ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-53




ಕೋರ್ಟ್ ತೀರ್ಮಾನದ ಪ್ರಕಾರ ಅಥ್ರೇಯ, ಅವನ ಅನುಚರರು, ಹಾಗೂ ದೇಶದ್ರೋಹಿ ಕಾರ್ಯದಲ್ಲಿ ಸಹಾಯ ಮಾಡಿದ್ದ ಇನ್ನಿತರರು  ಜೀವಾವಧಿ ಶಿಕ್ಷೆಗೊಳಗಾದರು.

 ಆಪ್ತಮಿತ್ರನಿಂದಾದ ಮೋಸಕ್ಕೆ ರಘುನಂದನ್ ರೈ ಹೆಸರಿಗೆ ಕಳಂಕದ ಕಲೆಯೊಂದು ಉಳಿದು ಹೋಯಿತು. ಮೀಡಿಯಾದಲ್ಲಿ ಸುದ್ದಿ ಪುಂಖಾನುಪುಂಖವಾಗಿ ಘ್ರಾಸವಾಗತೊಡಗಿತು. ಇದರಿಂದಾಗಿ ವ್ಯವಹಾರದ ಮೇಲೆ ಕೂಡ ದುಷ್ಪರಿಣಾಮ ಬೀರತೊಡಗಿತು. ಅವರ ಆರೋಗ್ಯದ ಸ್ಥಿತಿಯಲ್ಲಿ ಸಹ ಏರುಪೇರುಗಳು ಕಾಣತೊಡಗಿದವು. 

ತಂದೆಗಾದ ಆಘಾತ ಪ್ರಸಕ್ತ ವಿದ್ಯಮಾನಗಳಿಂದ ಅವರು ಅನುಭವಿಸುತ್ತಿರುವ ಮಾನಸಿಕ ಒತ್ತಡವನ್ನು ಗಮನಿಸಿದ ಮಾನ್ವಿ, ವ್ಯವಹಾರವನ್ನು ಸ್ಥಗಿತಗೊಳಿಸಿ, ಕೆಲವು ಕಾಲ ವಿದೇಶಕ್ಕೆ ತೆರಳಿ ಅವರನ್ನು ಅಲ್ಲಿಯೇ ಇರಲು ಒತ್ತಾಯ ಮಾಡಿದಳು. 

ಮಗಳ ಮಾತಿಗೆ ಒಮ್ಮತ ಸೂಚಿಸಿದ ರಘುನಂದನ್ ಅದಕ್ಕೆ ಬದಲಾಗಿ ಮಗಳನ್ನು ಒಬ್ಬ ಸುಸಂಸ್ಕೃತ ಗೃಹಿಣಿಯಾಗಿ ಕಾಣುವ ತಮ್ಮ ಆಸೆಯನ್ನು ತಿಳಿಸಿದರು. ತನ್ನ ಆಜನ್ಮ ಶತೃವಿನೊಂದಿಗೆ ಮುಂದಿನ ಬದುಕನ್ನು ಊಹಿಸಲು ಸಾಧ್ಯವಾಗದಿದ್ದರೂ ತನ್ನ ತಂದೆಯ ನೆಮ್ಮದಿಗಾಗಿ ಸುಮ್ಮನೆ ತಲೆದೂಗಿದಳಾಕೆ.

   

 ಬೆಂಗಳೂರಿಗೆ ಹೊರಟವರನ್ನು  ಬೀಳ್ಕೊಡಲು ಏರ್ಪೋರ್ಟ್ ಗೆ ಬಂದಿದ್ದರು  ರಘುನಂದನ್ ಹಾಗೂ ಮಾನಸ. ಆಲಾಪ್ ಸಂಜೀವಿನಿ, ವಿನಾಯಕ್ ಸುಲೋಚನರನ್ನು ಹೊರತುಪಡಿಸಿ ಹಿಂದಿನ ಕಾರಿನಲ್ಲಿ ಬರುತ್ತಿದ್ದ ಹರ್ಷ ಪರಿ ಮಾನ್ವಿ ಮತ್ತು ಪ್ರಸನ್ನ ಇನ್ನೂ  ಏರ್ಪೋರ್ಟ್ ಗೆ ತಲುಪಿರಲಿಲ್ಲ.

"ಆಲಾಪ್, ಎಲ್ಲಿ ಇವರೆಲ್ಲ? ಇನ್ನೂ ಬರಲಿಲ್ಲವಲ್ಲ ?" ಆತಂಕದಿಂದ ಕೇಳಿದರು ವಿನಾಯಕ್.

"ಕಾಲ್ ಮಾಡಿದ್ದೆ ಅಂಕಲ್, ಮಧ್ಯದಲ್ಲೇನೋ ಕೆಲಸ ಇದೆಯಂತೆ. ಅದಕ್ಕೆ ಇಳಿದಿದ್ದಾರೆ. ಇನ್ನೇನು ಬರಬಹುದು. " 

"ಮಿ.ವಿನಾಯಕ್, ಡೋಂಟ್ ವರಿ. ಇನ್ನೂ ಟೈಮಿದೆ. ಬರ್ತಾರೆ ಬಿಡಿ" ರಘುನಂದನ್ ಅವರೊಂದಿಗೆ ಮಾತಿಗಿಳಿದಿದ್ದರು.


"ಎಲ್ಲರೂ ಒಟ್ಟಿಗೆ ಮನೆಯಿಂದ ಹೊರಟಿದ್ದು. ಈಗ ದಾರಿ ಮಧ್ಯ ಅಂತಹ ಮುಖ್ಯವಾದ ಕೆಲಸ ಏನಿತ್ತು ಇವರಿಗೆ?" ಆತಂಕಗೊಂಡರು ಸುಲೋಚನ.



                                               ************




"ಒಂದೇ ಭೇಟಿಗೆ ನಮಗೆ ಎಷ್ಟು ಹತ್ತಿರದವನು ಅನ್ನಿಸಿಬಿಟ್ಟ. ಅವನ ಸಾವನ್ನು ನೆನೆಸಿಕೊಂಡರೆ ತುಂಬಾ ದುಃಖವಾಗುತ್ತೆ " ಪರಿ ಖೇದದಿಂದ ನುಡಿದಳು. ಅದ್ವೈತನನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆಗೆ ಹರ್ಷ ಪ್ರಸನ್ನ ಸಂತಾಪ ವ್ಯಕ್ತಪಡಿಸಿದರು.

"ಇದೇ ಜಾಗದಲ್ಲಿ ಅದ್ವೈತ್ ಅಸುನೀಗಿದ್ದು. " ಪ್ರಸನ್ನ ರಸ್ತೆಯ ಪಕ್ಕ ಕೈ ಮಾಡಿ ಮಾನ್ವಿಗೆ ತೋರಿಸಿದ.

ಮಂಡಿಯೂರಿ ಕುಳಿತ ಮಾನ್ವಿ ತಾನು ತಂದಿದ್ದ ಹೂವಿನ ಗುಚ್ಛವನ್ನು ನಿಧಾನವಾಗಿ ಅಲ್ಲಿಟ್ಟಳು. ಕಣ್ಣು ತೇವಗೊಂಡಿದ್ದವು‌. ಮನಸ್ಸು ಆರ್ದ್ರತೆಯಿಂದ ತುಂಬಿತ್ತು. ಹೀಗೆ ಬಂದು ಹಾಗೆ ಹೊರಟು ಹೋದ ಗೆಳೆಯ, ತನ್ನ ನೆನಪಿಗಾಗಿ ಆಕೆಗೆ ಮಾಸದ ಸಂತೋಷವನ್ನು ಉಡುಗೊರೆ ನೀಡಿ ಹೋಗಿದ್ದ. ಆಕೆ ಎಂದೂ ಆತನನ್ನು ಪ್ರೀತಿಸಲಿಲ್ಲ ನಿಜ. ಆದರೆ ಅವನ ಪ್ರೀತಿಯನ್ನು ಅಪಾರವಾಗಿ ಗೌರವಿಸಿದ್ದಳು. ಅದೀಗ ಇಮ್ಮಡಿಯಾಗಿತ್ತು. ಅವನ ಪ್ರೀತಿಸುವ ರೀತಿಯೇ ಹಾಗಿತ್ತು. ಬೆನ್ನಟ್ಟಿ ಕಾಡಲಿಲ್ಲ, ಬೇಡಲಿಲ್ಲ, ಪೀಡಿಸಿ ಹಠಕ್ಕೆ ಬೀಳಲಿಲ್ಲ. ಪ್ರೀತಿಯ ನಿರೀಕ್ಷೆಯಲ್ಲಿಯೇ ದಿನಗಳೆದಿದ್ದ. ಯಾವ ಅಪೇಕ್ಷೆ ಇಲ್ಲದೆ ಅವಳ ಸಹಾಯಕ್ಕೆ ನಿಂತಿದ್ದ‌.  ಕೊನೆಗೆ ಜೀವ ಜೀವನವನ್ನು ಲೆಕ್ಕಿಸದೇ ಅವಳಿಗೆ ಬಳುವಳಿಯಾಗಿ ನೀಡಿ ಹೋಗಿದ್ದ.

ಅವನ ತ್ಯಾಗಕ್ಕೆ ಪ್ರತಿಯಾಗಿ ಹೂವನ್ನು ಅರ್ಪಿಸಿ ಒಂದು ಕೃತಜ್ಞತೆಯನ್ನು ಸಲ್ಲಿಸಲು ಏರ್ಪೋರ್ಟ್ ಹೋಗುವ ಮೊದಲು ಅಲ್ಲಿಗೆ ಬಂದಿದ್ದರು ಎಲ್ಲರೂ. ಯಾರ ಬಾಯಿಂದಲೂ ಒಂದು ಮಾತು ಹೊರಡದಿದ್ದರೂ ಭಾವನೆಗಳಲ್ಲಿ ಅವನ ತ್ಯಾಗ ಅಚ್ಚಳಿಯದೆ ಗುರುತು ಉಳಿಸಿ ಹೋಗಿತ್ತು.


                   **************


"ಫ್ಲೈಟ್ ರೆಡಿಯಾಗಿದೆ. ಹೊರಡೋದಾ? " ಏರ್ಪೋರ್ಟ್ ಬರುತ್ತಲೇ  ಅವಸರಿಸಿದ‌್ದ ಪ್ರಸನ್ನ.

ಮಾನ್ವಿ ತಂದೆ ತಾಯಿಯನ್ನ ಆಲಂಗಿಸಿ ಬೀಳ್ಕೊಡಲು ಸಿದ್ದವಾದಳು‌.  ಮುಗುಳ್ನಗು ತುಂಬಿದ ನೋಟ ನಿರಾಳತೆಯ ಪ್ರತೀಕವಾಗಿತ್ತು. ರಘುನಂದನ್ ತಮ್ಮ ಮಗಳ ಕೈಯನ್ನು ಪ್ರಸನ್ನನ ಕೈಯಲ್ಲಿಟ್ಟು
 "ನೀವು ಹೇಳಿದ ಪ್ರತಿಯೊಂದು ಕಂಡಿಷನ್ ನನಗೆ ಒಪ್ಪಿಗೆ ಇದೆ. ನನ್ನ ಮಗಳ ಸಂಪೂರ್ಣ ಜವಾಬ್ದಾರಿ ಈಗ ನಿಮ್ಮದು. ಜೋಪಾನ!!" 

"ಏನು ಕಂಡಿಷನ್? " ಪರಿ ಅಚ್ಚರಿಯಿಂದ ಕೇಳಿದರೆ, ಮಾನ್ವಿ ಪ್ರಸನ್ನನ ಮುಖವನ್ನೇ ದುರುಗುಟ್ಟಿದಳು.

"ಮಾನು, ಇನ್ಮುಂದೆ ನೀನು ನಮ್ಮಿಂದ ಯಾವುದೇ ಅಪೇಕ್ಷೆ ಇಟ್ಟುಕೊಳ್ಳಬಾರದಂತೆ. ನಿನ್ನ ಎಲ್ಲಾ ಜವಾಬ್ದಾರಿ ಈ ನಿನ್ನ ಗಂಡನದ್ದಂತೆ‌. ಅವರ ಆಸ್ಪತ್ರೆಯಲ್ಲೇ ಕೆಲಸ ಕಂಟಿನ್ಯೂ ಮಾಡ್ಬೇಕಂತೆ. ನೀನು ಬೆಂಗಳೂರಿನಲ್ಲಿ ಅವರ ಜೊತೆಗೇ ಇರಬೇಕಂತೆ. ನಿಮ್ಮಿಬ್ಬರ ಸಂಬಳದಲ್ಲೇ ಬದುಕಬೇಕಂತೆ.  ನಮ್ಮಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳುವ ಹಾಗಿಲ್ಲವಂತೆ. ಇಷ್ಟೆಲ್ಲಾ ಕಂಡಿಷನ್ ಹಾಕಿದ್ದಾನೆ ಈ ನಿನ್ನ ಡಾಕ್ಟರ್ ಹಸ್ಬಂಡ್. " ಮಾನ್ವಿ ತಾಯಿ ಅಸಮಾಧಾನದಿಂದ ಕಿಡಿಕಾರಿದರು. 

" ಮಾನಸಾ, ಕಾಮ್ ಡೌನ್. ಅವರು ಹೇಳಿದ್ದರಲ್ಲಿ ತಪ್ಪೇನಿದೆ. ಮಕ್ಕಳಿಗೆ ಸ್ವಾಭಿಮಾನದಿಂದ ಬದುಕಲು ಕಲಿಸಬೇಕಾದ್ದು ತಂದೆ ತಾಯಿ ಕರ್ತವ್ಯ. ಆದರೆ ನಾನು ನನ್ನ ಮಗಳಿಗೆ ಹಾಗೆ ಬದುಕಲು ಅವಕಾಶವೇ ಕೊಡಲಿಲ್ಲ. ಹೀಗಾಗಿ ಅವಳಿಗೆ ದುಡ್ಡಿನ ಬೆಲೆಯೇ ಗೊತ್ತಿಲ್ಲ. ಈಗ ಪ್ರಸನ್ನ ಅವರ ಕೈಯಲ್ಲಿ ಸರಿಹೋಗ್ತಾಳೆ ಬಿಡು. " ಅಳಿಯನ ಪರ ವಹಿಸಿಕೊಂಡು ಬಿಟ್ಟರು ರಘುನಂದನ್. ಪ್ರಸನ್ನನ ತಲೆಗೆ ಕೊಂಬು ಬಂದಂತಾದರೆ, ಮಾನ್ವಿ ಮೈಯಲ್ಲ ಉರಿಉರಿ.


"Still, ನಿನಗೆ ಏನೇ ತೊಂದರೆ ಆದರೂ ನನಗೆ ಒಂದು ಕಾಲ್ ಮಾಡು ಪುಟ್ಟ. I'll handle the matter" ಮಾನಸಾ ಮಗಳಿಗೆ ಧೈರ್ಯ ನೀಡಿದರು. ಅತ್ತೆ ತುಂಬಾ ಘಟವಾಣಿ ಎನಿಸಿತು ಪ್ರಸನ್ನನಿಗೆ. ಎದುರಾಡಲಿಲ್ಲ.

"ಅದರ ಅವಶ್ಯಕತೆ ಬರಲ್ಲ ಬಿಡಿ. ಯಾಕಂದ್ರೆ ಅವಳ ಜೊತೆಗೆ ನಾವಿದ್ದೇವಲ್ಲ.'' ಪರಿ ಪರಿಸ್ಥಿತಿಯನ್ನು ಸಂಭಾಳಿಸಿದಳು.


" ಹರ್ಷ, ನಾನು ಹೇಳಿದ ಬಿಜಿನೆಸ್ ಪ್ರಪೋಸಲ್ ಬಗ್ಗೆ... " ರಘುನಂದನ್ ಕೇಳಿದರು.

"ನಾನು ಯೋಚನೆ ಮಾಡಿ ನಿರ್ಧಾರ ತಿಳಿಸ್ತೇನೆ ಅಂಕಲ್. ಸದ್ಯಕ್ಕೆ ನೀವು ನಿಶ್ಚಿಂತವಾಗಿರಿ." 

 ಫ್ಲೈಟ್ ಹೊರಡಲು ಸಿದ್ದವಾಗಿ ಹೆಸರು ಕೂಡ ಅನೌನ್ಸ್ ಆಗತೊಡಗಿದವು.

ಮಾನ್ವಿ ತನ್ನ ಸ್ಟೋನಿಯನ್ನು ಕರೆದುಕೊಂಡು ಮುಂದಡಿ ಇಟ್ಟಾಗ ಪ್ರಸನ್ನ ಕೇಳಿದ "ಇದು ಕೂಡ ನಮ್ಮ ಜೊತೆಗೆ ಬರುತ್ತಾ?" 

"ನಿನಗೇನು ಸಮಸ್ಯೆ?" ವ್ಯಂಗ್ಯವಾಗಿ ಕೇಳಿದಳು

"ಸಮಸ್ಯೆ? ನನಗೆ? ಏನಿರೋಕೆ ಸಾಧ್ಯ? ಏನೂ ಇಲ್ವಲ್ಲ. " (ಆನೆ ಸಾಕಲು ಹೊರಟವನಿಗೆ ಅದರ ಬಾಲ ಭಾರವೇ!!) ಮನಸ್ಸಲ್ಲೇ ಗೊಣಗಿ  ತಲೆ ಕೊಡವಿದ.

                       ************

ಬೆಂಗಳೂರಿಗೆ ತಲುಪುತ್ತಲೇ ಹರ್ಷ ಮತ್ತು ಪರಿ ಎಲ್ಲ ಸ್ನೇಹಿತರನ್ನೂ ಮನೆಗೆ ಆಹ್ವಾನಿಸಿದ್ದರು‌. ಆಲಾಪ್, ಅವರ ತಂದೆ ತಾಯಿ ಮಂಗಳೂರಿನಲ್ಲಿ ಕಾಯುತ್ತಿದ್ದಾರೆ,ಕಾರು ಕೂಡ ಕಳಿಸಿದ್ದಾರೆಂದು ತಿಳಿಸಿ ಸಂಜೀವಿನಿ ಹಾಗೂ ಮಗು ಸಮೇತ ಅಲ್ಲಿಂದ ತೆರಳಿದ..


" ಇನ್ಮುಂದೆ ಇಲ್ಲೇ ಇರ್ತಿವಲ್ವ, ದಿನಾ ಭೇಟಿಯಾಗೋಣ ಬಿಡೇ. ಈಗ ಹೊರಡಿ, ತಾತ ಮತ್ತೆ ಹರಿಣಿ ನಿಮಗೋಸ್ಕರ ಕಾಯ್ತಿರ್ತಾರೆ." 
ಮಾನ್ವಿ ಕೂಡ ಆಮಂತ್ರಣವನ್ನು ತಳ್ಳಿಹಾಕಿದಳು. 

"ಶಿ ಇಸ್ ರೈಟ್. ನೀವು ಹೊರಡಿ. " ಪ್ರಸನ್ನ ಕೂಡ ದ್ವನಿ ಸೇರಿಸಿದ

"ಊಹ್ಮೂ ಊಹ್ಮೂ ಅಂತಾನೆ ಮದುವೆಯಾಗಿದ್ರೂ ಹೆಂಡತಿ ಮಾತಿಗೆ ಹ್ಮೂ ಅನ್ನೋದನ್ನ ಇಷ್ಟು ಬೇಗ ಕಲ್ತುಬಿಟ್ರಾ ಡಾಕ್ಟರ್" ಪರಿ ಕಿಚಾಯಿಸಿದಳು.


"ಮೈ ಡಿಯರ್ ಏಂಜಲ್, ಅದೊಂತರ ಮೆನ್ ಸೈಕಾಲಜಿ. ಮದುವೆಯಾದ ನಂತರ ಹುಲಿನೂ ಇಲಿ ತರಾ ಆಡೋಕೆ ಶುರು ಮಾಡುತ್ತಂತೆ" ಹರ್ಷ ಕೂಡ ತಮಾಷೆ ಮುಂದುವರಿಸಿದ್ದ. ಅವನ ಮಾತಿಗೆ ಉಳಿದವರು ನಕ್ಕರು.

"ಹೋಹೋ.. ಸಾಕು ನಕ್ಕಿದ್ದು. ಹಳಸಿರೋ ಜೋಕ್ಸ್ ಎಲ್ಲಾ ಮುಗಿದಿದ್ರೆ ಬೇಗ ಮನೆಗೆ ಹೊರಡಬಹುದಾ ನಾವು" ಕೈ ಮುಗಿದು ಕೇಳಿದ ಪ್ರಸನ್ನ.

ಪರಿಗೆ ಮಾನ್ವಿಯನ್ನು ಬಿಟ್ಟು ಹೊರಡಲು ಮನಸ್ಸಿರಲಿಲ್ಲ. ಆದರೆ ಮಾನ್ವಿ ಅವಳ ಅಂಗೈಯಲ್ಲಿ ಚಿಕ್ಕ ಗಿಫ್ಟ್ ಬಾಕ್ಸನ್ನು ಇಟ್ಟು 

"ಇದು ನಾನು ಕೊಡ್ತಿರೋ ಗಿಫ್ಟ್ ಅಲ್ಲ. ನಿನಗೆ ಸೇರಬೇಕಾದ್ದು. ನನ್ನಲ್ಲೇ ಉಳಿದು ಹೋಗಿತ್ತು. ಜೋಪಾನ. 
ಅನಿರೀಕ್ಷಿತವಾಗಿ ಹಾಗೂ ಅವಸರದಲ್ಲಿ ಮದುವೆ ನಡೆದು ಹೋಯ್ತು. ವಿಷ್ ಕೂಡ ಮಾಡ್ಲಿಲ್ಲ ನಾನು. ಈಗಲೂ ಮಾಡೋಕಾಗ್ತಿಲ್ಲ.  ಗಿಲ್ಟೊಂದು ಉಳಿದುಕೊಂಡು ಬಿಟ್ಟಿದೆ ಕಣೇ..  ಆಕಸ್ಮಿಕವೋ ಅನಿವಾರ್ಯವೋ ನನ್ನಿಂದ ನಿನಗೆ ಸಿಕ್ಕಿದ್ದು ಬರೀ ದುಃಖ. ಈಗ ತುಂಬಾ ದಿನಗಳ ನಂತರ ಸಿಕ್ಕಿರೋ ನಿನ್ನ ಹರ್ಷ ಅವನ ಪ್ರೀತಿ ಅದಷ್ಟೇ ನಿನ್ನ ಮೊದಲ ಆದ್ಯತೆ ಆಗಿರ್ಬೇಕು. ಅದು ಬಿಟ್ಟು ನನ್ನ ಬಗ್ಗೆ ಯೋಚನೆ ಮಾಡ್ತಾ ಕೂರಬೇಡ‌ ಪರಿ. ಡೋಂಟ್ ವರಿ.. ಐ ವಿಲ್ ಬಿ ಫೈನ್.  ಈ ಹಿಟ್ಲರ್ ನನಗೆ ಕೊಟ್ಟಿರೋ ಟಾರ್ಚರ್ ಗೆ ಸರಿಯಾಗಿ ರಿವೆಂಜ್ ತಗೋಳ್ತಿನಿ ನೋಡ್ತಿರು. " ಕೊನೆಯ ಮಾತನ್ನು ತಮಾಷೆಯಾಗಿ ಹೇಳಿ ನಸುನಕ್ಕಳು. 

"ಗಿಲ್ಟ್ ಪಡುವಂತಹ ತಪ್ಪು ನೀನೇನು ಮಾಡಿದ್ದೀಯ??  In fact ನಿನ್ನಿಂದಾಗಿ ಹರ್ಷ ನಮಗೆ ಮತ್ತೆ ಸಿಗುವಂತಾಯ್ತು. ನಡೆದದ್ದನ್ನೆಲ್ಲ ಮರೆಯಬೇಕು ಮಾನು. ಶುರುವಾಗಿರೋ ಹೊಸ ಬದುಕಿನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಾಳಬೇಕು..."

"ಐ ವಿಲ್ ಟ್ರೈ... ಮತ್ತೆ ಸಿಗೋಣ. ಬಾಯ್!! "

                  ************

ಫೋನಿನಲ್ಲೇ ವಿಷಯ ತಿಳಿದ ಹರಿಣಿ ಅಣ್ಣನ ಬರುವಿಕೆಗೆ ಕಾದು ತುದಿಗಾಲಲ್ಲಿ ಕುಳಿತಿದ್ದಳು. ಅಶ್ವತ್ಥರು ಸಹ ಮೊಮ್ಮಗನನ್ನು ಕಾಣಲು ಚಡಪಡಿಸಿ ಹೋಗಿದ್ದರು. ಕಾರಿನ ಸದ್ದು ಕೇಳಿದ  ತಕ್ಷಣ ಓಡಿ ಅಚೆ ಬಂದ ಹರಿಣಿ ಹರ್ಷನನ್ನ ತಬ್ಬಿಕೊಂಡು ಜೋರಾಗಿ ಅತ್ತೇ ಬಿಟ್ಟಳು.
 
"Sorry.....   ನೀನು ಮುಂಬೈನಿಂದ ವಾಪಸ್ ಬರದಿದ್ದರೂ ಪರವಾಗಿಲ್ಲ, ನನ್ನ ಟೆಡ್ಡಿ ಮಾತ್ರ ಮರಿದೇ ಕಳಿಸು ಸಾಕು ಅಂತ ಕೋಪದಲ್ಲಿ ಹೇಳಿದ್ದೆ. ಟೆಡ್ಡಿ ಬಂತು ಆದರೆ ನೀನು ಬರಲೇ ಇಲ್ಲ. ನಾವೆಲ್ಲ ನಿನ್ನನ್ನ ಎಷ್ಟು ಮಿಸ್ ಮಾಡ್ಕೋಳ್ತಿದೀವಿ ಗೊತ್ತಾ.…"   ಬಿಕ್ಕಿದಳು. ಅರೆಬರೆ ನೆನಪಲ್ಲಿ ಕಳೆದವನ ಕಣ್ಣಂಚು ಆರ್ದ್ರ. 

"ಹರಿ, ನಿಮ್ಮಣ್ಣನಿಗೆ ಆ್ಯಕ್ಸಿಡೆಂಟ್ ಆಗಿತ್ತಲ್ಲ ಆಗ ತಲೆಯಿಂದ ಒಂದು ಸ್ಕ್ರೂ ಕಳೆದುಹೋಗಿ ಹಳೆಯದೆಲ್ಲ ಮರೆತು ಹೋಗಿದೆಯಂತೆ. ಈಗ ಎಲ್ಲರೂ ಸೇರಿ ರಿಪೇರಿ ಮಾಡೋಣ ಬಿಡು" ಪರಿ ಸನ್ನಿವೇಶವನ್ನು ತಿಳಿಯಾಗಿಸಿದಳು. 

"ಹೌದಾ... ಹಾಗಾದ್ರೆ ನಾವ್ಯಾರು ಇವನಿಗೆ ನೆನಪೇ ಇಲ್ವಾ? "

"ನೋ... ಏನು ನೆನಪಿಲ್ಲ. ಎಲ್ಲ ಮರೆತ್ಹೋಗಿದೆ. ನಿನ್ನನ್ನ ಕೋತಿ‌ ಅಂತ ಕರಿತಿದ್ದದ್ದು. ಹೀಗೆ ಹೀಗೆ ಕಿವಿ ಎಳಿತಿದ್ದಿದ್ದು, ಎಲ್ಲಾ ಮರ್ತಿದೆ. ಮತ್ತೆ ಅಮ್ಮ ನಿನ್ನನ್ನ ಯಾವುದೋ ಮರದಿಂದ ಎತ್ತಿಕೊಂಡು ಬಂದು ಸಾಕಿದ್ರು ಅನ್ನೋದು ಮರ್ತಿದೆ."

"ಅಮ್ಮಾ..... ಇವನೇನು ಮರೆತಿಲ್ಲ. ಎಲ್ಲಾ ಬರೀ ಡ್ರಾಮಾ.. " ಹುಬ್ಬು ಗಂಟಿಕ್ಕಿದಳು.

"ಇಲ್ಲ ಕಣೇ... ನಾನು ನಿಜವಾಗಿಯೂ ಎಲ್ಲಾ ಮರ್ತಿದ್ದೇನೆ. ಹ್ಮಾ, ಹುಟ್ಟಿದಾಗ ನಿನಗೊಂದು ಚಿಕ್ಕ ಬಾಲ ಕೂಡ ಇತ್ತು. ಆಮೇಲೆ ಅದನ್ನ ಆಪರೇಶನ್ ಮಾಡಿ ತೆಗೆದಿದ್ದರಲ್ಲ! ಅದನ್ನು ಕೂಡ ಮರ್ತಿದ್ದೀನಿ ನೋಡು ಛೇ..."

"ಬೇಡ ಹರ್ಷ....  ಈಗಲೇ ಹೇಳ್ತಿದ್ದೀನಿ.  ಮರ್ಡರ್ ಆಗೋಗ್ತಿಯಾ ನನ್ನ ಕೈಯಲ್ಲಿ!!" ಎಚ್ಚರಿಕೆ ನೀಡಿದಳು. ಕೂಡಲೇ ಅವಳ ತಲೆ ಕುಟುಕಿದ ಸುಲೋಚನ

"ಇನ್ನೊಮ್ಮೆ ಇಂಥ ಮಾತಾಡಿದ್ರೆ ತಗೊಂಡು ಹೋಗಿ ಯಾವುದಾದರೂ ದೂರದ ಹಾಸ್ಟೆಲ್ ಸೇರಿಸ್ತಿ ಬಿಡ್ತಿನಿ. ಚೋಟುದ್ದ ನಾಲಿಗೆ ಮಾತಾಡೋದು ನೋಡು. ನಡಿ ಒಳಗೆ ಆರತಿ ತಟ್ಟೆ ರೆಡಿ ಮಾಡುವಂತೆ" ಗದರಿದರು.

"ನೀ ಹೀಗೆ. ‌ ಯಾವಾಗಲೂ ಅವನ ಪರವಾಗೇ. ನನ್ನ ನಿಜವಾದ ಅಮ್ಮ ನನ್ನನ್ನು ಎಲ್ಲಿ ಹುಡುಕ್ತಿದ್ದಾರೋ " ಸಣ್ಣಗೆ ಗುನುಗಿದಳು.

"ಏನೋ ಹೇಳಿದ ಹಾಗಿತ್ತು..." 

"ಏನಿಲ್ಲ. ನೀವಿಬ್ರೆ ಹೋಗಿ ಮದುವೆನೂ ಮಾಡಿಸಿ ಕರ್ಕೊಂಡು ಬಂದೀದ್ದಿರಲ್ಲ. ನಾನು ತಾತ ಏನ್ ಪಾಪ ಮಾಡಿದ್ವಿ? ಛೇ, ಈ ಮನೆಯಲ್ಲಿ ಹಿರಿಯರಿಗೆ ಕಿರಿಯರಿಗೆ ಬೆಲೆನೇ ಇಲ್ಲ. ಅಲ್ವ ತಾತ..."

"ಇವತ್ತು ನೀನೇಷ್ಟೆ ಎತ್ತಿ ಕಟ್ಟಿದರೂ ಅಷ್ಟೇ, ನಾನು ನನ್ನ ಮೊಮ್ಮಗನ ಕಡೆಗೆ.. " ಮುಗುಳ್ನಕ್ಕರು.
"ಎಂದೋ ನಡೆಯಬೇಕಾದ ಶುಭಕಾರ್ಯ, ಈಗ ಸಮಯ ಕೂಡಿ ಬಂದಿದೆ. ಎಲ್ಲಿ ನಡೆದರೇನು ಹೇಗೆ ನಡೆದರೇನು, ಮುಂದಿನ ಬದುಕು ಭವಿಷ್ಯ ಉಜ್ವಲವಾಗಿರಲಿ ಅಂತ ಆಶೀರ್ವಾದ ಮಾಡಬಹುದಲ್ವೇ." ಮನಸಾರೆ ಹರಸಿದರು.

ನೂತನ ಬದುಕಿನ ಆರಂಭಕ್ಕೂ ಮೊದಲು ಕಲ್ಲು ಮುಳ್ಳಿನ ಹಾದಿಯನ್ನು ಸವೆದ ಹೆಜ್ಜೆಗಳಿಗೆ ಬದುಕು ಒಂದು ಸುಂದರವಾದ ಸ್ವಪ್ನದಂತೆ ಭಾಸವಾಗಿತ್ತು.

ನಿನ್ನ ಹೊರತು ಇನ್ನೇನೂ ಉಳಿದೇ ಇಲ್ಲ ಬದುಕಲು ಎಂದು, ಸಾವಿಗೆ ಆಮಂತ್ರಣ ನೀಡಿದ್ದ ಹುಡುಗಿ, ತನ್ನವನ ಇರುವಿಕೆಯ ಅರಿತು ಅವನಿಗಾಗಿ ಪರಿತಪಿಸಿ ಅಲೆದಲೆದು ಏನೆಲ್ಲಾ ಪ್ರಯತ್ನಗಳ ನಂತರ ಅವನನ್ನು ತನ್ನ ಬಾಳಪೂರ್ತಿ ಗೆದ್ದುಕೊಂಡ ಖುಷಿಯನ್ನು ಬರೀ ಮಾತಿನಲ್ಲಿ ಲೆಕ್ಕ ಹಾಕಲು ಸಾಧ್ಯವೇ ಇರಲಿಲ್ಲ. 

ಮಗನು ಮತ್ತೆಂದೂ ಮರಳಿ ಬಾರನೆಂದು ಮನಸ್ಸು ಕಲ್ಲಾಗಿಸಿಕೊಂಡ ತಂದೆ ತಾಯಿಯ ಒಡಲಿನ ತಾಪ, ಒಂದೇ ಕ್ಷಣದಲ್ಲಿ ಮಾಯವಾಗಿ ಹೃದಯ ಕೂಡ ತಂಪಾಗಿತ್ತು; ಕಣ್ಮುಂದೆ ಮಂದಹಾಸ ಬೀರುತ್ತ ನಿಂತಿದ್ದ ಮಗನನ್ನು ಕಂಡು. ಈ ಸಂತಸದ ಘಳಿಗೆಯಲ್ಲಿ ಅದಕ್ಕೆ ಕಾರಣಳಾದ ಪರಿಯನ್ನು ಹಾಡಿ ಹೊಗಳಿದ್ದು ಮುದ್ದಿಸಿದ್ದು ಅಷ್ಟಿಷ್ಟಲ್ಲ! ಆಗೆಲ್ಲ ಅವಳ ಆಲೋಚನೆಗಳಲ್ಲಿ  ಸುಳಿದಿದ್ದು ಮಾನ್ವಿ ಪ್ರಸನ್ನರು. ಅವರೇನು ಮಾಡುತ್ತಿರಬಹುದೀಗ??


                ***********


ಮಾನ್ವಿಗೆ ಆಜನ್ಮ ಶತೃವಾದ ಹಿಟ್ಲರ್ ಜೊತೆಗೆ ಇಡೀ ಜೀವನವನ್ನು ಹೇಗೆ ಕಳೆಯುವುದು ಎಂಬ ಚಿಂತೆಯಾದರೆ, ಇಷ್ಟು ದಿನ ಒಂಟಿ ಪಿಶಾಚಿಯ ಹಾಗೆ ತನಗಿಷ್ಟ ಬಂದಂತೆ ಬದುಕಿದ್ದ ಪ್ರಸನ್ನನಿಗೆ ಸ್ವಾತಂತ್ರ್ಯ ಹರಣವಾದ ಚಿಂತೆ! ಹೀಗೆ ಇಬ್ಬರು ತಮ್ಮ ತಮ್ಮ ಚಿಂತನೆಯಲ್ಲಿ ಮುಳುಗಿದ್ದೇ ಹೋಟೆಲ್ ಒಂದರಲ್ಲಿ ಊಟ ಮಾಡುತ್ತಿರುವಾಗ ದೂರದಿಂದ ಮೆಲ್ಲನೆ ಹಾಡೊಂದು ಕಿವಿಗೆ ಬಂದು ರಾಚಿತು.

"ಏನೋ ಮಾಡಲು ಹೋಗಿ.... ಏನು ಮಾಡಿದೆ ನೀನು.." ಪ್ರಸನ್ನನ ಪ್ರಸ್ತುತ ಸ್ಥಿತಿಯನ್ನು ಮೂದಲಿಸುವ ಹಾಡಿಗೆ ರೇಗಿ 
'ಬೇಕೂ ಅಂತ ಮಾಡಿದ್ದಲ್ಲ, ನನ್ನ ಪ್ರಾರಬ್ಧ ಕರ್ಮ ಇದು' ಎದುರು ಮುಖ ನೋಡಿ ಗೊಣಗಿಕೊಂಡ.

ಆಟೋದಿಂದ ಕೆಳಗಿಳಿದು ಅಪಾರ್ಟ್ಮೆಂಟ್ ನ್ನು ತಲೆ ಮೇಲೆತ್ತಿ ನೋಡಿದ ಮಾನ್ವಿ ಪ್ರಸನ್ನನ ಮುಖವನ್ನೊಮ್ಮೆ ದಿಟ್ಟಿಸಿ
" ಪರವಾಗಿಲ್ಲ ಒಳ್ಳೆಯ ಅಪಾರ್ಟ್ಮೆಂಟ್ ಹುಡುಕಿದ್ದಿಯಾ" ಮೊದಲ ಬಾರಿ ಮಡದಿಯ ಹೊಗಳಿಕೆಗೆ ಚೂರು ಎದೆ ಹಿಗ್ಗಿಸುತ್ತ ಹೊರಟವನಿಗೆ ಎದುರಾದ ವಾಚ್ಮನ್ ಕುಶಲೋಪರಿ ಮಾತಾಡಿ, ದೊಡ್ಡ ಬಾಂಬನ್ನು ಎಸೆದಿದ್ದ‌.

 "ಓಹ್‌ ಡಾಕ್ಟ್ರೇ, ಈಗ ಬಂದ್ರಾ.. ಮದುವೆ ಬೇರೆ ಆಯ್ತಂತೆ. ನ್ಯೂಸ್ ತುಂಬಾ ನಿಮ್ದೆ ಸುದ್ದಿ. ಇವ್ರೇನಾ ಹೆಂಡ್ರು.. ನಮಸ್ಕಾರ ಮೇಡಂ. ನಾನು ಗೋಪಾಲ ಅಂತ. ಇಲ್ಲಿನ ವಾಚ್ಮನ್ನು. ಆದರೆ ಮೇಡಂ ಪಾಪ  ನಿಮ್ಮ ಟೈಮ್ ಸರಿಯಿಲ್ಲ ಬಿಡಿ. ಇವತ್ತು ಸಂಜೆಯಿಂದ ಲಿಫ್ಟ್ ಕೆಲಸ ಮಾಡ್ತಿಲ್ಲ. ಮೆಟ್ಟಿಲು ಹತ್ಕೊಂಡೆ ಹೋಗ್ಬೇಕು ನೀವು" ಕ್ಷಣದ ಉತ್ಸಾಹವೆಲ್ಲ ಜರ್ರನೇ ಇಳಿದು ಹೋಯಿತು ಪ್ರಸನ್ನನಿಗೆ. 


"ಯಾಕೆ ಏನಾಯ್ತು? ಎಷ್ಟನೇ ಫ್ಲೋರ್ ನಿನ್ನ ಫ್ಲಾಟ್?" ಹುಬ್ಬು ಹಾರಿಸಿದಳು.

"ಹೆಚ್ಚೇನಿಲ್ಲ ಹೀಗೆ ಹೋಗ್ತಾ ಹೋಗ್ತಾ ಜಸ್ಟ್ ಕೊನೆಯ ಫ್ಲೋರ್!! "

"ವ್ಹಾಟ್!! ಲಾಸ್ಟ್ ಫ್ಲೋರ್?! ಎಷ್ಟು ಫ್ಲೋರ್ ಇವೆ ಅಪಾರ್ಟ್ಮೆಂಟ್ ನಲ್ಲಿ?" ಅನುಮಾನದಿಂದ ಉಗುರು ಕಚ್ಚಿದಳು.

"ಜಸ್ಟ್ ಹದಿನೈದೇ!!
ಒಂದೊಂದು ಫ್ಲೋರ‌್‌ಗೂ  ಅಂದಾಜು ಮೂವತ್ತು-ಮೂವತ್ತೈದು ಮೆಟ್ಟಿಲು ಅಂದ್ಕೊಂಡ್ರು, ಹದಿನೈದು ಫ್ಲೋರ್,  ಅಂದ್ರೆ....  ಮಿನಿಮಮ್ ಐನೂರು ಮೆಟ್ಟಿಲಿರಬಹುದು !! ಅಷ್ಟೇ..."
ತಿರುವು ಮುರುವಿನ ಮೆಟ್ಟಿಲು ಸರಣಿ ಮುಂದೆ ನಿಂತು ನಾಲಿಗೆ ಕಚ್ಚಿದ್ದ.

ಐನೂರು ಮೆಟ್ಟಿಲು... 
ಮಾನ್ವಿ ತಲೆ ಗಿರ್ರೆಂದಿತು. ಮೊದಲ ಆಗಮನಕ್ಕೆ ಭರ್ಜರಿ ಸ್ವಾಗತ ಕಂಡು. ಬೇಡ ಎನ್ನಲಾದೀತೇ? ಬೇಡ ಎಂದರೂ ಬಂದದ್ದು ತಪ್ಪೀತೇ? ಪ್ರಸನ್ನ ತನ್ನ ಲಗೇಜ್ ಜೊತೆಗೆ ಅವಳದೊಂದು ಲಗೇಜ್ ಸಹ ಎತ್ತಿಕೊಳ್ಳಬೇಕಾಯಿತು. ಲಗೇಜ್ ಎತ್ತಿ ಇಡುತ್ತಲೇ ಪಾದಾರ್ಪಣೆ ಮಾಡಿ, ಮೆಟ್ಟಿಲೇರುವ ಕಾರ್ಯಕ್ರಮ ಶುರುವಾಯಿತು. ಮಾನ್ವಿ ತನ್ನದೊಂದು ಲಗೇಜ್ ಹೊತ್ತ ಕಾರಣದಿಂದ ಬಡಪಾಯಿ ಸ್ಟೋನಿಗೂ ಮೆಟ್ಟಿಲೇರುವ ಕರ್ಮ ತಪ್ಪಲಿಲ್ಲ. 

ಮೊದಲೆರಡು ಅಂತಸ್ತನ್ನು ಉತ್ಸಾಹದಿಂದ ಹತ್ತಿದ ನವದಂಪತಿಗಳು ಮೂರು ನಾಲ್ಕನೇ ಹಂತಕ್ಕೆ ಏದುಸಿರು ಬಿಡುತ್ತ ಮುಖ ಮುಖ ನೋಡಿಕೊಂಡರು. 
"ಇಡೀ ಬೆಂಗಳೂರಲ್ಲಿ ನಿನ್ನ ಮುಸುಡಿಗೆ ಇದೇ ಅಪಾರ್ಟ್ಮೆಂಟ್ ಸಿಕ್ಕಿತ್ತಾ? ಯಾವುದಾದರೂ ಗುಡಿಸಲಲ್ಲಿದ್ದರೂ ಚೆನ್ನಾಗಿತ್ತು. ಇದ್ಯಾವ ಕರ್ಮ ನನಗೆ" ರೇಗಿದಳು ಭಾರ್ಯೆ.

"ಯಾವತ್ತೂ ಕೆಡದೇ ಇರೋ ಲಿಫ್ಟ್ ನೀ ಬಂದಾಗಲೇ ಕೈ ಕೊಟ್ಟಿದೆ ಅಂದ್ರೆ ನಿಜಕ್ಕೂ ಇದು ನಿನ್ನದೇ ಕರ್ಮ.. ನಿನ್ನನ್ನು ಕಟ್ಟಿಕೊಂಡ ಪಾಪಕ್ಕೆ ನನಗೂ ಗ್ರಹಚಾರ ಕೆಟ್ಟಿದೆ.   ಆದ್ರೂ ಥ್ಯಾಂಕ್ಸ್ ಕಣೇ ಕೊಲೆಸ್ಟ್ರಾಲ್.. ಮಾತಲ್ಲೇ ಒಂದೊಳ್ಳೆ ಐಡಿಯಾ ಕೊಟ್ಟೆ.  ನಿನ್ನ ಮೆಂಟೆನೆನ್ಸ್ ಹೆಂಗೆಯಂತ ಚಿಂತೆಯಾಗಿ ಹೋಗಿತ್ತು. ಆದಷ್ಟು ಬೇಗ ಗುಡಿಸಲಿಗೆ ಶಿಫ್ಟ್ ಆದ್ರೆ, ಬಾಡಿಗೆ ಖರ್ಚಾದ್ರೂ ಉಳಿಯುತ್ತೆ. ಅಲ್ವಾ?" ಹಂಗಿಸಿದ


ಪ್ರತ್ಯುತ್ತರವಾಗಿ ತುಪಕ್ ಎಂದು ಉಗಿದು ಮಂಡಿಯೂರಿ ಕುಳಿತು ಬಿಟ್ಟಳು. "ನಿನ್ನ ಮ್ಯಾಥ್ಸ್ ತುಂಬಾ ವೀಕ್ ಅಲ್ವಾ..."

"ಇನ್ನೊಮ್ಮೆ ಕೆಳಗಿಳಿದು ಸರಿಯಾಗಿ ಮೆಟ್ಟಿಲು ಎಣಿಸ್ಕೊಂಡು ಬಾ. ಆಗ ಗೊತ್ತಾಗುತ್ತೆ‌.
ಇಬ್ಬರಿಗೂ ಸಿಕ್ಕಾಪಟ್ಟೆ ಕೊಲೆಸ್ಟ್ರಾಲ್!! ಈ ನೆಪದಲ್ಲಾದರೂ ಕೊಬ್ಬು ಕರಗುತ್ತೇ‌. ಬಾ ಬಾ.. ಹತ್ತು.."


ಸಿಟ್ಟಿನಿಂದ ಆಕೆ ಗುರಾಯಿಸಿದರೆ 

"don't waste your energy like this 
ನೋಡಲ್ಲಿ ಸ್ಟೋನಿ ಎಷ್ಟು ಹ್ಯಾಪಿಯಾಗಿ ಹತ್ತಿದೆ.
ಹತ್ತು ಹತ್ತು ಐಸ್ಸಾss.. ಇನ್ನೂ ಹತ್ತು ಐಸ್ಸಾss.." ರಾಗವಾಗಿ ಹುರಿದುಂಬಿಸಿದ.

ಬಾಡಿ ಬಸವಳಿದ ಸ್ಟೋನಿ ಕೂಡ ಕಣ್ಣಲ್ಲೇ ಕಿಡಿಕಾರಿತ್ತೇನೋ! ವೌವೌ.. ಎಂದು ಬೊಗಳಿ ಮುಂದೆ ಹೋಯಿತು.

ಒಂಬತ್ತನೇ ಫ್ಲೋರ್. ಪ್ರಸನ್ನನ ಗಣಿತದ ಪ್ರಕಾರ  ಇನ್ನೂ ಕೇವಲ ಇನ್ನೂರು ಮೆಟ್ಟಿಲು ಬಾಕಿ ಇದ್ದವು. 
 ದಣಿದ ಇಬ್ಬರೂ ಸಾಷ್ಟಾಂಗ ಬಿದ್ದುಕೊಂಡು ಬಿಟ್ಟಿದ್ದರು.

  ಕೆಲವು ನಿಮಿಷದಲ್ಲಿ ದಿಗ್ಗನೇ ಎದ್ದು ಕುಳಿತ ಪ್ರಸನ್ನ ಹೇಳಿದ್ದ...
"ಮನೆ ಬಿಟ್ಟು ಹೋಗಿ ಹತ್ತು ಹನ್ನೆರಡು ದಿನಗಳಾಯ್ತು. ಎಷ್ಟು ಧೂಳು ಕಸ ಬಿದ್ದಿರುತ್ತೋ ಏನೋ!! " 

"ಈಗ ಯಾಕೆ ಆ ಚಿಂತೆ" ಮಾತಿಗಿಂತ ವಿಶ್ರಾಮವೇ ಮಿಗಿಲಾಗಿತ್ತು ಆಕೆಗೆ.

"ಇಬ್ಬರಲ್ಲಿ ಯಾರು ಮನೆ ಕ್ಲೀನ್ ಮಾಡೋದು?"

"ನಿನ್ನ ಮನೆ. ನೀನೇ ಕ್ಲೀನ್ ಮಾಡ್ಕೊ. ಕೇಳೋದೇನಿದೆ!" ಬಿದ್ದಲ್ಲೇ ಉಲಿದಳು.

"ಮರ್ತಿದ್ದಿಯಾ ಅನ್ಸುತ್ತೆ. ಇನ್ಮುಂದೆ ನೀನು ಕೂಡ ಅಲ್ಲಿಯೇ ಇರಬೇಕು. ಅದೂ ನಿನ್ನ ಮನೆ ಕೂಡ" 

"ಅಂದ್ರೆ ನಿನ್ನ ಮಾತಿನ ಅರ್ಥ, ಈಗ ಮನೆಯನ್ನ ನಾನು ಕ್ಲೀನ್ ಮಾಡ್ಬೇಕಾ? ನೋ ವೇ.. ಈಗಲೇ ಸಾಯೋ ಹಾಗಾಗಿದೆ. ನಾನಂತೂ ಮಾಡಲ್ಲ ಅದನ್ನ" 

"ಇನ್ನೇನು ವಾಚ್ಮನ್ ಬಂದು ಕ್ಲೀನ್ ಮಾಡ್ತಾನಾ? ಸುಮ್ನೆ ವಾದ ಯಾಕೆ, ಹೇಗೂ ಮೇಲೆ ಹೋಗ್ತಿದ್ದೀವಿ.ಇಬ್ಬರ ಮಧ್ಯ ಒಂದು ರೇಸ್.  ಯಾರು ಕೊನೆಗೆ ರೂಂ ತಲುಪ್ತಾರೋ ಅವರು ಮನೆ ಕ್ಲೀನ್ ಮಾಡ್ಬೇಕು. ಒಕೆ...?"

ಮಾನ್ವಿ ಹ್ಮೂ ಎನ್ನುವದರ ಬದಲು ಎದ್ದು ನಿಂತು ಅವನಿಗಿಂತ ಮೊದಲೇ ಲಗೇಜ್ ಸಮೇತ ದಡದಡ‌ ಮಹಡಿ ಏರತೊಡಗಿದಳು‌. ಜಿದ್ದಿಗೆ ಬಿದ್ದ ಇಬ್ಬರೂ ದಣಿವು ಮರೆತು ಮೆಟ್ಟಿಲೇರುತ್ತ ಕೊನೆಯ ಫ್ಲೋರ್ ತಲುಪಿದ್ದರು.  ಅದೂ ಕಪ್ಪೆ ನುಂಗಿದ ಹಾವಿನಂತೆ ತೆವಳಿಕೊಂಡು ಹೋಗುವ ಪರಿಸ್ಥಿತಿಯಲ್ಲಿ.. 

ಹದಿನೈದು ಅಂತಸ್ತಿನ ಮಹಡಿ ಏರಿ ಮೌಂಟ್ ಎವರೆಸ್ಟ್ ಏರಿದಷ್ಟೇ‌ ಉಲ್ಲಾಸಗೊಂಡಿದ್ದರು ದಂಪತಿಗಳು. 

"ರೆಡಿಯಾಗು. ಮನೆ ಕ್ಲೀನ್ ಮಾಡೋಕೆ. " ಮೊದಲು ಬಂದ ಪ್ರಸನ್ನ ಎಚ್ಚರಿಸಿದ.

"ನೀನು ಹೇಳಿದ್ದು ಕೊನೆಯಲ್ಲಿ ಬಂದವರು ಕ್ಲೀನ್ ಮಾಡ್ಬೇಕು ಅಂತ. " ಎಂದು ಕೊನೆಯಲ್ಲಿದ್ದ ಸ್ಟೋನಿ ಮುಖ ನೋಡಿದಳಾಕೆ

ಮೆಟ್ಟಿಲೇರಿ ಮತ್ತೆ ಹಸಿದಿದ್ದ ಬಡಪ್ರಾಣಿ ತಿನ್ನಲು ಏನಾದರೂ ಸಿಗುತ್ತಾ ಎಂದು ಮುಸಿಮುಸಿ ನೋಡಿತ್ತು.


ತನಗೆ ಬಿಡಲಾರದ ಕರ್ಮ ಎಂದುಕೊಂಡು ಹಣೆಗೆ ಕೈ ಹೊತ್ತ ಪ್ರಸನ್ನ, ಕೀ ತೆಗೆಯಲು ಜೇಬಿಗೆ ಕೈ ಹಾಕಿದ. ಆದರೆ ಕೀ ಸಿಗದಿದ್ದಾಗ " ಬಹುಶಃ ಕೆಳಗೆ ಎಲ್ಲೋ ಬಿದ್ದಿರಬೇಕು ತಗೊಂಡು ಬರೋದಾ?" ಎಂದು ಉದ್ಘರಿಸಿದಾಗ, ಮಾನ್ವಿ ಪ್ರಜ್ಞೆ ತಪ್ಪಿ ಬೀಳುವುದೊಂದೇ ಬಾಕಿ! 

"ಹೇ... ನೆನಪಾಯ್ತು, ಹೋಗುವಾಗ ಬ್ಯಾಗಲ್ಲಿ ತಾನೇ ಇಟ್ಟದ್ದೆ‌. " ಎಂದು ತೆಗೆದು ಒಳಗೆ ಕಾಲಿಟ್ಟರೆ  ಸ್ವಾಗತ ನೀಡಿದ್ದು... 

ಒಂದಿಂಚು ಧೂಳಿನ ಮಧ್ಯೆ ಮುಚ್ಚಿ ಹೋಗಿದ್ದ ಮನೆ, ಅಲ್ಲಲ್ಲಿ ಬಿಸಾಡಿದ್ದ ಬಟ್ಟೆ ಬರೆ ಪುಸ್ತಕ, ಫೈಲು,  ನೀರಿನ ಬಾಟಲ್, ಗೋಡೆಯ ಮೇಲೆ ಜೇಡಗಟ್ಟಿದ ಚಿತ್ತಾರದ ವಾತಾವರಣ. 

ಅದನ್ನು ನೋಡಿ ಅವಳ ಕಣ್ಣು ಅಗಲವಾದರೆ, ಮಡದಿಯನ್ನು ಹೊರಗೆ ತಳ್ಳಿ ಬಾಗಿಲು ಮುಚ್ಚಿದ್ದ ಅವಳ ಪತಿರಾಯ. ಕೆಲವು ನಿಮಿಷಗಳಲ್ಲಿ ಮನೆಯನ್ನು ತಕ್ಕಮಟ್ಟಿಗೆ ಓರಣಗೊಳಿಸಿ ಅವಳನ್ನು ಒಳಗೆ ಕರೆದಿದ್ದ. 


ಬಂದ ತಕ್ಷಣ ಅವನು ನೆಲದ ಮೇಲೆ ಮೈ ಚೆಲ್ಲಿದರೆ, ಆಕೆ ಸೋಫಾ ಮೇಲೆ ಬಿದ್ದುಕೊಂಡಳು‌.

"ಕೌಚ್ ಇಲ್ವಾ?" ಅವಳ ಅತೃಪ್ತ ಪ್ರಶ್ನೆಗೆ ಅವನ ಬಿರುನೋಟವೊಂದೇ ಉತ್ತರ.

"ಕುಡಿಯಲು ನೀರಾದ್ರೂ ಸಿಗುತ್ತಾ?" 

"ಅಲ್ನೋಡು. ಹಲ್ಲಿ ಹಲ್ಲಿ..." ಧಿಗ್ಗನೇ ಎದ್ದು ಕುಳಿತು ಜೋರಾಗಿ ಕಿರುಚಿದ್ದನಾತ.

"ಎಲ್ಲಿ? ಎಲ್ಲಿ?" ಆಕೆ ದಿಕ್ಕುತಪ್ಪಿ ಎದ್ದು ಓಡಾಡತೊಡಗಿದ್ದಳು.

'ಆಕಡೆ ಜರುಗು. ಈಕಡೆ ಅಲ್ಲಿ..' ಎಂದು ಅವಳನ್ನು ಅಲೆದಾಡಿಸಿ  ಕೊನೆಗೆ ಹೇಳಿದ 
"ಹ್ಮಾ. ಅದೇ ಕಿಚನ್. ಟ್ಯಾಪ್‌ ಆನ್ ಮಾಡು. ಫ್ರೆಶ್ ನೀರು ಬರುತ್ತೆ. ನೀನು ಕುಡಿದು, ನನಗೂ ಒಂದು ಗ್ಲಾಸ್ ತಗೊಂಡು ಬಾ ಆಯ್ತಾ." 

ತಾನು ನಿಂತ ಜಾಗ ಅಡುಗೆ ಮನೆ, ಹಲ್ಲಿ ಬಂದಂತೆ ಕಿರುಚಿದ್ದು ಸುಳ್ಳು ಎಂದರಿತು ಕೋಪದಿಂದ ಲೋಟವನ್ನು ಎಸೆದಳಾಕೆ. ಅದು ನೇರ ಅವನ ತಲೆ ತಾಕಿತ್ತು. ನೋವಿನಿಂದ ಕಿರುಚಿದವನೇ

"ರಾಕ್ಷಸಿ.... ಸ್ವಲ್ಪ ಮೆಲ್ಲಗೆ. ನನ್ನ ಲೋಟ ಹುಷಾರು. ಪುಣ್ಯ, ನಿಮ್ಮನೆ ತರಹ ಗಾಜಿನ ಲೋಟ  ಆಗಿದಿದ್ದರೆ ಒಡೆದೇ ಹೋಗ್ತಿತ್ತು " ಲೋಟ ಸವರಿದ. 

"Mineral water ಇಲ್ವ?
Water purifier ಆದ್ರೂ? " ಅವನು ಉಸಿರು ಹೊರದುಮ್ಮಿದ.

"ಫ್ರಿಜ್  ಇಲ್ವ?
ಸ್ನಾನಕ್ಕೆ ಬಾತ್ ಟಬ್ ಇಲ್ವ?
ಹೇರ್ ಡ್ರೈಯರ್ ತಗೊಂಡಿಲ್ವ?
ವಾರ್ಡ್ ರೋಬ್ ತುಂಬಾ ಚಿಕ್ಕದು‌. 
ನಿನ್ನ ಬಟ್ಟೆ ತೆಗೆದು ಕ್ಲೀನ್ ಮಾಡು. ನನ್ನ ಬಟ್ಟೆ ಇಡಬೇಕು.
ಮಲಗೋಕೆ ಮುಂಚೆ ನನಗೂ ಸ್ಟೋನಿಗೂ ಒಂದು ಗ್ಲಾಸ್‌ ಹಾಲು ಬೇಕು.
ಎಲ್ಲಿ ಮಲಗೋದು?
ಈ ಬೆಡ್ ಚೆನ್ನಾಗಿಲ್ಲ.
ಎಸಿ ಇಲ್ವ. 
ಸೊಳ್ಳೆ ಕಚ್ತಿವೆ.
ಹೋಗ್ಲಿ ಫ್ಯಾನ್ ಆದ್ರೂ ಇದೆಯಾ? " 

ಉಫ್... ಅವಳ ಪ್ರತಿಯೊಂದು ಬೇಡಿಕೆಗೂ ಒಂದು ಪರ್ಯಾಯ ವ್ಯವಸ್ಥೆ ಮಾಡುತ್ತ ಮಾಡುತ್ತ ಅವನ ತಲೆ ಸಿಡಿದು ಹೋಗಿ, ಅವಳನ್ನು ಮೇಲಿನಿಂದ ಎತ್ತಿ ಕೆಳಗೆ ಎಸೆದು ಬಿಡಬೇಕು ಎನ್ನುವಷ್ಟು ಕೋಪ ಬಂದಿತ್ತವನಿಗೆ‌. ಆದರೂ ನಿಗ್ರಹಿಸಿಕೊಂಡ.

"ಹಲೋ, ನಿನ್ನನ್ನೇ, ಫ್ಯಾನ್ ಆದರೂ ಇದೆಯಾ?"

"ಹ್ಮ್. ಒಂದು ಟೇಬಲ್ ಫ್ಯಾನ್ ಇದೆ. ನಾನು ಹಾಸ್ಟೆಲ್ ನಲ್ಲಿ ಸ್ಟಡಿ ಮಾಡ್ತಿದ್ದಾಗ ನನ್ನ ರೂಮೇಟ್ ಒಬ್ಬ ಬಿಟ್ಟು ಹೋಗಿದ್ದು." ಎಂದು ಗತಕಾಲದ ಧೂಳು ಮೆತ್ತಿದ ಫ್ಯಾನ್ ಒಂದನ್ನು ತಂದು ಮುಂದಿಟ್ಟು, ಸ್ವಿಚ್ ಆನ್ ಮಾಡಿದ. ಅದು ತಾನೇ ತಿರುಗುವುದಿರಲಿ ಬೆರಳು ಹಾಕಿ ಅಲುಗಿಸಿದರೂ ಒಂದಿಂಚು ಕದಲಲಿಲ್ಲ.

ಹತ್ತಿಪ್ಪತ್ತು ನಿಮಿಷ ಅದರ ಬಿಡಿ ಭಾಗಗಳನ್ನು ತೆಗೆದು ಜೋಡಿಸಿ ಆಪರೇಶನ್ ಮಾಡಿದ ನಂತರ ಶುರುವಾಯಿತು ಅದರ ತಿರುಗಾಟ. ಗಾಳಿ ಬೀಸಬೇಕಾದ ಪ್ರಸನ್ನನ ಪುರಾತನ ಕಾಲದ ಫ್ಯಾನು ಅದಕ್ಕಿಂತ ಜೋರಾಗಿ ಗಡರ್ರ್ರ್ರ್ ಗಡರ್ರ್ರ್ ನೇ ಸದ್ದು ಮಾಡಿ ಇಡೀ ಅಪಾರ್ಟ್ಮೆಂಟನ್ನೇ ನಡುಗಿಸಿ ಕಂಪಿಸುವ ಹಾಗೆ ಮಾಡಿತ್ತು.

"ಸರಿ ಬಿದ್ಕೊ ಈಗ" ಚೀರಿದ

"ಏನು....? ಕೇಳಿಸ್ತಿಲ್ಲ" ಮಾನ್ವಿ ಅದರ ಗದ್ದಲಕ್ಕೆ ಕಿವಿ ಮುಚ್ಚಿಕೊಂಡಳು. ಆತ ಕೂಡಲೇ ಫ್ಯಾನ್ ಆಫ್ ಮಾಡಿದ್ದ.

"ಉಫ್... ಒಂದು ಕ್ಷಣ ಭೂಕಂಪನೇ ಆಗೋಯ್ತು.ಅಲ್ವ " ತಾನೇ ಹಣೆ ನೀವಿಕೊಂಡ. ಕೋಪದಿಂದ ಕಿಟಕಿ ತೆಗೆದು "ತಂಪು ಗಾಳಿ ಬೀಸ್ತಿದೆ. ಇದನ್ನೇ ಎಸಿ ಅನ್ಕೊಂಡು ಕಣ್ಮುಚ್ಚಿ ಮಲಗು. ಇನ್ನು ಬಾಯಿಬಿಟ್ರೆ ಸಾಯಿಸಿ ಬಿಡ್ತಿನಿ" ರೇಗಿದ

ಮತ್ತೆ ಐದು ನಿಮಿಷಕ್ಕೆ
"ಕಾಯಿಲ್ ಆದ್ರೂ ಇದೆಯಾ? " ಮೆಲ್ಲಗೆ ಉಸುರಿದಳು

ಎದ್ದು ಗೋಡೆಗೆ ತಲೆ ತಲೆ ಚಚ್ಚಿಕೊಂಡವನು ಹಳೆಯ ಪೇಪರ್ ಹಿಡಿದು ಅವಳಿಗೆ ಗಾಳಿ ಬೀಸುತ್ತಾ ಆಕೆ ಹೇಳಿದ ಕಡೆಗೆ ಸೊಳ್ಳೆ ಹೊಡೆಯುತ್ತ ಕುಳಿತ.ಆತನಿಗೂ ನಿದ್ರೆ ಎಳೆಯುತ್ತಿತ್ತು. ಅವಳ ಕಾಲ ಪಕ್ಕದಲ್ಲೇ ಬಿದ್ದುಕೊಂಡ.  ನಿದ್ರೆಗಣ್ಣಿನಲ್ಲಿ ಎಷ್ಟೋ ಬಾರಿ ಸೊಳ್ಳೆಗೆ ಬದಲಾಗಿ ಅವಳ ಮುಖಕ್ಕೆ ರಪ್ಪನೇ ಬಾರಿಸಿದ. ನಿದ್ರೆ ಮಂಪರಿನಲ್ಲಿ ಅವಳು ಅವನನ್ನು ಝಾಡಿಸಿ ಒದ್ದದ್ದು ಆಯಿತು. ಇವರಿಬ್ಬರ ಎಡಬಿಡಂಗಿ ದಾಂಪತ್ಯವನ್ನು ಸಹಿಸಲಾರದೆ ಸ್ಟೋನಿ ಸಹ ಮುಖಕ್ಕೆ ಮುಸುಕು ಹೊದ್ದು ಮಲಗಿತು.


             *****************


ತಂಗಾಳಿಯ ಬಿಸುಪು ಇರುಳ ಕೆನ್ನೆ ಸವರಿ ಜಾರಿಕೊಳ್ಳುತ್ತಿತ್ತು. ಬಾಲ್ಕನಿಯಲ್ಲಿ ನಿಂತಿದ್ದರು ಪರಿ ಹರ್ಷ. 

"ಇದನ್ನ ಮಾನ್ವಿ ಕೊಟ್ಟಳು. ನನಗೆ ಸೇರಬೇಕಾದ್ದು ಎಂದು ಹೇಳಿ. ಏನಿದರ ಕಥೆ?" ಕೈಯಲ್ಲಿ ಹಾರ್ಟ್ ಪೆಂಡೆಂಟ್ ಚೈನ್ ಹಿಡಿದು ಕೇಳಿದಳು

"ಇದು... ಹ್ಮಾ, ನಿನಗೆ ಅಂತಲೇ ತಗೊಂಡಿದ್ದು. ಆದರೆ ಆಗ ನನಗೆ ನೀ ಯಾರು ಎನ್ನುವ ಕಲ್ಪನೆ ಕೂಡ ಇರಲಿಲ್ಲ. ಒಂದು ಅಸ್ಪಷ್ಟ ಚಿತ್ರ. ಅದು ನನ್ನದು ಅನ್ನೋ ಭಾವ ಇತ್ತು ಅಷ್ಟೇ! ಏನೆನೋ ಆಗೊಯ್ತಲ್ವ ಬದುಕಲ್ಲಿ. ಒಂದು ಕೆಟ್ಟ ಕನಸಿನ ಹಾಗೆ! "  ಕೊರಳಿಗೆ ಹಾಕಿ ಅವಳ ಕಣ್ಣಲ್ಲಿ ನಕ್ಷತ್ರದ ಹೊಳಪು ಕಂಡು ವಿಜೃಂಭಿಸಿದ..

"ಈ ದೂರ ಕೂಡ ನಮ್ಮನ್ನು ದೂರ ಮಾಡಲಿಲ್ಲ ಅದೇ ತಾನೇ ಪ್ರೀತಿ. ಆದರೆ ಹರ್ಷ, ಮಾನ್ವಿ ಪ್ರಸನ್ನನ ಮದುವೆ ಮಾಡಿಸಿ ನಾವೆನಾದ್ರೂ ತಪ್ಪು ಮಾಡಿದೆವಾ? " 

"ಹಾಗೇಕೆ ಯೋಚನೆ ಮಾಡ್ತಿಯಾ.. ಆದದ್ದೆಲ್ಲ ಒಳ್ಳೆಯದಕ್ಕೆ.  ಇದರಲ್ಲಿ ಸರಿ ತಪ್ಪು ಪ್ರಶ್ನೆ ಹುಟ್ಟಲ್ಲ. ಮಾನ್ವಿ ಬಗ್ಗೆ ನನಗಿಂತ ಚೆನ್ನಾಗಿ ನಿನಗೇ ಗೊತ್ತಲ್ವ, ಅವಳ ಮನಸ್ಸಲ್ಲಿರೋ ಸಿಟ್ಟು ಕರಗೋದಕ್ಕೆ ಒಂದು ಕ್ಷಣ ಸಾಕು. ಇನ್ನು ಈ ಪ್ರಸನ್ನ, ಮನಸ್ಸಲ್ಲಿ ಎಷ್ಟೇ ಪ್ರೀತಿ ಇದ್ದರೂ ಬಾಯಿಬಿಟ್ಟು ಹೇಳಲ್ಲ ಪುಣ್ಯಾತ್ಮ."

"ಆದರೂ ಅವರಿಬ್ಬರನ್ನು ಹೀಗೆ ದೂರ ಬಿಟ್ಟು ಬಿಡುವುದು ಸರಿ ಅನ್ನಿಸ್ತಿಲ್ಲ"  

"ಅವನು ತನ್ನ ಸ್ವಾಭಿಮಾನವನ್ನು ಬಿಟ್ಟು ಇಲ್ಲಿ ಬಂದಿರಲು ಖಂಡಿತ ಒಪ್ಪಲ್ಲ. ಒಂದು ವೇಳೆ ಇಲ್ಲಿಗೆ ಬಂದರೂ ಅವರಿಬ್ಬರ ನಡುವೆ ಎಲ್ಲಾ ಸರಿಹೋಗುತ್ತೆ ಅನ್ನೋ ಹಾಗಿಲ್ಲ.   ಈಗಿರುವ ಪ್ರೈವೆಸಿಯಲ್ಲಿ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ದೂರವಾಗಿ ಅವರಿನ್ನೂ ಹತ್ತಿರ ಆದ್ರೂ ಆಗಬಹುದು‌. ನೋಡೋಣ..'' 

" ಹ್ಮ್. ಇಬ್ಬರೂ ನಾಳೆಯಿಂದ ಒಂದೇ ಕಡೆಗೆ ಕೆಲಸಕ್ಕೆ ಬೇರೆ ಹೋಗಬೇಕು" ಯೋಚಿಸಿದವಳ ನೆನಪಿಗೆ ಮೊದಲು ನೆನಪಾದದ್ದೇ ಎಡವಟ್ಟು ಸೈಂಟಿಸ್ಟ್ ರೋಹಿತ್. ತಕ್ಷಣ ಅವನಿಗೆ ಕಾಲ್ ಮಾಡತೊಡಗಿದಳು.

"ನೀನು ಅದೇ ಆಸ್ಪತ್ರೆಯಲ್ಲಿ ತಾನೇ ಹೋಗೋದು‌"

"ಅದೂ.‌.. ಹರ್ಷ ನಾನು ಸಸ್ಪೆಂಡ್ ಆಗಿದ್ದೀನಿ . ಆರು ತಿಂಗಳು" ಕಾರಣ ವಿವರಿಸಿದಳು. ಆತ ಯೋಚನೆಗೆ ಬಿದ್ದ. ಆದರೆ ತೋರಗೊಡಲಿಲ್ಲ.

"ಒಳ್ಳೆಯದೇ ಆಯ್ತಲ್ವ. ಅಲ್ಲಿಯವರೆಗೂ ಡಾ.ಪರಿ ಈ ಪೇಷಂಟ್‌ನ್ನ ಗಮನಿಸ್ಕೊಳ್ತಾರೆ" ಕೊರಳ ಸುತ್ತ ಬೆರಳ ಹಾರ. ನೆತ್ತಿಯ ಮೇಲೆ ಮುತ್ತಿನ ಉಂಗುರ. ಬೆಸೆದು ಒಂದಾದವು ಜೋಡಿ ಅಧರ. ಮಾತು ಮರೆತು ಹೋದ ಚಂದಿರ. 

ಆ ಇರುಳು ಮಂದವಾಯಿತು.
ಹಸಿ ಬಿಸಿ ತಲ್ಲಣಗಳ ಹೊದಿಕೆಯಲ್ಲಿ ಚಂದಿರನೂ ಮುಲುಗಿದ, 
ಇರುಳಿಗೆ ಚಳಿ ತಾಗುವಂತೆ ಗಾಳಿಯೂ ನಿಡುಸುಯ್ದಿತು. 
ಅಂಗಳದ ರಂಗೋಲಿಯ ಗೆರೆಗಳು ಕದಡಿ ಹೊಸರೂಪ ಪಡೆದವು. 
ನಕ್ಷತ್ರ ಪುಂಜಗಳ ನಡುವೆ ಧ್ರುವ ತಾರೆ ನಾಚಿತು‌‌..
ಆ ಇರುಳು ತುಸು ದೀರ್ಘವಾಯಿತು..‌

                  **************

ಬೆಳಿಗ್ಗೆ ಹೊತ್ತಿಗೆ ಮಾನ್ವಿ ಎದ್ದಾಗ ಪ್ರಸನ್ನ ಮನೆಯಲ್ಲಿ ಕಾಣಲಿಲ್ಲ. 

ಕಾಲಿಂಗ್ ಬೆಲ್ ಸದ್ದು ಕೇಳಿ ಬಾಗಿಲು ತೆಗೆದವಳ ಎದುರು ನಿಂತಿದ್ದ ವಾಚ್ಮನ್ ಅವಳ ಕೈಗೆ ಹಾಲು ಮತ್ತು ಒಂದಷ್ಟು ಪ್ಯಾಕೆಟ್ ಕೊಟ್ಟು

" ಡಾಕ್ಟ್ರು ಇವನ್ನು ನಿಮಗೆ ಕೊಡೋಕೆ ಹೇಳಿದ್ರು, ತಗೊಳ್ಳಿ ಮೇಡಂ. 
ಹ್ಮಾ... ಬೆಳಬೆಳಿಗ್ಗೆ ಅವರೇ ಮುಂದೆ ನಿಂತು ಲಿಫ್ಟ್ ಕೂಡ ರಿಪೇರಿ ಮಾಡ್ಸಿದ್ದಾರೆ. ಈಗ ಆರಾಮವಾಗಿ ಕೆಳಗೆ ಹೋಗಿ ಬರಬಹುದು "

"ಗುಡ್. ಈಗೆಲ್ಲಿ ನಿಮ್ಮ ಡಾಕ್ಟರ್?" 

"ಬೈಕ್ ತಗೊಂಡು ಹೋದ್ರು. ಬಹುಶಃ ಆಶ್ರಮಕ್ಕೆ ಹೋಗಿರಬಹುದು."

"ಸರಿ ಥ್ಯಾಂಕ್ಸ್. ನೀವಿನ್ನು ಹೊರಡಿ" 

ಸ್ಟೋನಿ ಮತ್ತು ಆಕೆಗೆ ಬ್ರೇಕ್ ಫಾಸ್ಟ್  ಕಳಿಸಿದ್ದ ಹಿಟ್ಲರ್ ಪ್ರಸನ್ನ ಆಕೆಗೆ ಮೊದಲ ಬಾರಿ ವಿಭಿನ್ನ ಎನಿಸಿದ್ದ. ಪ್ರೀತಿ ಎನ್ನುವುದು ಸೌಮ್ಯ ಸಲ್ಲಾಪ. ಸದ್ದೇ ಆಗದಂತೆ ಮನಸ್ಸು ಹೊಕ್ಕುವ ತಂಗಾಳಿಯ ಹಾಗೆ. ಹುಟ್ಟುವುದು ಗೊತ್ತಾಗುವುದಿಲ್ಲ. ಬೇಕೆಂದುಕೊಂಡರೂ ಸಾಯಿಸಲು ಸಾಧ್ಯವಿಲ್ಲ. ಅಂತದ್ದೊಂದು ಅನುಭೂತಿ ಅವನ ಸಾಂಗತ್ಯದಲ್ಲಿ ಅವಳಿಗೆ ಸಿಗಬಹುದಾ? ಅವಳ ಮನಸ್ಸಿಗೂ ಮತ್ತೆ ಮನಸ್ಸಾಗಬಹುದಾ? ಕಾಲವೇ ಉತ್ತರಿಸಬೇಕು.

                                              *********



 ಆಸ್ಪತ್ರೆಗೆ ಹೊರಟಾಗ ಶುರುವಾಗದ ತನ್ನ  ಮೋಟಾರು ಬೈಕನ್ನು ಒಂದೇ ಸಮನೆ ಕಿಕ್ ಕೊಡುತ್ತಿದ್ದ ಪ್ರಸನ್ನ. 

"ನನಗೆ ಒಂದು ವಿಷಯ ಕ್ಲಿಯರ್ ಆಗಿ ಗೊತ್ತಾಯ್ತು‌. ಜಗತ್ತಿನಲ್ಲಿ ಇರೋ ಗುಜ಼ರಿ ಐಟಂ ಗಳೆಲ್ಲ ನಿನ್ನ ಹತ್ರನೇ ಇವೆ." ಕೊಂಕು ನುಡಿದಳು ಮಡದಿ

"ಸರಿಯಾಗಿ ಹೇಳಿದೆ. ಅದಕ್ಕೆ ತಾನೇ ನಿಮ್ಮಪ್ಪ ನಿನ್ನನ್ನ ನನಗೇ (ಕನ್ಯಾ)ದಾನ ಕೊಟ್ಟಿದ್ದು."

"ನಮ್ಮಿಬ್ಬರ ಜಗಳದಲ್ಲಿ ನಮ್ಮ ಡ್ಯಾಡಿ ಹೆಸರು ಮಧ್ಯೆ ತಂದರೆ ಚೆನ್ನಾಗಿರಲ್ಲ." ಬೆರಳು ಮಾಡಿ ಎಚ್ಚರಿಸಿದಳು.

"ಏನ್ಮಾಡ್ತಿಯಾ? ಕತ್ತೆ ತರಹ ತಿಂದು ಬಿಳೋದಷ್ಟೇ ಕಲಿಸಿದ್ದಾರೆ. ತಿನ್ನೋದರ ಜೊತೆಗೆ ಒಂಚೂರು ಅಡಿಗೆ ಮಾಡೊದನ್ನು ಕಲಿಸಿದ್ರೆ ಎಷ್ಟೋ ಉಪಕಾರ ಆಗ್ತಿತ್ತು‌. "

"ಆ ಕರ್ಮ ನನಗ್ಯಾಕೆ? ನೀನಿದ್ದಿಯಲ್ಲ."

"ಇವತ್ತು, ಇವತ್ತೊಂದು ದಿನ ಮಾತ್ರ ಎಲ್ಲಾ ಕೆಲಸ ನಾನು ಮಾಡಿದ್ದೀನಿ. ನಾಳೆಯಿಂದ ನೀನೇ ಮಾಡಬೇಕು."

"ನೋ ವೇ.. ನನಗೆ ಆಗಲ್ಲ. ಮಾಡಲ್ಲ ಅಂದ್ರೆ ಏನು ರೆಸ್ಟಿಗೇಟ್ ಮಾಡ್ತಿಯಾ ಅಥವಾ ಸಸ್ಪೆಂಡ್ ಮಾಡ್ತಿಯಾ? ಈಗ ನೀನು ನನ್ನ ಸೀನಿಯರ್ ಅಲ್ಲ. ನಾನು ನಿನ್ನ ಜೂನಿಯರ್ರು ಅಲ್ಲ‌. "

"ಅಷ್ಟೇಲ್ಲ ಮಾಡೋ ಅವಶ್ಯಕತೆ ಇಲ್ಲ. ಒಂದೇ ಒಂದು ಕಾಲ್. ನಮ್ಮ ಮಾವಂಗೆ. ನಿಮ್ಮ ಮಗಳು ನನ್ನ ಮಾತು ಕೇಳ್ತಿಲ್ಲ. ಅದಕ್ಕೆ ಡಿವೋರ್ಸ್ ಕೊಡ್ತಿದೀನಿ ಅಂತ.."
ಅವನ ಮಾತು ಪೂರ್ತಿಯಾಗುವ ಮೊದಲೇ ಅವಳ ಕೈ, ಅವನ ಕುತ್ತಿಗೆಯನ್ನು  ಹಿಸುಕಿದ್ದವು. ಪ್ರಸನ್ನ ಕ್ಷಣದಲ್ಲಿ ಕರೆಂಟ್ ಶಾಕ್ ತಗುಲಿದಂತೆ ಕಂಪಿಸಿ, ಅವಳನ್ನು ದೂರ ತಳ್ಳಿದ.

ಆಕೆ ತನ್ನ ಕೈಯನ್ನೊಮ್ಮೆ ನೋಡಿಕೊಂಡು ಏನೋ ಆದಂತಾಯ್ತು ಎಂದು ಅವಲೋಕಿಸಿದರೆ, ಪ್ರಸನ್ನನ ಕಣ್ಣು ಅವಳು ತೊಟ್ಟ ವಾಚ್ ಮೇಲೆ ಬಿತ್ತು. ಅದು ಮಹಾನ್ ವಿಜ್ಞಾನಿ ರೋಹಿತ್ ಕೊಟ್ಟ ವಾಚ್! ಶಾಕ್ ತಗುಲಿದ್ದರಲ್ಲಿ ಆಶ್ಚರ್ಯವೇನು ಇರಲಿಲ್ಲ.

"ಇದನ್ನ ಯಾಕೆ ಹಾಕಿಕೊಂಡೆ? ಯಾರನ್ನ ಕೇಳಿ ತಗೊಂಡೆ? ತೆಗಿ. ಮೊದಲು ತೆಗೆದು ಬಿಸಾಕು ಅದನ್ನ" ವಾಚ್ ಕಡೆಗೆ ಕೈ ಮಾಡಿ ಕೂಗಿದ. 

"ನಿನ್ನ ಬ್ಯಾಗಿನಲ್ಲಿ ಸಿಕ್ಕಿದ್ದು ಈ ಗುಜ಼ರಿ ವಾಚ್. ಏನೋ ಡಿಫ್ರೆಂಟ್ ಇದೆಯಲ್ವ"
ಅದರೆಲ್ಲೇನೋ ದೋಷವಿದೆ ಎಂದು ಆಕೆಯೂ ಅದನ್ನು ತೆಗೆದು ಅವನ ಕೈಯಲ್ಲಿಟ್ಟಳು. ಪ್ರಸನ್ನ ನಿರಾಳನಾದ. ಅವಳ ಮೇಲೆ ಪ್ರಯೋಗ ಮಾಡಲು ಶಿಷ್ಯನಿಂದ ಪಡೆದ ಅಸ್ತ್ರ ತನಗೇ ಬಿಸಿ ಮುಟ್ಟಿಸಿತ್ತು.

             

ಮುಂದುವರೆಯುವುದು...


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತನ್ನ

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ಮುಗುಳ್ನಕ್ಕಳು ಪರಿ.