.. ಗೋ..ವಿಂದ" ಸಂಜೀವಿನಿ ಗುಟ್ಟಾಗಿ ಹೇಳಿ ನಕ್ಕಳು.

"ಇಂಟರ್ನ್ಶಿಪ್ ಟೈಮಲ್ಲಿ ಡಾ.ಪ್ರಸನ್ನ ಅವಳಿಗೆ ಕೊಟ್ಟ ಎಲ್ಲಾ ಟಾರ್ಚರ್‌‌ಗೂ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶ!" ಆಲಾಪ್ ಕೂಡ ನಕ್ಕ.
 

ಇದಾವುದು ಅರಿಯದ ರೈ ದಂಪತಿಗಳು ಹಾಗೂ ಭಾರ್ಗವ್ ದಂಪತಿಗಳು ಮಕ್ಕಳಿಗೆ ಮನದುಂಬಿ ಆಶೀರ್ವದಿಸಿದರು. ತುಂಬಿದ ಕಂಗಳಲ್ಲಿ ಅರುಣಾ ಹರ್ಷನ ಒತ್ತಾಯಕ್ಕೆ ಮಣಿದು ಮದುವೆಯಲ್ಲಿ ಭಾಗಿಯಾಗಿದ್ದರು. ಮದುವೆ ಸಾಂಗೋಪವಾಗಿ ಜರುಗಿತ್ತು.
                       --------


ಮರುದಿನವೇ ಕೋರ್ಟಿನಲ್ಲಿ ದಾವೆ ಮುಂದುವರೆದಿತ್ತು. ಅಥ್ರೇಯನ ವಿರುದ್ಧದ ಎಲ್ಲಾ ಸಾಕ್ಷ್ಯಾಧಾರಗಳನ್ನು ಪ್ರಸ್ತುತಪಡಿಸಲಾಯಿತು. ರಾಥೋಡ್, ಡೇವಿಡ್, ಡಾ.ಪಟ್ಟಾಭಿರಾಂ ಸೇರಿದಂತೆ ಹಲವರ ಹೇಳಿಕೆಗಳು ಹಾಗೂ ರಘುನಂದನ್ ಹರ್ಷ, ಮಾನ್ವಿ ಇತರೆ ಪ್ರಮುಖರ ಸಾಕ್ಷಿಯೊಂದಿಗೆ ಅಥ್ರೇಯ ಮತ್ತು ಅವನ ಅನುಚರರಿಗೆ ಕಾನೂನಿನ ಕ್ರಮ ಕೈಗೊಳ್ಳಲಾಯಿತು.


ಅಕ್ರಮ ಧಂದೆ, ಕಾನೂನು ಬಾಹಿರ ಚಟುವಟಿಕೆಗಳಿಂದಾಗಿ ಎಂ.ಆರ್ ಇಂಡಸ್ಟ್ರೀಸ್ ಹಾಗೂ ಎಂ.ಆರ್ ಹಾಸ್ಪಿಟಲ್ ಹೆಸರು ಮಾಧ್ಯಮಗಳಲ್ಲಿ ರಾರಾಜಿಸತೊಡಗಿತು‌. ಆದರೆ ಎಲ್ಲಾ ಅಪರಾಧಗಳಿಗೆ ಅಥ್ರೇಯ ನೇರ ಹೊಣೆಗಾರನಾಗಿದ್ದ ಕಾರಣ ರಘುನಂದನ್ ಹೆಸರಿಗೆ ಕಿಂಚಿತ್ತೂ ಕಳಂಕ ತಟ್ಟಲಿಲ್ಲ.

ಶಿಕ್ಷೆಗೆ ಸಿದ್ದವಾಗಿ ಪೋಲಿಸರ ಅತಿಥಿಯಾಗಿ ಹೊರಟಿದ್ದ ಅಥ್ರೇಯ ಐದು ನಿಮಿಷಗಳ ಪರವಾನಗಿ ಪಡೆದು ಹರ್ಷನೊಂದಿಗೆ ಮಾತಾಡಲು ಬಯಸಿದ್ದ.

ಎಷ್ಟೆಲ್ಲಾ ಬುದ್ದಿ ಖರ್ಚು ಮಾಡಿ ತನ್ನ ರೌಡಿಗಳು, ಸೆಕ್ಯುರಿಟಿ ವ್ಯವಸ್ಥೆ ಮಾಡಿ, ಪ್ರತಿಯೊಬ್ಬರನ್ನೂ ಹಿಡಿತದಲ್ಲಿ ಇಟ್ಟುಕೊಂಡಿದ್ದ ಅಥ್ರೇಯನಿಗೆ ಕೊನೆಯ ಕ್ಷಣದಲ್ಲಿ ಸೋಲು ಹೇಗಾಯಿತು ಎಂಬುದನ್ನು ತಿಳಿಯಬೇಕಿತ್ತು.

ಹರ್ಷ ಅವನ ಕೊನೆಯ ಕೋರಿಕೆಯನ್ನು ಈಡೇರಿಸಿದ ಕೂಡ..

ಅಥ್ರೇಯನ ಸೋಲಿಗೆ ಮುಖ್ಯ ಕಾರಣಳು ಪರಿ! ಆ ದಿನ ಆಸ್ಪತ್ರೆಯಲ್ಲಿ ಆಕೆ ಡೇವಿಡ್ ಕಣ್ಣು ತಪ್ಪಿಸಿ ಕರೆ ಮಾಡಿದ್ದು ವಿವೇಕ್‌ನಿಗೆ! ಅವನ ಮೂಲಕವೇ ಮೇಜರ್ ಅವರಿಗೆ ವಿಷಯವನ್ನು ತಲುಪಿಸಿದ್ದಳು ಕೂಡ..  ರಘುನಂದನ್ ಮೇಲಿದ್ದ ಅನುಮಾನ ಸುಳ್ಳು, ಎಂ‌.ಆರ್ ಇಂಡಸ್ಟ್ರೀಸ್ ಅವ್ಯವಹಾರಗಳ ಹಿಂದೆ ಅಥ್ರೇಯನ ಕೈವಾಡವಿದೆಯೆಂದು, ಸದ್ಯದ ಪರಿಸ್ಥಿತಿಯಲ್ಲಿ ತಾವೆಲ್ಲರೂ ಅವನ ಬಂಧಿಯಾದದ್ದನ್ನು ತಿಳಿಸಿದ್ದಳು. ವಿವೇಕ್ ವಿಷಯವನ್ನು ತಿಳಿಸುತ್ತಿದ್ದಂತೆ ಮೇಜರ್ ಇದಕ್ಕೆ ಪರಿಹಾರ ಹುಡುಕಲು ಸನ್ನದ್ದರಾಗಿದ್ದರು.

ಅದೇ ದಿನ ರಘುನಂದನ್ ಮದುವೆಯ ಉಸ್ತುವಾರಿಯನ್ನು ಆಲಾಪ್ ಗೆ  ವಹಿಸಿದ್ದು, ಮತ್ತು ಅವನು ಸಂಜೀವಿನಿಯನ್ನು ಕರೆತರಲು ಮೇಜರ್ ಮನೆಗೆ ಹೋಗಿದ್ದು..

ಅವತ್ತೇ ಆಲಾಪ್‌ನೊಂದಿಗೆ ವಿಷಯ ಚರ್ಚೆ ಮಾಡಿದ ಮೇಜರ್ ಮ್ಯಾರೇಜ್ ಮ್ಯಾನೆಜ್‌ಮೆಂಟ್‌ನವರ ವೇಷದಲ್ಲಿ ತಮ್ಮ ಕೆಲವು ಯುವ ಮಿಲಿಟರಿ ಸಿಬ್ಬಂದಿಗಳನ್ನು ನೇಮಿಸಿದ್ದರು. 

ಮದುವೆ ಓಡಾಟದ ನೆಪದಲ್ಲಿ ಅವರು ಅಥ್ರೇಯನ ಚಲನವಲನ ಸಂಪೂರ್ಣವಾದ ಮಾಹಿತಿಯನ್ನು ಸಂಗ್ರಹಿಸಲು ಆರಂಭಿಸಿದ್ದರು. ಮುಗುಮ್ಮಾಗಿ ಅದ್ವೈತನ ಸಾವಿನ ತನಿಖೆ ಕೂಡ ನಡೆದಿತ್ತು. 

ಅದೇ ಸಮಯಕ್ಕೆ ಹರ್ಷ ಡೇವಿಡ್ ‌ಮನಸ್ಸಲ್ಲಿ ಅಧಿಕಾರದ ಆಸೆ ಹುಟ್ಟಿಸಿ ಒಡೆಯ ಸೇವಕನ ನಡುವೆ ಬಿರುಕು ಮೂಡಿಸುವಲ್ಲಿ ಯಶಸ್ವಿಯಾಗಿದ್ದ. ಅವನ ಮಾತಿಗೆ ಜಾರಿದ ಡೇವಿಡ್ ತಾನೇ ತೋಡಿದ ಹಳ್ಳದಲ್ಲಿ ತಾನೇ ಹೋಗಿ ಬಿದ್ದಿದ್ದ. 

ಅದೇ ದಿನ ಮಾನ್ವಿಗೆ ಸ್ಟೋನಿಯ ಕೊರಳಲ್ಲಿ ಅದ್ವೈತ ಕಟ್ಟಿದ ಕ್ರಿಸ್ಟಲ್ ಬಾಲ್ ಒಳಗಿನ ಮೆಮೊರಿ ಕಾರ್ಡ್ ಸಿಕ್ಕಿದ್ದು. ಅದರಲ್ಲಿ ಅದ್ವೈತ ಸಂಗ್ರಹಿಸಿದ ಅಥ್ರೇಯನ ವಿರುದ್ಧದ ಕೆಲವು ಮುಖ್ಯವಾದ ಮಾಹಿತಿಗಳು, ಸಾಕ್ಷಿ ಪುರಾವೆಗಳು ದೊರೆತಿದ್ದವು‌. ಮತ್ತು ಕೆಲವು ಧ್ವನಿ ಮುದ್ರಣಗಳು ಲಭಿಸಿದ್ದವು. ಅಥ್ರೇಯನಿಗೆ ಅದ್ವೈತನ ಬಗ್ಗೆ ಗೊತ್ತಾಗಿದೆ ಎಂದು ಅದ್ವೈತನಿಗೂ ಗೊತ್ತಾಗಿತ್ತು. ತಾನಿನ್ನು ಬದುಕುವುದು ಸಂಶಯಾಸ್ಪದ ಎಂದು ತಿಳಿದೇ ಅದ್ವೈತ, ಎಲ್ಲಾ ವಿವರಗಳು ದೊರೆಯುವಂತೆ ಸ್ಟೋನಿಯನ್ನು ಆಧಾರ ಮಾಡಿಕೊಂಡಿದ್ದ. ಮಾನ್ವಿಗೆ ಆ ರಾತ್ರಿ ಗುಂಡು ತಗುಲಿದ ವಿಷಯ ತಿಳಿದ ನಂತರ ಎಲ್ಲಾ ವಿಷಯವನ್ನು ಪ್ರಸನ್ನನಿಗೆ ತಿಳಿಸಲು ಮುಂದಾಗಿದ್ದ. ಅವನ ಎಣಿಕೆಯಂತೆ ಅಥ್ರೇಯ ಅವನನ್ನು ಕೊಂದಿದ್ದ. ಆದರೆ ಸಾಕ್ಷಿ ನಾಶಪಡಿಸಲಾಗಲಿಲ್ಲ.


ಅಥ್ರೇಯನ ನಿಗ್ರಾಣಿ ಇದ್ದದ್ದು ಹರ್ಷ ಪರಿ ಮಾನ್ವಿ ಪ್ರಸನ್ನನ ಮೇಲೆ ಮಾತ್ರ! ಆಲಾಪ್ ಮೇಲಲ್ಲ! ಅದೇ ಅವರ ಪಾಲಿಗೆ ವರವಾಗಿದ್ದು. ಯೋಜನೆಗಳು ಮಾಹಿತಿಗಳು ರವಾನೆಯಾಗುತ್ತಿದ್ದದ್ದು ಅವನ ಮೂಲಕವೇ! ಆಲಾಪ್ ಫೋನ್ ಮುಖಾಂತರವೇ ಪ್ರಸನ್ನ ತನ್ನ ಶಿಷ್ಯ ರೋಹಿತನಿಗೆ ಯಾರ ಗಮನಕ್ಕೂ ಬಾರದಂತೆ ಆಶ್ರಮದ ಮಕ್ಕಳನ್ನು ಬೇರೆಡೆ ರವಾನಿಸಲು ತಿಳಿಸಿದ್ದ. 

ಅದಕ್ಕಾಗಿ ತಲೆ ಉಪಯೋಗಿಸಿದ ಶಿಷ್ಯೋತ್ತಮ, ಹುಷಾರಿಲ್ಲದ ನೆಪದಲ್ಲಿ ಆ್ಯಂಬುಲೆನ್ಸ್ ಕಳಿಸಿ ಆಗಾಗ ಒಂದಷ್ಟು ಮಕ್ಕಳನ್ನು ಅಲ್ಲಿಂದ ಸ್ಥಳಾಂತರಿಸಿ ಆಶ್ರಮ ಖಾಲಿ ಮಾಡಿಸಿದ್ದ. ಮಕ್ಕಳಿಗೆ ಹುಷಾರಿಲ್ಲದಾಗ ಬಂದು ಹೋಗುವ ಆ್ಯಂಬುಲೆನ್ಸ್ ಕಾವಲು ನಿಂತ ರೌಡಿಗಳಿಗೆ ಅನುಮಾನವನ್ನು ತರಿಸಲಿಲ್ಲ.

ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತಾದರೂ,
ಭಾರ್ಗವ್ ದಂಪತಿಗಳನ್ನು ಬಂಧನದಿಂದ ಬಿಡಿಸಿಕೊಳ್ಳಲು ಮತ್ತು ರಘುನಂದನ್ ಗೆ ಯಾವುದೇ ಅಪಾಯ ಆಗದಂತೆ ಎಚ್ಚರಿಕೆ ವಹಿಸಿ, ಅಥ್ರೇಯನನ್ನು ಬಂಧಿಸಲು ಮದುವೆ ಮಂಟಪದವರೆಗಿನ ನಾಟಕ ಅನಿವಾರ್ಯವಾಗಿತ್ತು. 

ಮದುವೆಯ ದಿನ ಎಣಿಕೆಯಂತೆ ಮಂಟಪದಲ್ಲಿ ಸೇನೆಯ ಕೆಲ ಯುವಕರು ಅತಿಥಿಯಾಗಿ, ಕೆಲವರು ಮ್ಯಾನೆಜ್‌ಮೆಂಟ್‌ ಕಡೆಯವರಾಗಿ ಉಪಸ್ಥಿತರಿದ್ದರು. 

ಡೇವಿಡ್ ಹರ್ಷನ ತಂದೆ ತಾಯಿಯರಿದ್ದ. ಸ್ಥಳಕ್ಕೆ ಹೋಗುತ್ತಿದ್ದಂತೆ ಅವನನ್ನು ಹಿಂಬಾಲಿಸಿದ ಪೋಲಿಸರು ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಇತ್ತ ಆಲಾಪ್ ರಘುನಂದನ್‌ರನ್ನು ಕ್ಯಾಟರಿನ್ ಕಡೆಗೆ ಕರೆದುಕೊಂಡು ಹೋದಾಗಲೇ ಅವರ ಪಿಎ ಕೈಯಿಂದ ಮೊಬೈಲ್ ಹಾಗೂ ಸೆಕ್ಯುರಿಟಿ ಹತ್ತಿರವಿದ್ದ ಗನ್ ಕಿತ್ತುಕೊಳ್ಳಲಾಗಿತ್ತು. ಹಾಗೂ ಎಲ್ಲರಿಗೂ ತೀಕ್ಷ್ಣ ಎಚ್ಚರಿಕೆಯನ್ನು ನೀಡಲಾಗಿತ್ತು. 

ಈ ರೀತಿಯಾಗಿ ಅಥ್ರೇಯ ಎಂಬ ನರರಾಕ್ಷಸನ ಅಟ್ಟಹಾಸ ಕೊನೆಯಾಯಿತು. ಹರ್ಷ ವಿವರಿಸಿದ್ದ.

ಎಲ್ಲವನ್ನೂ ಯೋಚಿಸಿದ ಅಥ್ರೇಯ ಪಶ್ಚಾತ್ತಾಪ ಪಟ್ಟ‌. ಮಾಡಿದ ತಪ್ಪುಗಳಿಗಲ್ಲ, ಅತಿ ಉತ್ಸಾಹದಲ್ಲಿ ನಿರ್ಲಕ್ಷಿಸಿದ ಕ್ಷಣಗಳಿಗೆ.. 

                   ---------

ಕೋರ್ಟ್ ಎದುರಿನಲ್ಲಿ ಮಾಧ್ಯಮದವರ ಹಾವಳಿ ಜೋರಾಗಿತ್ತು. ರಘುನಂದನ್ ಅಳಿಯನೆಂಬ ಹೊಸ ಖ್ಯಾತಿಯನ್ನು ಗಳಿಸಿದ್ದ ಪ್ರಸನ್ನನಿಗೆ ರಿಪೋರ್ಟ್‌ರ್ ಧಾನಿ ಗುಪ್ತ ಅಭಿನಂದನೆ ತಿಳಿಸಿದ್ದಳು. ಮದುವೆಯ ಕುರಿತು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕೇಳಿದಳು. 

ಪಕ್ಕದಲ್ಲಿರುವ ಮಾನ್ವಿಯ ಮುಖವನ್ನೊಮ್ಮೆ ದಿಟ್ಟಿಸಿದ ಪ್ರಸನ್ನ..
"ಇವಳೊಂದಿಗೆ ಮದುವೆಯಾದದ್ದು ನನ್ನ ಸ್ವಯಂಕೃತ ಅಪರಾಧವೋ, ಯಾವುದೋ ಜನ್ಮದ ದುಶ್ಕರ್ಮದ ಫಲವೋ ಆಗಿರಬೇಕು.  I'm ready to pay for it. ಬಡ ಬ್ರಾಹ್ಮಣನಿಗೆ ಆನೆಯನ್ನು ದಾನ ಮಾಡಿದಂತೆ ತಮ್ಮ ಮಗಳನ್ನು ನನ್ನಂತಹ ಬಡಪಾಯಿಗೆ ಕನ್ಯಾದಾನ ಮಾಡಿದ್ದಾರೆ ರಘುನಂದನ್ ರೈ ಅವರು.. Maintenance ಹೇಗೋ ಏನೋ ಗೊತ್ತಿಲ್ಲ. ಇನ್ಮುಂದೆ ವಿಚಾರ ಮಾಡಬೇಕು" ಗಹನವಾಗಿ ತಲೆಯಾಡಿಸಿದ. ಮಾನ್ವಿಯ ಉಗುರು ತಾಕುವ ಮೊದಲೇ ಮಾರು ದೂರ ಸರಿದಿದ್ದ.

ಅವನ ಉತ್ತರ ಕೇಳಿ ಪರಿ, ಸಂಜೀವಿನಿ ತಲೆ ಚಚ್ಚಿಕೊಂಡರೆ, ಆಲಾಪ್ ಬಿದ್ದು ಬಿದ್ದು ನಕ್ಕಿದ್ದ.
           

ಮುಂದುವರೆಯುವುದು...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತನ್ನ

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow